ನಾಡಿಗೇರ ಕೃಷ್ಣರಾವ್
ನಾಡಿಗೇರ ಕೃಷ್ಣರಾವ್ | |
---|---|
ಜನನ | ಮಾರ್ಚ್ ೨೫, ೧೯೦೬ ಹರಿಹರ |
ಮರಣ | ಮಾರ್ಚ್ ೩, ೧೯೯೨ |
ವೃತ್ತಿ | ಸಾಹಿತಿ |
ರಾಷ್ಟ್ರೀಯತೆ | ಭಾರತೀಯ |
ವಿಷಯ | ಕನ್ನಡ ಸಾಹಿತ್ಯ, ಹಾಸ್ಯ ಸಾಹಿತ್ಯ |
ಕನ್ನಡದ ಪ್ರಸಿದ್ಧ ಬರಹಗಾರರು ಮತ್ತು ಕನ್ನಡಕ್ಕಾಗಿನ ಹೋರಾಟಗಾರರಲ್ಲಿ ನಾಡಿಗೇರ ಕೃಷ್ಣರಾವ್ (ಮಾರ್ಚ್ ೨೫,೧೯೦೮-ಮಾರ್ಚ್ ೩,೧೯೯೨) ಅವರ ಹೆಸರು ಪ್ರಮುಖವಾದುದು.
ಜೀವನ
[ಬದಲಾಯಿಸಿ]ನಾಡಿಗೇರ ಕೃಷ್ಣರಾವ್ ಅವರು ೧೯೦೮ ಮಾರ್ಚ್ ೨೫ರಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಜನಿಸಿದರು. ಇವರ ತಾಯಿ ಕಾಮಾಕ್ಷಮ್ಮನವರು. ತಂದೆಯ ಹೆಸರು ದತ್ತಾತ್ರೇಯ. ಫಿಫ್ತ್ ಫಾರಂ ನಂತರ ಓದಿಗೆ ಶರಣು ಹೊಡೆದು, ಜವಳಿ ಅಂಗಡಿ ಗುಮಾಸ್ತರಾಗಿ, ಹೋಟೆಲ್‌ನಲ್ಲಿ ದಿನಗೂಲಿ ಮಾಡಿ ಹೀಗೆ ಕಷ್ಟಪಟ್ಟು ಮೇಲೆ ಬಂದು ಕಡೆಗೆ ಪತ್ರಿಕೋದ್ಯಮಕ್ಕೆ ಬಂದು ಸೇರಿದರು..
ಪತ್ರಿಕೋದ್ಯಮದಲ್ಲಿ
[ಬದಲಾಯಿಸಿ]ನಾಡಿಗೇರ ಕೃಷ್ಣರಾಯರು `ತಾಯಿನಾಡು', ‘ಲೋಕಮತ’, ‘ಸಂಯುಕ್ತ ಕರ್ನಾಟಕ’, ‘ಕಥಾಂಜಲಿ’, ‘ಪ್ರಜಾಮತ’ ,ದೇಶಬಂಧು ಮುಂತಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ ರಚನೆ
[ಬದಲಾಯಿಸಿ]‘ಗೇಡಿನಾರ’ ಕಾವ್ಯನಾಮದಲ್ಲಿ ಸಾಹಿತ್ಯರಚನೆ ಮಾಡಿದ್ದಾರೆ. ಕಥೆ, ಕಾದಂಬರಿ, ಹಾಸ್ಯ,, ಪ್ರಬಂಧ, ನಾಟಕ ಹೀಗೆ ಅವರ ಸಾಹಿತ್ಯ ವೈವಿಧ್ಯಪೂರ್ಣವಾದುದು. ಇವರು ರಚಿಸಿದ ಕೃತಿಗಳ ಸಂಖ್ಯೆ ಸುಮಾರು ೬೫ಕ್ಕೂ ಹೆಚ್ಚು..
ಹಾಸ್ಯಕ್ಕೆ ಸ್ವಯಂ ಪಾತ್ರಧಾರಿ
[ಬದಲಾಯಿಸಿ]ಒಂದು ರೀತಿಯಲ್ಲಿ ನಾಡಿಗೇರರು ತಮ್ಮ ಬರಹಗಳಲ್ಲಿ ಸ್ವಯಂ ಪಾತ್ರಧಾರಿಯಂತಿರುತ್ತಾರೆ. ಅವರ ಕುಟುಂಬದ ಸದಸ್ಯರೂ ಪಾತ್ರಧಾರಿಗಳಾಗಿರುತ್ತಾರೆ ಎಂಬಂಥಹ ಭಾವ ಕೂಡಾ ಮೂಡುತ್ತದೆ. ಇದು ಅವರು ಓದುಗನೊಡನೆ ಬೆಳೆಸುವ ಆಪ್ತತೆಯ ಪರಿ. ತಮ್ಮನ್ನೇ ಎಲ್ಲಾ ವಿಡಂಭನೆಗಳಿಗೂ ತಳ್ಳಿಕೊಳ್ಳುವ ಅಪೂರ್ವ ಪರಿ ಅವರ ಹಾಸ್ಯ ಬರಹಗಳಲ್ಲಿ ಕಾಣಬರುತ್ತದೆ. ರಾಮಾಯಣದಲ್ಲಿ ವಿಡಂಬನೆ ಹುಡುಕುವಾಗಲೂ ತಮ್ಮನ್ನು ತಂದುಕೊಳ್ಳುತ್ತಾರೆ. “ಒಮ್ಮೆ ಅವರು ರಾಮಾಯಣ ನಾಟಕಕ್ಕೆ ಹೋದರು. ಅಲ್ಲಿ ರಾವಣ ಬಂದು ರಾಮನಿಲ್ಲದ ವೇಳೆಯಲ್ಲಿ ಸೀತೆಯನ್ನು ಹೊತ್ತು ಕೊಂಡು ಹೋದ. ಇತ್ತ ಕಡೆ ತನ್ನ ಕುಟೀರಕ್ಕೆ ಹಿಂದಿರುಗಿದ ರಾಮ ಬಿದ್ದು ಬಿದ್ದು ಎದೆಬಡಿದುಕೊಂಡು ಅತ್ತ. ಇಲ್ಲಿ ನಾಡಿಗೇರರ ಪ್ರವೇಶ. ಆ ಸೀತೆ ನಾಟಕ ಪಾತ್ರಧಾರಿ ಎಷ್ಟು ದಡೂತಿ, ಎಷ್ಟು ಕೆಟ್ಟದಾಗಿದ್ದಳು ಎಂದರೆ, ನಾನೇ ಏನಾದ್ರೂ ರಾಮ ಆಗಿದ್ದಿದ್ರೆ ಆ ರಾವಣ ಎಲ್ಲೇ ಇದ್ರೂ ಹುಡುಕಿ ಕರೆದುಕೊಂಡು ಬಂದು ಎರಡು ಪ್ಲೇಟ್ ಕೇಸರಿ ಬಾತ್ ಕೊಡಿಸ್ತಾ ಇದ್ದೆ ” ಹೀಗೆ ಸಾಗುತ್ತದೆ ನಾಡಿಗೇರರ ಹಾಸ್ಯ.
ಬಾಡಿಗೆ ಮನೆಯಲ್ಲಿದ್ದ ನಾಡಿಗೇರರಿಗೆ ಮನೆ ಬಾಡಿಗೆಗೆ ಕೊಡುವುದೇ ಕಷ್ಟವಾಗಿತ್ತು. ಆದರೆ ಮನೆ ಕಟ್ಟುವುದಕ್ಕೆ ಅವರು ಹೇಳುವ ತಾಪತ್ರಯ ಏನು ಗೊತ್ತೆ? ಅದಕ್ಕೆ ಈ villa ಅಂತ ಹೆಸರಿಡಬೇಕಲ್ಲ. ಯಾವ ‘ವಿಲ್ಲ’ ಅಂತ ಇಡಬೇಕು ಅನ್ನೋದು ಅವರ ಸಮಸ್ಯೆ. ಆನಂದವಿಲ್ಲ, ಜ್ಞಾನವಿಲ್ಲ, ಸೌಂಧರ್ಯವಿಲ್ಲ ಎಂಬಂತಹ ವಿಲ್ಲಾಗಳನ್ನು ಹೆಸರಾಗಿ ಹೇಗೆ ತಾನೇ ಇಡುವುದು; ನಾಡಿಗೆರರು ಹೋಗಿ ಬಿಟ್ಟರು ಎಂಬುದಕ್ಕೆ ಅಸ್ಥಿಕ ಸಂಘದವರು ಸಂತೋಷಿಸಿದ್ದು; ನಾನು ಸತ್ತರೆ ಈ ಪುತ್ಥಳಿಯನ್ನು ಮಾತ್ರ ನಿಲ್ಲಿಸಬೇಡಿ, ಕಾಗೆ ಇನ್ನಿತರ ಪಕ್ಷಿಗಳು ಅದರ ಮೇಲೆ ಗಲೀಜು ಮಾಡಿದರೆ ತಡಕೊಳ್ಳಲಿಕ್ಕೆ ಕಷ್ಟ; ಮನೆಗೆ ಹೆಣ್ಣು ನೋಡಲು ಬಂದ ಗಂಡಿನ ಬಗ್ಗೆ ಮೂಗು ಮಾತಾಡಬೇಡ ಎಂದು ಪುಟ್ಟ ಮಗನಿಗೆ ಲಂಚ ಕೊಟ್ಟು ಮಲಗಿಸಿದ್ದರೆ ಸದ್ದಿಲ್ಲದೆ ಎದ್ದು ಬಂದ ಮಗ “ನೀನು ಅವರ ಮೂಗಿನ ಮಾತಾಡಬೇಡ ಅಂದೆ, ಅವರಿಗೆ ಮೂಗೇ ಇಲ್ವಲ್ಲಪ್ಪ” ಅನ್ನೋದು; ಚೇಚಿ ಎಂಬ ಮೈದುನನ ಮದುವೆಗೆ ಏನು ಉಡುಗೊರೆ ಕೊಡಬೇಕು ಎಂದು ನಿರ್ಣಯಿಸುವಲ್ಲಿ ಮದುವೆಗೆ ಹೋಗಲಿಕ್ಕೆ ಹೆಂಡತಿ ಒಳ್ಳೇ ಸೀರೆ ಇಲ್ಲ ಎಂಬ ಪ್ರಸಂಗಕ್ಕೆ ತಿರುಗಿ ಕೊನೆಗೆ ಸೀರೆ ಕೊಳ್ಳುವಲ್ಲಿ ಇದ್ದ ಹಣವೆಲ್ಲಾ ಖರ್ಚಾಗಿ ಉಡುಗೊರೆ ಕೊಳ್ಳಲಿಕ್ಕೆ ಹಣವಿಲ್ಲದೆ ಹೋಗುವುದು; ತಮ್ಮನ್ನು ತಾವು ಕಾಫಿ ಸಮುದ್ರದಲ್ಲಿ ಈಜುಗಾರನೆಂದು ಕೊಳ್ಳುವುದು ಹೀಗೆ ನೂರಾರು ಪ್ರಸಂಗಗಳು ನಾಡಿಗೇರರ ನಗೆಬರಹಗಳಲ್ಲಿ ಹರಿದು ಹೋಗುತ್ತವೆ. ಅವರು ಬರೆದಿರುವ ನಗೆಬರಹಗಳು ಸಾವಿರಕ್ಕೂ ಹೆಚ್ಚಿನದು. ಆದರೆ ಪುಸ್ತಕರೂಪದಲ್ಲಿ ಬಂದದ್ದು ಕೆಲವೇ ಕೆಲವು.
ಕನ್ನಡ ಚಳುವಳಿಯಲ್ಲಿ
[ಬದಲಾಯಿಸಿ]ನಾಡಿಗೇರ ಕೃಷ್ಣರಾಯರು ಅ. ನ. ಕೃಷ್ಣರಾಯರ ನೇತೃತ್ವದ ಕನ್ನಡ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದರು.
ಕೃತಿಗಳು
[ಬದಲಾಯಿಸಿ]ಹಾಸ್ಯಸಂಕಲನ
[ಬದಲಾಯಿಸಿ]- ಅಡ್ಡಾದಿಡ್ಡಿ
- ಏನೋ ಆಯಿತು
- ಕಸದ ಬುಟ್ಟಿ
- ಕೇಡಿಗನ ಕಿಡಿಗಳು
- ತಲೆಹರಟೆ
- ನಾಡಿಗೇರರ ನಗೆಮಿಂಚುಗಳು
- ನಾಡಿಗೇರರ ಬರಹಗಳು
- ನಾಮಕರಣ
- ನೈಲಾನ್ ಹುಡುಗಿ
- ಬೇಸ್ತು
- ಮೆಲ್ಲೋಗರ
- ಮೈಕಾಸುರನ ಹಾವಳಿ
- ರಾಯಭೇರಿ
- ಸ್ವಾರಸ್ಯ ಪ್ರಸಂಗ
- ಹರಕು-ಮುರುಕು
- ಹೇಗಿದ್ದರೂ ಕಷ್ಟ
ಕಾದಂಬರಿ
[ಬದಲಾಯಿಸಿ]- ಅದಲು ಬದಲು
- ಇಬ್ಬರು ಸುಂದರಿಯರು
- ಎದಿರೇಟು
- ಕನಸಿನ ರಾಣಿ
- ಕಮಲೆಯ ಕನಸು
- ಗಗನ ಚಂದ್ರ
- ಗಾನನಂದಿನಿ
- ಗುಲಾಮ
- ತುಳಸಮ್ಮನ ಸಂಸಾರ
- ನರಕದಲ್ಲಿ ಸ್ವರ್ಗ
- ನಾಲ್ಕು ಸುಂದರಿಯರು
- ನೀಲವೇಣಿ
- ಪ್ರಿಯಸಖಿ
- ಪ್ರೇಮಮಂಟಪ
- ಪ್ರೇಮವಂಚಿತ
- ಬೆಂಕಿಯ ಹೂವು
- ಮೂರಕ್ಕೆ ಮುಕ್ತಿ
- ಮೂವರು ಗೆಳತಿಯರು
- ರಾಜಕಾರಣಿ
- ಶಿಲಾಬಾಲಿಕೆ
- ಸುಜಾತಾ
- ಸೆರಗಿನಲ್ಲಿ ಬಿದ್ದ ಹೆಣ್ಣು
ಹಾಸ್ಯ ನಾಟಕ
[ಬದಲಾಯಿಸಿ]- ಪುಢಾರಿ ಪುಟ್ಟಯ್ಯ
ಕ್ಷೇತ್ರ ಪರಿಚಯ
[ಬದಲಾಯಿಸಿ]- ಶ್ರೀ ಹರಿಹರ ಕ್ಷೇತ್ರ
ಸಿನಿಮಾ ನಂಟು
[ಬದಲಾಯಿಸಿ]೧೯೫೪ರಲ್ಲಿ ಸಿ.ವಿ.ರಾಜು ನಿರ್ಮಿಸಿದ ನಟಶೇಖರ ಚಿತ್ರಕ್ಕೆ ಸಂಭಾಷಣೆ ಮತ್ತು ೧೫ ಹಾಡುಗಳನ್ನು ಬರೆದರು.ಇದೇ ನಿರ್ಮಾಪಕರ ಭಕ್ತ ಮಲ್ಲಿಕಾರ್ಜುನ ಚಿತ್ರಕ್ಕೆ ೮ ಹಾದುಗಳನ್ನು ಬರೆದರು.
ವೈಶಿಷ್ಟ್ಯ
[ಬದಲಾಯಿಸಿ]ಕನ್ನಡದ ಕಟ್ಟಾಳು ಅ.ನ.ಕೃಷ್ಣರಾಯರು ನಾಡಿಗೇರರ ಸಾಧನೆಯನ್ನು ಈ ರೀತಿಯಾಗಿ ವರ್ಣಿಸಿದ್ದಾರೆ:
ಪತ್ರಿಕೋದ್ಯಮಿಯಾಗಿಯಾಗಿ ಕಟ್ಟಿದನು ಗೆಜ್ಜೆ
ಕಾದಂಬರಿಗಳನು ಬರೆದು ಹಾಕಿದನು ಹೆಜ್ಜೆ
ನಗೆಹರಟೆಗಳ ರಚಿಸಿ ಬಾರಿಸಿದ ಡೋಲು
ಇವನ ಜೀವನ ಹಿರಿದು, ಇವಗಿಲ್ಲ ಸೋಲು
ವಿದಾಯ
[ಬದಲಾಯಿಸಿ]ಈ ಅಪ್ರತಿಮ ಕನ್ನಡ ಸೇವಕರು ಮಾರ್ಚ್ ೩, ೧೯೯೨ರ ವರ್ಷದಲ್ಲಿ ಈ ಲೋಕವನ್ನಗಲಿದರು.