ನಿಕೊಲೊ ಡಾ ಕಾಂಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಕೊಲೊ ಡಾ ಕಾಂಟಿ
ಜನನ೧೩೯೫
ಚಿಯೊಗ್ಗಿ, ವೆನಿಸಿ
ಮರಣ೧೪೬೯
ಉದ್ಯೋಗವೆನಿಸಿನ ವ್ಯಾಪಾರಿ ಮತ್ತು ಪ್ರವಾಸಿ


ವೆನಿಸಿನ ವ್ಯಾಪಾರಿ ಮತ್ತು ಪ್ರವಾಸಿ.[೧] ಚಿಯೊಗ್ಗಿಯಲ್ಲಿ ಜನಿಸಿ ಸಿರಿಯದ ಮುಖ್ಯನಗರ ಡಮಾಸ್ಕಸಿನಲ್ಲಿ ಬಾಲ್ಯವನ್ನು ಕಳೆದ. ಅಲ್ಲಿ ಅರಬ್ಬೀಭಾಷೆಯನ್ನೂ ಕಲಿತ.

ವ್ಯಾಪಾರ ಮತ್ತು ಪ್ರವಾಸ[ಬದಲಾಯಿಸಿ]

1414ರಿಂದ ಇರಾಕ್, ಇರಾನ್ ದೇಶಗಳಲ್ಲಿ ಅಲೆದಾಡಿ ಅನಂತರ ಇರಾನಿನ ಕಲಕಟಿಯದಲ್ಲಿ ಸ್ಥಳೀಯ ವ್ಯಾಪಾರಿಗಳ ಜೊತೆಗೂಡಿದ. ಅವರೊಡನೆ ಭಾರತ[೨] ಮತ್ತು ಪೌರಸ್ತ್ಯ ದೇಶಗಳಿಗೆ ವ್ಯಾಪಾರಸಂಬಂಧವಾಗಿ ಭೇಟಿಕೊಟ್ಟ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಕ್ಯಾಂಬೆಗೂ ವಿಜಯನಗರಸಾಮ್ರಾಜ್ಯ ಮತ್ತು ಮಲಬಾರ್ ಗಳಿಗೂ ಭೇಟಿಕೊಟ್ಟ.

ಕಾಂಟಿ ಬರೆದಿರುವ ಪ್ರವಾಸಾನುಭವ[ಬದಲಾಯಿಸಿ]

ಈತ ಬರೆದಿರುವ ಪ್ರವಾಸಾನುಭವಗಳಲ್ಲಿ ವಿಜಯನಗರಸಾಮ್ರಾಜ್ಯವೈಭವವನ್ನು ಸ್ವಾರಸ್ಯವಾಗಿ ವರ್ಣಿಸಿದ್ದಾನೆ. ಕಾಂಟಿ ವಿಯನಗರವನ್ನು ಸಂದರ್ಶಿಸಿದಾಗ ಅಲ್ಲಿ ಆಳುತ್ತಿದ್ದವನು 2ನೆಯ ದೇವರಾಯ. ಆ ನಗರದ ಸುತ್ತಳತೆ 60 ಮೈಲಿಯೆಂದೂ ಅದು ದೊಡ್ಡ ಮತ್ತು ಬಲವಾದ ಕೋಟೆ ಗೋಡೆಗಳಿಂದ ರಕ್ಷಿತವಾಗಿತ್ತೆಂದೂ ಅಲ್ಲಿ ಯಾವಾಗಲೂ 90,000 ಜನ ಯುದ್ಧಕ್ಕೆ ಸಜ್ಜಾಗಿರುತ್ತಿದ್ದರೆಂದೂ ದೊರೆ ಬಹಳ ಪ್ರಬಲನಾಗಿದ್ದನೆಂದೂ ಕಾಂಟಿ ಹೇಳಿದ್ದಾನೆ. ಉಗಾದಿ, ನವರಾತ್ರಿ, ದೀಪಾವಳಿ ಮುಂತಾದ ಮುಖ್ಯ ಹಬ್ಬಗಳನ್ನು ಕುರಿತು ಕಾಂಟಿ ಮಾಡಿರುವ ವರ್ಣನೆ ಸ್ವಾರಸ್ಯವಾದ್ದು. ಹೋಳಿ ಹಬ್ಬದ ಓಕುಳಿಯಾಟವನ್ನು ಈತ ಚೆನ್ನಾಗಿ ಬಣ್ಣಿಸಿದ್ದಾನೆ. ಬಹುಪತ್ನೀತ್ವ ಮತ್ತು ಸತಿ ಪದ್ಧತಿಗಳು ಆಚರಣೆಯಲ್ಲಿದ್ದುವೆಂದು ಬರೆದಿದ್ದಾನೆ. ರಾಣಿವಾಸಕ್ಕೆ ಸೇರಿದ 12,000 ಹೆಂಗಸರನ್ನೂ ರಾಜನ ಹೆಂಡಿರೆಂದು ಈತ ಹೇಳಿರುವುದು ತಪ್ಪೆಂದು ಕಾಣುತ್ತದೆ.

ಅನಂತರ ಈತ ಸಿಂಹಳ, ಸುಮಾತ್ರ ಮತ್ತು ತೆನಾಸರಿಮ್ ಮಾರ್ಗವಾಗಿ ಬಂಗಾಳಕ್ಕೂ ತರುವಾಯ ಆರಾಕಾನ್ ಮಾರ್ಗವಾಗಿ ಬರ್ಮಕ್ಕೂ ಅಲ್ಲಿಂದ ಜಾವಕ್ಕೂ ಹೋಗಿದ್ದ. ಜಾವದಿಂದ ಹಿಂತಿರುಗಿ ಕ್ವಿಲಾನಿಗೆ ಬಂದ. ಭಾರತದ ಪಶ್ವಿಮತೀರ ಮತ್ತು ಪರ್ಷಿಯನ್ ಕೊಲ್ಲಿಯ ಮೂಲಕ ಜಿಡ್ಡಾವರೆಗೂ ಹೋಗಿ ಅನಂತರ ಭೂಮಾರ್ಗವಾಗಿ ಕೈರೋಗೆ ತೆರಳಿ ಅಲ್ಲಿಂದ ವೆನಿಸ್ ನಗರವನ್ನು 1444ರಲ್ಲಿ ತಲಪಿದ, 1469ರಲ್ಲಿ ತೀರಿಕೊಳ್ಳುವ ವರೆಗೂ ಅಲ್ಲಿ ವ್ಯಾಪಾರ ಮಾಡುತ್ತಿದ್ದ

ಉಲ್ಲೇಖಗಳು[ಬದಲಾಯಿಸಿ]