ಟಿಮಾತಿಯಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿಮಾತಿಯಸ್ (ಮರಣ ಕ್ರಿ.ಪೂ. 354). ಪ್ರಾಚೀನ ಆತೆನ್ಸಿನ ರಾಜಕಾರಣಿ, ದಂಡನಾಯಕ. ಕಾನಾನನ ಮಗ, ಐಸಾಕ್ರಟೀಸನ ಶಿಷ್ಯ. ದ್ವಿತೀಯ ಆತೆನಿಯನ್ ಕೂಟದಲ್ಲಿ ಪ್ರಮುಖಪಾತ್ರ ವಹಿಸಿದ್ದ.


ಸ್ಪಾರ್ಟದ ವಿರುದ್ಧವಾಗಿ ತೀಬ್ಸಿನೊಂದಿಗೆ ಕೂಡಿ ಆತೆನ್ಸ್ ಮಾಡಿದ ಯುದ್ಧದಲ್ಲಿ 378ರಿಂದ 356ರವರೆಗೆ ಆಗಿಂದಾಗ್ಗೆ ದಂಡನಾಯಕತ್ವ ವಹಿಸಿದ್ದ. ವಾಯವ್ಯ ಗ್ರೀಸಿನಲ್ಲಿ ಸೆಪೊಲೋನಿಯವನ್ನು ಗೆದ್ದು, ಆಕರ್ನೇನಿಯನರ ಹಾಗೂ ಮಲಾಷಿಯನರ ಸ್ನೇಹ ಪಡೆದ. ಕಾರ್ಸೈರ ಇವನಿಗೆ ವಶವಾಯಿತು. ಸ್ಪಾರ್ಟನರು ಸೋತರು. ಕ್ರಿ. ಪೂ. 373ರಲ್ಲಿ ಸ್ಪಾರ್ಟನರು ಕಾರ್ಸೈರವನ್ನು ಮುತ್ತಿದಾಗ ಅದರ ರಕ್ಷಣೆಗಾಗಿ ಕಳಿಸಲಾದ ನೌಕಾ ಪಡೆಗೆ ಟಿಮಾತಿಯಸನನ್ನು ದಂಡನಾಯಕನಾಗಿ ನೇಮಕ ವಾಡಲಾಯಿತು. ಆದರೆ ಅವನ ನೌಕೆಗಳಲ್ಲಿ ಸಾಕಷ್ಟು ಯೋಧರಿರಲಿಲ್ಲ. ಅವಕ್ಕೆ ಜನರನ್ನೂ ಹಣವನ್ನೂ ಸಂಗ್ರಹಿಸಲು ಅವನು ಇಜೀಯನ್ ಸಮುದ್ರದಲ್ಲಿ ನಿಂತ. ಅವನ ಸ್ಥಾನಕ್ಕೆ ಇಫಿಕ್ರಟೀಸನನ್ನು ಕಳುಹಿಸಲಾಯಿತು. ಕಾರ್ಸೈರದ ನೆರವಿಗೆ ಸಕಾಲದಲ್ಲಿ ಹೋಗದ್ದಕ್ಕೆ ಅವನು ವಿಚಾರಣೆಗೆ ಗುರಿಯಾದ. ಕೊನೆಗೆ ನಿರಪರಾಧಿ ಎಂದು ಅವನ ಖುಲಾಸೆ ಆಯಿತು. ತರುವಾಯ ಅವನು ಪರ್ಷಿಯದ ದೊರೆಯ ಬಳಿ ಸಂಬಳಕ್ಕೆ ಯೋಧನಾಗಿ ಸೇರಿದ. ಕ್ರಿ.ಪೂ. ಸು. 366ರಲ್ಲಿ ಟಿಮಾತಿಯಸ್ ಹಿಂದಿರುಗಿದಾಗ ಫ್ರಿಜಿಯದ ಸತ್ರಪ ಆಯಿಯೊಬಾರ್ಝೀನೀಸನ ನೆರವಿಗೆ ಇವನನ್ನು ಕಳುಹಿಸಲಾಯಿತು. ಆದರೆ ಆ ಸತ್ರಪ ಪರ್ಷಿಯದ ವಿರುದ್ಧ ದಂಗೆಯೆದ್ದಿದ್ದ. ಆದ್ದರಿಂದ ತನಗೆ ನೀಡಿದ್ದ ಸೂಚನೆಯಂತೆ ಟಮಾತಿಯಸ್ ಅವನಿಗೆ ಸಹಾಯ ನೀಡದೆ ಪರ್ಷಿಯ ಆಕ್ರಮಿಸಿಕೊಂಡಿದ್ದ ಸೇಮಾಸ್ ಎಂಬ ಗ್ರೀಕ್ ದ್ವೀಪವನ್ನು ಹತ್ತು ತಿಂಗಳುಗಳ ಮುತ್ತಿಗೆಯ ಅನಂತರ ವಶಪಡಿಸಿಕೊಂಡ. ಆತೆನ್ಸ್ ಪರವಾಗಿ ಉತ್ತರ ಇಜೀಯನ್‍ನಲ್ಲಿ ಹಲವಾರು ನಗರಗಳನ್ನು ಹಿಡಿದುಕೊಂಡ. ಆದರೆ ಆಂಫಿಪಲಿಸ್ ನಗರವನ್ನು ವಶಪಡಿಸಿಕೊಳ್ಳಲು ಅವನು ಮಾಡಿದ ಎರಡು ಪ್ರಯತ್ನಗಳೂ ವಿಫಲವಾದುವು. ಆತೆನ್ಸಿನ ಮಿತ್ರರಾಷ್ಟ್ರಗಳು ಬಂಡಾಯವೆದ್ದಾಗ ಅದನ್ನು ಅಡಗಿಸಲು (ಕ್ರಿ. ಪೂ. 356-355) ಟಿಮಾತಿಯಸ್, ಇಫಿಕ್ರಟೀಸ್, ಮೀನೀಸ್ತಿಯಸ್ ಮತ್ತು ಕೇರೀಸರನ್ನು ಕಳುಹಿಸಲಾಯಿತು. ಪರಸ್ಪರ ವಿರುದ್ಧ ನೌಕೆಗಳು ಹೆಲಸ್ ಪಾಂಟ್ ಬಳಿ ಎದುರುಬದುರಾದುವು. ಬಿರುಗಾಳಿ ಬೀಸುತ್ತಿದ್ದುದರಿಂದ ಯುದ್ಧ ಯುಕ್ತವಲ್ಲವೆಂದು ಟಿಮಾತಿಯಸ್ ಹಾಗೂ ಇಫಿಕ್ರಟೀಸ್ ನಿರ್ಧರಿಸಿದರು. ಆದರೆ ಕೇರೀಸ್ ಅವರ ಮಾತನ್ನು ಕೇಳದೆ ಯುದ್ಧಕ್ಕೆ ನಿಂತ ಆತೆನ್ಸಿನ ಅನೇಕ ನೌಕೆಗಳು ನಾಶವಾದುವು. ತನ್ನ ಸಹನಾಯಕರು ತನಗೆ ಬೆಂಬಲವಾಗಿ ನಿಲ್ಲಲಿಲ್ಲವೆಂದು ಆತೆನ್ಸಿಗೆ ಕೇರೀಸ್ ದೂರು ಕಳುಹಿಸಿದ. ಅವರು ವಿಚಾರಣೆಗೆ ಗುರಿಯಾದರು. ಸೊಕ್ಕಿನಿಂದ ವರ್ತಿಸುತ್ತಿದ್ದ ಟಿಮಾತಿಯಸನ ಬಗ್ಗೆ ಅನೇಕರಿಗೆ ಅತೃಪ್ತಿಯಿತ್ತು. ಅವನ ಮೇಲೆ ಭಾರಿ ದಂಡ ವಿಧಿಸಲಾಯಿತು. ಅದನ್ನು ಅವನು ತೆರಲಾರದೆ ಕ್ಯಾಲ್ಸಿಸ್‍ಗೆ ಹೋದ. ಅಲ್ಲಿ ಕ್ರಿ.ಪೂ. 354ರಲ್ಲಿ ಟಿಮಾತಿಯಸ್ ತೀರಿಕೊಂಡ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: