ವಿಷಯಕ್ಕೆ ಹೋಗು

ಜಿ. ವೆಂಕಟಸುಬ್ಬಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜಿ.ವೆಂಕಟಸುಬ್ಬಯ್ಯ ಇಂದ ಪುನರ್ನಿರ್ದೇಶಿತ)
ಜಿ. ವೆಂಕಟಸುಬ್ಬಯ್ಯ
ಜನನ೨೩ ಆಗಸ್ಟ್, ೧೯೧೩
ಕೈಗೋನಹಳ್ಳಿ, ಕೃಷ್ಣರಾಜಪೇಟೆ, ಮಂಡ್ಯ, ಮೈಸೂರು ಸಂಸ್ಥಾನ
ಮರಣError: Need valid death date (first date): year, month, day
ಬೆಂಗಳೂರು
ವೃತ್ತಿಭಾಷಾತಜ್ಞ, ಕನ್ನಡ ನಿಘಂಟು ತಜ್ಞ, ಬರಹಗಾರ, ಸಂಶೋಧಕ, ಶಿಕ್ಷಕ, ಚಿಂತಕ,
ಕಾಲ20ನೇ ಶತಮಾನ
ವಿಷಯಕನ್ನಡ ಸಾಹಿತ್ಯ
ಪ್ರಮುಖ ಕೆಲಸ(ಗಳು)ಇಗೋ ಕನ್ನಡ
ಪ್ರಮುಖ ಪ್ರಶಸ್ತಿ(ಗಳು)ಪದ್ಮಶ್ರೀ (೨೦೧೭), ಭಾಷಾ ಸಮ್ಮಾನ್‌ (೨೦೧೮)
ಬಾಳ ಸಂಗಾತಿಲಕ್ಷ್ಮಿ (ದಿವಂಗತ)
ಮಕ್ಕಳು

ಪ್ರೊ. ಗಂಜಾಂ ವೆಂಕಟಸುಬ್ಬಯ್ಯ (೨೩ ಆಗಸ್ಟ್ ೧೯೧೩ - ೧೯ ಏಪ್ರಿಲ್ ೨೦೨೧) ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ತಜ್ಞರು. ಇವರ 'ಇಗೋ ಕನ್ನಡ' ಎಂಬ ಪ್ರಜಾವಾಣಿ ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. ೧೯೯೧ರಿಂದ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯ ಪದಗಳನ್ನು ಓದುಗರಿಗೆ ಹತ್ತಿರಗೊಳಿಸಿದವರು. ಇವರ ಭಾಷಾ ಸಾಹಿತ್ಯ ಕೊಡುಗೆಗೆ ೨೦೦೫ರಲ್ಲಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನು ನೀಡಿದೆ. ಇವರು ಬೆಂಗಳೂರಿನಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.[]

ಜನನ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ವೆಂಕಟಸುಬ್ಬಯ್ಯನವರ ಹೆಸರಿನ ಜೊತೆ 'ಗಂಜಾಂ' ಎನ್ನುವ ಸ್ಥಳದ ಹೆಸರು ಸೇರಿದ್ದರೂ, ಅವರು ಜನಿಸಿದ್ದು, ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಬಳಿಯ ತಾಯಿಯವರ ತವರೂರಾದ ಕೈಗೋನಹಳ್ಳಿಯಲ್ಲಿ. ಶ್ರೀರಂಗಪಟ್ಟಣದ ಉಪನಗರ-ಗಂಜಾಂ ಪೇಟೆ ವಲಯ; ಶ್ರೀರಂಗಪಟ್ಟಣ- ಸೈನ್ಯದ ವಲಯ. ವೆಂಕಟಸುಬ್ಬಯ್ಯನವರ ಪೂರ್ವಿಕರು ಬಹಳ ವರ್ಷ ನೆಲಸಿದ್ದದ್ದು 'ಮುದಗುಂದೂರಿ'ನಲ್ಲಿ. ಮುಂದೆ ಗಂಜಾಂ ನಲ್ಲಿ ಬಂದು ನೆಲೆಸಿದರು. ವೆಂಕಟಸುಬ್ಬಯ್ಯನವರ ತಂದೆ ಗಂಜಾಂ ತಿಮ್ಮಣ್ಣಯ್ಯನವರು. ಸಂಸ್ಕೃತ ಹಾಗು ಕನ್ನಡದ ವಿದ್ವಾಂಸರಾಗಿದ್ದರು. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ ಸುವರ್ಣಪದಕವನ್ನು ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ.ಪದವಿಯನ್ನೂ ಕೂಡ ಪಡೆದರು. ೧೯೩೯ ರಿಂದ ಪ್ರಾರಂಭಿಸಿ ಸುಮಾರು ೪೦ ವರ್ಷಗಳ ಕಾಲ ಇವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು.[] ಕನ್ನಡ ಸಾರಸ್ವತ ಲೋಕದಲ್ಲಿ ಅವರು ಜಿ.ವಿ.ಎಂದೇ ವಿಶ್ವದಾದ್ಯಂತ ಹೆಸರಾದವರು.

ಜೀವಿಯವರ ಪೂರ್ವಿಕರು

[ಬದಲಾಯಿಸಿ]

ದೈವಾರಾಧನೆ,ವ್ರತ, ಹೋಮ, ಪೂಜೆ, ಅನುಷ್ಠಾನಗಳಲ್ಲಿ ಮತ್ತು ಪೌರೋಹಿತ್ಯ ಕಾರ್ಯಗಳನ್ನು ಕೈಗೊಂಡು, ದೊರೆತ ವರಮಾನದಲ್ಲಿ ಸರಳ ಜೀವನ ನಿರ್ವಹಣೆ ಮಾಡುತ್ತಿದ್ದರು. ೧೮೭೬-೧೮೮೮ ರಲ್ಲಿ ಮೈಸೂರು ರಾಜ್ಯದಲ್ಲಿ ಕ್ಷಾಮ ತಲೆದೋರಿದಾಗ ಜೀವನ ನಡೆಸುವುದು ದುರ್ಭರವಾಗಿದ್ದರಿಂದ ಅವರ ಪರಿವಾರ ಚಿಕ್ಕ ಗ್ರಾಮ,ಗಂಜಾಂ ಎಂಬಲ್ಲಿಗೆ ಬಂದು ನೆಲೆಸುತ್ತಾರೆ. ಹಾಗೆ ವಲಸೆ ಹೋದವರಲ್ಲಿ 'ನರಸಿಂಹಜೋಯಿಸ್' ಎಂಬ ಸದ್ಗೃಹಸ್ಥರಿಗೆ ಇಬ್ಬರು ಮಕ್ಕಳು. ತಿಮ್ಮಣ್ಣಯ್ಯ ಹಿರಿಯ, ಮಗ. ಲೋಕಲ್ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಸರ್ಕಾರೀ ಕೆಲಸದಲ್ಲಿ ಆಗಾಗ ಹತ್ತಿರದ ಶಾಲೆಗಳಿರುವ ಊರುಗಳಿಗೆ ವರ್ಗವಾಗುತ್ತಿತ್ತು. ತಿಮ್ಮಣ್ಣಯ್ಯ, ಮತ್ತು ಸುಬ್ಬಮ್ಮನವರ ಮಕ್ಕಳಲ್ಲಿ ಎರಡನೆಯವನೇ ಗಂಜಾಂ ವೆಂಕಟಸುಬ್ಬಯ್ಯ. ೨೩ ಆಗಸ್ಟ್, ೧೯೧೩ ರಲ್ಲಿ ಜನಿಸಿದರು. ತಂದೆಯವರಿಗೆ ಬನ್ನೂರು, ಮಧುಗಿರಿಗೆ ವರ್ಗವಾದ ಸಮಯದಲ್ಲಿ 'ಅಮರಕೋಶ'ವನ್ನು ಬಾಯಿಪಾಠಮಾಡಿಕೊಂಡು ಆವರಿಗೆ ಒಪ್ಪಿಸುತ್ತಿದ್ದರು. ೧೯೨೭-೩೦ ರ ಸಮಯದಲ್ಲಿ ಬಹಳ ಸಕ್ರಿಯವಾಗಿದ್ದರು. ಜೀವಿ ಅವರ ಸಮಕಾಲೀನರಾಗಿದ್ದ ಕೆ. ಎಸ್ ನಾರಾಯಣಸ್ವಾಮಿ, Economist ಆಗಿದ್ದರು. Reserve Bank of India, ದಲ್ಲಿ ಆಫೀಸರ್ ಆಗಿ ಸೇವೆಸಲ್ಲಿಸಿದ್ದರು. ನಂತರ ವಿಶ್ವಬ್ಯಾಂಕಿಗೆ ಉಪಾಧ್ಯಕ್ಷರಾಗಿ ಸೇವೆಸಲ್ಲಿದ್ದರು. ಗಾಂಧಿ ಸಾಹಿತ್ಯ ಸಂಪುಟದ ಸಂಪಾದಕ, ಕೆ.ಎಸ್ ಕೃಷ್ಣಸ್ವಾಮಿ ಜಿವಿಯವರ ಸಮಕಾಲೀನರು.

ಮದುವೆ

[ಬದಲಾಯಿಸಿ]

'ಜಿವಿ'ಯವರು ೧೯೩೭ ರಲ್ಲಿ ಮಂಡ್ಯದಲ್ಲಿ ಲಕ್ಷ್ಮಿಯವರನ್ನು ಮದುವೆಯಾದರು.

ಶಿಕ್ಷಕರಾಗಿ

[ಬದಲಾಯಿಸಿ]

ಮಂಡ್ಯದ ಮುನಿಸಿಪಲ್ ಪ್ರೌಢಶಾಲೆಯಲ್ಲಿ ೩೦ ರೂಗಳ ವೇತನದ ಮೇಲೆ ಶಿಕ್ಷಕರಾಗಿ ನೇಮಕರಾದ ಜಿವಿ, ೬ ತಿಂಗಳು ಕೆಲಸ ಮಾಡಿದ ಬಳಿಕ, ಬೆಂಗಳೂರಿಗೆ ಹೋಗಿ, ಅಲ್ಲಿನ 'ಬೆಂಗಳೂರು ಹೈಸ್ಕೂಲಿಗೆ ಶಿಕ್ಷಕ'ನಾಗಿ ಸೇರಿಕೊಂಡರು. ಮುಂದೆ ಬೆಂಗಳೂರಿನ ಜಯನಗರದ ವಿಜಯ ಕಾಲೇಜಿಗೆ ಅಧ್ಯಾಪಕರಾಗಿ ಸೇರಿ, ಅಲ್ಲಿಯೇ ಮುಂದೆ ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ನಿವೃತ್ತರಾದರು. ಆ ಸಮಯದಲ್ಲಿ ಅವರು ಹೊರತಂದ ಕಾಲೇಜಿನ ವಾರ್ಷಿಕ ಸಂಚಿಕೆ 'ಉತ್ಸಾಹ'.

ನಿಲಯಪಾಲಕರಾಗಿ

[ಬದಲಾಯಿಸಿ]

ಬೆಂಗಳೂರು ನಗರದ ವಿಶ್ವೇಶ್ವರಪುರದಲ್ಲಿದ್ದ ರಾಮಕೃಷ್ಣ ಸ್ಟೂಡೆಂಟ್ಸ್ ಹೊಂ ಹಾಸ್ಟೆಲ್ ಗೆ'ವಾರ್ಡನ್' ಆಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದರು. ಜಯನಗರದಲ್ಲಿ 'ಜಯರಾಮ ಸೇವಾ ಮಂಡಳಿ ಎಂಬ ಸಾರ್ವಜನಿಕ ಸಂಸ್ಥೆ'ಯನ್ನು ಹುಟ್ಟುಹಾಕಿ ಬೆಳಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತಿದ್ದವು.

'ಶತನಮನ-೨೦೧೧' ಕಾರ್ಯಕ್ರಮ

[ಬದಲಾಯಿಸಿ]

ಜಿವಿಯವರ ೬೦ ನೇ ವರ್ಷ ಹಾಗೂ ೯೦ ನೆಯ ವರ್ಷಗಳ ಶುಭ ಅವಸರಗಳ ನೆನಪಿನಲ್ಲಿ ಗೌರವ ಸಮಾರಂಭಗಳು ನಡೆದವು. ಸಾಹಿತ್ಯಜೀವಿ, ಶಬ್ದಸಾಗರ, ಜಿವಿಯವರಿಗೆ ಪಿ.ವಿ.ನಾರಾಯಣ್ ನೇತೃತ್ವದಲ್ಲಿ ಶತಮಾನೋತ್ಸವ ಸಮಾರಂಭವನ್ನು ಶತನಮನ-೨೦೧೧ ಎನ್ನುವ ಹೆಸರಿನಲ್ಲಿ ನೆರವೇರಿಸಲಾಯಿತು. ರೆವರೆಂಡ್ ಕಿಟ್ಟಲ್ ರವರ ನೂರುವರ್ಷದ ಗೌರವಾರ್ಥದ ಸಮಯದಲ್ಲಿ (೧೯೯೩-೯೪ ರಲ್ಲಿ) ಪ್ರಥಮ ಕನ್ನಡ ನಿಘಂಟು ರಚಿಸಿದ ಸಮಯದಲ್ಲಿಯೇ ಜಿ.ವಿಯವರ 'ಆಧುನಿಕ ಕನ್ನಡದ ಪ್ರಥಮ ನಿಘಂಟು' ಹೊರಬಂತು.

ನಿಘಂಟಿನ ಕೆಲಸ

[ಬದಲಾಯಿಸಿ]

ವರ್ಷ ೧೯೪೩ ರ ಕಾಲದಲ್ಲಿ ಕನ್ನಡ ಪದಗಳ ಅರ್ಥ,ವ್ಯುತ್ಪತ್ತಿಗಳಲ್ಲಿ ರುಚಿ ಹತ್ತಿಸಿದರು, ಪ್ರೊ.ಎ.ಆರ್.ಕೃಷ್ಣಶಾಸ್ತ್ರಿಗಳು. ಪು.ತಿ.ನರಸಿಂಹಾಚಾರ್, ನಂತರ ಕುವೆಂಪು ಮೊದಲಾದವರು. ಶಾಸ್ತ್ರಿಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರಧಾನ ಸಂಪಾದಕರಾಗಿದ್ದರು. ಇಂಗ್ಲಿಷ್ ಕನ್ನಡ ಇಂಗ್ಲಿಷ್, ಕ್ಲಿಷ್ಟ ಪದಕೋಶಗಳು, ಅಮೇರಿಕಾದ ಬರಹದ ಮೂಲದ ಶೇಷಾದ್ರಿ ಶೇಷಾದ್ರಿವಾಸುರವರ 'ಅಂತರಜಾಲ ನಿಘಂಟು' ಜಿ.ವಿಯವರ ನಿಘಂಟನ್ನು ಆಧರಿಸಿಯೇ ರೂಪುಗೊಂಡಿದೆ.

ಕೃತಿಗಳು

[ಬದಲಾಯಿಸಿ]
  • ನಿಘಂಟು- (೧-೪)
  • ನಳಸೇನ
  • ಅನುಕಲ್ಪನೆ,
  • ಅಕ್ರೂರ ಚರಿತೆ,
  • ಲಿಂಡನ್ ಜಾನ್ಸನ್
  • ಸಂಯುಕ್ತ ಸಂಸ್ಥಾನದ ಪರಿಚಯ,
  • ಶಂಕರಾಚಾರ್ಯ,
  • ಇದು ನಮ್ಮ ಭಾರತ
  • ಸರಳಾ ದಾಸ್
  • ಕಬೀರ್,
  • ರತ್ನಾಕರ ವರ್ಣಿ,
  • ದಾಸ ಸಾಹಿತ್ಯ,
  • ವಚನ ಸಾಹಿತ್ಯ,
  • ಶಾಸನ ಸಾಹಿತ್ಯ,
  • ಷಡಕ್ಷರ ದೇವಾ,
  • ಸರ್ವಜ್ಞ,
  • ಇಣುಕುನೋಟ
  • ಕನ್ನಡ ಸಾಹಿತ್ಯ ನಡೆದುಬಂದ ದಾರಿ,
  • ಕನ್ನಡ ಶಾಸನ ಪರಿಚಯ
  • ಕರ್ನಾಟಕ ವೈಭವ,
  • ಇತರ ಶಬ್ದ ಚಿತ್ರಗಳು
  • ಕನ್ನಡ ಕನ್ನಡ ಇಂಗ್ಲಿಷ್ ನಿಘಂಟುಕನ್ನಡ
  • ಕನ್ನಡ ಕ್ಲಿಷ್ಟ ಪದಗಳ ಕೋಶ,
  • ಮಧ್ವ ಸಾಹಿತ್ಯ ಭಂಡಾರ ೧-೨
  • ಮುದ್ದಣ ಪ್ರಯೋಗ ಕೋಶ
  • ಕಾವ್ಯ ಲಹರಿ,
  • ಕಾವ್ಯ ಸಂಪುಟ,
  • ಇಂಗ್ಲಿಷ್ ಕನ್ನಡ ನಿಘಂಟು
  • ಕುಮಾರವ್ಯಾಸನ ಅಂತರಂಗ,
  • ತಮಿಳು ಕಥೆಗಳು,
  • ನಗರಸನ ಭಗವದ್ಗೀತೆ,
  • ಕರ್ಣ ಕರ್ಣಾಮೃತ,
  • ಎರವಲು ಪದಕೋಶ,

ಇಗೋ ಕನ್ನಡ

[ಬದಲಾಯಿಸಿ]

'ಇಗೋ ಕನ್ನಡ' - ೧೨-೫-೯೧ ರಿಂದ ಕನ್ನಡದ ಜನಪ್ರಿಯ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಪುಟ್ಟ ಅಂಕಣವಾಗಿ ಪ್ರಾರಂಭವಾಯಿತು. ಕನ್ನಡದ ಶಿಷ್ಟ ಬರವಣಿಗೆಯನ್ನು ಸಾರ್ವಜನಿಕರಿಗೆ ತಿಳಿಯ ಪಡಿಸಲು ಆರಂಭಿಸಿದ ಈ ಅಂಕಣವು ಕೆಲವೇ ದಿನಗಳಲ್ಲಿ ಹಲವರ ಗಮನವನ್ನೂ, ಉತ್ಸಾಹವನ್ನೂ ತನ್ನತ್ತ ಸೆಳೆಯಿತು. ಕನ್ನಡವನ್ನು ಅಭ್ಯಾಸ ಮಾಡಿದವರಿಂದಲೂ, ಶ್ರೀಸಾಮಾನ್ಯರಿಂದಲೂ ಬಂದ ವೈವಿಧ್ಯಮಯ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲಿ ತೊಡಗಿಸಿಕೊಂಡ ಈ ಅಂಕಣ, ಹಲವರ ಭಾಷೆಗೆ ಸಂಬಂಧಿಸಿದ ಸಂದೇಹಗಳನ್ನು ನಿವಾರಣೆ ಮಾಡಿತು. ಇಂತಹ ಭಾಷೆಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಒಟ್ಟುಗೂಡಿಸಿ ವೆಂಕಟಸುಬ್ಬಯ್ಯನವರು 'ಇಗೋ ಕನ್ನಡ' ಎಂಬ ಹೆಸರಲ್ಲೇ ಒಂದು ಸಾಮಾಜಿಕ ನಿಘಂಟನ್ನು ಹೊರತಂದದ್ದುಂಟು.[]

ಪ್ರಶಸ್ತಿಗಳು/ಗೌರವ ಪುರಸ್ಕಾರಗಳು

[ಬದಲಾಯಿಸಿ]

ಡಾ. ವೆಂಕಟಸುಬ್ಬಯ್ಯನವರು, ೧೮ ಏಪ್ರಿಲ್, ೨೦೨೧ ರಂದು ಮಧ್ಯರಾತ್ರಿ ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನಹೊಂದಿದರು.[] ಅವರಿಗೆ ೧೦೮ ವರ್ಷ ವಯಸ್ಸಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. Kannada Linguist, Grammarian, Teacher, Writer And Lexicographer… G. Venkatasubbiah Turns 107 Aug 23, 2020,Star of Mysore
  2. Teacher par excellence, Deccan Herald, Sep 4, 2012
  3. "genius Kannada lexicographer who turns 100 bangalorewaves. August 23, 2012". Archived from the original on ಜನವರಿ 27, 2021. Retrieved ಏಪ್ರಿಲ್ 26, 2021.
  4. ನಾಡೋಜ ಜಿ.ಎನ್.ಗೆ ಪಂಪ ಪ್ರಶಸ್ತಿ
  5. is honorary doctorate'
  6. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, ಭಾರತ ಸರ್ಕಾರ
  7. "ಗುರುಗಳ ಮಾತು ಉಳಿಸಿದ್ದಕ್ಕೆ ಸನ್ಮಾನ ಭಾಷಾ ಸಮ್ಮಾನ್". Prajavani. Retrieved 19 April 2021.
  8. ನಿಘಂಟು ತಜ್ಞ, ಭಾಷಾ ತಜ್ಞ, ಪ್ರೊ.ಜಿ.ವೆಂಕಟಸುಬ್ಬಯ್ಯನವರು ಇನ್ನಿಲ್ಲ ಪ್ರಜಾವಾಣಿ, ೧೯, ಏಪ್ರಿಲ್,೨೦೨೧

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. 'ನಿಶ್ಯಬ್ದಕ್ಕೆ ಜಾರಿದ ಜಿ.ವಿ', 'ಕನ್ನಡದ ಕಿಟ್ಟೆಲ್ ನಡೆದುಬಂದ ದಾರಿ'. ಉದಯವಾಣಿ, (ಪುಟ-೧ ಮತ್ತು ೪) ೨೦, ಏಪ್ರಿಲ್, ೨೦೨೧
  2. ಮೂಲ ತಾಣ : [Dr.S.Srikanta Sastri Official Website of Dr.S.Srikanta Sastri, M.A; D.Litt (1904-1974)]
  3. prof-gv-on-ssrikanta-sastri