ನಾಗಪತಿ ಹೆಗಡೆ ಹುಳಗೋಳ
ಹುಳಗೋಳ ನಾಗಪತಿ ಹೆಗಡೆ ಎಂಬ ಹೆಸರಿನಿಂದ ಕನ್ನಡದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ನಾಗಪತಿ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಹುಳಗೋಳ ಗ್ರಾಮದಲ್ಲಿ ೧೯೭೧ನೇ ಸಾಲಿನ ಮಾರ್ಚ್ ೧೯ರಂದು ಜನಿಸಿದರು. ತಂದೆ ವೆಂಕಟ್ರಮಣ ಹೆಗಡೆ, ತಾಯಿ ರಾಧಾ. ಈ ದಂಪತಿಯ ನಾಲ್ಕು ಮಕ್ಕಳಲ್ಲಿ ನಾಗಪತಿ ಮೂರನೆಯವರು. (ಹಿರಿಯವರು ಸುಬ್ರಾಯ, ಎರಡನೆಯವರು ತಾರಾನಾಥ, ತಂಗಿ ಪ್ರೇಮಾ) ಇವರು ತಮ್ಮ ಹುಟ್ಟಿದೂರಿನಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಭೈರುಂಬೆಯ ಶ್ರೀ ಶಾರದಾಂಬಾ ಹೈಸ್ಕೂಲಿನಲ್ಲಿ ಹೈಸ್ಕೂಲು ಶಿಕ್ಷಣವನ್ನು ಪಡೆದರು. ಯಲ್ಲಾಪುರದ ವಾಯ್.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಸಿರ್ಸಿಯ ಎಂ. ಎಂ. ಕಲಾ ಮತ್ತು ವಿಜ್ಝಾನ ಮಹಾವಿದ್ಯಾಲಯದಲ್ಲಿ ಬಿ. ಎ. ಪದವಿ ಗಳಿಸಿದರು. ಕಾರವಾರದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್. ಪದವಿ ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಯಲ್ಲಾಪುರ, ಭೈರುಂಬೆ, ದಾಂಡೇಲಿ, ಹೊನ್ನಾವರ ತಾಲೂಕಿನ ಅನಿಲಗೋಡುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವ ನಾಗಪತಿ ಹೆಗಡೆ ಪ್ರಸ್ತುತ ಅಂಕೋಲಾದ ಪಿ. ಎಮ್. ಹೈಸ್ಕೂಲಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಧರ್ಮ ಪತ್ನಿ ಸುಜಾತಾ ಇವರ ಒಬ್ಬಳೇ ಮಗಳು ನಮ್ರತಾ.
ಸಾಹಿತ್ಯ : ತಮ್ಮ ಕಾಲೇಜು ದಿನಗಳಿಂದಲೇ ಬರವಣಿಗೆಯನ್ನು ಆರಂಭಿಸಿದ ಇವರು ಕನ್ನಡದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಎರಡು ನೂರಕ್ಕೂ ಅಧಿಕ ನುಡಿಚಿತ್ರಗಳನ್ನು ಬರೆದಿದ್ದಾರೆ. ಹಲವಾರು ಕಥೆಗಳೂ ಪ್ರಕಟವಾಗಿವೆ. ಹುಳಗೋಳ ನಾಗಪತಿ ಹೆಗಡೆಯವರು ಲೇಖನ, ಕಥೆ, ಕವನ, ನಾಟಕಗಳನ್ನು ಬರೆದಿರುವುದಲ್ಲದೇ ನಾಟಕ ನಿರ್ದೇಶಕ ಹಾಗೂ ನಟರಾಗಿಯೂ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರ ಕಥೆಗಳು ಹಿಂದಿ ಹಾಗೂ ಮಲೆಯಾಳಂ ಭಾಷೆಗಳಿಗೆ ಅನುವಾದಗೊಂಡಿವೆ. ಈವರೆಗೆ ಐದು ಕೃತಿಗಳನ್ನು ಬರೆದಿರುವ ಇವರ ಕೃತಿಗಳು ಈ ಕೆಳಗಿನಂತಿವೆ.
೧. ಉತ್ತರಾರ್ಧ (ಕಥಾ ಸಂಕಲನ- ೨೦೦೪) ೨. ಗುರುವಂದನಾ (ಸ್ವರ್ಣ್ವಲ್ಲೀ ಸಂಸ್ಥಾನದ ಕುರಿತಾದ ಭಕ್ತಿಗೀತೆಗಳ ಸಂಕಲನ - ೨೦೦೫) ೩. ವೀರ ಪುಲಿಕೇಶಿ ಮತ್ತು ಇತರ ನಾಟಕಗಳು (ನಾಟಕಗಳ ಸಂಕಲನ - ೨೦೦೬) ೪. ಅಭಿನವ ಸರ್ವಜ್ಝ ಡಾ. ದಿನಕರ ದೇಸಾಯಿ (ವ್ಯಕ್ತಿಚಿತ್ರ - ೨೦೦೯ - ಕೆನರಾ ವೆಲ್ ಫೆರ್ ಟ್ರಸ್ಟಿನ ಪ್ರಕಟಣೆ) ೫. ಸಮಾಜ ವಿಜ್ಝಾನ ಕೈಪಿಡಿ (ಪರಾಮರ್ಶನ ಗ್ರಂಥ - ಮೊದಲ ಮುದ್ರಣ ೨೦೧೧, ಎರಡನೇ ಮುದ್ರಣ ೨೦೧೩) ೬. ಉತ್ತರ ಕನ್ನಡದ ಚುಟುಕುಗಳು (ಸಂಪಾದಿತ - ೨೦೦೯) ಇವುಗಳಲ್ಲದೆ ಇತರೆ ೧೨ ಕೃತಿಗಳನ್ನು ಸಂಪಾದಿಸಿದ್ದಾರೆ.
ಗ್ರಂಥ ಪ್ರಕಾಶನ : ೨೦೦೪ರಲ್ಲಿ ನಮ್ರತಾ ಪ್ರಕಾಶನ ಎಂಬ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಒಂದು ಸಾಹಿತ್ಯಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯನ್ನಾಗಿ ರೂಪಿಸುತ್ತಿದ್ದಾರೆ. ನಮ್ರತಾ ಪ್ರಕಾಶನದಿಂದ ಈವರೆಗೆ ತಮ್ಮ ನಾಲ್ಕು ಪುಸ್ತಕಗಳನ್ನಲ್ಲದೆ ಇತರ ಲೇಖಕರ ೧೪ ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಮಾಜ ಸೇವೆ : ೨೦೦೩ರಿಂದ ಧಾರವಾಡದ ವಿದ್ಯಾಪೋಷಕ ಸಂಸ್ಥೆಯ ಅಂಕೋಲಾ ತಾಲೂಕಿನ ಸ್ವಯಂ ಸೇವಕರಾಗಿ ಮತ್ತು ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ ಅಂಕೋಲಾ ತಾಲೂಕಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ೧೨ ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ಕೊಡಿಸುವಲ್ಲಿ ಶ್ರಮಿಸಿದ್ದಾರೆ ಮತ್ತು ಇನ್ನೂ ಈ ಸೇವೆಯಲ್ಲಿ ಮುಂದುವರಿದಿದ್ದಾರೆ.
ಪುರಸ್ಕಾರಗಳು : ೧. ಮೈಸೂರು ಲೇಖಕಿಯರ ಸಂಘ ಹಾಗೂ ಅತ್ತಿಮಬ್ಬೆ ಪ್ರತಿಷ್ಠಾನಗಳ ರಾಜ್ಯ ಮಟ್ಟದ ಕಥಾ ಸ್ಪರ್ಧೆಯ ತೃತೀಯ ಬಹುಮಾನ - ೧೯೯೯ ೨. ಕೋಲ್ಕತ್ತಾ ಭಾರತೀಯ ಭಾಷಾ ಪರಿಷತ್ತಿನ ಯುವ ಪುರಸ್ಕಾರ - ೨೦೦೬ ೩. ಉತ್ತರ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ - ೨೦೦೬ ೪. ಕರಾವಳಿ ಮುಂಜಾವು ಕಥಾ ಸ್ಪರ್ಧೆಯ ಪ್ರಥಮ ಬಹುಮಾನ - ೨೦೦೯ ೫. ಉತ್ತರಾರ್ಧ ಕಥಾ ಸಂಕಲನದ ಹಲವು ಕಥೆಗಳು ಹಿಂದಿ ಹಾಗೂ ಮಲೆಯಾಳಂ ಭಾಷೆಗೆ ಅನುವಾದಗೊಂಡಿವೆ.