ಟಿರಾನೊಡಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿರಾನೊಡಾನ್ - ಮೀಸೊಜೋಯಿಕ್ ಯುಗಕ್ರಿಟೇಷಿಯಸ್ ಅವಧಿಯಲ್ಲಿ ಜೀವಿಸಿದ್ದ ಒಂದು ಹಾರುವ ಸರೀಸೃಪ. ಟೀರೊಸಾರಿಯ ಗಣಕ್ಕೆ ಸೇರಿದೆ. ಅಮೇರಿಕದ ಕಾನ್ಸಾಸ್ ಸೀಮೆಸುಣ್ಣದ ಶಿಲೆಯಲ್ಲಿ ಇದರ ಪಳೆಯುಳಿಕೆಗಳು ಸಿಕ್ಕಿವೆ. ಉರಗಗಳಿಂದ ಹಕ್ಕಿಗಳ ಉಗಮದ ಒಂದು ಮುಖ್ಯ ಘಟ್ಟವನ್ನು ಇದು ಪ್ರತಿನಿಧಿಸುತ್ತದೆ.

ಗಂಡು ಟಿರಾನೊಡಾನ್ ನ ಒಂದು ಪ್ರತಿಕೃತಿ

25' ಉದ್ದದ ರೆಕ್ಕೆ ಹರವನ್ನು ಪಡೆದಿದ್ದ ಇವು ಪರಿಚಿತವಾಗಿರುವ ಹಾರುವ ಪ್ರಾಣಿಗಳಲ್ಲೆಲ್ಲ ಅತಿ ದೊಡ್ಡದೆನ್ನಬಹುದು. ಇದರ ತಲೆ ಬುರುಡೆಯ ಉದ್ದ 4'. ತಲೆಬುರುಡೆಯ ಹಿಂಭಾಗ ಶಿಖೆಯಂತೆ ಚಾಚಿಕೊಂಡಿದೆ. ದವಡೆಗಳು ಕೊಕ್ಕಿನಂತೆ ಇವೆ. ಹಲ್ಲುಗಳಿಲ್ಲ. ದೇಹ ಚಿಕ್ಕದು. ಮುಂಗಾಲುಗಳು ಹಿಂಗಾಲುಗಳಿಗಿಂತ ಬಲು ಉದ್ದ. ಮುಂಗಾಲಿನ ಮಣಿಕಟ್ಟು ಮತ್ತು ನಾಲ್ಕನೆಯ ಬೆರಳುಗಳು ಅತಿ ಉದ್ದವಾಗಿವೆಯಲ್ಲದೆ ದೇಹ ಹಾಗೂ ಮುಂಗಾಲಿನ ಬೆರಳುಗಳ ನಡುವೆ ಹರಡಿರುವ ತೆಳುವಾದ ಚರ್ಮದ ಪದರವಿತ್ತೆಂದು ಊಹಿಸಬಹುದು. ಇದರಿಂದಾಗಿ ಇದು ಇಂದಿನ ಬಾವಲಿಗಳಂತೆಯೇ ಇದ್ದಿರಬೇಕು. ಕರಾವಳಿ ಪ್ರದೇಶಗಳಲ್ಲಿ ಗುಡ್ಡಬೆಟ್ಟಗಳ ಪ್ರಪಾತಗಳಲ್ಲಿ ತನ್ನ ಕಾಲುಗಳ ನಖಗಳ ಸಹಾಯದಿಂದ ನೇತುಬಿದ್ದು ವಿಶ್ರಮಿಸುತ್ತಿದ್ದು ಆಹಾರಾನ್ವೇಷಣೆಗೆಂದು ಹಾರಿಹೋಗುತ್ತಿತ್ತು ಎಂದು ಅಭಿಪ್ರಾಯಪಡಲಾಗಿದೆ. ಆದರೆ ಇದರ ಎದೆಯ ಮೂಳೆಗಳು ಇಂದಿನ ಹಕ್ಕಿಗಳಲ್ಲಿರುವಷ್ಟು ದೊಡ್ಡವಲ್ಲವಾದ್ದರಿಂದ ಇದರ ಎದೆಯ ಸ್ನಾಯುಗಳು ಚಿಕ್ಕವಾಗಿದ್ದುವೆಂದೂ ಇದು ರೆಕ್ಕೆ ಬಡಿಯುತ್ತ ಹಾರುವ ಬದಲು ಕೇವಲ ಗಾಳಿಯಲ್ಲಿ ತೇಲುತ್ತ ಸಂಚರಿಸುತ್ತಿತ್ತೆಂದೂ ಹೇಳಲಾಗಿದೆ. ಇದು ಬಹುಶಃ ಮೀನು ತಿಂದು ಬದುಕುತ್ತಿತ್ತು ಎಂದು ತೋರುತ್ತದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: