ನಾಗಲಿಂಗಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಗಲಿಂಗಸ್ವಾಮಿ ನವಲಗುಂದದಲ್ಲಿ ನೆಲೆಸಿ ಸಮಾಜ ಸೇವೆ ಮಾಡಿ ಪ್ರಖ್ಯಾತರಾದ ಹಠಯೋಗಿ. ಇವರು ಹಠಯೋಗಿಗಳು ಹಾಗೂ ಪವಾಡ ಪುರುಷರು. ಉತ್ತರ ಕರ್ನಾಟಕದ ಬಹುಭಾಗದಲ್ಲಿ ಚಿರಪರಿಚಿತರು. ಶಿಶುನಾಳ ಶರೀಫರು ಇವರ ಆಪ್ತ ಸ್ನೇಹಿತ. ಸಿದ್ಧಾರೂಢರು, ಗರಗದ ಮಡಿವಾಳರು ಇವರೊಡನೆ ಒಡನಾಟವಿಟ್ಟುಕೊಂಡಿದ್ದರು

ಜನನ-ಪ್ರಸ್ಥಾನ[ಬದಲಾಯಿಸಿ]

ಅಜಾತ ನಾಗಲಿಂಗಸ್ವಾಮಿಗಳು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಿ ಗ್ರಾಮದಲ್ಲಿ ಜನಿಸಿದರು. ತಂದೆ ಮೌನಾಚಾರ್ಯ, ತಾಯಿ ನಾಗಮ್ಮ. ಇವರು ವಿಶ್ವಕರ್ಮ ಬ್ರಾಹ್ಮಣರು. ಸಾನಗ ಎಂಬ ಋಷಿಗೋತ್ರಕ್ಕೆ ಸೇರಿದ ಇವರು ಕಮ್ಮಾರ ವೃತ್ತಿಯನ್ನು ತಲತಲಾಂತರದಿಂದ ಹಮ್ಮಿಕೊಂಡಿದ್ದರು. ಇವರ ಮನೆತನದ ದೇವತೆ ಕಾಳಿಕಾಮಾತೆ. ಶಾಲಿವಾಹನ ಶಕೆ 1734ನೇ ಶ್ರೀಮುಖ ಸಂವತ್ಸರದ ಶುಕ್ಲಪಕ್ಷ ಪೂರ್ಣಿಮೆ ಸೋಮವಾರ ಸೂರ್ಯೋದಯ (ಕಿ.ಶ. 1812) ಕಾಲದಲ್ಲಿ ಜನಿಸಿದರು. ಇವರು ಜನ್ಮಿಸುವ ಮೊದಲು ಇವರ ಮನೆಗೆ ಬಂದಿದ್ದ ಚಿದಾನಂದಾವಧೂತ ಎಂಬ ಅವಧೂತರು ತಾವು ಬರೆದಿದ್ದ ‘ಜ್ಞಾನಸಿಂಧು’ ಎಂಬ ಕೈಬರಹದ ಪ್ರತಿಯನ್ನು ಕೊಟ್ಟು ಮುಂದೆ ಹುಟ್ಟುವ ಮಗ ಹನ್ನೆರಡರ ಪ್ರಾಯಕ್ಕೆ ಬಂದಾಗ ಓದಿಸಲು ಕೊಡಬೇಕೆಂದು ಸೂಚಿಸಿದರಂತೆ. ಇದು ಭವಿಷ್ಯದಲ್ಲಿ ನಿಜವಾದದ್ದು ಒಂದು ಯೋಗಾಯೋಗವೇ ಸರಿ. ನಾಗಲಿಂಗ ಹುಟ್ಟಿದ ತರುವಾಯ ತಾಯಿ-ತಂದೆ ತಮ್ಮ ಕುಲಪುರೋಹಿತರಿಂದ ಜಾತಕರ್ಮ-ನಾಮಕರಣ ಮಾಡಿಸಿದರು. ಬಾಲ್ಯದಲ್ಲಿ ನಾಗಲಿಂಗ ಕುಶಾಗ್ರಮತಿಯಾಗಿದ್ದನು. ಹನ್ನೆರಡರ ಪ್ರಾಯಕ್ಕೆ ಬಂದಾಗ ಉಳಿದ ಹುಡುಗರಿಗಿಂತ ವಿಶೇಷವಾದ ಚರ್ಯುಗಳು ಇವನಲ್ಲಿ ಕಾಣಿಸಿಕೊಂಡವು. ಆಗಾಗ್ಗೆ ಊರಿನ ಕಾಳಿಕಾಮಾತೆಯ ಗುಡಿಯ ಬಳಿ ಹೋಗಿ ಮೌನದಿಂದ ಕುಳಿತಿರುತ್ತಿದ್ದ. ‘ಜ್ಞಾನಸಿಂಧು’ವಿನ ಪಾರಾಯಣ ಮಾಡುವುದು ಅನುದಿನದ ಚರ್ಯುಯಾಗಿತ್ತು. ಧ್ಯಾನಸ್ಥನಾದರೆ ಇಹದ ಅರಿವನ್ನೇ ಮರೆಯುತ್ತಿದ್ದ. ಲೌಕಿಕದ ಓದಿನ ಕರ್ಮಗಳು ಇವನಿಗೆ ಬೇಡವಾದವು.

ಸನ್ಯಾಸತ್ವ[ಬದಲಾಯಿಸಿ]

ನಾಗಲಿಂಗನ ಕೌಮಾರ್ಯದ ಬದುಕಿನಲ್ಲಿ ನಡೆದ ಒಂದು ಘಟನೆ ಸಂಸಾರಸಂಗದಿಂದ ಹೊರನಡೆಯಲು ಕಾರಣವಾಯಿತು. ನಾಗಲಿಂಗನ ತಾಯಿ ಸ್ನಾನಕ್ಕಾಗಿ ಬಚ್ಚಲುಮನೆಗೆ ಹೋಗಿದ್ದರು. ಇದನ್ನು ತಿಳಿಯದೆ ಸ್ನಾನದ ಮನೆಯ ಕದವನ್ನು ತೆರೆದಾಗ ತಾಯಿ ಗಾಬರಿಗೊಂಡಳು. ಮಗನಿಗೆ ‘ಹಿಂದು-ಮುಂದು ನೋಡದೆ ಅದೇಕೆ ನುಗ್ಗಿ ಬಂದೆಯೊ ನಾಗಲಿಂಗ. ಎಲ್ಲಾದರೂ ಹಾಳಾಗಿಹೋಗು’ ಎಂದುಬಿಟ್ಟಳು. ಹೊರಗೆ ನಿಂತಿದ್ದ ನಾಗಲಿಂಗ ‘ನಾನು ಮೂಡಿಬಂದ ಹಾದಿಯನ್ನು ಹಾಲುಂಡ ಹಾದಿಯನ್ನು ನೋಡಿದರೆ ನಿನಗೇನಾಯಿತು’ ಎಂದು ಹೇಳಿ ಮನೆಯಿಂದ ಹೊರಟು ಊರಾಚೆ ಇದ್ದ ಮಲದಗುಡ್ಡದ ಗವಿ ಹೊಕ್ಕು ಕುಳಿತುಕೊಂಡ. ಅಲ್ಲಿ ದೇವಿಯನ್ನು ಆರಾಧಿಸತೊಡಗಿದ. ಊರಿನ ಶಂಭುಲಿಂಗಪ್ಪ ನಾಗಲಿಂಗನ ತಂದೆ-ತಾಯಂದಿರಿಗೆ ಸಮಾಧಾನ ಹೇಳಿ ನಾಗಲಿಂಗನನ್ನು ಕರೆತಂದ. ಮಗನಿಗೆ ಮದುವೆ ಮಾಡಬೇಕೆಂದು ತಾಯಿ-ತಂದೆಯರು ನಿಶ್ಚಯಿಸಿದರು. ಆದರೆ, ನಾಗಲಿಂಗ ವಿರಕ್ತಿ, ಆತ್ಮವಿದ್ಯೆ, ಸಂಸ್ಕಾರ, ದೈವಸಾಕ್ಷಾತ್ಕಾರ ಇವುಗಳ ಬಗೆಗೆ ತಿಳಿಹೇಳಿ ಅವರ ಅನುಜ್ಞೆ ಪಡೆದು ಸಂಸಾರವನ್ನು ತೊರೆದು ಹೊರಡಲು ಸಿದ್ಧನಾದ.

ಲೋಕ ಸಂಚಾರ[ಬದಲಾಯಿಸಿ]

ನಾಗಲಿಂಗನ ಪ್ರಸ್ಥಾನ ಪ್ರಾರಂಭವಾಯಿತು. ಬಿಜಾಪುರದ ಸಾರವಾಡಕ್ಕೆ ಬಂದ. ಅಲ್ಲಿ ಹಿರೇಮಠದ ಪಟ್ಟದ ಗುರುಗಳನ್ನು ಕಂಡ. ಅವರ ಸೂಚನೆಯಂತೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ‘ತಲೆಕಟ್ಟು’ ಎಂಬ ಗ್ರಾಮಕ್ಕೆ ಬಂದ. ಅಲ್ಲಿ ನಿರುಪಾಧೀಶ್ವರರೆಂಬ ಯೋಗಿಗಳು ಇದ್ದರು. ಅವರನ್ನು ಕಾಣುವ ಹಂಬಲಕ್ಕೆ ಒಳಗಾದ. ಸ್ವಾಮಿಗಳು ಭಿಕ್ಷೆಗಾಗಿ ಪರವೂರಿಗೆ ಹೋಗಿರುವುದು ನಾಗಲಿಂಗನಿಗೆ ತಿಳಿಯಿತು. ಅವರು ಬರುವ ದಾರಿಯಲ್ಲಿ ಹೊಂಡವೊಂದನ್ನು ತೋಡಿ ಕೊರಳಿನ ವರೆಗೆ ಭೂಮಿಯಲ್ಲಿ ಹೂತುಕೊಂಡು ನಿರುಪಾಧೀಶ್ವರರ ಆಗಮನವನ್ನು ನಿರೀಕ್ಷಿಸುತ್ತಿದ್ದ. ನಿರುಪಾಧೀಶ್ವರರು ನಾಗಲಿಂಗನನ್ನು ಕಂಡು ಸೋಜಿಗಗೊಂಡರು. ‘ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಮಾಡಿಕೊಂಡು ಉದ್ಧರಿಸಿ ಕಾಪಾಡಿ’ ಎಂದು ಕೇಳಿಕೊಂಡ. ನಾಗಲಿಂಗ ಪರಮಾರ್ಥ ಜೀವನಕ್ಕೆ ಅಧಿಕಾರಿ ಎಂಬುದು ಸ್ವಾಮಿಗಳಿಗೆ ಮನವರಿಕೆ ಆಯಿತು. ಸ್ವಾಮಿಗಳ ಸೇವೆ ಮಾಡುತ್ತ, ಎಲ್ಲಾ ಕರ್ಮಗಳನ್ನು ನೆರವೇರಿಸುತ್ತಿದ್ದನು. ನಂತರ ಅಲ್ಲಿ ನಾಗಲಿಂಗನು ಸಾಧನ ಚತುಷ್ಟಯಗಳ ಸಂಪನ್ನತೆಯನ್ನು ತಿಳಿದುದಲ್ಲದೆ, ವೈರಾಗ್ಯ ನಿರ್ಣಯ, ಕರ್ಮಯೋಗ, ಗುರುಲಕ್ಷಣ, ಶಾಂತಿಲಕ್ಷಣ, ಸಪ್ತಭೂಮಿಕೆ, ಭಕ್ತಿಯೋಗ, ಪರಮಾತ್ಮನ ವಿಭೂತಿಗಳು, ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗಗಳನ್ನು ಆಳವಾಗಿ ತಿಳಿದುಕೊಂಡ. ನಿರುಪಾಧೀಶ್ವರರು ಅವಧೂತನ ಮಹಿಮಾಲಕ್ಷಣಗಳನ್ನು ತಿಳಿಸಿದರು. ನಂತರ ಆತ್ಮನ ಪಂಚಲಕ್ಷಣ ತಿಳಿದುಕೊಂಡ ಮೇಲೆ ಗುರುವಿನ ಅನುಮತಿ ಪಡೆದು ನಾಗಲಿಂಗಸ್ವಾಮಿ ದೇಶಾಟನೆಗೆ ಹೊರಡಲು ಸಿದ್ಧರಾದರು.

ನಾಗಲಿಂಗಸ್ವಾಮಿ ಬಿಜವಾಡಕ್ಕೆ ಬಂದು, ಅಲ್ಲಿ ಆದಿಶಕ್ತಿಯ ಅನುಗ್ರಹಕ್ಕೆ ಪಾತ್ರರಾದರು. ನಂತರ ತಿಂಥಿಣಿ ಮೌನೇಶ್ವರ ಸನ್ನಿಧಿಗೆ, ನಂತರ ಗಂಗಾವತಿ, ಬನಶಂಕರಿಗೆ ಬಂದರು. ಮಹಾಕೂಟಕ್ಕೆ ಹೋಗಿ ಅಲ್ಲಿ ಕೆಲವು ಲೀಲೆಗಳನ್ನು ನಾಗಲಿಂಗಯತಿಗಳು ಮಾಡಿದರು. ಅಲ್ಲಿಂದ ‘ಕಲಾದಗಿ’ ಎಂಬ ಊರಿಗೆ ಹೋಗಿ ತಮ್ಮ ಲೀಲೆ ತೋರಿಸಿದರು. ಲೋಹರಸದ ಪಾನವನ್ನು ಮಾಡಿದರು. ನವಲಗುಂದಕ್ಕೆ ಬಂದರು. ಅಲ್ಲಿರುವ ಗುಡ್ಡದ ತಪ್ಪಲಿನಲ್ಲಿ ಮೌನೇಶ್ವರನೆಂಬ ಮಹಾಂತನ ಗದ್ದುಗೆಯಿಂದ ಕೂಡಿದ ಚಿಕ್ಕಮಠವಿತ್ತು. ಅದನ್ನು ವಿಶ್ವಕರ್ಮದ ಅಧಿಪತಿಗಳಾದ ಧಮೇಂದ್ರಸ್ವಾಮಿ ಎಂಬುವರು ಸ್ಥಾಪಿಸಿದ್ದರು. ಅಲ್ಲಿ ಇಲ್ಲಿ ಅಲೆದು ರಾತ್ರಿ ಮಠಕ್ಕೆ ಬಂದು ಮಲಗುತ್ತಿದ್ದರು. ಒಂದು ದಿನ ಸ್ವಾಮಿಗಳಿಗೆ ನಿತ್ರಾಣವಾಗಿ ಜ್ವರ ಕವಿಯಿತು. ‘ಪ್ರಾರಬ್ಧಕರ್ಮವಾಗಿ ಈ ರೋಗ ಬಂದಿದೆ. ಈ ಶರೀರ ಅನುಭವಿಸುತ್ತಿದೆ’ ಎಂದು ಸುಮ್ಮನಿದ್ದರು. ಆ ಗದ್ದುಗೆಗೆ ನಿತ್ಯ ಬಂದು ದರ್ಶನ ತೆಗೆದುಕೊಳ್ಳುತ್ತಿದ್ದ ಭೀಮವ್ವ ಎಂಬ ಹೆಂಗಸು ಸಮಗಾರ ಕುಲಕ್ಕೆ ಸೇರಿದವಳು. ಅವಳು ಗಂಜಿನೀಡಿ ನಾಗಲಿಂಗಯತಿಗಳನ್ನು ಸಂರಕ್ಷಿಸಿದಳು. ನಂತರ ಭೀಮವ್ವ ನಾಗಲಿಂಗಸ್ವಾಮಿಗಳ ಶಿಷ್ಯಳಾದಳು. ‘ಜನನ-ಮರಣಗಳಿಗೆ ಗುರಿಯಾಗದ, ಸತ್​ಚಿತ್ ಆನಂದ ಪರಿಪೂರ್ಣವಾದ ಪರಬ್ರಹ್ಮ ವಸ್ತುವೇ ನೀನು’ ಎಂಬ ಸ್ವಾಮಿಗಳ ಬೋಧೆಯಿಂದ ಸಮಗಾರ್ತಿ ಭೀಮವ್ವ ಆತ್ಮಬೋಧೆಗೊಂಡಳು.

ನಾಗಲಿಂಗಯತಿವರರು ಕಡಕೋಳ ಮಡಿವಾಳಪ್ಪ ಜತೆಗೂಡಿ ಕಾಶಿಯಾತ್ರೆ ಕೈಗೊಂಡರು. ಕಾಶಿಯಲ್ಲಿ ಜಂಗಮವಾಡಿ ಮಠದಲ್ಲಿ ಕೆಲಕಾಲವಿದ್ದು ತಮ್ಮ ಮಹಿಮೆಯನ್ನು ತೋರಿಸಿದರು. ಅಲ್ಲಿಂದ ಹೊರಟು ಉಪ್ಪಿನ ಬೆಟಗೇರಿಗೆ ಬಂದರು. ಅಲ್ಲಿದ್ದ ಬೂದಿಸ್ವಾಮಿಗಳನ್ನು ಕಂಡರು. ಆಗ ಧಾರವಾಡದಲ್ಲಿ ವೆಲ್ಲೆಸ್ಲಿ ಎಂಬ ಬ್ರಿಟಿಷ್ ಅಧಿಕಾರಿ ಇದ್ದನು. ಅವನ ಬಳಿ ಬಂದು ‘ನಾನು ನಿನಗಿಂತ ದೊಡ್ಡ ಅಧಿಕಾರಿ; ನಿನ್ನ ಆಡಳಿತವೆಲ್ಲಾ ನೆಟ್ಟಗಿದೆಯೋ ಇಲ್ಲವೋ, ದುಡ್ಡುಕಾಸಿನ ವ್ಯವಹಾರವೆಲ್ಲ ಸರಿಯಾಗಿದೆಯೋ ಇಲ್ಲವೋ ಎಂದು ಕಡತಗಳನ್ನು ಪರೀಕ್ಷಿಸಲು ಬಂದಿದ್ದೇನೆ. ಅವುಗಳನ್ನು ನನ್ನ ವಶಕ್ಕೊಪಿಸು’ ಎಂದು ಆಜ್ಞೆಮಾಡಿದರು. ಇದನ್ನು ಕೇಳಿದ ಕಲೆಕ್ಟರ್​ನಿಗೆ ದಿಗ್ಭ್ರಾಂತಿ ಆಯಿತು. ಸೆರೆಮನೆಗೆ ತಳ್ಳಿದ್ದ ಈತ ಮರಳಿ ಇಲ್ಲಿಗೆ ಹೇಗೆ ಬಂದ? ಎಂದು ಆತ ಅಚ್ಚರಿಗೊಂಡ. ಬಂದೀಖಾನೆಯ ಅಧಿಕಾರಿಯನ್ನು ಕರೆದು ಮರಳಿ ಜೈಲಿನಲ್ಲಿಡಲು ಕಳುಹಿಸಿದ. ಆದರೆ, ನಾಗಲಿಂಗಯತಿವರರು ಸಂಜೆಗೆ ವೆಲ್ಲೆಸ್ಲಿಯ ಕಚೇರಿಯಲ್ಲಿ ಕಾಣಿಸಿಕೊಂಡರು. ನಾಗಲಿಂಗಸ್ವಾಮಿ ಸಾಮಾನ್ಯನಲ್ಲವೆಂದು ಕಲೆಕ್ಟರನಿಗೆ ತಿಳಿಯಿತು.

ಶರೀಫ-ಸಿದ್ಧಾರೂಢರ ಸಖ್ಯ[ಬದಲಾಯಿಸಿ]

ಶಿಶುನಾಳ ಶರೀಫರು ತತ್ತ್ವಪದಗಳನ್ನು ಹೇಳುತ್ತ, ಆತ್ಮಬೋಧೆಯಲ್ಲೆ ಸದಾ ಇರುತ್ತಿದ್ದರು. ಇವರನ್ನು ನೋಡಲು ನಾಗಲಿಂಗಯತಿಗಳು ಪಲ್ಲಕ್ಕಿಯಲ್ಲಿ ಕುಳಿತು ಶಿಶುನಾಳಕ್ಕೆ ಹೊರಟರು. ಅಲ್ಲಿಗೆ ಬಂದಾಗ ಶರೀಫರೇ ಎದುರಾದರು. ತಕ್ಷಣವೇ ‘ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ ನಾಗಲಿಂಗಯೋಗಿ ತಿರುಗುದ್ಯಾತಕೆ’ ಎಂದು ನುಡಿದರು. ಶರೀಫರ ಮಾತಿನ ಅರ್ಥ ನಾಗಲಿಂಗಯತಿಗೆ ತಿಳಿಯಿತು. ಆದರೂ ‘ಕುಳಿತವನಾರು ಹೊತ್ತವನಾರು ಎಂಬುದನ್ನು ಮೊದಲು ನನಗೆ ಹೇಳೊ ಶರೀಫ’ ಎಂದು ಮಾರುತ್ತರವಾಗಿ ಸವಾಲನ್ನೊಡ್ಡಿದರು. ಇದು ಅದ್ವೈತದ ಹಿನ್ನೆಲೆಯ ಪ್ರಶ್ನೆಯೆಂಬುದು ಶರೀಫರಿಗೆ ತಿಳಿಯಿತು. ನಂತರ ಶರೀಫರನ್ನು ಪರಮಾನಂದದಿಂದ ಅಪ್ಪಿಕೊಂಡರು. ಶರೀಫರು ನಾಗಲಿಂಗಯತಿಗಳನ್ನು ತಮ್ಮೊಡನೆ ಕೆಲಕಾಲ ಇರಲು ಒತ್ತಾಯ ಮಾಡಿದರು. ಒಂದು ದಿನ ನಾಗಲಿಂಗಯತಿವರ್ಯರು ‘ನೀನು ಸರಸ್ವತಿಯ ವರಪುತ್ರನಲ್ಲವೇ ಸರೀಪಾ. ಆಶುಕವಿಯಲ್ಲವೇ, ನೀನು ಕಟ್ಟಿರುವ ಪದಗಳನ್ನು ಹಾಡು’ ಎಂದು ಕೋರಿದರು. ಶರೀಫರ ಹಾಡಿಗೆ ನಾಗಲಿಂಗಯತಿಗಳು ತಲೆದೂಗುತ್ತ ‘ವೇದಾಂತ ಮಾರ್ಗಕ್ಕೆ ನಿನ್ನ ಹಾಡೆಲ್ಲವೂ ಯೋಗ್ಯವಾಗಿವೆ ಸರೀಪಾ’ ಎಂದು ಕೊಂಡಾಡಿದರು.

ಮಹಾತ್ಮರ ಅಪೂರ್ವ ಸಮ್ಮಿಲನ[ಬದಲಾಯಿಸಿ]

ನಾಗಲಿಂಗಯತಿಗಳು ನವಲಗುಂದಕ್ಕೆ ಹಿಂತಿರುಗಿದರು. ಶರೀಫರು ಆಗಾಗ್ಗೆ ನವಲಗುಂದಕ್ಕೆ ಬಂದುಹೋಗುತ್ತಿದ್ದರು ನವಲಗುಂದದಲ್ಲಿ ನಾಗಲಿಂಗಯತಿಗಳು ಶರೀಫರೊಡನೆ ಅಧ್ಯಾತ್ಮದ ಅನುಸಂಧಾನದಲ್ಲಿ ಕೆಲಕಾಲ ಕಳೆದರು. ಒಂದು ದಿನ ಶರೀಫರಿಗೆ ‘ನಾವೀಗ ಹುಬ್ಬಳ್ಳಿಗೆ ಹೋಗೋಣ. ನೀನೂ ನಮ್ಮೊಡನೆ ಬಾ ಸರೀಪಾ’ ಎಂದು ಹೇಳಿದರು. ದಾರಿ ಉದ್ದಕ್ಕೂ ಶರೀಫರು ಹಾಡುಗಳನ್ನು ಹೇಳುತ್ತ ಹೋಗುತ್ತಿದ್ದರು. ಹುಬ್ಬಳ್ಳಿಗೆ ಬಂದಾಗ ಸಂಜೆಯಾಗಿತ್ತು. ಸಂತೋಜಿ ಸಿಂಧೆ ಎಂಬ ಮರಾಠ ಭಕ್ತನ ಮನೆಯಲ್ಲಿ ಅವರು ಉಳಿದರು. ಸುತ್ತಮುತ್ತಲ ಭಕ್ತರು ಬಂದು ದರ್ಶನ ಪಡೆದರು. ಮರುದಿನ ಸಿದ್ಧಾರೂಢರನ್ನು ಕಾಣಲು ಸಿದ್ಧಾಶ್ರಮಕ್ಕೆ ಹೊರಟರು. ಅವರಿಬ್ಬರು ಬಂದಾಗ ಸಿದ್ಧಾರೂಢರು ಬಂದು ಆಲಿಂಗಿಸಿ ಸ್ವಾಗತಿಸಿದರು. ಆಗ ನಾಗಲಿಂಗಯತಿ ‘ಆರೂಢಾ ನಿನ್ನ ಮಠ ಪರಮಶಾಂತಿಯ ತಾಣವಾಗಿದೆ. ಸದ್ಭಕ್ತರಿಗೆ ಕಲ್ಪವೃಕ್ಷದಂತಿದೆ. ಸಾಧಕರ ಕಣ್ಣ ಬೆಳಕಾಗಿದೆ. ಇಲ್ಲಿ ಅನ್ನಪೂರ್ಣೆಯ ಆರಾಧನೆ ನಿರಂತರವಾಗಿ ನಡೆಯಬೇಕು’ ಎಂದು ಹೇಳಿ ತಾನು ತಂದಿದ್ದ ನೇಗಿಲಗುಳವನ್ನು ಬಾವಿಯಲ್ಲಿ ನಿಕ್ಷೇಪಗೊಳಿಸಿದರು. ಅಂದಿನಿಂದ ಜಲದೇವಿ ಮತ್ತು ಅನ್ನದೇವಿಯ ಆರಾಧನೆ ಅಲ್ಲಿ ಪ್ರಾರಂಭವಾಯಿತು.

ಸಿದ್ಧಾರೂಢರ ಮತ್ತು ನಾಗಲಿಂಗ ಮಹಾತ್ಮರ ಅಪೂರ್ವ ಸಮ್ಮಿಲನವನ್ನು ಸುತ್ತಲಿದ್ದ ಭಕ್ತರು ಕಣ್ತುಂಬಿಕೊಂಡರು. ಮುಂದೆ ಕೆಲವು ದಿನ ನಾಗಲಿಂಗಯತಿ ಮತ್ತು ಶರೀಫರು ಸಿದ್ಧಾರೂಢರ ಜತೆ ಆಧ್ಯಾತ್ಮಿಕ ವಿನೋದದಲ್ಲಿ ಕಾಲಕಳೆದರು. ಅವರು ಹೊರಡುವ ದಿನ ನಾಗಲಿಂಗಯತಿಗಳು ಸಿದ್ಧಾರೂಢರು ಹೊದ್ದುಕೊಂಡಿದ್ದ ಮೇಲುವಸ್ತ್ರವನ್ನು ಸೆಳೆದುಕೊಂಡು ಐದು ಭಾಗ ಮಾಡಿ ಒಂದನ್ನು ಆಕಾಶಕ್ಕೆ ಬೀಸಿದರು. ಎರಡನೆಯದನ್ನು ವಾಯುಮಂಡಲದಲ್ಲಿ ತೂರಿದರು. ಮೂರನೆಯದನ್ನು ಅಗ್ನಿಗೆ ಆಹುತಿ ನೀಡಿದರು. ನಾಲ್ಕನೆಯದನ್ನು ಬಾವಿಗೆ ಎಸೆದರು. ಐದನೆಯದನ್ನು ನೆಲಕ್ಕೆ ಹಾಕಿ ತುಳಿದರು. ಇದನ್ನು ನೋಡಿದ ಭಕ್ತಜನ ಅಚ್ಚರಿಗೊಂಡರು. ಆಗ ಸಿದ್ಧಾರೂಢರು ‘ಈ ಪ್ರಪಂಚವು ಪಂಚಭೂತಗಳ ಸಂಕಲನವಾಗಿ ಬ್ರಹ್ಮಾಂಡ ಎನಿಸಿಕೊಂಡಿದೆ. ಈ ಮನುಷ್ಯದೇಹ ಆ ಪಂಚಭೂತಗಳ ಪಂಚೀಕರಣ ಎನಿಸಿ ಪಿಂಡಾಂಡವೇ ಆಗಿದೆ. ಈ ಪಿಂಡಾಂಡದಲ್ಲಿ ಬಂಧಿತವಾಗಿರುವ ಪಂಚಭೂತಗಳು ಮರಣದ ನಂತರ ತಂತಮ್ಮ ಮಹಾಭೂತಗಳಲ್ಲಿ ಸೇರಿಕೊಳ್ಳುತ್ತವೆ. ಅದನ್ನೇ ನಾವು ಪಂಚತ್ವ ಎಂದು ಹೇಳುವುದು. ನಾಗಲಿಂಗಯತಿಗಳು ತಮ್ಮ ಲೀಲೆಯ ಮೂಲಕ ಅದನ್ನು ಶ್ರುತಪಡಿಸಿದರು’ ಎಂದರು.

ಶರೀಫರು ಅತ್ತ ಶಿಶುನಾಳಕ್ಕೆ ಹೊರಟರು. ನಾಗಲಿಂಗಯತಿಗಳು ಇತ್ತ ನವಲಗುಂದಕ್ಕೆ ಬಂದರು. ಅಲ್ಲಿ ಭಕ್ತಜನರೊಡನೆ ಕಾಲಕಳೆಯುವಾಗ ಬರಗಾಲ ಬರುವ ಸೂಚನೆ ನಾಗಲಿಂಗಸ್ವಾಮಿಗಳಿಗೆ ತಿಳಿಯಿತು. ಆಗ ಗದಗ, ನವಲಗುಂದ ಮುಂತಾದ ಊರುಗಳಲ್ಲಿ ಸಂಚಾರ ಮಾಡುತ್ತ ಬರಗಾಲ ಬರುವ ಸೂಚನೆಗಳನ್ನು ಜನರಿಗೆ ನೀಡಿದರು. 1876ನೆಯ ಇಸವಿಯಲ್ಲಿ ಉತ್ತರಕರ್ನಾಟಕಕ್ಕೆ ಭಯಂಕರ ಬರಗಾಲ ಒದಗಿತು. ನೀರಿಲ್ಲದೆ ಜನ ಸತ್ತರು. ದನಕರುಗಳು ಮೇವು ನೀರಿಲ್ಲದೆ ಅಲೆದಾಡಿದುವು. ನಂತರ ನಾಗಲಿಂಗಯತಿ ಭಕ್ತರನ್ನು ಉದ್ಧರಿಸಲು ಹೊಂಬಳ, ಜಮಖಂಡಿ, ನಿಡಗುಂದಿ, ಬಂಕಾಪುರಗಳಿಗೆ ಹೋಗಿ ತಮ್ಮ ಲೀಲೆಯನ್ನು ಮೆರೆದರು.

ಮಹಾಸಮಾಧಿ[ಬದಲಾಯಿಸಿ]

ನಾಗಲಿಂಗಯತಿಗಳ ಅವತಾರ ಸಮಾಪ್ತಿಯ ದಿನಗಳು ಹತ್ತಿರವಾದುವು. ಸಮಗಾರ್ತಿ ಭೀಮವ್ವ ಮದುವೆಯಾಗದೆ, ನಾಗಲಿಂಗಯತಿಗಳ ಸೇವೆಯಲ್ಲಿ ತೊಡಗಿದ್ದಳು. ಒಂದು ದಿನ ಭೀಮವ್ವನ ದೇಹಾವಸಾನ ಆಗುವುದೆಂಬುದನ್ನು ಯೋಗಬಲದಿಂದ ತಿಳಿದ ನಾಗಲಿಂಗಜ್ಜ ಆಕೆಯ ಮನೆಗೆ ಬಂದರು. ಎರಡು ಲೋಟ ಹಾಲು ತರಲು ಹೇಳಿ ‘ಗುರುಸ್ಮರಣೆ ಮಾಡುತ್ತ ಈ ಹಾಲನ್ನು ಕುಡಿ’ ಎಂದು ಹೇಳಿದರು. ನಂತರ ಭೀಮವ್ವ ಪದ್ಮಾಸನದಲ್ಲಿ ಕುಳಿತಳು. ತನ್ನ ಚಿತ್ತವೃತ್ತಿಯನ್ನೆಲ್ಲಾ ಒಳಗೆ ಎಳೆದುಕೊಂಡು ಬ್ರಹ್ಮಚೇತನದಲ್ಲಿ ನಿಲ್ಲಿಸಿದಳು. ಆಗ ನಾಗಲಿಂಗಯತಿ ಭೀಮವ್ವನ ಶಿರದ ಮೇಲೆ ಹಸ್ತವನ್ನು ಇಟ್ಟರು. ತಕ್ಷಣವೇ ಆಕೆಯ ಪ್ರಾಣ ಬ್ರಹ್ಮರಂಧ್ರದಿಂದ ಹೊರಟು ಗುರುಚರಣದಲ್ಲಿ ಲೀನವಾಯಿತು.

ಲಿಂಗೈಕ್ಯ[ಬದಲಾಯಿಸಿ]

ಆಷಾಢಮಾಸದ ಬಿದಿಗೆ ಮಂಗಳವಾರ. ಆ ದಿನ ನಾಗಲಿಂಗಜ್ಜ ನವಲಗುಂದದ ಬೀದಿಗಳಲ್ಲಿ ಅಡ್ಡಾಡಿದರು. ಕಂಡವರಿಗೆ ಕೈಮುಗಿದು ‘ನಾನು ಹೋಗಿಬರುತ್ತೇನೆ. ಇದೇ ನಮ್ಮ ನಿಮ್ಮ ಕೊನೆಯ ಭೇಟಿ’ ಎಂದರು. ಆ ದಿನ ಸಂಜೆ ಜನರಿಗೆ ಬ್ರಹ್ಮಚರ್ಯದ ಮಹತ್ತ್ವವನ್ನು ತಿಳಿಸಿಕೊಡುತ್ತ ‘ಸರ್ವರೂ ಸುಖಿಗಳಾಗಿರಿ, ಸರ್ವರೂ ದೃಢಕಾಯರಾಗಿರಿ. ಸರ್ವರೂ ಮಂಗಳಕರವಾದುದನ್ನೇ ಕಾಣಿರಿ’ ಎಂದು ಹೇಳಿ ನಡೆದರು. ನಡುರಾತ್ರಿ ಮುಗಿಯಿತು. ಆ ದಿನ ಸತ್ಯಮ್ಮನ ಮನೆಗೆ ಹೋಗಿ ಹಾಲು-ಅನ್ನ ಊಟ ಮಾಡಿದರು. ಮರುದಿನ ಬೆಳಗ್ಗೆ ಎದ್ದರು, ತಮ್ಮ ದೇಹವನ್ನು ಪಂಚಭೂತಗಳಿಗೆ ಅರ್ಪಿಸಲು ನಿರ್ಧರಿಸಿದರು. ಆ ದಿನ ಶಾಲಿವಾಹನಶಕ 1803 ವೃಷ ಸಂವತ್ಸರದ ಆಷಾಢಮಾಸದ ಶುಕ್ಲಪಕ್ಷದ ಚತುರ್ಥಿ, ಗುರುವಾರ (30.06.1881) ಆಗಿತ್ತು. ಎಲ್ಲ ಭಕ್ತರಿಗೂ ಸನ್ಮಂಗಳವನ್ನು ಹೇಳುತ್ತ ತಮ್ಮ ಬಾಹ್ಯವೃತ್ತಿಗಳನ್ನು ಒಳಮುಖ ಮಾಡಿಕೊಂಡರು. ವಾಕ್, ಪಾಣಿ, ಪಾದ, ಪಾಯು, ಉಪಸ್ಥಾದಿ ಕಮೇಂದ್ರಿಯಗಳನ್ನೆಲ್ಲಾ ನಿಷ್ಕ್ರಿಯಗೊಳಿಸಿದರು. ಬ್ರಹ್ಮಚೈತನ್ಯದಲ್ಲಿ ಲಕ್ಷ್ಯರಿಸಿ ಸಮರತಿ-ಸಮಕಳೆಯಲ್ಲಿ ಲೀನವಾದರು. ಘಟಾಕಾಶವು ಮಹಾಕಾಶದಲ್ಲಿ, ಘಟವಾಯುವು ಮಹಾವಾಯುವಿನಲ್ಲಿ, ಘಟಾಗ್ನಿಯು ಮಹಾಗ್ನಿಯಲ್ಲಿ, ಘಟಜಲವು ಮಹಾಜಲದಲ್ಲಿ, ಘಟಪೃಥ್ವಿಯು ಮಹಾಪೃಥ್ವಿಯಲ್ಲಿ ಹಂಚಿಹೋಗಿ ಪರಮಹಂಸಭಾವದಿಂದ ಬ್ರಹ್ಮೈಕ್ಯರಾದರು. ನಂತರ ಭಕ್ತರೆಲ್ಲ ಸೇರಿ ಕಾಯವನ್ನು ಮೆರವಣಿಗೆ ಮಾಡಿ, ಅವರು ಇರುತ್ತಿದ್ದ ಮೌನೇಶ್ವರಮಠದಲ್ಲಿ ಗದ್ದುಗೆ ಮಾಡಿದರು. ಹೀಗೆ ನಾಗಲಿಂಗಯತಿಗಳ ಅವತಾರಕಾರ್ಯ ಮುಗಿಯಿತು. ಆ ಕಾಲದಲ್ಲಿ ನಾಗಲಿಂಗಯತಿಗಳನ್ನು ಗೊತ್ತಿಲ್ಲದ ಸಾಧಕರು ಒಬ್ಬರೂ ಇರಲಿಲ್ಲ. ಅವರು ತತ್ತ್ವಬೋಧಕ ಸ್ವಾಮಿಗಳಾಗಿರಲಿಲ್ಲ. ಅವರು ಅದನ್ನು ಆಚರಿಸುತ್ತ ಬೋಧಿಸುತ್ತಿದ್ದರು. ಅವರು ಅನುಷ್ಠಾನ ವೇದಾಂತಕ್ಕೆ ರೂಪಕವಾಗಿದ್ದರು. ಅವರ ಹೆಸರಿನಿಂದಾಗಿ ನವಲಗುಂದವು ಇಂದು ಕರ್ನಾಟಕದ ಆಧ್ಯಾತ್ಮಿಕ ಕೇಂದ್ರವಾಗಿ ಉಳಿದಿದೆ.

ವಿವರ[ಬದಲಾಯಿಸಿ]

ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಇವರ ಪ್ರಸಿದ್ಧ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ದೊಡ್ಡ ಜಾತ್ರೆ ನಡೆಯುತ್ತದೆ, ಸುತ್ತೂ ಹಳ್ಳೀಗಳ ಸಾವಿರಾರು ಜನರು ಈ ಜಾತ್ರೆಗೆ ಆಗಮಿಸುತ್ತಾರೆ. ಅಂದು ಇಡೀ ರಾತ್ರೀ ಇವರ ಪಲ್ಲಕ್ಕಿಯನ್ನು ಡೊಳ್ಳು, ಕವಾಯತು ಹಾಗೂ ಪುರುವಂತರೊಡನೆ ಊರ ತುಂಬ ಮೆರವಣಿಗೆ ಮಾಡಲಾಗುತ್ತದೆ.