ಪಾರ್ತೆನಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಥೆನ್ಸ್ ನಲ್ಲಿನ ಪಾರ್ಥೆನಾನ್

ಪಾರ್ತೆನಾನ್ ಕಿ.ಪೂ. 447-432 ರಲ್ಲಿ ಗ್ರೀಸಿನ ದೊರೆ ಪೆರ್ಲಿಕೀಸನ ಕಾಲದಲ್ಲಿ ಆಥೆನ್ಸ್ ನಗರದ ಮಧ್ಯಭಾಗದಲ್ಲಿ ಅಕ್ರೋಪೊಲೀಸ್‍ನಲ್ಲಿ ನಿರ್ಮಿತವಾದ ಅತೀನ ದೇವತೆಯ ಮಂದಿರ. ಗ್ರೀಕ್ ವಾಸ್ತುಶಿಲ್ಪದ ಅತ್ಯುತ್ತಮ ನಿರ್ಮಾಣಗಳಲ್ಲೊಂದೆಂದು ಇದು ಪರಿಗಣಿತವಾಗಿದೆ.

ಇಕ್ಟಿನಸ್ ಮತ್ತು ಕ್ಯಾಲೆಕ್ರೇಟಸ್ ಇದನ್ನು ನಿರ್ಮಿಸಿದರು. ಪಿಡಿಯಾಸ್ ಇದರ ಶಿಲ್ಪದ ಮೇಲ್ವಿಚಾರಕನಾಗಿದ್ದ.

ದೇವಾಲಯದ ಮುಂಭಾಗ ಹಿಂಭಾಗಗಳಲ್ಲಿ ಎಂಟು, ಮತ್ತು ಇಬ್ಬದಿಗಳಲ್ಲಿ ಹದಿನೇಳು ಸ್ತಂಭಗಳಿವೆ. ಮಂದಿರದೊಳಗೆ, ಮಧ್ಯಾಂಗಣದ ಪಶ್ಚಿಮದ ಕೊನೆಯಲ್ಲಿ, ಸುಮಾರು 12 ಮೀ ಎತ್ತರದ ಅತೀನ ಪಾರ್ತೆನಾಸ್ ವಿಗ್ರಹವಿತ್ತು. ಈ ದೇವತೆಯ ಗೌರವಾರ್ಥ ನಡೆಯುತ್ತಿದ್ದ ಮೆರವಣಿಗೆಯನ್ನು ಚಿತ್ರಿಸುವ ಶಿಲಾಪಟ್ಟಿಕೆ ಈ ದೇವಾಲಯದ ಗೋಡೆಯ ಸುತ್ತಲೂ ಇತ್ತು. ಈ ಪಟ್ಟಿಕೆ 160 ಮೀ. ಉದ್ದವಿತ್ತು. ಇದರಲ್ಲಿ 92 ಮೀ. ಉದ್ದದಷ್ಟು ಭಾಗ ಇಂದೂ ಉಳಿದಿದೆ. ಕ್ರಿ.ಶ. 6 ನೆಯ ಶತಮಾನದಲ್ಲಿ ಈ ದೇವಾಲಯ ಕ್ರೈಸ್ತ ಮಂದಿರವಾಗಿ ಮಾರ್ಪಟ್ಟಿತು. ಅನಂತರ ಇದಕ್ಕೆ ಮಿನಾರತ್ತನ್ನು ನಿರ್ಮಿಸಿ ಮಸೀದಿಯಾಗಿ ಬದಲಾಯಿಸಲಾಯಿತು. 1687 ರಲ್ಲಿ ತುರ್ಕರು ಇದನ್ನು ಗುಂಡಿನ ಮದ್ದನ್ನು ತುಂಬಿಡಲು ಬಳಸುತ್ತಿದ್ದರು. ಆಗ ಸಂಭವಿಸಿದ ಸ್ಫೋಟನೆಯಿಂದ ದೇವಾಲಯದ ಮಧ್ಯಭಾಗ ಹಾಳಾಯಿತು. ದೇವಾಲಯದ ಸುತ್ತಣ ಶಿಲಾಪಟ್ಟಿಕೆಯ ಕೆಲವು ಭಾಗಗಳನ್ನು 1806 ರಲ್ಲಿ ಶ್ರೀಮಂತನೊಬ್ಬ ಲಂಡನ್ನಿಗೆ ಕೊಂಡೊಯ್ದ. ಇವು ಈಗ ಲಂಡನ್ನಿನ ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲವೆ. 18 ನೆಯ ಶತಮಾನದ ವೇಳೆಗೆ ಈ ದೇವಾಲಯದ ಶಿಲ್ಪಕಲಾ ಸೌಂದರ್ಯದ ಅರಿವಾಗತೊಡಗಿತು. ಇದನ್ನು ಜೀರ್ಣೋದ್ಧಾರ ಮಾಡಲಾಯಿತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: