ವಿಷಯಕ್ಕೆ ಹೋಗು

ಜೀ ಶಂ ಪರಮಶಿವಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೀ. ಶಂ. ಪರಮಶಿವಯ್ಯ
ಜನನನವೆಂಬರ್ ೧೨, ೧೯೩೩
ನಾಗಮಂಗಲ ತಾಲ್ಲೂಕಿನ ಅಂಬಲ ಜೀರಹಳ್ಳಿ
ಮರಣಜೂನ್ ೧೭, ೧೯೯೫
ಕಾವ್ಯನಾಮಜೀಶಂಪ
ವಿಷಯಜಾನಪದ ವಿದ್ವಾಂಸರು, ಸಾಹಿತಿಗಳು

ಜೀಶಂಪ[] ಎಂದೇ ಸಾಹಿತ್ಯಲೋಕದಲ್ಲಿ ಪ್ರಸಿದ್ಧರಾಗಿರುವ ಜೀ. ಶಂ. ಪರಮಶಿವಯ್ಯ[] (ನವೆಂಬರ್ ೧೨, ೧೯೩೩ - ಜೂನ್ ೧೭, ೧೯೯೫) ಜಾನಪದ ಸಂಪಾದನೆ ಮತ್ತು ಸಂಶೋಧನೆಯಲ್ಲಿ ಅಪಾರ ಸಾಧಕರಾಗಿ ಮತ್ತು ಸಾಹಿತ್ಯಲೋಕದಲ್ಲಿ ಅಪಾರ ಸೇವೆ ಸಲ್ಲಿಸಿದವರಾಗಿದ್ದಾರೆ.

ಮಹಾನ್ ಜಾನಪದ ವಿದ್ವಾಂಸರಾಗಿ ಜೀಶಂಪ ಎಂದೇ ಖ್ಯಾತರಾದ ಜೀ. ಶಂ. ಪರಮಶಿವಯ್ಯನವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಬಲ ಜೀರಹಳ್ಳಿಯಲ್ಲಿ ನವೆಂಬರ್ ೧೨, ೧೯೩೩ರ ವರ್ಷದಲ್ಲಿ ಜನಿಸಿದರು.

ಪರಮಶಿವಯ್ಯನವರು ಹೈಸ್ಕೂಲುವರೆಗಿನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ನಡೆಸಿದರು. ತಮ್ಮ ಅಧ್ಯಾಪಕರಾಗಿದ್ದ ಹೊಯ್ಸಳ ಹಾಗೂ ಮನೆಯ ಪಕ್ಕದಲ್ಲಿದ್ದ ಪು.ತಿ.ನ ಅವರ ಒಡನಾಟದಿಂದ ಇವರಲ್ಲಿ ಸಾಹಿತ್ಯದ ಗೀಳು ಹಿಡಿಯಿತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಬರೆದ ಕೆಲ ಕವನಗಳು ‘ತಾಯಿನಾಡು’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು. ಮುಂದೆ ಇಂಟರ್‌ಗೆ ಮೈಸೂರಿನ ಯುವರಾಜ ಕಾಲೇಜು ಸೇರಿ ಅನುತ್ತೀರ್ಣರಾದಾಗ ಕನಕಪುರದ ಎಸ್. ಕರಿಯಪ್ಪನವರ ವಿದ್ಯಾಶಾಲೆಯಲ್ಲಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರಾಗಿ ಸೇರಿಕೊಂಡರಾದರೂ, ಮುಂದೆ ಇಂಟರ್ ಪಾಸುಮಾಡಿ ಮಹಾರಾಜ ಕಾಲೇಜಿನಲ್ಲಿ ಬಿ. ಎ, ಎಂ.ಎ. ಪದವಿಗಳನ್ನು ಪಡೆದರು. ‘ಜಾನಪದ’ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಗೌರವವನ್ನೂ ಗಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಉಪಕುಲಪತಿಗಳ ಕಾರ್ಯದರ್ಶಿಗಳಾಗಿ ಜೀಶಂಪ ಅವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

ಜಾನಪದಕ್ಕೆ ಕೊಡುಗೆ

[ಬದಲಾಯಿಸಿ]

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಜಾನಪದ ವಿಭಾಗ ಪ್ರಾರಂಭಗೊಂಡಾಗ ಅದರ ಮುಖ್ಯಸ್ಥರಾದ ಜೀಶಂಪ, ಪಿ.ಆರ್. ತಿಪ್ಪೇಸ್ವಾಮಿ ಅವರೊಡಗೂಡಿ ಜಾನಪದ ವಸ್ತು ಸಂಗ್ರಹಾಲಯವೊಂದನ್ನು ನಿರ್ಮಿಸಿ ಕನ್ನಡ ನಾಡಿನ ಮೂಲೆಮೂಲೆಯಲ್ಲೆಲ್ಲಾ ಸಂಚರಿಸಿ ಅಪಾರ ವಸ್ತುಗಳನ್ನು ಸಂಗ್ರಹಿಸಿದರು.

ಜಾನಪದದ ಉಳಿವಿಗಾಗಿ, ಅದರ ಶಾಸ್ತ್ರೀಯ ಅಧ್ಯಯನಕ್ಕೆ ವಿದ್ವಾಂಸರ ತಂಡವೊಂದನ್ನು ಜಾಗೃತಗೊಳಿಸಿ, ಚೇತನ ಚಿಲುಮೆಯಾಗಿ ಅವರು ದುಡಿದರು. ೧೯೬೭ರಲ್ಲಿ ತರೀಕೆರೆಯಲ್ಲಿ ನಡೆದ ಪ್ರಥಮ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಜೀಶಂಪ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ಹೊನ್ನಬಿತ್ತೇವು ಹೊಲಕೆಲ್ಲ’ ಕೃತಿ ಜಾನಪದ ಕ್ಷೇತ್ರದಲ್ಲೊಂದು ಅಪೂರ್ವ ಕೃತಿ ಎನಿಸಿದೆ.

ಜಾನಪದ ಅಧ್ಯಯನಕ್ಕಾಗಿ ಪರಮಶಿವಯ್ಯನವರು ವಿಶ್ವದೆಲ್ಲೆಡೆ ಸಂಚರಿಸಿದ್ದರು. ಜಾನಪದ ಲೇಖಕರಾಗಿ ಅವರು ಜಾನಪದ ಸಾಹಿತ್ಯ ಸಮೀಕ್ಷೆ, ಮಂಟೇಸ್ವಾಮಿ ನೀಲಗಾರರು, ಮೈಲಾರ ಗೊರವರು, ದೊಂಬಿದಾಸರು, ಕಿನ್ನರಿ ಜೋಗಿಗಳು. ಜಾನಪದ ಅಡುಗೆಗಳು, ಮೂಡಲಪಾಯ, ಜಾನಪದ ಕಲಾವಿದರು ಮುಂತಾದ ೫೦ಕ್ಕೂ ಹೆಚ್ಚು ಕೃತಿ ರಚಿಸಿದರು

ಕವನ ಸಂಕಲನ

[ಬದಲಾಯಿಸಿ]
  • ಜೀವನ ಗೀತ.

ಖಂಡ ಕಾವ್ಯ

[ಬದಲಾಯಿಸಿ]
  • ದಿಬ್ಬದಾಚೆ,

ಕಥಾ ಸಂಕಲನ

[ಬದಲಾಯಿಸಿ]
  • ಕಾವಲುಗಾರ ಮತ್ತು ಇತರ ಕಥೆಗಳು.
  • ಮಬ್ಬು ಜಾರಿದ ಕಣಿವೆಯಲ್ಲಿ,

ಕಿರು ಕಾದಂಬರಿ

[ಬದಲಾಯಿಸಿ]
  • ಸಿಡಿಲ ಮರಿಗಳು,

ನಾಟಕಗಳು

[ಬದಲಾಯಿಸಿ]
  • ಭೀಮಪ್ಪನ ಬೇಟೆ,

ಪ್ರಬಂಧ

[ಬದಲಾಯಿಸಿ]
  • ಮೇದರಕಲ್ಲು ಮತ್ತು ಇತರ ಪ್ರಬಂಧಗಳು.

ಜೀವನ ಚರಿತ್ರೆ

[ಬದಲಾಯಿಸಿ]
  • ಗುರುದೇವ ಶ್ರೀಚಂದ್ರಶೇಖರನಾಥರು
  • ಸಾಹಸಯಾತ್ರೆ
  • ಕಲಾಸಾಧಕ
  • ಬೆಳಗೊಳದ ವೆಂಕಟೇಶ್ವರ‌.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ಜೀ. ಶಂ. ಪರಮಶಿವಯ್ಯನವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ರಾಷ್ಟ್ರೀಯ ಅಧ್ಯಾಪಕರೆಂಬ ಗೌರವ, ರಾಜ್ಯಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಹದಿಮೂರನೆಯ ಅಧಿವೇಶನದ ಅಧ್ಯಕ್ಷತೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷ ಪದವಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು. ‘ಜಾನಪದ ಸಂಭಾವನೆ’ ಎಂಬ ಅಭಿನಂದನ ಗ್ರಂಥವನ್ನು ಅವರ ಅಭಿಮಾನಿಗಳು ಸಮರ್ಪಿಸಿದ್ದರು.

ವಿದಾಯ

[ಬದಲಾಯಿಸಿ]

ಪ್ರೊ. ಜಿ. ಶಂ. ಪರಮಶಿವಯ್ಯನವರು ೧೯೯೫ರ ವರ್ಷದ ಜೂನ್ ೧೭ರಂದು ಈ ಲೋಕವನ್ನಗಲಿದರು.

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-03-06. Retrieved 2013-11-12.
  2. .http://www.kannadakavi.com/kavikoota/12janapada/g_s_paramasivaih.htm