ಟಿನಮೂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿನಮೂ - ರಾಟಿವೆ ಗುಂಪಿನ ಟಿನ್ಯಾಮಿಫಾರ್ಮೀಸ್ ಗಣದ ಟಿನ್ಯಾಮಿಡೀ ಕುಟುಂಬಕ್ಕೆ ಸೇರಿದ ಹಕ್ಕಿ.

ದಕ್ಷಿಣ ಮೆಕ್ಸಿಕೊದಿಂದ ಪಟಗೋನಿಯವರೆಗಿನ ಕಾಡುಗಳಲ್ಲಿ, ಹುಲ್ಲುಗಾವಲುಗಳಲ್ಲಿ ಜೀವಿಸುತ್ತದೆ. ರಿಯಾ ಹಕ್ಕಿಗಳಿಗೆ ಹತ್ತಿರ ಸಂಬಂಧಿ. ಹೊರನೋಟಕ್ಕೆ ಗೌಜಲು (ಕವುಜಗ) ಹಕ್ಕಿಯಂತೆ ಕಾಣುತ್ತದೆ. ಇದರಲ್ಲಿ ಸುಮಾರು 9 ಜಾತಿಗಳೂ 45 ಪ್ರಭೇದಗಳೂ ಉಂಟು. ಉದ್ದದ ಸುಮಾರು 8"-11", ತೆಳುವಾದ ಕೊಕ್ಕು, ಸಣ್ಣ ತಲೆ, ಗುತ್ತವಾದ ದೇಹ, ದುಂಡನೆಯ ಅಂಚಿನ ರೆಕ್ಕೆ, ಮೋಟುಬಾಲ, ಬಲವಾದ ಕಾಲುಗಳು_ಇವುಗಳ ಲಕ್ಷಣಗಳು. ದೇಹದ ಬಣ್ಣ ಕಂದುಮಿಶ್ರಿತ ಹಳದಿ, ಕಂದು ಇಲ್ಲವೆ ಬೂದಿ. ಜೊತೆಗೆ ಮಚ್ಚೆಗಳೂ ಪಟ್ಟೆಗಳೂ ಇವೆ. ಇದರಿಂದಾಗಿ ತಾವು ಜೀವಿಸುವ ಸ್ಥಳದ ಹಿನ್ನೆಲೆಯೊಂದಿಗೆ ಸುಲಭವಾಗಿ ಹೊಂದಿಕೊಳ್ಳುವುವು. ಈ ಲಕ್ಷಣದಲ್ಲಿ ಇವು ಅಮೆರಿಕದ ಸಿಪಿಹಕ್ಕಿಗಳನ್ನು (ಕ್ವೇಲ್) ಹೋಲುತ್ತವೆ. ಅವುಗಳಂತೆಯೇ ಅಪಾಯವೊದಗಿದಾಗ ಶರವೇಗದಲ್ಲಿ ಹಾರಿಹೋಗುತ್ತವೆ.

ಹೆಚ್ಚಿನ ಪ್ರಭೇದಗಳು ಒಂಟಿಜೀವಿಗಳು. ಮುಂಜಾವಿನ ಹಾಗೂ ಮುಸ್ಸಂಜೆಯ ವೇಳೆಯಲ್ಲಿ ತಮ್ಮ ಮೆಚ್ಚಿನ ಆಹಾರವಾದ ಬೀಜಗಳು, ಎಳೆಯ ಬೇರುಗಳು, ಕೀಟಗಳು ಮುಂತಾದವನ್ನು ಅರಸಿಕೊಂಡು ಓಡಾಡುತ್ತವೆ. ಹೀಗೆ ಓಡಾಡುವಾಗ ಕೆಳದನಿಯಲ್ಲಿ ಸಿಳ್ಳೆಹಾಕಿದಂತೆ ಇಂಪಾಗಿ ಕೂಗುವುದುಂಟು. ಗಂಡುಹಕ್ಕಿಗಳು ಯಾವುದಾದರೂ ಮರದ ಬುಡದಲ್ಲಿ ನೆಲವನ್ನು ಅರೆದು ಗುಂಡಿ ಮಾಡಿ ಹುಲ್ಲು, ಪುಕ್ಕಗಳ ಮೆತ್ತೆಯನ್ನು ಹಾಕಿ ಗೂಡು ನಿರ್ಮಿಸುತ್ತವೆ. ಇಂಥ ಗೂಡಿನಲ್ಲಿ ಹೆಣ್ಣು ಸುಮಾರು 10 ಮೊಟ್ಟೆಗಳನ್ನಿಡುವುದು. ಮೊಟ್ಟೆಗಳ ಬಣ್ಣ ಮಿರುಗುವ ನೀಲಿ, ಹಸಿರು, ಹಳದಿ, ಊದಾಮಿಶ್ರತ ಕಂದು ಹೀಗೆ ವೈವಿಧ್ಯಪೂರ್ಣ. ಮೊಟ್ಟೆಗಳಿಗೆ ಕಾವುಕೊಡುವುದು, ಮರಿಗಳನ್ನು ಪೋಷಿಸುವುದು ಸಂಪೂರ್ಣವಾಗಿ ಗಂಡಿನ ಕೆಲಸ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಿನಮೂ&oldid=1085490" ಇಂದ ಪಡೆಯಲ್ಪಟ್ಟಿದೆ