ತಾಳೆಮರ
Borassus flabellifer | |
---|---|
Scientific classification | |
Unrecognized taxon (fix): | Borassus |
ಪ್ರಜಾತಿ: | B. flabellifer
|
Binomial name | |
Borassus flabellifer | |
Synonyms[೧] | |
ತಾಳೆಮರವು ತೆಂಗು, ಅಡಕೆ, ಈಚಲು ಮರಗಳ ಕುಟುಂಬವಾದ ಪಾಮೀ ಅಥವಾ ಅರಿಕೇಸೀ ಕುಟುಂಬಕ್ಕೆ ಸೇರಿದ ಒಂದು ವನ್ಯವೃಕ್ಷ. ಬೊರ್ಯಾಸಸ್ ಫ್ಲೆಬಲಿಫರ್ ಎಂಬುದು ಇದರ ಸಸ್ಯ ವೈಜ್ಞಾನಿಕ ಹೆಸರು. ಬಳಕೆಯ ಇಂಗ್ಲಿಷಿನಲ್ಲಿ ಇದಕ್ಕೆ ಪಾಮೈರಾ ಪಾಮ್ ಎಂಬ ಹೆಸರುಂಟು.
ಭೌಗೋಳಿಕ ಹರಡುವಿಕೆ
[ಬದಲಾಯಿಸಿ]ಭಾರತ, ಬರ್ಮ, ಶ್ರೀಲಂಕಾ ಮುಂತಾದ ದೇಶಗಳ ಶುಷ್ಕ ಹಾಗೂ ಮರಳು ನೆಲವಿರುವ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ದೇಶಗಳ ಸಮುದ್ರತೀರಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು.
ವಿವರಣೆ
[ಬದಲಾಯಿಸಿ]ತೆಂಗಿನ ಕಾಂಡದಂತೆ ಇದರ ಕಾಂಡವೂ ಇದೆ; ಕವಲುಗಳಿಲ್ಲದೆ ಉರುಳೆಯಾಕಾರ, ಇದರ ಎತ್ತರ 15-20ಮೀ. ಕೆಲವು ಸಲ 30ಮೀ. ಎತ್ತರಕ್ಕೂ ಬೆಳೆಯುವುದುಂಟು. ಮರದ ತುದಿಯಲ್ಲಿ 30-40 ಬೀಸಣಿಗೆಯಾಕಾರದ ಎಲೆಗಳಿವೆ. ಒಂದೊಂದು ಎಲೆಗೂ 1/2-1 ಮೀ. ಉದ್ದದ ತೊಟ್ಟು ಉಂಟು. ತೊಟ್ಟು, ಕಾಂಡ ಕಪ್ಪು ಬಣ್ಣದ್ದು, ಇದರ ಹೊರಕವಚ ಕೂಡ ಗಟ್ಟಿಯಾದ ನೀಳವಾದ ನಾರುಗಳಿಂದ ರಚಿತವಾಗಿದೆ. ಮಧ್ಯದ ದಿಂಡು ಮಾತ್ರ ಮೃದುವಾಗಿದ್ದು ಪಿಷ್ಟದ ಹರಳುಗಳಿಂದ ತುಂಬಿದ ಕೋಶಗಳಿಂದ ರೂಪಿತವಾಗಿದೆ. ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ತಾಳೆಮರ ಹೂ ಬಿಡುತ್ತದೆ. ಹೂಗಳಲ್ಲಿ ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆಯಾಗಿದ್ದು ಭಿನ್ನಮರಗಳಲ್ಲಿ ಅರಳುವುವು. ಹೂ ಗೊಂಚಲಿನ ದಿಂಡನ್ನು ಕೊಯ್ದರೆ, ಅದರಿಂದ ಸಿಹಿಯಾದ ರಸ ಸೋರುತ್ತದೆ. ಫಲ ದಪ್ಪಗಾತ್ರದ್ದು. ಇದರ ಹೊರಕವಚದಲ್ಲಿ ನಾರು ಉಂಟು. ಹಣ್ಣಿನ ಒಳಗೆ ಮೂರು ಅಂಕಣಗಳಿದ್ದು ಒಂದೊಂದು ಅಂಕಣದಲ್ಲಿ ಒಂದೊಂದು ಬೀಜ ಇದೆ. ಎಳೆಯ ಹಣ್ಣಿನ ತಿರುಳು ಮೃದುವಾಗಿಯೂ ಸಿಹಿಯಾಗಿಯೂ ಇದ್ದು ನೀರಿನಿಂದ ಕೂಡಿದೆ. ಹಣ್ಣಿಗೆ ತಾಟಿನುಂಗು, ಸಿಹಿನುಂಗು, ತಾಳಿಬೊಂಡ ಎಂಬ ಹೆಸರುಗಳುಂಟು. ಎಳನೀರನ್ನು ಉಪಯೋಗಿಸುವಂತೆ ತಾಟಿನುಂಗನ್ನು ಬಳಸುವುದಿದೆ. ಹಣ್ಣಾದಾಗ ಇದರ ಮೃದುಭಾಗ ಗಟ್ಟಿಯಾಗಿ ಮೂಳೆಯಂತ ತಿರುಳಾಗುತ್ತದೆ. ಬೀಜ ಮೊಳೆಯುವಾಗ ಬೇಳೆ ಹಾಲಿನ ಬಣ್ಣವಾಗಿದ್ದು, ತಿನ್ನಲು ರುಚಿಯಾಗಿರುತ್ತದೆ.
ಅಭಿವೃದ್ಧಿ
[ಬದಲಾಯಿಸಿ]ತಾಳೆಮರದ ಸ್ವಾಭಾವಿಕ ವೃದ್ಧಿ ಬೀಜಗಳ ಮೂಲಕ ನಡೆಯುವುದು. ಬೆಳೆವಣಿಗೆಯ ಪ್ರಾರಂಭಿಕ ಹಂತಗಳಲ್ಲಿ ಕಾಂಡದ ಭೂಗತ ಭಾಗ ಮಾತ್ರ ಗಾತ್ರದಲ್ಲಿ ಹೆಚ್ಚುತ್ತದೆ. ಕಾಂಡದ ಮೇಲ್ಭಾಗ ಲಂಬಿತಗೊಂಡು ವಿಶಿಷ್ಟ ರೀತಿಯ ಕಪ್ಪು ಕಾಂಡವಾಗಿ ಬೆಳೆಯುವುದು 15-20 ವರ್ಷಗಳ ತರುವಾಯ ಮಾತ್ರ.
ಉಪಯೋಗಗಳು
[ಬದಲಾಯಿಸಿ]ತಾಳೆಮರದ ಹೂಗೊಂಚಲಿನಿಂದ ಹೆಂಡವನ್ನು ಇಳಿಸುತ್ತಾರೆ. ಹೊಸದಾಗಿ ಇಳಿಸಿದ ರಸಕ್ಕೆ ನೀರಾ ಎಂದು ಹೆಸರು. ಇದರಲ್ಲಿ 12% ರಷ್ಟು ಸೂಕ್ರೋಸ್ ಉಂಟು. ಇದನ್ನು ಸರಿಯಾಗಿ ಸಂಸ್ಕರಿಸದಿದ್ದರೆ ಹುದುಗಲು ಪ್ರಾರಂಭಿಸಿ ಹೆಂಡವಾಗುತ್ತದೆ. ನೀರಾ ಮಧುರವಾದ ವಾಸನೆಯಿಂದ ಕೂಡಿದ ಸಿಹಿ ರಸ ; ಇದರ ಬಣ್ಣ ಬಿಳಿ, ಇದರಲ್ಲಿ ಸಕ್ಕರೆಯೊಂದೇ ಅಲ್ಲದೆ ಯೀಸ್ಟ್ ಕೂಡ ಉಂಟು. ಇದಕ್ಕೆ ಔಷಧಿ ಗುಣಗಳಿವೆಯೆಂದೂ ಹೇಳಲಾಗಿದೆ. ಇದು ಉತ್ತೇಜಕ ಮತ್ತು ಕಫ ಹಾರಿ, ತಾಳೆಮರದ ನೀರಾದಿಂದ ಬೆಲ್ಲ ಮಾಡುವುದೂ ಉಂಟು. 2-3 ತಿಂಗಳಿನ ಎಳೆಯ ಸಸಿಯಲ್ಲಿ ಪಿಷ್ಟ ಹೆಚ್ಚಾಗಿರುತ್ತದಾಗಿ ಇದು ತಿನ್ನಲು ಯೋಗ್ಯವಾಗಿದೆ. ಕೆಲವು ವೇಳೆ ಇದರಿಂದ ಪಿಷ್ಟವನ್ನು ಉತ್ಪಾದಿಸುವುದುಂಟು. ಎಲೆಗಳ ತೊಟ್ಟಿನಲ್ಲಿ ತಂತಿಯಂತೆ ಗಟ್ಟಿಯಾಗಿರುವ ನೀಳವಾದ ನಾರು ಉಂಟು. ಈ ನಾರಿನಿಂದ ಬ್ರಷ್ ಮತ್ತು ಬರಲುಗಳನ್ನು ತಯಾರಿಸಲಾಗುತ್ತದೆ. ನೀರಾ ಇಳಿಸುವುದಕ್ಕೆ ಮೊದಲು ಹಳೆಯ ಎಲೆಗಳನ್ನು ಕತ್ತರಿಸಿ ತೊಟ್ಟಿನ ತುದಿಯನ್ನು ಜಜ್ಜಿ ತೊಟ್ಟನ್ನು ಪಟ್ಟೆ ಪಟ್ಟೆಗಳಾಗಿ ಪ್ರತ್ಯೇಕಿಸಲಾಗುತ್ತದೆ. ಮರಕ್ಕೆ ಮೊಳೆಗಳನ್ನು ಬಡಿದು, ಈ ಪಟ್ಟೆಗಳನ್ನು ಬಾಚಿದರೆ ಮೃದು ಅಂಗಾಂಶದಿಂದ ನಾರು ಪ್ರತ್ಯೇಕಗೊಳ್ಳುತ್ತದೆ. ಈ ನಾರಿಗೆ ಬ್ಯಾಸೈನ್ ಎಂದು ಹೆಸರು. ತೊಟ್ಟಿನ ಅಂಚಿನ ಭಾಗದಿಂದ ಲಭಿಸುವ ನಾರು ಉತ್ತಮದರ್ಜೆಯದು. ನಾರು ತೆಗೆಯುವುದು ಒಂದು ಗೃಹ ಕೈಗಾರಿಕೆ, ಕೃಷ್ಣಾ, ಗೋದಾವರಿ, ತಿನ್ನವೆಲ್ಲಿ ಜಿಲ್ಲೆಗಳಲ್ಲಿ, ತಿರುವಾಂಕೂರಿನ ದಕ್ಷಿಣ ಭಾಗದಲ್ಲಿ ಈ ಕೈಗಾರಿಕೆ ಹೆಚ್ಚು. ನಾರನ್ನು ವಿವಿಧ ದರ್ಜೆಗಳಾಗಿ ವಿಂಗಡಿಸಿ 15-45 ಸೆಂ.ಮೀ. ಉದ್ದಕ್ಕೆ ಕತ್ತರಿಸಿ, ನೇರಳೆ ಕಂದು ಬಣ್ಣಕೊಟ್ಟು ಕಂತೆಗಳಾಗಿ ಕಟ್ಟಿ ಸಿದ್ಧಪಡಿಸುವರು. ಮರಗಳನ್ನು ಕತ್ತರಿಸಿ, ಸರಗಳನ್ನು ಮಾಡಿ ಗುಡಿಸಲುಗಳ ನಿರ್ಮಾಣಕ್ಕೆ ಉಪಯೋಗಿಸುತ್ತಾರೆ. ಮರಗಳ ಒಳಗಿನ ಭಾಗವನ್ನು ತೆಗೆದು ಕೊಳವೆಯನ್ನಾಗಿ ಮಾಡಿ ನೀರು ಹಾಯಿಸಲು ಉಪಯೋಗಿಸುವರು. ಎಲೆಗಳಿಂದ ಬೀಸಣಿಗೆ, ಛತ್ರಿ, ಬುಟ್ಟಿ ಮತ್ತು ಚಾಪೆಗಳನ್ನು ಮಾಡುತ್ತಾರೆ. ಮರದಿಂದ ಕಪ್ಪಾದ ಗೋಂದು ದೊರೆಯುತ್ತದೆ.
ಉಲ್ಲೇಖಗಳು
[ಬದಲಾಯಿಸಿ]ಛಾಯಾಂಕಣ
[ಬದಲಾಯಿಸಿ]-
Preparation of Borassus flabellifer seeds in a road stall (Myanmar)
-
Toddy or Palm wine collection pot, ಭಾರತ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Tropical fruits: Asian Palmyra Palm Archived 2012-10-04 ವೇಬ್ಯಾಕ್ ಮೆಷಿನ್ ನಲ್ಲಿ.
- The Hindu: Delicious Summer Fruit Archived 2004-09-11 ವೇಬ್ಯಾಕ್ ಮೆಷಿನ್ ನಲ್ಲಿ.
- The Hindu: Slurp! It's Nungu season Archived 2004-05-07 ವೇಬ್ಯಾಕ್ ಮೆಷಿನ್ ನಲ್ಲಿ.
- Nungu for sale
- Tamil Nadu Palm Products Development Board