ವಿಷಯಕ್ಕೆ ಹೋಗು

ಟಿಷನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿಷನ್ (1487-1576 )ಹದಿನಾರನೆಯ ಶತಮಾನದ ಇಟಲಿಯ ಪ್ರಸಿದ್ಧ ಚಿತ್ರಕಾರ. ಇವನ ನಿಜವಾದ ಹೆಸರು ಟಿಜಿಯಾನೊ ವೆಸೆಲಿಯೋ.

ಚಿತ್ರಕಲೆಯಲ್ಲಿ ರೇಖಾವಿನ್ಯಾಸಕ್ಕಿಂತ ವರ್ಣವಿನ್ಯಾಸಕ್ಕೆ ಹೆಚ್ಚು ಪ್ರಾಧಾನ್ಯವಿದ್ದ ಆ ಕಾಲದಲ್ಲಿ ಈತ ಸಮುಜ್ವಲವೂ ಆಡಂಬರ ಯುತವೂ ಆದ ವರ್ಣಶೈಲಿಯನ್ನು ಬಳಕೆಗೆ ತಂದ. ಇಟಲಿಯ ರೆನೆಸಾನ್ಸ್ ಕಾಲದ ವೆನಿಸ್ ಗಣರಾಜ್ಯದ ಧರ್ಮ ಪ್ರಭುಗಳಿಗೆ ರಾಜಾದಿ ಶ್ರೀಮಂತರಿಗೆ ಪ್ರಿಯವೆನಿಸುವ ರೀತಿಯಲ್ಲಿ ಭಿತ್ತಿಚಿತ್ರಗಳನ್ನೂ ಪ್ರಾರ್ಥನಾಪೀಠಫಲಕಗಳನ್ನೂ ರಚಿಸಿ ಹೇರಳವಾಗಿ ಹಣವನ್ನೂ ಖ್ಯಾತಿಯನ್ನೂ ಗಳಿಸಿದ. ರೆನೆಸಾನ್ಸ್ ಕಾಲದ ಲೌಕಿಕ ಜೀವನದ ಸಂಪತ್ ಸಮೃದ್ದಿಯನ್ನೂ ತುಷ್ಟಿಯನ್ನೂ ಪುಷ್ಕಳ ವಾಸ್ತವಿಕ ಶೈಲಿಯಲ್ಲಿ ಚಿತ್ರಿಸಿ ಹೈರೆನೆಸಾನ್ಸ್ ಎಂಬ ನೂತನ ಕಲಾಪರಂಪರೆಯನ್ನು ಸೃಷ್ಟಿಸಿದವರಲ್ಲಿ ಈತ ಅಗ್ರಗಣ್ಯ.

ಬದುಕು ಮತ್ತು ಕಲೆ[ಬದಲಾಯಿಸಿ]

ಈತ ಹುಟ್ಟಿದ್ದು ಉನ್ನತ ಆಲ್ಟ್ಸ್ ಪ್ರದೇಶದ ಪಿಎವ್ ದ ಕ್ಯಾದರ್ ಎಂಬ ಊರಿನಲ್ಲಿ. ಇವನ ಕುಟುಂಬದವರು ಹಲವಾರು ವರ್ಷ ಅದೇ ಊರಿನಲ್ಲಿ ನೆಲೆಸಿದ್ದು ಸೈನ್ಯ ಮತ್ತು ನ್ಯಾಯಾಂಗ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದರು. ಆಲ್ಟ್ಸ ಪರ್ವತಶ್ರೇಣಿಯ ಗುಡ್ಡಗಾಡು ಪ್ರದೇಶದಲ್ಲಿ ಹುಟ್ಟಿ ಬೆಳೆದ ಈತನಿಗೆ ಚಿಕ್ಕಂದಿನಲ್ಲೇ ಚಿತ್ರಕಲೆಯಲ್ಲಿ ಅಪಾರ ಒಲವು ಮೂಡಿರಬೇಕು. ಮನೆಯವರು ಕೇವಲ ಒಂಬತ್ತು ವರ್ಷದ ಟಿಷನ್ನನನ್ನು ಚಿತ್ರಕಲೆಯ ಅಧ್ಯಯನಕ್ಕಾಗಿ ವೆನಿಸ್‍ಗೆ ಕಳುಹಿಸಿದರು. ಅಲ್ಲಿ ರಾಜ್ಯಸರ್ಕಾರದ ಚಿತ್ರಕಾರನಾಗಿ ಕೆಲಸಮಾಡುತ್ತಿದ್ದ ಪ್ರಖ್ಯಾತ ಕಲಾವಿದ ಜೋವನಿ ಬೆಲ್ಲಿನಿಯ ಬಳಿ ಈತ ತರಬೇತು ಪಡೆದ. ಆಗ ಬಿಲ್ಲಿನಿಯ ಅತ್ಯಂತ ಪ್ರತಿಭಾವಂತ ಶಿಷ್ಯ ಎನಿಸಿಕೊಂಡಿದ್ದ ಜೌರ್ಜೌನಿಯ ರೊಮ್ಯಾಂಟಿಕ್ ಶೈಲಿಯ ಮೋಹಕತೆಗೆ ಟಿಷನ್ ಮಾರುಹೋದ. ಅಲ್ಲಿಂದ ಮುಂದೆ ಅವನ ಪ್ರಭಾವದ ಸೆಳೆವಿನಲ್ಲೇ ಹಲವು ಉತ್ಕೃಷ್ಟ ಕೃತಿಗಳನ್ನು ರಚಿಸಿದ. 1510ರಲ್ಲಿ ಜೌರ್ಜೌನಿ ಕಾಲವಾದ ಮೇಲೆ ಟಿಷನ್ ತನ್ನ ಗುರುವಿನ ಪಟ್ಟ ಶಿಷ್ಯನಾದ. ಬೆಲ್ಲಿನಿಯ ಹಲವು ಅಪೂರ್ಣ ಕೃತಿಗಳನ್ನು ಪೂರ್ತಿಮಾಡುವುದರ ಜೊತೆಗೆ ತಾನೇ ಸ್ವಂತವಾಗಿ ಕೃತಿರಚನೆಮಾಡಿದ. ಇವನ ಸೇಕ್ರಡ್ ಅಂಡ್ ಪ್ರೊಫೇನ್ ಲವ್ ಮುಂತಾದ ಮೊದಲ ಕೃತಿಗಳಲ್ಲಿ ಜೌರ್ಜೌನಿಯ ಭಾವಗೀತಾತ್ಮಕತೆ ಮತ್ತು ಆತ್ಮಚಿಂತನೆಗಳು ಹದವಾಗಿ ಬೆರೆತಿವೆ. ತರುಣ ಟಿಷನ್ನನ ಮತ್ತು ಜೌರ್ಜೌನಿಯ ಕೃತಿಗಳ ನಡುವೆ ಬಹಳ ಹೋಲಿಕೆಯಿರುವುದರಿಂದ ಆ ಕಾಲದಲ್ಲಿ ಯಾರು ಯಾವುದನ್ನು ಬರೆದರೆಂದು ಖಚಿತವಾಗಿ ಹೇಳಲು ಬರುವುದಿಲ್ಲ. ವೀನಸ್ ಮುಂತಾದ ಚಿತ್ರಗಳನ್ನು ಜೌರ್ಜೌನಿಯೇ ಪ್ರಾರಂಭಿಸಿದನಾದರೂ ಅವನ್ನು ಮುಗಿಸಿದವ ಟಿಷನ್. ಅನುಕರಣೆಯೇ ಪ್ರಧಾನವಾದ ಮೊದಲ ಘಟ್ಟದಲ್ಲಿ ಬರೆದ ಟಿಷನ್ನಿನ ಕೃತಿಗಳಲ್ಲಿ ಸ್ನಾನಮಾಡುವ ಹೆಂಗಸು, ದಿ ಪ್ಲೊರಾ- ಇವು ಅಸದೃಶವಾದವು.

ಟಿಷನ್ನನ ಪ್ರಪ್ರಥಮ ಮಹಾಸಾಧನೆಯೆಂದರೆ ವೆನಿಸ್ ನಗರದ ಜರ್ಮನ್ ವ್ಯಾಪಾರೀಕೋಠಿಯನ್ನು ವರ್ಣಚಿತ್ರಗಳಿಂದ ಸಿಂಗರಿಸಲು ತನ್ನ ಗುರು ಬೆಲ್ಲಿನಿಗೆ ನೆರವಾದುದು. ವೆನಿಸ್‍ನ ತೇವದ ಹವೆಯಿಂದ ಈ ಭಿತ್ತಿಚಿತ್ರಾಲಂಕಾರ ನಷ್ಟವಾಗಿ ಹೋಯಿತಾದರೂ ಅವುಗಳಲ್ಲಿ ರೇಖನ ಹಾಗೂ ಕೆತ್ತುಚಿತ್ರಗಳಲ್ಲಿ ಪಡಿಮೂಡಿದ್ದ ಬಹುಪಾಲು ಚಿತ್ರಗಳು ಉಳಿದುಕೊಂಡವು. ಆಮೇಲೆ ಟಿಷನ್ ಪದೋವ ನಗರದಲ್ಲಿ ಸಂತ ಅಂತೋನಿಯ ಚರ್ಚು ಮುಂತಾದ ಭವ್ಯಮಂದಿರಗಳಲ್ಲಿ ಭಿತ್ತಿಚಿತ್ರಣ ಕೆಲಸವನ್ನು ನಿರ್ವಹಿಸಿದ. ಕೊಲೆಗೀಡಾಗುವ ದುರ್ಭಾಗ್ಯ ಹೆಣ್ಣಿನ ಕಥೆಯನ್ನುಳ್ಳ ಅಂತೋನಿಯ ಜೀವನಚರಿತ್ರೆಯನ್ನು ಚಿತ್ರಿಸುವಲ್ಲಿ ಟಿಷನ್ ಅದ್ಬುತನಾಟ್ಯಪ್ರಜ್ಞೆಯನ್ನೂ ಅನನ್ಯಕಲ್ಪನಾವಿಲಾಸವನ್ನೂ ಪ್ರದರ್ಶಿಸಿದ್ದಾನೆ.

1516ರಲ್ಲಿ ಬೆಲ್ಲಿನಿ ತೀರಿಕೊಂಡಾಗ ರಾಜ್ಯಸರ್ಕಾರ ಟಿಷನ್ನನನ್ನು ಬೆಲ್ಲಿನಿಯ ಸ್ಥಾನದಲ್ಲಿ ನೇಮಿಸಿತು. ಮುಂದೆ ಹಲವು ಕಾಲ ಈತ ವೆನಿಸ್ ಕಲಾಪ್ರಪಂಚದಲ್ಲಿ ಗಣ್ಯವ್ಯಕ್ತಿಯಾಗಿ ಬಾಳಿದ. ಅಲ್ಲಿಂದ ಮುಂದೆ ಜೌರ್ಜೌನಿಯ ಪ್ರಭಾವದಿಂದ ಮುಕ್ತನಾಗಿ ಸ್ವಂತ ಶೈಲಿಯನ್ನು ರೂಪಿಸಿಕೊಂಡ. ಫ್ರಾರ ಚರ್ಚಿನಲ್ಲಿ 1516ರ ಅನಂತರ ಬರೆದ ವರ್ಜಿನ್ ಮೇರಿಯ ಸ್ವರ್ಗಾರೋಹಣ ಮುಂತಾದ ಚಿತ್ರಗಳು ಈತನ ಪರಿಣತಪ್ರಜ್ಞೆಯ ಪೂರ್ಣಫಲಗಳು. ಮೇರಿ ಕನ್ಯೆ ಹರ್ಷೋನ್ಮತ್ತ ಕ್ರೆಸ್ತಭಕ್ತರ ಗುಂಪಿನಿಂದ ಮೇಲಕ್ಕೇರುತ್ತ ಸ್ವರ್ಗದಲ್ಲಿ ಚಲಿಸುತ್ತಿರುವ ಭಗವಂತನೆಡೆಗೆ ಊರ್ಧ್ವ ಗತಿಯಲ್ಲಿ ಸಾಗುತ್ತಿರುವ ಚಿತ್ರ ದಂಗುಬಡಿಸುವಷ್ಟು ಯಥಾರ್ಥವಾಗಿದೆ. ಹದಿನೈದನೆಯ ಶತಮಾನದ ಹೈ ರೆನೆಸಾನ್ಸ್ ಸಂಪ್ರದಾಯಕ್ಕೆ ತೀರ ವಿರುದ್ದವೇನೋ ಎನಿಸುವ ಬರೋಕ್ ಶೈಲಿಯನ್ನು ಹೋಲುವ ವರ್ಣವಿನ್ಯಾಸ ಇದರಲ್ಲಿದೆ. ಅದೇ ಕಾಲದಲ್ಲಿ ಬರೆದ ಇವನ ಉಳಿದ ಚಿತ್ರಗಳಲ್ಲಿ ಕಾಣಿಸುವ ಕ್ರಿಯೆಯ ಗತಿ, ಗಾಢ ನಾಟಕೀಯತೆ, ದೇವಮಾನವ ವ್ಯಕ್ತಿಗಳನ್ನು ವಿವಿಧ, ಅಖಂಡ ಭಂಗಿಗಳಲ್ಲಿ ಕಡೆದು ನಿಲ್ಲಿಸಿರುವ ಚಿತ್ರಕಾರನ ಭೀಮಕಲ್ಪನೆ- ಇವು ನಮ್ಮನ್ನು ಬೆರಗುಗೊಳಿಸುತ್ತವೆ. ಹೈ ರೆನೆಸಾನ್ಸ್ ಪರಂಪರೆಯನ್ನು ವೆನಿಸ್‍ಗೆ ತಂದು ಪ್ರತಿಷ್ಟಾಪಿಸಿದ ಕೀರ್ತಿ ಟಿಷನ್ನನಿಗೇ ಸಲ್ಲಬೇಕು. 1520ರಿಂದ ಹಿಡಿದು ಆ ಶತಮಾನದ ಮಧ್ಯದ ವರೆಗೆ ಈತ ಹಲವು ಪ್ರಾರ್ಥನಾಪೀಠ ಫಲಕಗಳನ್ನೂ ಗ್ರೀಕ್ ಪುರಾಣವಸ್ತುವನ್ನುಳ್ಳ ಭಿತ್ತಿಚಿತ್ರಗಳನ್ನೂ ರಚಿಸಿದ. ಆಕೃತಿಗಳು ಜೀವಂತವಾಗಿ ಚಲಿಸುವಂತೆ ಮಾಡಲು ಉಬ್ಬುತಗ್ಗುಗಳ ನೆಳಲುಬೆಳಕುಗಳ ವಿನ್ಯಾಸವನ್ನು ಅದ್ಭುತವಾಗಿ ಸಮತೋಲನಗೊಳಿಸಿದ. ಸರಳ ಉಜ್ವಲಬಣ್ಣಗಳನ್ನು ಬಳಸಿ, ಛಾಯಾ ಚಿತ್ರಗಳನ್ನು (ಸಿಲುಯೆಟ್) ರಚಿಸಿದ. ಬಾಕಸ್ ಮತ್ತು ಎರಿಎಡ್ನೆ, ಪುನರುತ್ಥಾನ, ಪಿಸಾರೊ ಮೆಡೋನಾ, ವರ್ಜಿನ್ ಮೇರಿಯ ಸಮರ್ಪಣೆ, ಕೈಗವಸು ಹಾಕಿಕೊಂಡ ಮನುಷ್ಯ-ಮುಂತಾದವು ಈತನ ಅತ್ಯಂತ ಶ್ರೇಷ್ಠ ಕಲಾಕೃತಿಗಳು. ಸಾಂತ ಮರೆಯಾ ಚರ್ಚಿನಲ್ಲಿರುವ, ಹಳೆಯ ಒಡಂಬಡಿಕೆಯ ಕಥೆಗೆ ಸಂಬಂಧಿಸಿದ ಕುಬ್ಜಾಕೃತಿಗಳು 1540ರಿಂದಾಚೆಗೆ ಬರೆದವು. ಆ ರೂಕ್ಷ ರೂಪಗಳು ಹಿಂಸೆ, ಕ್ರೌರ್ಯ, ದರ್ಪಗಳಿಂದ ಬೀಗಿ ಬಿರಿಯುತ್ತಾ ನೋಡುವವರನ್ನು ಭಯವಿಹ್ವಲಗೊಳಿಸುವಂತಿವೆ.

1530ರಲ್ಲಿ ಹೆಂಡತಿ ತೀರಿಕೊಂಡ ಮೇಲೆ ಟಿಷನ್ ಹೆಚ್ಚು ಭಾವುಕನೂ ಅಂತರ್ಮುಖಿಯೂ ಆದಂತೆ ತೋರುತ್ತದೆ. ಆಗಿನ ಮಾನಸಿಕ ಬದಲಾವಣೆಗಳು ಈತನ ಚಿತ್ರಗಳಲ್ಲಿಯೂ ಪ್ರತಿಮೂಡಿವೆ. ವೈದೃಶ್ಯ ಸೂಚಿಸುವ ಗಾಢನೀಲಿ ಮತ್ತು ಕೆಂಪು ವರ್ಣಗಳ ಬದಲು ಪರಸ್ಪರ ಸಂಬಂಧವನ್ನು ಕಲ್ಪಿಸುವ ಹಳದಿ ಮತ್ತು ಮಸುಕಾದ ಬಣ್ಣಗಳನ್ನು ಬಳಸಿ ಆಕೃತಿಗಳು ತಾವೇತಾವಾಗಿ ಚಿತ್ರವನ್ನು ಆವರಿಸುವುದರ ಬದಲು ಹಿನ್ನಲೆಯ ಭೂದೃಶ್ಯದಲ್ಲಿ, ವಾಸ್ತುಶಿಲ್ಪದಲ್ಲಿ ಬೆರೆತಂತೆ ತೋರುತ್ತವೆ. ಪ್ರಾಡೋವೀನಸ್ ಎಂಬ ಭವ್ಯಚಿತ್ರದಲ್ಲಿ ಪರಸ್ಪರ ವೈದೃಶ್ಯ ಸೂಚಿಸುವ ಎರಡು ವಿಭಿನ್ನ ಭಾಗಗಳಿದ್ದು ಮನುಷ್ಯಾಕಾರಗಳೆಲ್ಲ ಸ್ತಬ್ಧವಾಗಿ ನಿಂತಂತೆ ತೋರುತ್ತದೆ. ಟಿಷನ್ನನ ಪ್ರತಿಭಾಸಂಪನ್ನತೆಗೆ ಆ ಕಾಲದಲ್ಲಿ ಬಹುವ್ಯಾಪಕವಾದ ಮನ್ನಣೆ ದೊರೆಯಿತು. 1530ರಲ್ಲಿ ಅವನಿಗೆ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿ ಐದನೆಯ ಚಾರ್ಲ್ಸ್ ನ ಪರಿಚಯ ಲಭಿಸಿತು. ಚಿತ್ರಕಾರನ ಅಸಾಧಾರಣ ಪ್ರತಿಭೆಯನ್ನು ಮೆಚ್ಚಿಕೊಂಡ ದೊರೆ ಅವನಿಗೆ 1533ರಲ್ಲಿ ನೈಟ್‍ಹುಡ್ ಪ್ರಶಸ್ತಿ ನೀಡಿ ಗೌರವಿಸಿದ. ಕೌಂಟ್ ಪ್ಯಾಲಟಿನ್ ಪದವಿಗೇರಿಸಿ ಅವನನ್ನು ಆಸ್ಥಾನದ ಚಿತ್ರಕಾರನನ್ನಾಗಿ ನೇಮಿಸಿದ. 1540ರಿಂದಾಚೆಗೆ ಉತ್ತರ ಇಟಲಿಯ ಮ್ಯಾನರಿಸಮ್ ಶೈಲಿ ಟಿಷನ್ನನ ಮೇಲೆ ಹೆಚ್ಚು ಪ್ರಭಾವ ಬೀರಿದಂತೆ ತೋರುತ್ತದೆ. 1545ರಲ್ಲಿ ಟಿಷನ್ ರೋಮ್‍ಗೆ ತೆರಳಿ ಪೋಪ್ ಮೂರನೆಯ ಪಾಲ್‍ನ ಚಿತ್ರವನ್ನು ರಚಿಸಿದ. 1553ರಲ್ಲಿ ಜರ್ಮನ್ ಮೂಲವೊಂದನ್ನು ಆಧರಿಸಿ ರಚಿಸಿದ ಐದನೆಯ ಚಾರ್ಲ್ಸ್ ನ ಚಿತ್ರ ಅತ್ಯುನ್ನತ ಕಲಾಕೃತಿಗಳಲ್ಲೊಂದು ಎನಿಸಿಕೊಂಡಿತು. ಚಾರ್ಲ್ಸ್ ನ ರಾಜಗಾಂಭೀರ್ಯ, ಏಕಾಕಿತನ, ವಿಷಣ್ಣಗಳು ಟಿಷನ್ನನ ಚಿತ್ರದಲ್ಲಿ ಹೃದಯಸ್ಪರ್ಶಿಯಾಗಿ ರೂಪುಗೊಂಡಿವೆ. ಪೆಸಾರೋ ಕುಟುಂಬದವರನ್ನು ಚಿತ್ರಿಸುವ ಇನ್ನೊಂದು ಮಹಾಕೃತಿ ರಚಿತವಾದುದು ಆ ಸುಮಾರಿನಲ್ಲೇ. ಇದರಲ್ಲಿ ವಸ್ತುವನ್ನು ನೇರವಾಗಿ ಎದುರಿಗೆ ಕಾಣುವ ದೃಶ್ಯದಂತೆ ಚಿತ್ರಿಸುವುದರ ಬದಲು ವಿಷಮಕೋನದ (ಅಬ್ಲೀಕ್) ದೃಶ್ಯದಂತೆ ಪ್ರತಿಬಿಂಬಿಸಲಾಗಿದೆ. ಚರ್ಚಿನ ಒಳಾಂಗಣದ ಸಾಂಪ್ರದಾಯಿಕ ಹಿನ್ನಲೆಯ ಬದಲು ಹೊರಗಡೆಯ ಭೂದೃಶ್ಯವೊಂದನ್ನು ಹಿನ್ನಲೆಯಾಗಿ ಅಳವಡಿಸಿಕೊಂಡಿದ್ದಾನೆ. ಭವ್ಯವಾದ ಎರಡು ಕಂಬಗಳ ನಡುವೆ ಮನುಷ್ಯಾಕೃತಿಗಳು ನಿಂತಿರುವಂತೆ ಚಿತ್ರಿಸಿ ವಸ್ತುವಿನ ಔನತ್ಯವನ್ನೂ ಗಾಂಭೀರ್ಯವನ್ನೂ ಇಮ್ಮಡಿಗೊಳಿಸಿದ್ದಾನೆ. ಈ ಚಿತ್ರದಲ್ಲಿ ಟಿಷನ್ ತನ್ನ ಆಶ್ರಯದಾತ ಶ್ರೀಮಂತ ಕುಟುಂಬದ ಪೂರ್ವಜರನ್ನು ಚರ್ಚಿನ ಧಾರ್ಮಿಕ ಪರಿಸರದೊಳಕ್ಕೆ ತಂದು ಸಾಧುಸಂತರ ನಡುವೆ ನಿಲ್ಲಿಸಿ ಮಾನವೀಯತೆ ಹಾಗು ಅಲೌಕಿಕವಾದ ದೈವಿಕ ತೇಜಸ್ಸುಗಳು ಹದವಾಗಿ ಬೆರೆಯುವಂತೆ ಮಾಡಿದ್ದಾನೆ.

ತನ್ನ ಬಹುತೇಕ ಚಿತ್ರಗಳಲ್ಲಿ, ಅದರಲ್ಲೂ ಮುಖ್ಯವಾಗಿ ತನ್ನ ಜೀವಿತಾಕಾಲದ ಕೊನೆಯ ಘಟ್ಟದಲ್ಲಿ ಬರೆದ ಚಿತ್ರಗಳಲ್ಲಿ ಟಿಷನ್ ಕ್ರೈಸ್ತ, ಹೀಬ್ರೂ ಧರ್ಮಗ್ರಂಥಗಳಿಂದ, ಓವಿಡ್ ಮುಂತಾದ ಹಳೆಯ ಕವಿಗಳ ಪುರಾಣೇತಿಹಾಸಗಳಿಂದ ಆರಿಸಿದ ವಸ್ತುವನ್ನೇ ಹೆಚ್ಚಾಗಿ ಬಳಸಿದ. ಟೆಂಪರ ವರ್ಣ ಮಿಶ್ರಣದ ನಾನಾಸಾಧ್ಯತೆಗಳನ್ನು ಸೂಕ್ಷ್ಮವಾಗಿ ಅನ್ವೇಷಿಸುತ್ತ ಹೊಸ ಪ್ರಯೋಗಗಳಲ್ಲಿ ನಿರತನಾಗಿದ್ದ. 1560ರಿಂದಾಚೆಗೆ ಅವನ ಚಿತ್ರಣಶೈಲಿ ಹೆಚ್ಚು ಅಮೂರ್ತವೂ ಭಾವಪೂರ್ಣವೂ ಸ್ವಚ್ಛಂದವೂ ಆಯಿತು. ಕುಂಚವನ್ನು ಬಿಡುಬೀಸಾಗಿ ಹೊರಳಿಸಿ ತನ್ನ ಅಂತರಂಗದ ಭಾವನೆಗಳನ್ನು ಘನಾಕೃತಿಗಳಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಿದ್ದ. ರೇಪ್ ಆಫ್ ಯೂರೋಪ್, ದಿ ಮಾರ್ಟಿರ್‍ಡಮ್ ಆಫ್ ಸೇಂಟ್ ಲಾರೆನ್ಸ್, ಪಿಯೆಟಾ- ಮುಂತಾದವು ಟಿಷನ್ ತನ್ನ ಬದುಕಿನ ಹೇಮಂತಕಾಲದಲ್ಲಿ ಬರೆದ ಮೇರುಕೃತಿಗಳು.

ವಿಪುಲವಾದ ಕೀರ್ತಿಯೂ ಹಣವೂ ದೊರೆಯುತ್ತಹೋದಂತೆ ಟಿಷನ್ ಕೇವಲ ಬಣ್ಣಗಾರನಾದ, ಅರ್ಥಾರ್ಥಿಯಾದ ಎಂದು ಮೈಕೆಲೇಂಜಲೊ ಉಚಿತವಾಗಿಯೇ ಟೀಕಿಸಿದ. ಹಣದ ಆಸೆಗಾಗಿ ಟಿಷನ್ ಹ

ಗಲಿರುಳು ದುಡಿದು ಸಣ್ಣಗಾದ, ದುಡ್ಡು ದೋಚಲು, ಸುಳ್ಳು ಹೇಳಲು ಹೇಸಲಿಲ್ಲ-ಎಂದು ಚರಿತ್ರಾಕಾರರು ಅವನ ಬಗೆಗೆ ನಂಜು ನುಡಿದಿದ್ದಾರೆ. ಅದೇನೇ ಇರಲಿ, ಟಿಷನ್ ಇಟಲಿಯ ಚಿತ್ರಕಲೆಯ ಇತಿಹಾಸದಲ್ಲಿ ಅಮರನಾಗಿದ್ದಾನೆ.

ಟಿಷನ್ ವೆನಿಸ್‍ನಲ್ಲಿ ಪ್ಲೇಗಿನಿಂದ ಸತ್ತ. ಆಮೇಲೆ ಆತ ಪೂರ್ಣಗೊಳಿಸದೆ ಬಿಟ್ಟು ಹೋದ ಚಿತ್ರಗಳನ್ನು ಅವನ ಮಗ ಒರೇಜಿóಯೋ ಪೂರ್ಣಗೊಳಿಸಿದನೆನ್ನಲಾಗಿದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಿಷನ್&oldid=1084893" ಇಂದ ಪಡೆಯಲ್ಪಟ್ಟಿದೆ