ನೀಲಮ್ಮ ಕಡಾಂಬಿ
ನೀಲಮ್ಮ ಕಡಾಂಬಿ | |
---|---|
Born | ನೀಲಮ್ಮ ಜುಲೈ ೧೧, ೧೯೧೧ |
Died | ಡಿಸೆಂಬರ್ ೧೪, ೧೯೯೮ ಮೈಸೂರು |
Occupation(s) | ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು, ವೈಣಿಕರು |
ಸಂಗೀತ ವಿದುಷಿ ನೀಲಮ್ಮ ಕಡಾಂಬಿ (ಜುಲೈ ೧೧, ೧೯೧೧ - ಡಿಸೆಂಬರ್ ೧೪, ೧೯೯೮) ಸಂಗೀತಗಾರ್ತಿಯಾಗಿ ಗಾಯನ ಮತ್ತು ವೀಣಾ ವಾದನದಲ್ಲಿ ಪ್ರಖ್ಯಾತಿ ಪಡೆದಂತವರು.
ಜೀವನ
[ಬದಲಾಯಿಸಿ]ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾದ ನೀಲಮ್ಮ ಕಡಾಂಬಿಯವರು ಜುಲೈ ೧೧, ೧೯೧೧ರಂದು ಮೇಲುಕೋಟೆಯಲ್ಲಿ ಜನಿಸಿದರು. ಇವರ ತಂದೆ ವೀಣಾ ವಿದ್ವಾಂಸರಾಗಿದ್ದ ವೆಂಕಟಾಚಾರ್ಯರು ವೃತ್ತಿಯಲ್ಲಿ ಪೋಲೀಸ್ ಅಧಿಕಾರಿಯಾಗಿದ್ದರು. ವೆಂಕಟಾಚಾರ್ಯರು ನಿವೃತ್ತರಾದ ನಂತರದಲ್ಲಿ ಮೇಲುಕೋಟೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಕೈಂಕರ್ಯ ಸಲ್ಲಿಸುತ್ತಿದ್ದರು. ನೀಲಮ್ಮನವರ ತಾಯಿಯವರೂ ವೈಣಿಕರೆ. ಅಣ್ಣ ಎಂ.ವಿ. ಶ್ರೀನಿವಾಸ ಅಯ್ಯಂಗಾರ್ ಅವರೂ ಸಂಗೀತ ವಿದ್ವಾಂಸರು. ನೀಲಮ್ಮನವರಿಗೆ ಚಿಕ್ಕಂದಿನಿಂದಲೇ ಅಣ್ಣನವರಲ್ಲಿ ವೀಣೆ ಪಾಠವಾಯಿತು. ತಂದೆಯವರೂ ಪಾಠ ಹೇಳುತ್ತಿದ್ದುದುಂಟು.
ಮುಂದೆ ನೀಲಮ್ಮನವರು ವಿದ್ವಾನ್ ಲಕ್ಷ್ಮಿನಾರಣಪ್ಪನವರಲ್ಲೂ ಅನಂತರ ವೀಣಾ ವೆಂಕಟಗಿರಿಯಪ್ಪನವರಲ್ಲೂ ವೀಣಾ ಪಾಠವನ್ನು ಮುಂದುವರಿಸಿದರು. ಜೊತೆಗೆ ಹಾಡುಗಾರಿಕೆಯನ್ನು ಮೈಸೂರು ವಾಸುದೇವಾಚಾರ್ಯರು, ಮೈಸೂರು ಟಿ.ಚೌಡಯ್ಯನವರು, ವಿ. ರಾಮರತ್ನಂರವರು ಮುಂತಾದ ಮಹಾನ್ ವಿದ್ವಾಂಸರಲ್ಲಿ ಕಲಿತರು. ನೀಲಮ್ಮನವರ ಪತಿ ಕಡಾಂಬಿ ಕೃಷ್ಣೈಯ್ಯಂಗಾರ್ಯರು ನಂಜನಗೂಡಿನಲ್ಲಿ ಪ್ರಸಿದ್ಧ ವಕೀಲರಾಗಿದ್ದು ಕೆಲ ವರ್ಷಗಳ ನಂತರ ಮೈಸೂರಿನಲ್ಲಿ ನೆಲೆಸಿದರು.
ಸಂಗೀತಲೋಕದಲ್ಲಿ
[ಬದಲಾಯಿಸಿ]ಪ್ರಾದೇಶಿಕ ವಲಯದಲ್ಲಿ ನೀಲಮ್ಮನವರು ಆ ಕಾಲದಲ್ಲಿ ಸಾರ್ವಜನಿಕವಾಗಿ ವೇದಿಕೆಯ ಮೇಲೆ ಸಂಗೀತ ಕಚೇರಿ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ನೀಲಮ್ಮನವರು ತಮ್ಮ ವೀಣಾವಾದನದ ಜೊತೆಗೆ ಹಾಡುತ್ತಿದ್ದರು. ಕೋಮಲವಾದ ಧ್ವನಿಯೊಂದಿಗೆ ವೀಣೆಯ ತಂತಿನಾದ ಎರಡೂ ಹದವಾಗಿ ಬೆರೆತು ಅವರ ಕಚೇರಿಗಳು ವಿಶೇಷ ಅನುಭವ ಹುಟ್ಟಿಸುವಂತದ್ದಾಗಿದ್ದವು. ಇವರ ಕಚೇರಿಗಳಲ್ಲಿ ಕರ್ನಾಟಕ ಸಂಗೀತ ಸಂಪ್ರದಾಯದೊಂದಿಗೆ ಕೊನೆಯಲ್ಲಿ ಹಿಂದುಸ್ತಾನಿ ಮಟ್ಟುಗಳನ್ನೂ ನುಡಿಸುತ್ತಿದ್ದುದು ಮತ್ತೊಂದು ಆಕರ್ಷಣೆಯಾಗಿತ್ತು.
ಅಂದಿನ ದಿನಗಳಲ್ಲಿ ತಮಿಳುನಾಡಿನಲ್ಲೇ ನೀಲಮ್ಮ ಕಡಾಂಬಿಯವರ ಸಂಗೀತ ಕಚೇರಿಗಳು ಹೆಚ್ಚಾಗಿ ಬೇಡಿಕೆಯಿದ್ದವು. ಮೈಸೂರು ಅರಮನೆಯಲ್ಲೂ ಇವರು ಅನೇಕ ಬಾರಿ ಕಚೇರಿಯನ್ನು ನೀಡಿದ್ದರು. ೧೯೫೪ರಲ್ಲಿ ದೆಹಲಿಯಲ್ಲಿ ಕರ್ನಾಟಕ ಸಾಂಸ್ಕೃತಿಕ ಉತ್ಸವದಲ್ಲಿ ಮೈಸೂರಿನಿಂದ ನೀಲಮ್ಮನವರು ವೀಣಾವಾದನ ಕಚೇರಿ ನೀಡಲು ಆಯ್ಕೆಯಾಗಿದ್ದರು. ಆ ಕಚೇರಿಯಲ್ಲಿ ಅಂದಿನ ಪ್ರಧಾನಮಂತ್ರಿ ಪಂಡಿತ್ ಜವಹರಲಾಲ್ ನೆಹರು ಮತ್ತು ರಾಷ್ಟ್ರಪತಿ ಎಸ್. ರಾಧಾಕೃಷ್ಣನ್‌ರವರು ಉಪಸ್ಥಿತರಿದ್ದರು. ದೇಶದ ವಿವಿದೆಡೆಗಳಲ್ಲಿ ಇವರ ಕಚೇರಿಗಳು ನಿರಂತರವಾಗಿ ನಡೆಯುತ್ತಿದ್ದವು. ಬೆಂಗಳೂರಿನ ಆಕಾಶವಾಣಿ ನಿಲಯವು ಪ್ರಾರಂಭಗೊಂಡಾಗ ಮೊದಲ ವೀಣಾ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಯೂ ನೀಲಮ್ಮನವರದಾಗಿತ್ತು. ಇವರು ಕರ್ನಾಟಕ ಸರ್ಕಾರ ನಡೆಸುತ್ತಿರುವ ಸಂಗೀತ ಪರೀಕ್ಷೆಗಳಿಗೆ ಪರೀಕ್ಷಕರಾಗಿ ಅನೇಕ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ಕೊಲಂಬಿಯಾ ಕಂಪೆನಿಯಿಂದ ನೀಲಮ್ಮ ಕಡಾಂಬಿಯವರ ಗಾನಮುದ್ರಿಕೆ ಧ್ವನಿ ಮುದ್ರಣವಾಗಿತ್ತು. ‘ಸತಿ ತುಳಸಿ’ ಎಂಬ ಕನ್ನಡ ಚಲನಚಿತ್ರದಲ್ಲಿ (೧೯೪೩-೪೪) ನೀಲಮ್ಮ ಕಡಾಂಬಿಯವರ ವೀಣೆ ಕಚೇರಿಯ ದೃಶ್ಯವಿದೆ. ನೀಲಮ್ಮ ಕಡಾಂಬಿಯವರು ಧಾರವಾಡ ಆಕಾಶವಾಣಿ ನಿಲಯದಲ್ಲೂ ಆಗಾಗ್ಗೆ ಇವರು ವೀಣೆಯ ಕಾರ್ಯಕ್ರಮವನ್ನು ನೀಡುತ್ತಿದ್ದರು. ದೂರದರ್ಶನದಿಂದಲೂ ಇವರ ಕಚೇರಿ ಪ್ರಸಾರವಾಗಿತ್ತು.
ಚಿತ್ರರಂಗದ ನಂಟು
[ಬದಲಾಯಿಸಿ]ಕೆಂಪರಾಜೇ ಅರಸ್ ನಿರ್ದೇಶಿಸಿ, ನಟಿಸಿದ 1948ರ ಚಿತ್ರ "ಭಕ್ತ ರಾಮದಾಸ". ಪಿ. ಕಾಳಿಂಗರಾವ್ ಸಂಗೀತ ನೀಡಿದ ಈ ಚಿತ್ರದಲ್ಲಿ ಬಹುಪಾಲು ಹಾಡುಗಳನ್ನು ನೀಲಮ್ಮ ಅವರೇ ಹಾಡಿದ್ದಾರೆ.
1949ರಲ್ಲಿ ಬಿಡುಗಡೆಯಾದ, ಜಿ. ವಿಶ್ವನಾಥನ್ ನಿರ್ದೇಶಿಸಿದ "ನಾಗಕನ್ನಿಕ" ಚಿತ್ರದಲ್ಲಿ ನೀಲಮ್ಮ ಹಾಡುಗಳನ್ನು ಹಾಡಿದ್ದಾರೆ.[೧]
ಎಂ. ವಿ. ಎನ್. ಅಯ್ಯಂಗಾರ್ ಅವರ "ಸತಿ ತುಳಸಿ"(1949) ಚಿತ್ರಕ್ಕೆ ಸಂಗೀತ ಸಂಯೋಜಿಸಿ, ಹಾಡಿರುವುದುದಲ್ಲದೆ ವೀಣಾವಾದನ ದೃಶ್ಯದಲ್ಲಿ ನೀಲಮ್ಮ ಕಾಣಿಸಿಕೊಂಡಿದ್ದಾರೆ[೨][೩]
ಪ್ರಶಸ್ತಿ ಗೌರವಗಳು
[ಬದಲಾಯಿಸಿ]೧೯೭೨ರಲ್ಲಿ ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್‌ನ ವಾರ್ಷಿಕ ಸಮ್ಮೇಳನದಲ್ಲಿ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಗೊಂಡ ನೀಲಮ್ಮ ಕಡಾಂಬಿಯವರು ಗಾನ ಕಲಾ ಭೂಷಣ ಎಂಬ ಬಿರುದು ಸ್ವೀಕರಿಸಿದರು. ಮೈಸೂರು ಅರಮನೆಯಲ್ಲಿ ಗಂಡಭೇರುಂಡ ಲಾಂಛನದ ಪೆಂಡೆಂಟ್ ಚಿನ್ನದ ಸರವನ್ನು ನೀಡಿ ಅವರನ್ನು ಗೌರವಿಸಲಾಯಿತು. ೧೯೮೭-೮೮ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಸನ್ಮಾನಿಸಲ್ಪಟ್ಟರು. ತಂಜಾವೂರಿನಲ್ಲಿ ಬಾಲಕೇಸರಿ ಎಂಬ ಬಿರುದು ಲಭಿಸಿತ್ತು. ಟಿ.ವಿ.ಎಸ್. ಗ್ರೂಪ್‌ವತಿಯಿಂದ ಇವರ ಸಂಗೀತ ಕಚೇರಿ ನಡೆದು ಉತ್ತಮ ಕುಸುರಿ ಕೆತ್ತನೆಯಿರುವ ಬೆಳ್ಳಿವೀಣೆಯನ್ನು ಪ್ರದಾನಿಸಲಾಗಿತ್ತು.
ಶಿಷ್ಯವರ್ಗ
[ಬದಲಾಯಿಸಿ]ನೀಲಮ್ಮನವರು ಸಂಗೀತ ಪಾಠ ಹೇಳುವುದರಲ್ಲಿ ಬಹಳ ಕಟ್ಟುನಿಟ್ಟೆನಿಸಿ ಅನೇಕ ಮಹತ್ವದ ಸಂಗೀತಗಾರರನ್ನು ತಯಾರುಮಾಡಿದ್ದರು. ಟಿ.ವಿ.ಎಸ್. ಸಂಸ್ಥೆಯ ಮಾಲೀಕ ಟಿ.ವಿ. ಸುಂದರಂ ಅವರ ಮಗ ದೊರೆಸ್ವಾಮಿಯವರು ಆಗಾಗ ಮೈಸೂರಿಗೆ ಬಂದು ಇವರಲ್ಲಿ ಸಂಗೀತವನ್ನು ಹೇಳಿಸಿಕೊಂಡು ಹೋಗುತ್ತಿದ್ದರಲ್ಲದೆ, ಮದರಾಸಿನಲ್ಲಿ ಕಚೇರಿಗಳನ್ನು ಏರ್ಪಡಿಸಿ ತಮ್ಮ ಗುರುಗಳನ್ನು ಕರೆಸಿಕೊಳ್ಳುತ್ತಿದ್ದರು. ಅಂದಿನ ಇವರ ಶಿಷ್ಯರಲ್ಲಿ ಪ್ರಸಿದ್ಧರಾದ ಕೆಲವರೆಂದರೆ ಎಂ.ಎಸ್. ಜಯಮ್ಮ, ವತ್ಸಲ ರಾಮಕೃಷ್ಣ, ಶ್ರೀದೇವಿ, ದಿ.ಜಾನಕಮ್ಮ, ಜಿ.ವಿ. ರಂಗನಾಯಕಮ್ಮ ಮುಂತಾದವರು.
ವಿದಾಯ
[ಬದಲಾಯಿಸಿ]ತಮ್ಮ ಕೊನೆಯ ವರ್ಷಗಳಲ್ಲಿ ಕಷ್ಟದ ಬದುಕನ್ನು ಕಂಡ ನೀಲಮ್ಮ ಕಡಾಂಬಿಯವರು ಡಿಸೆಂಬರ್ ೧೪, ೧೯೯೮ರಂದು ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮಾಹಿತಿ ಕೃಪೆ
[ಬದಲಾಯಿಸಿ]ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಕಟಣೆಯಾದ ‘ಕಲಾಚೇತನ’ದಲ್ಲಿ ಆರ್. ಎನ್. ಶ್ರೀಲತಾ ಅವರ ಲೇಖನ ಮತ್ತು ಕಣಜ.
ಉಲ್ಲೇಖಗಳು
[ಬದಲಾಯಿಸಿ]- ↑ "Neelamma Kadambi songs". Wynk music.in.
- ↑ "Old Kannada Movies Database". oldkannadamoviesdatabase.com.
- ↑ "ನೀಲಮ್ಮ ಕಡಾಂಬಿ". ಕಣಜ.