ತೋಸಾ ಮೈದಾನ್
ತೋಸಾ ಮೈದಾನ್ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಒಂದು ಪ್ರವಾಸಿ ತಾಣ ಹಾಗೂ ಗಿರಿಧಾಮವಾಗಿದೆ. ಈ ಹೆಸರು ಪ್ಞೂಛ್ ಕಣಿವೆಯಿಂದ ಕಾಶ್ಮೀರ ಕಣಿವೆಯೊಳಗಿನ ಐತಿಹಾಸಿಕ ತೋಸಾ ಮೈದಾನ್ ಮಾರ್ಗವನ್ನು ಕೂಡ ಗುರುತಿಸುತ್ತದೆ. ಘಜ್ನಿಯ ಮಹಮೂದ್ ಮತ್ತು ಸಿಖ್ ದೊರೆ ರಂಜೀತ್ ಸಿಂಗ್ ಈ ಮಾರ್ಗದ ಮೂಲಕ ಕಾಶ್ಮೀರ ಕಣಿವೆಯ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದರು.
ಹುಲ್ಲುಗಾವಲು
[ಬದಲಾಯಿಸಿ]ದಟ್ಟವಾದ ಕಾಡುಗಳಿಂದ ಸುತ್ತುವರಿಯಲ್ಪಟ್ಟಿರುವ ತೋಸಾ ಮೈದಾನ್ ಹುಲ್ಲುಗಾವಲು ಪೀರ್ ಪಂಜಾಲ್ ಶ್ರೇಣಿಯ ಬುಡದಿಂದ ಸ್ವಲ್ಪ ದೂರದಲ್ಲಿದೆ.
ತೋಸಾ ಮೈದಾನ್ ಅದರ ಸುತ್ತಮುತ್ತಲಿನ ಪ್ರದೇಶಗಳ ಪೈಕಿ ಅತಿದೊಡ್ಡ ಹುಲ್ಲುಗಾವಲಾಗಿದ್ದು 3 ಮೈಲಿ ಉದ್ದ ಮತ್ತು 1.5 ಮೈಲಿ ಅಗಲವಾಗಿದೆ. ಆಕಾಶವನ್ನು ಮುಟ್ಟುವ ದೇವದಾರುಗಳು ಈ ಹುಲ್ಲುಗಾವಲಿಗೆ ಬೇಲಿ ಹಾಕಿದಂತಿವೆ ಮತ್ತು ಬೇಸಿಗೆಯಲ್ಲಿ ಹಸಿರು ಹಾಸಿನ ನೋಟವನ್ನು ನೀಡುತ್ತವೆ. ಬೇಸಿಗೆಯಲ್ಲಿ, ಗುಜ್ಜರ್ ಸಮುದಾಯದ ಶಿಬಿರಗಳು ಮತ್ತು ಕುರುಬರು ತಮ್ಮ ಮೇಯುವ ಕುರಿಗಳೊಂದಿಗೆ ಹುಲ್ಲುಗಾವಲುಗಳಲ್ಲಿ ಬಂದಾಗ ಒಂದು ವಿಚಿತ್ರವಾದ ಚಿತ್ರವು ಪ್ರಸ್ತುತವಾಗುತ್ತದೆ. ಅಲ್ಲದೆ, ಕಾಡು ಹೂವುಗಳ ಸುವಾಸನೆಯು ಇಡೀ ಪರಿಸರವನ್ನು ಉಲ್ಲಾಸಗೊಳಿಸುತ್ತದೆ.
ಇತಿಹಾಸ
[ಬದಲಾಯಿಸಿ]ಕಾಶ್ಮೀರ ಕಣಿವೆಯೊಳಗೆ ಬರುವ ತೋಸಾ ಮೈದಾನ್ ಮಾರ್ಗವು ಶ್ರೀನಗರದ ಲೋಹಾರಾ ರಾಜವಂಶದ (ಕ್ರಿ.ಶ. 1003-1320) ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯವನ್ನು ಪಡೆದುಕೊಂಡಿತ್ತು. ಇದು ಕಲ್ಹಣನ ರಾಜತರಂಗಿಣಿ ಯ ಕೊನೆಯ ಎರಡು ಪುಸ್ತಕಗಳಲ್ಲಿನ ಪುನರಾವರ್ತಿತ ಉಲ್ಲೇಖದಿಂದ ಸ್ಪಷ್ಟವಾಗುತ್ತದೆ.[೧] ಸಂಗ್ರಾಮರಾಜನು ಈ ವಂಶದ ಮೊದಲ ಪೂರ್ಣ ಪ್ರಮಾಣದ ಅರಸನಾಗಿದ್ದನು. ಇವನ ಆಳ್ವಿಕೆಯಲ್ಲಿ, ಘಜ್ನಿಯ ಮಹ್ಮದ್ ತೋಸಾ ಮೈದಾನ್ ಮಾರ್ಗದ ಮೂಲಕ ಕಾಶ್ಮೀರವನ್ನು ಆಕ್ರಮಿಸಲು ಪ್ರಯತ್ನಿಸಿದನು, ಒಮ್ಮೆ 1003 ರಲ್ಲಿ ಮತ್ತು ಇನ್ನೊಂದು ಬಾರಿ 1021 ರಲ್ಲಿ. ಎರಡೂ ಸಂದರ್ಭಗಳಲ್ಲಿ, ಆತನನ್ನು ಲೋಹಾರಾ ಕೋಟೆಯು ತಡೆಗಟ್ಟಿತು. ಮಹಮೂದ್ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡನೇ ಬಾರಿ, ಭಾರೀ ಹಿಮಪಾತದಿಂದಾಗಿ ಅವರು ಸಂವಹನಗಳ ಅಡ್ಡಿಗೂ ಒಳಗಾದರು.
ಈ ಮಾರ್ಗದ ಮೂಲಕ ಚುರುಕಾದ ವ್ಯಾಪಾರವನ್ನು ನಡೆಸಲಾಗುತ್ತಿತ್ತು ಎಂದು ಅಲ್ ಬೆರುನಿ ಹೇಳಿದ್ದಾನೆ.[೨]
ಮೊಘಲರ ಆಳ್ವಿಕೆಯ ನಂತರ ಈ ಮಾರ್ಗದ ಪ್ರಾಮುಖ್ಯವು ಕುಸಿಯಿತು, ಈ ಸಮಯದಲ್ಲಿ ಪೀರ್ ಪಂಜಾಲ್ ಕಣಿವೆಮಾರ್ಗವನ್ನು ಚಕ್ರಾಧಿಪತ್ಯದ ರಸ್ತೆಯಾಗಿ ಅಭಿವೃದ್ಧಿಪಡಿಸಲಾಯಿತು. ಹಾಗಿದ್ದರೂ, ಸಿಖ್ ಸಾಮ್ರಾಜ್ಯದ ಮಹಾರಾಜ ರಂಜಿತ್ ಸಿಂಗ್ 1814 ಮತ್ತು 1819 ರಲ್ಲಿ ತೋಸಾ ಮೈದಾನ್ ಮಾರ್ಗದ ಮೂಲಕ ಕಾಶ್ಮೀರವನ್ನು ಎರಡು ಬಾರಿ ಆಕ್ರಮಣ ಮಾಡಲು ಪ್ರಯತ್ನಿಸಿದನು. ಮೊದಲ ಬಾರಿಗೆ, ಅವನ ಸೈನ್ಯವನ್ನು ಎರಡು ಪಡೆಗಳಾಗಿ ವಿಭಜಿಸಲಾಯಿತು, ಒಂದು ಪೀರ್ ಪಂಜಾಲ್ ಕಣಿವೆಮಾರ್ಗ ಮತ್ತು ಇನ್ನೊಂದು ತೋಸಾ ಮೈದಾನ್ ಹುಲ್ಲುಗಾವಲಿನ ಮೇಲೆ ದಾಳಿ ಮಾಡಿತು. ಹುಲ್ಲುಗಾವಲಿನಲ್ಲಿ, ರಂಜಿತ್ ಸಿಂಗ್‍ನನ್ನು ದುರಾನಿ ರಕ್ಷಣಾದಳವು ತಡೆಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ Stein, Memoir on Maps (1899), pp. 79–80.
- ↑ Ganjoo, Kashmir: History and Politics (1998), pp. 65–66.
ಗ್ರಂಥಸೂಚಿ
[ಬದಲಾಯಿಸಿ]- De Bourbel, Le Marquis (1897), Routes in Jammu and Kashmir, Calcutta: Thacker, Spink and Co.
- Ganjoo, S.K (1998), Kashmir: History and Politics, New Delhi: Commonwealth Publishers
- Hasan, Mohibbul (1959), Kashmir under the Sultans, Aakar Books, ISBN 978-81-87879-49-7
- Mason, Major Kenneth (1929), Routes in the Western Himalaya, Kashmir, Etc., Volume I (PDF), Surveyor General of India[ಶಾಶ್ವತವಾಗಿ ಮಡಿದ ಕೊಂಡಿ]
- Stein, M. A (1899), Memoir on Maps Illustrating Ancient Geography of Kashmir, Calcutta: Baptist Mission Press
ಹೆಚ್ಚಿನ ಓದಿಗೆ
[ಬದಲಾಯಿಸಿ]- Tosa Maidan: A Photo Essay, Kashmir Life, 12 October 2013.
- Places to visit in Kashmir, Kashmir Mountain Adventures, 2 May 2018.
- Mohammad Ashraf, Kashmir's Historic Routes Need to Be Turned Into Roads, The Citizen, 23 March 2017.
- Best Travel Agents In Kashmir are Kashmir Travelling Voyage