ಪರ್ಲ್ ಎಸ್.ಬಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರ್ಲ್ ಎಸ್.ಬಕ್
ಪರ್ಲ್ ಎಸ್.ಬಕ್, ca. 1972.
ಜನನಪರ್ಲ್ ಸೈಡೆನ್‍ಸ್ಟ್ರಿಕರ್
(೧೮೯೨-೦೬-೨೬)೨೬ ಜೂನ್ ೧೮೯೨
Hillsboro, West Virginia, U.S.
ಮರಣMarch 6, 1973(1973-03-06) (aged 80)
Danby, Vermont, U.S.
ವೃತ್ತಿಬರಹಗಾರ್ತಿ, ಉಪಾಧ್ಯಾಯಿನಿ
ರಾಷ್ಟ್ರೀಯತೆಅಮೆರಿಕನ್
ಪ್ರಮುಖ ಪ್ರಶಸ್ತಿ(ಗಳು)Pulitzer Prize
1932
Nobel Prize in Literature
1938
ಬಾಳ ಸಂಗಾತಿJohn Lossing Buck (1917–1935)
Richard Walsh (1935–1960) until his death

ಸಹಿ

ಟೆಂಪ್ಲೇಟು:Infobox Chinese

ಪರ್ಲ್ ಸೈಡೆನ್‍ಸ್ಟ್ರಿಕರ್ ಬಕ್(ಜೂನ್ 26, 1892 – ಮಾರ್ಚ್ 6, 1973),ಅಮೆರಿಕದ ಖ್ಯಾತ ಲೇಖಕಿ ಮತ್ತು ಕಾದಂಬರಿಕಾರ್ತಿ, ನೊಬೆಲ್ ಪ್ರಶಸ್ತಿ ವಿಜೇತೆ.

ಕ್ರೈಸ್ತ ಧರ್ಮಪ್ರಚಾರಕನ ಮಗಳಾಗಿ ಅವರು ೧೯೩೪ರ ಮೊದಲು ತಮ್ಮ ಬದುಕಿನ ಹೆಚ್ಚಿನ ವರ್ಷಗಳನ್ನು ಚೀನಾ ದೇಶದಲ್ಲಿ ಕಳೆದರು.ಇವರ ಪ್ರಸಿದ್ಧ ಕೃತಿ ದಿ ಗುಡ್ ಅರ್ಥ್ ಗೆ ೧೯೩೨ ರಲ್ಲಿ ಪುಲಿಟ್ಜೆರ್ ಬಹುಮಾನಬಂದಿತು. ಇದು ೧೯೩೧ ಮತ್ತು ೧೯೩೨ರಲ್ಲಿ ಅಮೆರಿಕದಲ್ಲಿ ಹೆಚ್ಚು ಮಾರಾಟವಾದ ಕೃತಿಯಾಗಿತ್ತು. ೧೯೩೮ರಲ್ಲಿ ಅವರಿಗೆ "ಚೀನಾ ದೇಶದ ರೈತರ ನೈಜ ಚಿತ್ರಣ ಮತ್ತು ಜೀವನ ಚರಿತ್ರೆಯ ಮೇರುಕೃತಿ"ಗಳಿಗಾಗಿ ಸಾಹಿತ್ಯನೋಬೆಲ್ ಪ್ರಶಸ್ತಿ ದೊರೆಯಿತು.[೧] ಇವರು ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದ ಮೊದಲ ಅಮೆರಿಕನ್ ಮಹಿಳೆ.

ಬದುಕು[ಬದಲಾಯಿಸಿ]

ಈಕೆ ಹುಟ್ಟಿದ್ದು ಅಮೆರಿಕದಲ್ಲಾದರೂ ತನ್ನ ಬದುಕಿನ ನಲವತ್ತೆರಡು ವರ್ಷಗಳನ್ನು ಚೀನದಲ್ಲಿ ಕಳೆದಳು. ಮಾತೃಭಾಷೆ ಇಂಗ್ಲಿಷ್ ಕಲಿಯುವುದಕ್ಕೂ ಮುನ್ನ ಚೀನಿ ಭಾಷೆಯನ್ನು ಕಲಿತಿದ್ದಳು. ಇವಳ ತಂದೆ ಅ್ಯಬ್ಸಿಲಮ್ ಸಿಡನ್‍ಸ್ಟ್ರೈಕರ್, ತಾಯಿ ಕ್ಯಾರೋಲಿನ. ಸೈಡನ್‍ಸ್ಟ್ರಿಕರ್ ಚೀನದಲ್ಲಿ ಕ್ರೈಸ್ತ ಧರ್ಮ ಪ್ರಚಾರನಾಗಿದ್ದ. ಇವಳ ತಂದೆತಾಯಿಗಳು ರಜೆಯ ಮೇಲೆ ಪಶ್ಚಿಮ ವರ್ಜೀನಿಯಾದ ಹಿಲ್‍ಬರೊಗೆ ಬಂದಿದ್ದಾಗ 1892ರ ಜೂನ್ 6ರಂದು ಬಕ್ ಜನಿಸಿದಳು. ಹುಟ್ಟಿದ ಐದೇ ತಿಂಗಳಿಗೆ ತಂದೆತಾಯಿಗಳೊಡನೆ ಚೀನ ಸೇರಿದಳು. ಇವಳ ಪ್ರಾಥಮಿಕ ವಿದ್ಯಾಭ್ಯಾಸ ಷಾಂಗಾಯ್‍ನಲ್ಲಿ ನಡೆಯಿತು. ಚಿಕ್ಕಂದಿನಲ್ಲಿಯೇ ಚೀನಿ ಭಾಷೆಯಲ್ಲಿ ಶಿಕ್ಷಣ ದೊರೆತುದರಿಂದ ಮುಂದೆ ಈಕೆ ಚೀನ ಸಂಸ್ಕøತಿಯ ಜೀವನಾಡಿಯನ್ನು ಅರಿಯಲು ಸಹಾಯಕವಾಯಿತು. ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋದ ಬಕ್ 1914ರಲ್ಲಿ ಲಿಂಚ್‍ಬರ್ಗ್‍ನ ರ್ಯಾಂಡಾಲ್ಫ್ ಮೆಕನ್ ಕಾಲೇಜಿನಿಂದ ಬಿ.ಎ. ಪದವಿ ಪಡೆದಳು. ಅಲ್ಲಿಂದ ಚೀನಕ್ಕೆ ಹಿಂದಿರುಗಿ ಕ್ರೈಸ್ತ ಧರ್ಮ ಪ್ರಚಾರಕನಾಗಿದ್ದ ಜಾನ್ ಎಲ್.ಬುಕ್ ಎಂಬುವನನ್ನು ವಿವಾಹವಾಗಿ ಉತ್ತರ ಚೀನದ ಸಣ್ಣ ಪಟ್ಟಣವೊಂದರಲ್ಲಿ ನೆಲಸಿದಳು. 1921ರಿಂದ ಸುಮಾರು ಒಂದು ದಶಕ ಕಾಲ ಈಕೆ ನಾನ್‍ಕಿಂಗ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದಳು. 1927ರಲ್ಲಿ ಚೀನದಲ್ಲಿ ಕಮ್ಯೂನಿಸ್ಟ್ ಕ್ರಾಂತಿ ಉಲ್ಟಣಗೊಂಡು ಸೈನಿಕರು ನಾನ್‍ಕಿಂಗ್‍ಗೆ ದಾಳಿ ಮಾಡಿದಾಗ ತಲೆಮರೆಸಿಕೊಂಡು ಜಪಾನಿಗೆ ಹೋದಳು. ಒಂದು ವರ್ಷದ ಅನಂತರ ನಾನ್‍ಕಿಂಗ್‍ಗೆ ವಾಪಸಾದಳು. 1934ರ ಸುಮಾರಿಗೆ ಚೀನದಲ್ಲಿ ವಿದೇಶಿಯರು ಇರುವುದು ಅಪಾಯಕಾರಿಯಾಗಿ ಪೆನ್ಸಿಲ್‍ವೇನಿಯಾಕ್ಕೆ ಬಂದು ನೆಲೆಸಿದಳು. ಜಾನ್ ಎಲ್.ಬಕ್‍ನೊಡನೆ ವಿವಾಹ ವಿಚ್ಛೇದನ ಪಡೆದ ಜೇ.ವಾಲ್ಷ್ ಎಂಬುವನನ್ನು ವಿವಾಹವಾದಳು. ಇವಳಿಗೆ ಇಬ್ಬರು ಮಕ್ಕಳಿದ್ದರು.

ಅನಾಥ ಮಕ್ಕಳ ಬಗ್ಗೆ ಇವಳಿಗೆ ಅಪಾರವಾದ ಅನುಕಂಪೆಯಿತ್ತು. ಹಾಗಾಗಿ ಎಂಟು ಮಂದಿ ದತ್ತುಮಕ್ಕಳನ್ನು ಈಕೆ ಸಾಕಿಕೊಂಡಿದ್ದಳು. ೧೯೩೫ರಲ್ಲಿ ಅವರು ಅಮೆರಿಕಕ್ಕೆ ಮರಳಿದ ಬಳಿಕ ಅವರು ಬರವಣಿಗೆ ಮುಂದುವರಿಕೆಯೊಂದಿಗೆ ಮಹಿಳೆಯರ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿಯಾದರು.ಅವರು ಏಷಿಯಾದ ಸಂಸ್ಕೃತಿ ಮತ್ತು ಮಿಶ್ರ ಜನಾಂಗದ ಬಗ್ಗೆ ತಮ್ಮ ಬರವಣಿಗೆಯನ್ನು ಮುಂದುವರಿಸಿದರು ಪೂರ್ವ ಪಶ್ಚಿಮಗಳ ಸಂಗಮವೆನಿಸಿ ಬದುಕಿದ ಈಕೆ ತನ್ನ 81ನೆಯ ವಯಸ್ಸಿನಲ್ಲಿ ನಿಧನಹೊಂದಿದಳು(1973).

ಸಾಹಿತ್ಯ[ಬದಲಾಯಿಸಿ]

ಬಕ್‍ಳ ಮೊದಲ ಕಾದಂಬರಿ ಈಸ್ಟ್ ವಿಂಡ್ ವೆಸ್ಟ್ ವಿಂಡ್ 1930ರಲ್ಲಿ ಪ್ರಕಟವಾಯಿತು.

1931ರಲ್ಲಿ ಪ್ರಕಟವಾದ ದಿ ಗುಡ್ ಅರ್ತ್ ಎಂಬ ಕಾದಂಬರಿ ಈಕೆಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟಿತು. ಚೀನಿ ರೈತ ಕುಟುಂಬವೊಂದು ಎದುರಿಸುವ ಸಂಕಷ್ಟಗಳು, ಅದರ ವಿಜಯ, ಅದರ ದುರಂತದ ಚಿತ್ರಣ ಈ ಕಾದಂಬರಿಯಲ್ಲಿ ಜೀವಂತವಾಗಿ ಮೂಡಿಬಂದಿದೆ. ವ್ಯಾಂಗ್‍ಲುಂಗ್ ಒಬ್ಬ ಚೀನಿ ರೈತ. ಮೊದಲಿನಿಂದಲೂ ಅವನಿಗೆ ಭೂಮಿಯ ಬಗ್ಗೆ ವಿಶೇಷ ಗೌರವ, ಅದರ ಜಮೀನುದಾರನಾಗಬೇಕೆಂಬ ಹಂಬಲ ಅವನ ಮನಸ್ಸನ್ನು ಸದಾ ಆವರಿಸಿರುತ್ತದೆ. ಹ್ಯಾಂಗ್ ಮನೆತನದಲ್ಲಿ ಅಡುಗೆಯವಳಾಗಿದ್ದ ಓಲಾನ ಎಂಬುವಳನ್ನು ಮದುವೆಯಾದ ಮೇಲೆ ಈ ಹಂಬಲ ತೀವ್ರವಾಗುತ್ತದೆ. ಕಷ್ಟದಲ್ಲಿ ಬೆಳೆದ ಓಲಾನ ಗಂಡನಿಗೆ ತಕ್ಕ ಹೆಂಡತಿ; ಅವನ ಆಸೆ ಆಕಾಂಕ್ಷೆಗಳನ್ನು ಅರ್ಥಮಾಡಿಕೊಂಡು ಗಂಡನಿಗೆ ನೆರವಾಗುತ್ತಾಳೆ. ಪ್ರವಾಹ, ಕ್ಷಾಮ, ರೋಗ, ನಷ್ಟಗಳ ನಡುವೆಯೂ ನಿರಂತರ ಕಷ್ಟಪಟ್ಟು ದುಡಿಯುತ್ತ ಹಾಂಗ್ ಮನೆತನದಿಂದಲೂ ಬೇರೆಯವರಿಂದಲೂ ಸ್ವಲ್ಪಸ್ವಲ್ಪವೇ ಭೂಮಿಕೊಂಡು ಅವರು ಶ್ರೀಮಂತರಾಗುತ್ತಾರೆ; ಮೂವರು ಗಂಡುಮಕ್ಕಳು, ಇಬ್ಬರು ಹೆಣ್ಣುಮಕ್ಕಳನ್ನು ಪಡೆದು ಸುಖದಲ್ಲಿ ಬಾಳುತ್ತಾರೆ. ವಾಂಗ್‍ಲುಂಗ್ ತಾನು ಮೊದಲು ಇಟ್ಟುಕೊಂಡಿದ್ದ ಲೋಟಸ್ ಎಂಬುವವಳನ್ನು ಮದುವೆಯಾದಾಗ ಓಲಾನ ಅದನ್ನು ಸಹಿಸಿಕೊಂಡು ಮೊದಲಿನಂತೆಯೇ ಸಂಸಾರದ ಜವಾಬ್ದಾರಿಯನ್ನು ಹೊರುತ್ತಾಳೆ. ಮೂವರು ಗಂಡುಮಕ್ಕಳೂ ತಮ್ಮ ಜೀವನವನ್ನು ಭೂಮಿಯಿಂದ ಬೇರ್ಪಡಿಸಿಕೊಂಡಾಗ ಅವರ ಬಾಳಿನ ರೀತಿಯೇ ಬದಲಾಗುತ್ತದೆ. ತಾವೆಲ್ಲ ಒಂದೇ ಕುಟುಂಬವಾಗಿ ಬಾಳಬೇಕೆಂದು ಬಯಸಿದರೂ ವಾಂಗ್‍ಲುಂಗ್‍ನ ಹಾಗೆ ಬದುಕನ್ನು ಎದುರಿಸಿದ ಸಾಮಥ್ರ್ಯ ಅವರಿಗಿಲ್ಲವಾಗುತ್ತದೆ. ಇದು ಸ್ಥೂಲವಾಗಿ ಕಥೆಯ ಹಂದರ. ನಿರ್ಲಿಪ್ತ ಧಾಟಿ, ಸರಳ ಹಾಗೂ ನೇರ ಭಾಷೆ, ಚೀನದ ಗ್ರಾಮೀಣ ಬದುಕಿನ ಸೂಕ್ಷ್ಮ ವಿವರಗಳು ಈ ಕಾದಂಬರಿಯ ಮಹತ್ತ್ವದ ಅಂಶಗಳು, ವಾಸ್ತವವಾಗಿ ದಿ ಗುಡ್ ಅರ್ತ್ ಕಾದಂಬರಿಯಲ್ಲಿ ಈ ರೈತ ಕುಟುಂಬದ ಕಥೆ ಸಂಪೂರ್ಣಗೊಳ್ಳುವುದಿಲ್ಲ. ಸನ್ಸ್ (1932), ಎ ಹೌಸ್ ಡಿವೈಡೆಡ್ (1935) ಎಂಬ ಇನ್ನೆರಡು ಕಾದಂಬರಿಗಳಲ್ಲಿ ಅದು ಮುಂದುವರಿದಿದೆ.

ದಿ ಮದರ್ (1934), ದಿಸ್ ಪ್ರೌಡ್ ಹಾರ್ಟ್ (1938), ದಿ ಪೇಟ್ರಿಯಾಟ್ (1939). ಅದರ್ ಗಾಡ್ಸ್ (1940), ಚೈನ ಸ್ಕೈ (1942), ಡ್ರ್ಯಾಗನ್ ಸೀಡ್ (1942), ಪೆವಿಲಿಯನ್ ಆಫ್ ವುಮನ್ (1947), ಫ್ಯೂನಿ (1948), ಕೆನ್‍ಫೋಕ್ (1950), ಗಾಡ್ಸ್‍ಮೆನ್ (1950). ಕಮಾಂಡ್ ದಿ ಮಾರ್ನಿಂಗ್ (1959)-ಇವು ಇತರ ಪ್ರಮುಖ ಕಾದಂಬರಿಗಳು. ಮನುಷ್ಯ ಪ್ರಯತ್ನದಿಂದ ಏನೆಲ್ಲವನ್ನೂ ಉತ್ತಮಗೊಳಿಸಬಹುದೆಂಬ ಆಶಾವಾದದ ಛಾಯೆ ಈಕೆಯ ಬಹುಪಾಲು ಕೃತಿಗಳಲ್ಲಿ ಕಂಡುಬರುತ್ತದೆ. ಬಕ್‍ಗೆ ಕಾದಂಬರಿಗಳಷ್ಟೇ ಖ್ಯಾತಿ ತಂದುಕೊಟ್ಟ ಕೃತಿಗಳು-ದಿ ಎಕ್ಸೈಲ್ (1936) ಮತ್ತು ಫೈಟಿಂಗ್ ಏಂಜಲ್; ಪೊಟ್ರೇಟ್ ಆಫ್ ಎ ಸೋಲ್ (1936). ಇವೆರಡೂ ಅತ್ಯುತ್ತಮ ಜೀವನ ಚರಿತ್ರೆಗಳು. ಮೊದಲನೆಯದು ತನ್ನ ತಾಯಿಯ ಜೀವನ ಚರಿತ್ರೆಯಾದರೆ, ಎರಡನೆಯದು ತಂದೆಯ ಜೀವನ ಚರಿತ್ರೆ. ಮೈ ಸೆವರಲ್ ವಲ್ಡ್ರ್ಸ್ (1954) ಎಂಬುದು ಈಕೆಯ ಆತ್ಮಕಥೆ. ಈಕೆ ಕೆಲವು ನಾಟಕಗಳನ್ನೂ ಮಕ್ಕಳಿಗಾಗಿ ಅನೇಕ ಕೃತಿಗಳನ್ನೂ ರಚಿಸಿದ್ದಾಳೆ. ಸುಮಾರು ಏಳು ಸಣ್ಣ ಕಥಾ ಸಂಕಲನಗಳು ಪ್ರಕಟವಾಗಿವೆ. ಪ್ರಸಿದ್ಧ ಕಾದಂಬರಿಕಾರ ಆರ್. ಕೆ ನಾರಾಯಣ್ ಅವರ ಗೈಡ್ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಈಕೆ ನಾಟಕವಾಗಿ ರೂಪಾಂತರಿಸಿದ್ದಾಳೆ(1965). ದಿ ಗುಡ್ ಅರ್ತ್ ಕಾದಂಬರಿ ಅದೇ ಹೆಸರಿನಲ್ಲಿ ಚಲನಚಿತ್ರವಾಗಿಯೂ ಪ್ರಸಿದ್ಧವಾಗಿದೆ.

ಬಕ್‍ಗೆ ಅನೇಕ ಗೌರವ ಪ್ರಶಸ್ತಿಗಳು ದೊರೆಕಿವೆ. 1932ರಲ್ಲಿ ದಿ ಗುಡ್ ಅರ್ತ್ ಕಾದಂಬರಿಗೆ ಪುಲಿಟ್ಮರ್ ಬಹುಮಾನ ಲಭಿಸಿತು. ಇದೇ ಕೃತಿಗೆ 1938ರಲ್ಲಿ ನೊಬೆಲ್ ಬಹುಮಾನ ದೊರೆಕಿತು. ಈ ಗೌರವ ಪಡೆದ ಪ್ರಥಮ ಅಮೆರಿಕನ್ ಮಹಿಳೆ ಈಕೆ. ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯ (1940). ಸೇಂಟ್ ಲಾರೆನ್ಸ್ ವಿಶ್ವವಿದ್ಯಾಲಯ (1942)ಗಳು ಈಕೆಗೆ ಗೌರವ ಡಿ. ಲಿಟ್. ಪ್ರಶಸ್ತಿ ನೀಡಿ ಗೌರವಿಸಿವೆ. ಈಕೆ ಸ್ಥಾಪಿಸಿದ ವೆಲ್‍ಕಮ್ ಹೌಸ್ (1949) ಮತ್ತು ಪರ್ಲ್ ಎಸ್. ಬಕ್ ಫೌಂಡೇಶನ್ (1964) ಎಂಬ ಸಂಸ್ಥೆಗಳು ಅಂತರಾಷ್ಟ್ರೀಯ ಖ್ಯಾತಿಗಳಿಸಿವೆ. ಏಷ್ಯದ ಜನರ ವಂಶೀಯರಾಗಿದ್ದು ಇನ್ನೂ ಪೋಷಕರು ದೊರೆಯದೆ ಇರುವ ಅನಾಥ ಅಮೆರಿಕನ್ ಮಕ್ಕಳಿಗೆ ವೆಲ್‍ಕಮ್ ಹೌಸ್ ಆಶ್ರಯ ನೀಡುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]