ಟೆಲ್ ಅವೀವ್ - ಜ್ಯಾಫ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಟೆಲ್ ಅವೀವ್ - ಜ್ಯಾಫ - ಇದು ಇಸ್ರೇಲಿನ ಅತ್ಯಂತ ದೊಡ್ಡ ಪಟ್ಟಣ. ಸಾಮಾನ್ಯವಾಗಿ ಇದನ್ನು ಟೆಲ್ ಅವೀವ್ ಎಂದೇ ಕರೆಯಲಾಗುತ್ತದೆ. ಜೆರೂಸಲೆಮಿನ ವಾಯುವ್ಯಕ್ಕೆ 35 ಮೈ. ದೂರದಲ್ಲಿ ಮೆಡಿಟರೇನಿಯನ್ ಸಮುದ್ರದ ದಂಡೆಯ ಮೇಲಿದೆ. ಜನಸಂಖ್ಯೆ 3,84,000 (1970). 1909ರಲ್ಲಿ ಜ್ಯಾಫ ಪಟ್ಟಣದ ವಿಸ್ತರಣೆಯಾಗಿ ಟೆಲ್ ಅವೀವನ್ನು ಸ್ಥಾಪಿಸಲಾಯಿತು. ಬಹು ಬೇಗ ಈ ನಗರ ಬೆಳೆದು, 1921ರಲ್ಲಿ ಜ್ಯಾಫಕ್ಕೆ ಅಧೀನವಾದ ಪುರಸಭೆಯನ್ನು 1934ರಲ್ಲಿ ಸ್ವತಂತ್ರ ಪುರಸಭೆಯನ್ನೂ ಪಡೆಯಿತು. ಬಂದರಾಗಿ, ಕೈಗಾರಿಕಾ ನಗರವಾಗಿ ಬೆಳೆದ ಟೆಲ್ ಅವೀವ್ ಕ್ರಮೇಣ ಮುಖ್ಯನಗರವಾಗಿ ಬೆಳೆಯಿತು. ಇಸ್ರೇಲಿನ ಹಂಗಾಮಿ ರಾಜಧಾನಿಯಾಗಿ (1948-50) ಇದು ಆಯ್ಕೆಯಾದಾಗ ಇದರ ಮಹತ್ವ ಇನ್ನೂ ಹೆಚ್ಚಿತು. ಅನಂತರ ಇದೇ ಪ್ರಧಾನ ನಗರವಾಗಿ, ಜ್ಯಾಫವನ್ನು ಇದೆಕ್ಕೆ ಸೇರಿಸಲಾಯಿತು (1949).

ನಗರದ ಸುತ್ತಣ ಪ್ರದೇಶವನ್ನು ವ್ಯವಸಾಯಕ್ಕಾಗಿ ಉತ್ತಮಪಡಿಸಲಾಗಿದೆ. ಇಲ್ಲಿ ಗೋದಿ, ತರಕಾರಿಗಳು, ಕಿತ್ತಳೆ, ಕಲ್ಲಂಗಡಿ ಮುಂತಾದವನ್ನು ಹೇರಳವಾಗಿ ಬೆಳೆಯುತ್ತಾರೆ. ಕುರಿಸಾಕಣಿಕೆಯೂ ಹೆಚ್ಚಾಗಿದೆ. ಮೀನುಗಾರಿಕೆ ಸ್ಥಳೀಯ ಉದ್ಯಮವಾಗಿ ಬೆಳೆದಿದೆ. ಟೆಲ್ ಅವೀವ್‍ನಲ್ಲಿ ಹೊಸ ಬಂದರು ನಿರ್ಮಾಣವಾದ ಮೇಲೆ ನಗರದ ಪ್ರಾಮುಖ್ಯ ಹೆಚ್ಚಾಯಿತು. ಆದರೆ ಹೈಫದಲ್ಲಿ ಇನ್ನೂ ದೊಡ್ಡ ಬಂದರು ನಿರ್ಮಾಣವಾದಮೇಲೆ ವಾಣಿಜ್ಯದೃಷ್ಟಿಯಿಂದ ಇದರ ಬೆಲೆ ಕಡಿಮೆಯಾಯಿತು.

ಇಂದು ಟೆಲ್ ಅವೀವ್-ಜ್ಯಾಫ ಒಂದು ದೊಡ್ಡ ನಗರ. ನಗರದ ದಕ್ಷಿಣ ಭಾಗದಲ್ಲೇ ಹೆಚ್ಚಾಗಿ ಕೈಗಾರಿಕಾ ಸ್ಥಾವರಗಳು. ವಾಣಿಜ್ಯೋದ್ಯಮ ಸಂಸ್ಥೆಗಳು ಇವೆ. ಉತ್ತರಭಾಗ ಸುಂದರವಾದ ಆಧುನಿಕ ವಸತಿಗೃಹಗಳಿಂದ ಕೂಡಿದ ಪ್ರದೇಶವಾಗಿದೆ. ಇಸ್ರೇಲಿನ ಅನೇಕ ರಾಷ್ಟ್ರಿಯ ಸಂಸ್ಥೆಗಳು ಇರುವುದು ಇಲ್ಲೇ. ಇಲ್ಲಿಯ ಸುಂದರ ಕಡಲದಂಡೆ ಮತ್ತಿತರ ಆಕರ್ಷಣೆಗಳಿಂದಾಗಿ ಈಗ ಇದು ಪ್ರವಾಸಿಕೇಂದ್ರವಾಗಿ ಬೆಳೆದಿದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: