ಡಿಮೀಟ್ರಿಯಸ್ ಫಾಲೀರೂಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿಮೀಟ್ರಿಯಸ್ ಫಾಲೀರೂಸ್ ಕ್ರಿ.ಪೂ. ಸು. 345-283. ಆತೆನ್ಸಿನ ಭಾಷಣಕಾರ. ರಾಜ್ಯನೀತಿಜ್ಞ.

ಅಲೆ‍ಗ್ಸಾಂಡ್ರಿಯದಲ್ಲಿನ ಈತನ ಪ್ರತಿಮೆ

ಬದುಕು, ಸಾಧನೆ[ಬದಲಾಯಿಸಿ]

ಹುಟ್ಟಿದ್ದು ಅಟಿಕದ ಫಾಲೆರಮ್‍ನಲ್ಲಿ. ತಂದೆ ಫಾನೊಸ್ಟ್ರಾಟಸ್. ತಿಯಪ್ರಾಸ್ಟಸ್ಸನ ಶಿಷ್ಯನಾಗಿ ಸಾಹಿತ್ಯದಲ್ಲೂ ರಾಜ್ಯಶಾಸ್ತ್ರದಲ್ಲೂ ಪ್ರವೀಣನಾದ. ರಾಜ್ಯಶಾಸ್ತ್ರ ಭಾಷಣ ವಿದ್ಯೆಗಳಿಗೆ ಸಂಬಂಧಿಸಿದಂತೆ ಹಲವು ಗ್ರಂಥಗಳನ್ನು ಬರೆದಿದ್ದಾನೆ. ಅಲ್ಲದೆ ಹೋಮರನ ವಿಮರ್ಶೆ, ಈಸಪನ ನೀತಿಕಥೆಗಳ ಸಂಕಲನ, ಆತೆನ್ಸಿನ ಮುಖ್ಯ ಆಡಳಿತಗಾರರ ಪಟ್ಟಿ-ಇವೂ ಇವನ ಕೃತಿಗಳು. ರಾಜ ಕ್ಯಸಾಂಡರನ ಪರವಾಗಿ 317ರಿಂದ 307ರ ತನಕ ಆತೆನ್ಸಿನ ರಾಜ್ಯಪಾಲನಾಗಿದ್ದು ದಕ್ಷ ರಾಜರಾಜಕಾರಣಿಯೆಂದು ಈತ ಹೆಸರು ಪಡೆದ. 30ರಂದು ಪ್ರಜಾಪ್ರಭುತ್ವ ಪುನಃ ಸ್ಥಾಪಿತವಾಗಲಾಗಿ ದೇಶಭ್ರಷ್ಟನಾಗಿ ತೀಬ್ಸ್‍ಗೆ ಹೋದ. ಕೊಂಚ ಕಾಲಾನಂತರ ಈಜಿಪ್ಟ್‍ಗೆ ಬಂದು ಅಲೆಕ್ಸಾಂಡ್ರಿಯದ ಒಂದನೆಯ ಟಾಲಮಿಯ ಆಸ್ಥಾನದಲ್ಲಿ ಗೌರವಸ್ಥಾನ ಪಡೆದ. ತುಂಬ ಪ್ರಭಾವಶಾಲಿಯಾದ ಈತನ ಸಲಹೆಯಂತೆ ಎರಡನೆಯ ಟಾಲಮಿ ವಿದ್ವಾಂಸರಿಗೂ ವಿದ್ಯಾರ್ಜನೆಗೂ ಅಲಂಬನವೀಯುವ ಮೂಸಿಯಾನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ. ಅದು ಈಚಿನ ವಿಶ್ವವಿದ್ಯಾಲಯದಂತೆ ಸಂಸ್ಕೃತಿಯ ಕೇಂದ್ರವಾಗಿ ಬೆಳೆದು ಹಲವು ಶತಮಾನ ನಡೆದು ಬಂತು. ರಾಜನಿಗೆ ಇಬ್ಬರು ಹೆಂಡತಿಯರು. ಯಾರ ಮಗನಿಗೆ ಮುಂದಣ ಪಟ್ಟ ಕೊಡುವುದು ಒಳ್ಳೆಯದು ಎಂದು ರಾಜ ಒಮ್ಮೆ ಪ್ರಶ್ನೆ ಹಾಕಿದನಂತೆ. ಡಿಮೀಟ್ರಿಯಸ್ ಯೂರಿಡಿಸಿಯ ಮಗನಿಗೆ ಕೊಡತಕ್ಕದ್ದು, ಬೆರೆನಿಜಿಯ ಮಗನಿಗೆ ಕೂಡದು ಎಂದನಂತೆ. ಆದರೆ ಬೆರೆನಿಚಿಯ ಮಗನೇ ಮುಂದೆ ಗದ್ದುಗೆಯನ್ನೇರಿದ. ಆಗ ಡಿಮೀಟ್ರಿಯಸ್ ದೇಶದಿಂದ ಹೊರದೂಡಲ್ಪಟ್ಟು, ಕಷ್ಟ ಅನುಭವಿಸಿ ಆಸ್ಪ್ ಎಂಬ ಕಿರುನಾಗರದ ವಿಷದಿಂದ ಸತ್ತ ಎನ್ನಲಾಗಿದೆ.

ಈತನ ಬರೆವಣಿಗೆಯಲ್ಲಿ ಎನೂ ಉಳಿದಿಲ್ಲ. ಶೈಲಿಯನ್ನು ಕುರಿತು-ಎಂಬ ಉತ್ಕೃಷ್ಟ ಗ್ರಂಥದ ಕರ್ತೃ ಈತನೇ ಎಂದು ಬಹುಕಾಲ ಜನರ ನಂಬಿಕೆಯಿತ್ತು. ಆತ ಬೇರೊಬ್ಬ ಡಿಮೀಟ್ರಿಯಸ್ ಎಂದು ಈಗ ನಿರ್ಧಾರವಾಗಿದೆ.