ನಿತೀಶ್ ಕುಮಾರ್

ವಿಕಿಪೀಡಿಯ ಇಂದ
Jump to navigation Jump to search
ನಿತೀಶ್ ಕುಮಾರ್

ನಿತೀಶ್ ಕುಮಾರ್ ಉತ್ತರ ಭಾರತದಲ್ಲಿರುವ ಬಿಹಾರ ರಾಜ್ಯದ ಹಾಲಿ ಮುಖ್ಯಮಂತ್ರಿ. ನಿತೀಶ್ ಕುಮಾರ್ ಸಂಯುಕ್ತ ಜನತಾದಳ(ಜೆಡಿ(ಯು)) ಪಕ್ಷದ ನಾಯಕರೊಲೊಬ್ಬರು ಹಾಗು ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳ ಒಕ್ಕೂಟವಾದ ರಾಷ್ಟ್ರೀಯ ಜನತಂತ್ರ ಒಕ್ಕೂಟ ಅಥವಾ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್(ಎನ್‌ಡಿಎ ಮೈತ್ರಿಕೂಟದ)ನಾಯಕರಲ್ಲೊಬ್ಬರು. ನಿತೀಶ್ ಕುಮಾರ್ ಸತತ ೬ ಬಾರಿ ಬಿಹಾರದ ನಳಂದಾ ಕ್ಷೇತ್ರದಿಂದ ಲೋಕಸಭೆಗೆ(೯-೧೪ನೆ ಲೋಕಸಭೆಗಳು) ಆಯ್ಕೆಯಾಗಿದ್ದಾರೆ.

ಜೀವನ[ಬದಲಾಯಿಸಿ]

ನಿತೀಶ್ ಕುಮಾರರ ಜನನ ಬಿಹಾರದ ರಾಜಧಾನಿ ಪಟ್ನಾ ಸಮೀಪದ ಭಕ್ತಿಪುರದಲ್ಲಿ ಮಾರ್ಚ್ ೧ ೧೯೫೧ರಲ್ಲಾಯಿತು. ಇವರ ತಂದೆ ಕವಿರಾಜ ಲಖನ್ ಸಿಂಗ್ ಮತ್ತು ತಾಯಿ ಪರಮೇಶ್ವರಿ ದೇವಿ. ಪಟ್ನಾದ ಬಿಹಾರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಪದವಿ ಪಡೆದ ನಿತೀಶ್, ಜಯಪ್ರಕಾಶ್ ನಾರಾಯಣರ ಅನುಯಾಯಿಯಾಗಿ ೧೯೭೪-೭೬ರ ಅವಧಿಯಲ್ಲಿ ನೆಡೆದ ಬಿಹಾರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ೧೯೭೫ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ, ಅಂದಿನ ಕೇಂದ್ರ ಸರ್ಕಾರದಿಂದ ಮೀಸಾ ಕಾಯ್ದೆ ಕಾಯ್ದೆಯಡಿ ಬಂಧಿತರಾಗಿದ್ದರು. ೧೯೮೫ರಲ್ಲಿ ಪ್ರಥಮ ಬಾರಿ ಬಿಹಾರ ವಿಧಾನಸಭೆಗೆ ಆಯ್ಕೆಯಾದ ನಿತೀಶ್, ೧೯೮೭ರಲ್ಲಿ ಯುವ ಲೋಕದಳದ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೮೯ರಲ್ಲಿ ಬಿಹಾರ ಜನತಾದಳದ ಪ್ರಧಾನ ಕಾರ್ಯದರ್ಶಿಯಾದ ನಿತೀಶ್, ಅದೇ ವರ್ಷ ಮೊದಲ ಬಾರಿ ಲೋಕಸಭೆಗೆ (೯ನೇ ಲೋಕಸಭೆ) ಚುನಾಯಿತರಾದರು. ೧೯೯೦ರಲ್ಲಿ ಮೊದಲ ಬಾರಿ ಕೇಂದ್ರ ಮಂತ್ರಿಯಾಗಿ ಆಯ್ಕೆಯಾಗಿ ಶ್ರೀಯುತರು ಕೃಷಿ ಮತ್ತು ಸಹಕಾರ (ರಾಜ್ಯ ಮಟ್ಟ) ಖಾತೆಯನ್ನು ವಹಿಸಿದ್ದರು. ೧೯೯೧ರಲ್ಲಿ ೧೦ನೆ ಲೋಕಸಭೆಗೆ ಮರುಚುನಾಯಿತರಾದ ನಿತೀಶ್, ಜನತಾದಳದ ರಾಷ್ಟ್ರಮಟ್ಟದ ಕಾರ್ಯದರ್ಶಿ ಮತ್ತು ಲೋಕಸಭೆಯಲ್ಲಿ ಜನತಾದಳದ ಉಪನಾಯಕರಾದರು. ೧೯೯೮-೨೦೦೦ ಅವಧಿಯಲ್ಲಿ ಕೆಂದ್ರ ಮಂತ್ರಿಮಂಡಲದಲ್ಲಿ ರೈಲು, ರಸ್ತೆ ಸಾರಿಗೆ ಮತ್ತು ಕೃಷಿ ಖಾತೆಗಳನ್ನು ವಹಿಸಿದ ನಿತೀಶ್, ೨೦೦೧ರಲ್ಲಿ ಕೇವಲ ೭ ದಿನಗಳ ಕಾಲ ಬಿಹಾರದ ಮುಖ್ಯಮಂತ್ರಿಯಾದರು. ಅದೆ ವರ್ಷ ಮತ್ತೆ ಕೇಂದ್ರ ಸಂಪುಟ ಸೇರಿದ ನಿತೀಶ್, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಮಂತ್ರಿಮಂಡಲದಲ್ಲಿ ೨೦೦೧ರಿಂದ ೨೦೦೪ರ ವರೆಗೆ ಕೇಂದ್ರ ರೈಲು ಮಂತ್ರಿಯಾಗಿದ್ದರು. ೨೦೦೪ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸೋಲು ಕಂಡರೂ, ನಿತೀಶ್ ೬ನೆ ಭಾರಿ ಲೋಕಸಭೆಗೆ ಆಯ್ಕೆಯಾಗಿ ಸಂಸತ್ತಿನಲ್ಲಿ ಸಂಯುಕ್ತ ಜನತಾದಳ ಶಾಸನ ಸಭೆಯ ನಾಯಕರಾದರು . ನವೆಂಬರ್ ೨೦೦೫ರಲ್ಲಿ ನೆಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಗೆಲುವುನೆಡೆ ಕೊಂಡೊಯ್ದು ಲಾಲೂ ಪ್ರಸಾದ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳದ ೧೫ ವರ್ಷದ ಆಡಳಿತವನ್ನು ಕೊನೆಗೊಳಿಸಲು ಕಾರಣಕರ್ತರಾದರು.

ನವೆಂಬರ್ ೨೪, ೨೦೦೫ರಂದು ನಿತೀಶ್ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.