ಜೆ.ಎಸ್.ಖಂಡೇರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗದೇವಪ್ಪ, ಶಂಕರಪ್ಪ ಖಂಡೇರಾವ್ ಅವರು ಗುಲ್ಬರ್ಗಾದಲ್ಲಿ 1.11.1940ರಂದು ಜನಿಸಿದರು.

ಹುಟ್ಟಿನ ಸಮಯದ ಪರಿಸ್ಥಿತಿ[ಬದಲಾಯಿಸಿ]

೧೯೪೦ ರ ಸುಮಾರಿಗಾಗಲೇ ಗುಲ್ಬರ್ಗಾ ಶಹರವೂ ಸೇರಿದಂತೆ ಜಿಲ್ಲೆಯಾದ್ಯಂತ, ಶಾಂತಲಿಂಗಪ್ಪ ಪಾಟೀಲ, ಶಂಕರರಾವ್ ಅಳಂದಕರ, ಎಂ. ಡಿ. ಭೋಸಲೆ, ಎಸ್. ಎಂ. ಪಂಡಿತ್, ವಿ. ಎಸ್. ಭಂಕೂರ್‍ಕರ್ ಮುಂತಾದ ಕಲಾದಿಗ್ಗಜರು ತಮ್ಮ ಕೃತಿಗಳಿಂದ ಹೆಸರು ವಾಸಿಯಾಗಿದ್ದರು. ಜಿಲ್ಲೆಗೆ ಹೈದರಾಬಾದ್ ಹತ್ತಿರವಾಗಿದ್ದರಿಂದ ಕೆಲವು ಕಲಾವಿದರು ಅಲ್ಲಿಯೂ ಹೆಸರು ಮಾಡಿದ್ದರು. ಮನೆಮನೆಯಲ್ಲಿಯೂ ಎಂಬಂತೆ ಯಾರಾದರೊಬ್ಬರ ಕಲಾಕೃತಿ ಒಂದಾದರೂ ಭಾವಚಿತ್ರ-ಇರುತ್ತಿದ್ದು ಚಿತ್ರಕಲೆಯ ಬಗ್ಗೆ ಜನರಿಗೆ ಪರಿಚಯವಿದ್ದು, ಅದರಿಂದಲೂ ಪ್ರಸಿದ್ಧಿ ಪಡೆಯುವಿಕೆ, ಜೀವನ ನಿರ್ವಹಣೆ ಮಾಡಬಹುದಾದುದರ ಬಗ್ಗೆ ಸಾಮಾನ್ಯರಲ್ಲಿ ನಂಬಿಕೆ ಬಂದಿತ್ತು.

ಶಿಕ್ಷಣ[ಬದಲಾಯಿಸಿ]

ಶಂಕರರಾಯರು ನೂತನ ವಿದ್ಯಾಶಾಲೆಯ ಅಂಗಳದಲ್ಲಿ ಕಲಾಶಾಲೆಯೊಂದನ್ನು ತೆರೆದಿದ್ದರು. ಹೀಗಾಗಿದ್ದರೂ ಖಂಡೇರಾಯರು ಸ್ವಲ್ಪ ಪರಿಶ್ರಮದಿಂದಲೇ ಚಿತ್ರಕಲೆಯಲ್ಲಿ ಭವಿಷ್ಯವನ್ನು ತೊಡಗಿಸಿಕೊಂಡರು. ಶಾಲೆಯ ದಿನಗಳಲ್ಲೇ ಹೈದರಾಬಾದ್‍ನಿಂದ ಲೋಯರ್ ಡ್ರಾಯಿಂಗ್, ಸೊಲ್ಲಾಪುರದಿಂದ ಇಂಟರ್ ಮೀಡಿಯಟ್ ಗ್ರೇಡ್ ಪರೀಕ್ಷೆಗಳನ್ನೂ ಮುಂದೆ ಮುಂಬಯಿಯಲ್ಲಿ ಎಲಿಮೆಂಟರಿ ಪೈಂಟಿಂಗ್ ಪರೀಕ್ಷೆಯನ್ನು ಪೂರೈಸಿದರು. ಪ್ರೌಢಶಾಲಾಭ್ಯಾಸದ ನಂತರ ಮುಂಬಯಿಯ ಜೆ.ಜೆ.ಕಲಾಶಾಲೆಯಲ್ಲಿ ಕಲಾ ಡಿಪ್ಲೊಮಾವಿಗೆ ಅಭ್ಯಸಿಸಿದರಾದರೂ ತಾಂತ್ರಿಕ ತೊಂದರೆಯಿಂದಾಗಿ ನೂತನ ಕಲಾಮಂದಿರದಿಂದ ಅದೇ ಜೆ. ಜೆ. ಕಲಾಶಾಲೆಯ ಪರೀಕ್ಷೆ ತೆಗೆದುಕೊಂಡು ಡಿಪ್ಲೊಮಾ ಪದವಿ ಪಡೆದರು (1963) ನಂತರ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಸಹ ಪಡೆದರು (1975).

ಕಲಾಶಾಲೆಯಲ್ಲಿ ಬೋಧಕರಾಗಿ[ಬದಲಾಯಿಸಿ]

ಈ ವೇಳೆಗೆ ಶಂಕರರಾಯರ ಕಲಾಮಂದಿರ ಸ್ಥಗಿತವಾಗಿದ್ದು ಅಲ್ಲಿ ಒಂದು ಕಲಾ ಶಾಲೆಯ ಅಗತ್ಯವಿದ್ದುದರಿಂದ 1965ರಲ್ಲಿ ಗುಲ್ಬರ್ಗಾದಲ್ಲಿ `ಆದರ್ಶ ಕಲಾ ಶಾಲೆ (ಐಡಿಯಲ್ ಫೈನ್ ಆರ್ಟ್ ಇನ್‍ಸ್ಟಿಟ್ಯೂಟ್) ಆರಂಭಿಸಿದರು. ಜಿಲ್ಲೆಯ ಅನೇಕ `ಪ್ರಥಮಗಳಂತೆ ಶರಣಬಸವೇಶ್ವರ ಕಾಲೇಜಿನಲ್ಲಿ ರಾಜ್ಯಕ್ಕೆ ಪ್ರಥಮವಾಗಿ ಸ್ನಾತಕ ಪದವಿಗೆ ಚಿತ್ರಕಲೆಯನ್ನು ಒಂದು ವಿಷಯವಾಗಿ ಅಭ್ಯಸಿಸುವ ಅವಕಾಶವಾಗಿದ್ದು ಖಂಡೇರಾಯರೇ ಅಲ್ಲಿ ಬೋಧಕರಾಗಿ ನೇಮಕವಾದರು. ಎರಡೂ ಶಾಲೆಗಳನ್ನು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಿಲ್ಲವಾಗಿ ಆದರ್ಶಕಲಾ ಶಾಲೆಯನ್ನು ತಮ್ಮ ಪ್ರಥಮ ಶಿಷ್ಯ ವಿ. ಜಿ. ಅಂದಾನಿಯವರಿಗೆ ಹಸ್ತಾಂತರಿಸಿದರು. ಇಂದು ಆ ಶಾಲೆ, ಕಾಲೇಜಾಗಿ, ಸ್ನಾತಕೋತ್ತರ ಕೇಂದ್ರವಾಗಿ ಅದ್ಭುತವಾಗಿ ಬೆಳೆದಿದೆ. ಮುಂದೆ ಶರಣ ಬಸವೇಶ್ವರ ಕಾಲೇಜಿನಲ್ಲಿ ಚಿತ್ರಕಲೆಯನ್ನೇ ಎಲ್ಲ ವಿಷಯಗಳಾಗಿ ಅಭ್ಯಸಿಸಿ ಸ್ನಾತಕ ಪದವಿ ಪೆಡಯಬಹುದಾದ ಸೌಲಭ್ಯ ಒದಗಿ ಬಂದು ಸ್ನಾತಕೋತ್ತರ ಪದವಿಗೂ ಅವಕಾಶವಾಯಿತು. ಕಾಲೇಜಿನ ಈ ಶಾಖಾ ವಿಭಾಗಗಳಿಗೆ ಮುಖ್ಯಸ್ಥರಾಗಿ, ನಿರ್ದೇಶಕರಾಗಿ, ಪೂರ್ಣಾವಧಿ ಕಾರ್ಯ ನಿರ್ವಹಿಸಿ 1998ರಲ್ಲಿ ನಿವೃತ್ತರಾದರೂ ಇನ್ನೂ ಕಾಲೇಜಿನೊಂದಿಗೆ ಸಂಬಂಧ ಮುಂದುವರಿದಿದೆ. ರಾಜಧಾನಿಯಿಂದ ದೂರದ ಜಿಲ್ಲಾ ಕೇಂದ್ರದಲ್ಲಿ ಚಿತ್ರಕಲೆಯದೇ ಆದ ಎರಡು ಸ್ನಾತಕೋತ್ತರ ಕೇಂದ್ರ ರಾಜ್ಯಕ್ಕೇ ಪ್ರಥಮವಾಗಿ ಆರಂಭವಾಗಿ ಕ್ರಿಯಾಶೀಲವಾಗಿ ಮುಂದುವರಿದಿರುವುದರಲ್ಲಿ ಖಂಡೇರಾಯರ ಪರಿಶ್ರಮ, ದೂರದೃಷ್ಟಿ, ಕಲಾಪರ ಕಾಳಜಿಗಳನ್ನು ಕಾಣಬಹುದು. ಕಲಾ ಕಾಲೇಜಿನಲ್ಲಿ ರಾಜ್ಯ, ಅಂತರರಾಜ್ಯಗಳ ಖ್ಯಾತ ಕಲಾವಿದರುಗಳಲ್ಲದೆ ಅಂತರ ರಾಷ್ಟ್ರೀಯ ಕಲಾವಿದರೂ, ಉಪನ್ಯಾಸ, ಪ್ರಾತ್ಯಕ್ಷಿಕೆ ನೀಡಿ, ಶಿಬಿರ ನಡೆಸಿ ವಿಶ್ವಮಾನ್ಯವಾಗಿದೆ. ಕಲಾ ಕಾಲೇಜಿನಿಂದ ಅನೇಕ ಯುವ ಪ್ರತಿಭೆಗಳು ಹೊರಬಂದಿದ್ದು ಆ ಪ್ರತಿಭಾವಂತರು ರಾಜ್ಯಾದ್ಯಂತ ಕ್ರಿಯಾಶೀಲರಾಗಿದ್ದಾರೆ.

ಖಂಡೇರಾಯರ ಕೃತಿಗಳು[ಬದಲಾಯಿಸಿ]

ಖಂಡೇರಾಯರ ಕೃತಿಗಳಲ್ಲಿ ಪ್ರಭಾವ ದಟ್ಟವಾಗಿ ಕಾಣಬಹುದು. ಅಸ್ಪಷ್ಟ ಆಕೃತಿಗಳು, ಬಣ್ಣದ ಬರಹಗಳು, ಇಡೀ ಫಲಕದ ನಿರ್ವಹಣೆಯಲ್ಲಿ ಆಳಕ್ಕಿಂತ ವಿಸ್ತಾರದ ಅನುಭವ ತರುವುದು. ಭಾವಚಿತ್ರ, ಪ್ರಕೃತಿ ದೃಶ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದರೂ ಸ್ಟಿಲ್‍ಲೈಫ್ ಸಹ ರಚಿಸಿದ್ದಾರೆ. ಸಂಯೋಜಿತ ಚಿತ್ರಗಳನ್ನು ಹೆಚ್ಚಿಗೆ ರಚಿಸಿದಂತಿಲ್ಲ. ಖಂಡೇರಾಯರು ಒಂದು ನಿಶ್ಚಿತ ಅವಧಿಯಲ್ಲಿ ನಿಶ್ಚಿತ ಶೈಲಿ ಅಥವ ವಸ್ತು ಇರಿಸಿ ಅನೇಕ ಕೃತಿಗಳನ್ನು ರಚಿಸುವ ಪದ್ಧತಿಯನ್ನು ಅನುಸರಿಸಿದಂತಹವರು. ಶಾಲೆ ಕಾಲೇಜುಗಳಲ್ಲಿ ಭಾವಚಿತ್ರ ರಚನೆಯ ಪ್ರಾತ್ಯಕ್ಷಿಕೆಯ ವೇಳೆಯಲ್ಲಿ ರಚಿಸಿದ ಕೃತಿಗಳ ಸಂಗ್ರಹವೂ ಇದ್ದು ಅದರಲ್ಲಿ ಕಡುಪಾದ ಬಣ್ಣಗಳು, ದಪ್ಪದಾದ ಹೊರ ರೇಖೆಗಳು ಕಾಣಬಹುದು. ಪ್ರಕೃತಿ ದೃಶ್ಯ ಖಂಡೇರಾಯರ ಅಭಿವ್ಯಕ್ತಿ ಮಾಧ್ಯದಲ್ಲಿ ಮುಖ್ಯವಾದುದಾಯಿತು. ಉಳಿದವರಂತೆ ಐತಿಹಾಸಿಕ ಸ್ಮಾರಕಗಳ ಪ್ರಕೃತಿ ದೃಶ್ಯಗಳನ್ನು ಭಾವಮುದ್ರಾ ತಂತ್ರದಲ್ಲಿ ರಚಿಸುತ್ತಿದ್ದು ಅವುಗಳನ್ನು ಸರಳೀಕರಿಸಿದರು. ಒಣಹಾಕಿದ ಬಣ್ಣ ಬಣ್ಣದ ಬಟ್ಟೆಗಳು ಅವುಗಳೊಂದಿಗೆ ಸಪೂರಾದ ಉದ್ದನೆಯ ಒಂದೆರಡೇ ವ್ಯಕ್ತಿಗಳು, ಹಿನ್ನೆಲೆಗೆ ಹಳದಿ ಅಥವ ಕಿತ್ತಳೆಯ ಉಜ್ವಲ ಬಣ್ಣಗಳು ಕಂಡು ಬಂದವು. ಇಲ್ಲಿ ಯಾವುದೇ ಆಕಾರಗಳಿಗೆ ಹೊರ ರೇಖೆಯಿಲ್ಲದೆ ಬಣ್ಣಗಳ ಹರಹುಗಳಿಂದಲೇ ನಿರ್ವಹಿಸಿದ್ದರು. ಫಲಕದ ಮೇಲೆ ಆಕಾರಗಳೆಲ್ಲ ನವಿರಾಗಿ ಸಾಪಾಟಾಗಿ ಆಕಾರದ ಅಂಚುಗಳು ಹಿನ್ನೆಲೆಗೆ ಐಕ್ಯವಾಗಿರುವಂತೆ ಕಂಡು ಬರುತ್ತದೆಯಾದರೂ ಆಕಾರಗಳನ್ನು ಗುರುತಿಸುವಂತಿದ್ದವು. ನಂತರದ ಸರಣಿ ಬಂಡೆಗಳು, ಅವೂ ಸಹ ಫಲಕದ ಮೇಲೆ ಅಲ್ಲಲ್ಲಿ ಅನಿಶ್ಚಿತವಾದ ಕ್ರಮದಲ್ಲಿ ಬಣ್ಣದ ಹರಹುಗಳಂತೆ ಇರಿಸಿರುವಂತಹ ರಚನೆಗಳಾಗಿದ್ದುವು. ಇವು ಈಗಾಗಲೇ ಅಮೂರ್ತತೆಯ ಕಡೆಗೆ ವಾಲಿದ್ದವು. ಮುಂದಿನ ಕೃತಿಗಳು ಖಂಡೇರಾಯರಿಗಷ್ಟೇ ಸಾಧ್ಯವೆಂಬಂತಿದ್ದ `ಕಿಟಕಿಯ ಗಾಜು ಗಳ ಸರಣಿ ಚಿತ್ರಗಳು. ಹಿಂದಿನ ಕೃತಿಗಳ ಮುಂದುವರಿದ ರೂಪಗಳಂತೆ ಇಡೀ ಫಲಕವನ್ನು ಹಲವಾರು ಅಂಕಣಗಳಾಗಿ ರೂಪಿಸಿಕೊಳ್ಳುವಿಕೆ, ತೆಳುವಾದ ಬಣ್ಣ ಹಚ್ಚುವಿಕೆ, ಕೆಲವೇ ಬಣ್ಣಗಳಲ್ಲಿ ಪೂರೈಸುವಿಕೆ. ಒಣಕುಂಚದಿಂದ (ಡ್ರೈ ಬ್ರೆಷ್) ಎಳೆಎಳೆಯಾಗಿ ಬಣ್ಣದ ಹರಹುಗಳು ಇದ್ದಂತೆ ರಚಿಸುವಿಕೆ, ಒಡೆದ ಗಾಜಿನ ಹಿಂದಿನ ನೋಟದಂತೆ ಅಥವ ಅಲ್ಲಲ್ಲಿ ಹರಿದ ತೆಳುವಾದ ಕಾಗದ ಹಚ್ಚಿ ಅಸ್ಪಷ್ಟತೆ ತರುವಿಕೆ ಇತ್ಯಾದಿಗಳಿಂದ ತಮ್ಮದೇ ಆದ ಶೈಲಿಯನ್ನು ಕಂಡುಕೊಂಡರು. ಪುಟ್ಟ ಅಳತೆಯಿಂದ ಹಿಡಿದು ಬೃಹದಾಕಾರವಾಗಿ ನೂರಾರು ಪ್ರಯೋಗ ಮಾಡಿದರು. ಹಾಗೂ ಮುಂದುವರಿಸುತ್ತಿರುವರು.

ಖಂಡೇರಾಯರ ಕೃತಿಗಳು ಗುಲಬರ್ಗಾ, ಬೀದರ್, ರಾಯಚೂರು, ಬೆಂಗಳೂರು, ಧಾರವಾಡ ಹೈದರಾಬಾದ್, ಮುಂಬಯಿ, ಪೂನಾ, ಝಾನ್ಸಿ ಮುಂತಾದೆಡೆಗಳು ಖಾಸಗಿ ಸಂಗ್ರಹಾಲಯಗಳಲ್ಲಿ ಹಾಗೂ ಲಲಿತ ಕಲಾ ಅಕಾಡಮಿ, ವೆಂಕಟಪ್ಪ ಚಿತ್ರಶಾಲೆ, ರಾಮನ್ ಇನ್‍ಸ್ಟಿಟ್ಯೂಟ್, ದೆಹಲಿಯ ಆಧುನಿಕ ರಾಷ್ಟ್ರೀಯ ಕಲಾ ಗ್ಯಾಲರಿ, ಅಮೆರಿಕಾದ ಅಲಂಬಾ ವಸ್ತು ಸಂಗ್ರಹಾಲಯ ಇತ್ಯಾದಿ ಕಡೆಗಳಲ್ಲಿ ಸಂಗ್ರಹವಾಗಿವೆ.

ಸಾಧನೆಗಳು[ಬದಲಾಯಿಸಿ]

ಖಂಡೇರಾಯರು 1980ರಲ್ಲಿ ಗುಲಬರ್ಗಾದಲ್ಲಿ `ಕಲಾಪ್ರಗತಿ' ಎಂಬ ಹೆಸರಿನಲ್ಲಿ ಕಲಾತಂಡ ಆರಂಭಿಸಿ ಹಲವಾರು ವರ್ಷಗಳು ಅಧ್ಯಕ್ಷರಾಗಿದ್ದು ಕಲಾಪ್ರದರ್ಶನಗಳನ್ನು ಏರ್ಪಡಿಸಿದ್ದರು. ಕಲಾಯಾತ್ರೆ, ಕಲಾಮೇಳಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ವೈಯುಕ್ತಿಕವಾಗಿ ಖಂಡೇರಾಯರು ಗುಲಬರ್ಗಾ, ಬೆಂಗಳೂರು, ಧಾರವಾಡ, ಬೀದರ್, ಹೈದರಾಬಾದ್‍ಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ರಾಜ್ಯ ಲಲಿತ ಕಲಾ ಅಕಾಡಮಿಗೆ 1968ರಿಂದ 83ರ ಅವಧಿಯಲ್ಲಿ ಹಲವಾರು ಬಾರಿ ಹಾಗೂ ಮೈಸೂರು ದಸರಾ ಪ್ರದರ್ಶನ, ಚೆನ್ನೈನ ಪ್ರಾದೇಶಿಕ ಕಲಾ ಕೇಂದ್ರ, ಬೆಂಗಳೂರಿನ ಚಿತ್ರಕಲಾ ಪರಿಷತ್, ಮುಂಬೈಯ ಆರ್ಟ್ ಸೊಸೈಟಿ, ಕೋಲ್ಕತ್ತಾದ ಫೈನ್ ಆರ್ಟ್ ಸೊಸೈಟಿ ಇವೆ ಮುಂತಾದ ಅನೇಕ ಸಂಸ್ಥೆಗಳು ಏರ್ಪಡಿಸಿದ ಸಾಮೂಹಿಕ ಕಲಾಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. 1991ರಲ್ಲಿ ದೆಹಲಿಯಲ್ಲಿ ನಡೆದ ಏಳನೇ ಅಂತರರಾಷ್ಟ್ರೀಯ ಟ್ರಿನಾಲೆಯ ಭಾರತೀಯ ಕಲಾವಿದರ ಕೃತಿಗಳ ಪ್ರದರ್ಶನ ವಿಭಾಗಕ್ಕೆ ಕರ್ನಾಟಕದಿಂದ ಆಹ್ವನಿತರಾಗಿದ್ದ ಏಕೈಕ ಕಲಾವಿದರಿವರು. ಅಂತೆಯೇ 1992ರ ಭೂಪಾಲ್ ಕಲಾ ಭವನದ ಬೈನಾಲೆಯಲ್ಲಿ, 1985ರ ಬೆಂಗಳೂರಿನ ಸಾರ್ಕ್ ಸಂದರ್ಭದ ಪ್ರದರ್ಶನದಲ್ಲಿ ಆಹ್ವಾನಿತರಾದ ಕಲಾವಿದರು., ಶ್ರೀಯುತರು ರಚಿಸಿದ ಕಿತ್ತೂರು ರಾಣಿ ಚೆನ್ನಮ್ಮ ಚಿತ್ರಕ್ಕೆ ಯುನೆಸ್ಕೊ ದವರು ಮೆಚ್ಚುಗೆಯ ಪತ್ರ ನೀಡಿ ಗೌರವಿಸಿದರು.

ದೆಹಲಿಯಲ್ಲಿ 1990ರಲ್ಲಿ ಅಂತರರಾಷ್ಟ್ರೀಯ ವಿಮಾನ ಪ್ರಾಧಿಕಾರ ಏರ್ಪಡಿಸಿದ್ದ ನೆಹರು ಕುರಿತ ಕೃತಿ ರಚನೆಯಲ್ಲಿ ಬಹುಮಾನಗಳಿಸಿದರು. 1997ರಲ್ಲಿ ರಾಜ್ಯಪ್ರಶಸ್ತಿ ಹಾಗೂ ಜಿ.ಎಸ್.ಶೆಣೈ ಪ್ರಶಸ್ತಿಗಳಿಗೆ ಭಾಜನರಾದರು.

ಖಂಡೇರಾಯರು ರಾಜ್ಯ ಲಲಿತಕಲಾ ಅಕಾಡಮಿಗೆ ಒಂದು ಅವಧಿಗೆ (1985-87) ಸದಸ್ಯರಾಗಿದ್ದು ಅಕಾಡಮಿಯಿಂದ 1988ರಲ್ಲಿ ರಾಜ್ಯ ಪ್ರಶಸ್ತಿ ಪಡೆದರು. 2002ರಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ದೊರೆಯಿತು.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: