ವಿಷಯಕ್ಕೆ ಹೋಗು

ಚೀನೀತತ್ತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೀನೀತತ್ತ್ವ ಭಾರತದ ತತ್ತ್ವದಂತೆಯೇ ತುಂಬ ಪ್ರಾಚೀನವಾದ್ದು.[೧] ಬೌದ್ಧ ತತ್ತ್ವ ಚೀನಕ್ಕೆ ಹರಡಿ ಅಲ್ಲಿನ ತತ್ತ್ವಗಳಲ್ಲಿ ಒಂದು ಮುಖ್ಯ ತತ್ತ್ವವಾಗಿ, ಭಾರತದಲ್ಲಿ ಕ್ಷೀಣಗೊಂಡ ಮೇಲೂ ಅಲ್ಲಿ ಅದು ಸ್ಥಿರವಾಗಿ ನೆಲೆಸಿತು. ಕ್ರಿ.ಶ. ಆರನೆಯ ಶತಮಾನದಲ್ಲಿ ಬೌದ್ಧನಾದ ಪರಮಾರ್ಥ ಭಾರತೀಯ ನ್ಯಾಯ ಗ್ರಂಥಗಳನ್ನು ಚೀನೀಭಾಷೆಗೆ ಪರಿವರ್ತಿಸಿದ. ಕ್ರಿ.ಶ. ಏಳನೆಯ ಶತಮಾನದಲ್ಲಿ ಹ್ಯುಯೆನ್ ತ್ಸಾಂಗ್ ತರ್ಕಗ್ರಂಥಗಳನ್ನು ಚೀನೀಭಾಷೆಗೆ ಭಾಷಾಂತರಿಸಿ ಚೀನಕ್ಕೆ ತೆಗೆದುಕೊಂಡು ಹೋದ. ಹ್ಯುಯೆನ್‍ತ್ಸಾಂಗನ ಶಿಷ್ಯ ಕ್ವ್ಯೆ-ಚಿ ಶಂಕರಸ್ವಾಮಿ 'ನ್ಯಾಯಪ್ರವೇಶದ ಮೇಲೆ ಆರು ಸಂಪುಟಗಳ ಮಹಾವ್ಯಾಖ್ಯಾನವನ್ನು ಬರೆದ. ಇದು ಚೀನೀಯರಲ್ಲಿ ತರ್ಕವಿಚಾರವಾಗಿ ತುಂಬ ಆಸಕ್ತಿ ಹುಟ್ಟಿಸಿತು. ಚೀನೀ ತತ್ತ್ವವೆಂದರೆ ನಾವು ತಿಳಿದಿರುವುದು ಕೂಂಗ್ ಫೂಟ್ಸೆ ಮತ್ತು ಲಾವೋಟ್ಸು ತತ್ತ್ವವೆಂದೇ. ಅವೆರೆಡು ಅದರ ಪ್ರಧಾನ ತತ್ತ್ವಗಳಾದರೂ ಅವು ಬಹು ರೂಪಾಂತರ ಪಡೆದಿವೆ. ನವೀನ ಕೂಂಗ್ ಫೂಟ್ಸೆ ತತ್ತ್ವವೆಂದು ಕ್ರಿ.ಶ. ಹನ್ನೆರಡನೆಯ ಶತಮಾನದ ಚು ಷೀ ಪ್ರತಿಪಾದಿಸಿದ ತತ್ತ್ವವನ್ನು ಕೂಂಗ್ ಫೂಟ್ಸೆ ಪುನರ್ಜನ್ಮ ತಾಳಿ ನೋಡಿದ್ದರೆ ಬಹುಶಃ ಅದು ತನ್ನದೆಂದು ಗುರುತು ಹಿಡಿಯಲಾಗುತ್ತಿರಲಿಲ್ಲ. ಹಾಗೆಯೇ ನೂತನ ಲಾವೋ ಟ್ಸು ತತ್ತ್ವವೂ ಹಿಂದಿನ ಲಾವೋ ಟ್ಸು ತತ್ತ್ವದಿಂದ ಬಹುದೂರ ಸಾಗಿದೆ.[೨][೩]

ಪೂಂಗ್ ಯು-ಲಾನ್ ಗ್ರಂಥ[ಬದಲಾಯಿಸಿ]

ಚೀನೀತತ್ತ್ವದ ಮನೋಭಾವವನ್ನು ಕುರಿತು ಪೂಂಗ್ ಯು-ಲಾನ್ ಹೀಗೆ ಹೇಳುತ್ತಾನೆ. ತಾತ್ತ್ವಿಕರನ್ನು ಎರಡು ಬಗೆಯಾಗಿ ವಿಂಗಡಿಸುವುದುಂಟು. ಇಹದಲ್ಲಿ, ಸಾಮಾಜಿಕ ಸಂಸಾರಿಕ ಜೀವನದಲ್ಲಿ ಆಸಕ್ತರಾದವರು ಒಂದು ಗುಂಪಿನವರು. ಸಾಂಸಾರಿಕ ಜೀವನದಿಂದ ಹೊರಚ್ಚಾಗಿ ನಿಂತು, ಲೋಕಾತೀತ ವಸ್ತುಗಳಲ್ಲಿ ಆಸಕ್ತರಾಗಿರುವವರು ಇನ್ನೊಂದು ಗುಂಪಿನವರು ಸನ್ಯಾಸಿಗಳು. ಸಾಮಾನ್ಯವಾಗಿ ಇವರಿಬ್ಬರ ತತ್ತ್ವ ಪರಸ್ಪರ ವಿರುದ್ಧವೆಂದು ಹೇಳುವುದುಂಟು. ಇವೆರಡನ್ನೂ ವಿರೋಧವಿಲ್ಲದೆ ಸಮನ್ವಯಗೊಳಿಸಲು ಚೀನೀ ತತ್ತ್ವ ಪ್ರಯತ್ನಿಸುತ್ತದೆ. ಇಹದಲ್ಲಿ ಪರವನ್ನೂ ಪರದಲ್ಲಿ ಇಹವನ್ನೂ ಕಾಣಬಯಸುತ್ತದೆ. ಹೀಗೆ ಬಯಸುವವರನ್ನು ಚೀನೀಯರು ಮಹಾಪ್ರಜ್ಞರೆಂದು, ಅಂದರೆ ತಾತ್ತ್ವಿಕರೆಂದು ಕರೆಯುತ್ತಾರೆ. ಅವರು ಒಳಗೆ ಪ್ರಾಜ್ಞ ಚಕ್ರವರ್ತಿಗಳು, ಹೊರಗೆ ಲೌಕಿಕ ಸಾರ್ವಭೌಮನಂತೆ ಲೋಕಹಿತದಲ್ಲಿ ಆಸಕ್ತರು. ಇಂಥ ಚಾರಿತ್ರ್ಯವನ್ನು ಬೆಳೆಸುವುದೇ ಚೀನೀತಾತ್ತ್ವಿಕರ ಮುಖ್ಯಧ್ಯೇಯ.[೪]

ತಾವೋ ತತ್ತ್ವ[ಬದಲಾಯಿಸಿ]

ಚೀನೀತತ್ತ್ವ ಭಾರತೀಯ ದರ್ಶನಗಳಂತೆ, ಪ್ರಮಾಣ, ಪ್ರಮೇಯ, ಪ್ರಮಿತಿ, ಪ್ರಾಮಾಣ್ಯಗಳೆಂಬ ಚತುರಂಗಸಮೇತವಾಗಿ ತರ್ಕಬದ್ಧವಾಗಿ ನಿರೂಪಣೆಯಾದ ವ್ಯವಸ್ಥಿತ ತತ್ತ್ವವಲ್ಲ. ಚೀನೀ ತಾತ್ತ್ವಿಕರ ಬರೆವಣಿಗೆಯಲ್ಲಿ ಬಿಡಿಬಿಡಿ ಉಕ್ತಿಗಳು, ಉದಾಹರಣೆಗೆ, ಉಪಮಾನಗಳು ಕತೆಗಳು ಸೇರಿವೆ. ಕೆಲವು ವೇಳೆ ಆ ಉಕ್ತಿಗಳು ಪರಸ್ಪರ ವಿರೋಧಿಗಳಂತೆ ತೋರುತ್ತವೆ. ಅವುಗಳ ವಾಚ್ಯಾರ್ಥ ಅಪೂರ್ಣವಾದರೂ ಸೂಚ್ಯಾರ್ಥ ಅಪಾರವಾದದ್ದು, ಚೀನೀ ಕಲೆಯಲ್ಲಿ ವಾಚ್ಯಾರ್ಥಕ್ಕಿಂತಲೂ ಧ್ವನ್ಯರ್ಥಕ್ಕೆ ಹೆಚ್ಚು ಬೆಲೆ. ಹಾಗೆಯೇ ಅವರ ತತ್ತ್ವದ ಉಕ್ತಿಗಳಲ್ಲೂ ಸೂಚ್ಯಾರ್ಥಕ್ಕೆ ಪ್ರಾಧಾನ್ಯ. ಮಾತು ಮುಖ್ಯವಲ್ಲ. ಅದರ ಇಂಗಿತ ಮುಖ್ಯ. ಅದು ತಿಳಿದಾಗ ಅರ್ಥ ಮುಂದಾಗುತ್ತದೆ, ಮಾತು ಹಿಂದಕ್ಕೆ ಸರಿಯುತ್ತದೆ. ಕೆಲವು ವೇಳೆ ಚೀನೀ ತಾತ್ತ್ವಿಕರು ಕೇವಲ ಮೌನದಿಂದಲೇ ತಮ್ಮ ತತ್ತ್ವವನ್ನು ಧ್ವನಿಸುತ್ತಿದ್ದುದುಂಟು. ತಾಓ ತತ್ತ್ವದಲ್ಲಂತೂ ಈ ಸೂಚ್ಯಾರ್ಥಕ್ಕೆ ಹೆಚ್ಚು ಬೆಲೆ. ತಾಓ ಮಾತಿನಿಂದ ವರ್ಣಿಸಲಾಗದ್ದು. ಮೌನದಿಂದಲೇ ಅದನ್ನು ಧ್ವನಿಸಬೇಕು. ತಾವೋ ತತ್ತ್ವವನ್ನು ಕುರಿತು ಸಾವಿರ ಪುಟಗಳ ವಿವರಣ ಗ್ರಂಥವನ್ನು ರಚಿಸಬಹುದು. ಆದರೂ ಅದು ಲಾವೋಟ್ಸುವಿನ ಕಾರಿಕೆಗಳ ಸೂಚ್ಯಾರ್ಥವನ್ನು ಪೂರ್ಣವಾಗಿ ತಿಳಿಸಲಾರದು.[೫][೬]

ಇಂದಿನ ಚೀನೀತತ್ತ್ವ[ಬದಲಾಯಿಸಿ]

ಇಂದು ಚೀನದಲ್ಲಿ ಕೂಂಗ್ ಪೂಟ್ಸೆ, ಲವೋ ಟ್ಸು ಮತ್ತು ಬೌದ್ಧತತ್ತ್ವಗಳು ಹಿಮ್ಮೆಟ್ಟಿವೆ. ಚೀನದಲ್ಲಿ ಇಂದು ಪ್ರಬಲವಾಗಿರುವುದು ಕಾರ್ಲ್ ಮಾರ್ಕ್ಸ್, ಎಂಗೆಲ್ಸ್, ಲೆನಿನ್ ಮತ್ತು ಮಾವೋ ತ್ಸೆ-ಡುಂಗ್ ಇವರ ಕಮ್ಯೂನಿಸ್ಟ್ ತತ್ತ್ವ. ಕಾರ್ಲ್ ಮಾರ್ಕ್ಸ್ನ ಭೌತ ವೈಚಾರಿಕತತ್ತ್ವದ ದೃಷ್ಟಿಯಿಂದ ಮಾವೋ ಚೀನೀತತ್ತ್ವದ ಬೆಳವಣಿಗೆಯನ್ನು ವಿಮರ್ಶಿಸಿರುತ್ತಾನೆ. ಯಾವುದಾದರೂ ಒಂದು ಚಳವಳಿ ಅದರ ಅಂತಿಮ ಘಟ್ಟವನ್ನು ಮುಟ್ಟಿದಾಗ, ಅದು ಅದಕ್ಕೆ ವ್ಯತಿರಿಕ್ತವಾದ ಚಳವಳಿಗೆ ದಾರಿ ಮಾಡಿಕೊಡುತ್ತದೆ. ಹೀಗೆ ಪರಸ್ಪರ ವಿರೋಧಗಳು ಒಂದನ್ನೊಂದು ಪೂರ್ಣಗೊಳಿಸುತ್ತವೆ. ಮಾವೋ ಹೊಸ ಪ್ರಜಾಸರ್ಕಾರ ಎಂಬ ತನ್ನ ಗ್ರಂಥದಲ್ಲಿ ಹಿಂದಿನ ಸಂಸ್ಕೃಂತಿಯಲ್ಲಿ ಸಾರವತ್ತಾದುದನ್ನು ಗ್ರಹಿಸಿ ಗಸಿಯನ್ನು ಬಿಸಾಡಬೇಕೆಂದು ಹೇಳಿರುತ್ತಾನೆ. ಆ ಸಾರವತ್ತಾದ್ದು ಯಾವುದು, ಗಸಿಯಾವುದು ಎಂಬ ಪ್ರಶ್ನೆಗಳಿಗೆ ಈ ರೀತಿ ಉತ್ತರ ಕೊಟ್ಟಿರುತ್ತಾನೆ. ಪ್ರಜಾಸರ್ಕಾರಕ್ಕೆ, ವಿಜ್ಞಾನಕ್ಕೆ ವಿರುದ್ಧವಾದ ಶ್ರೀಮಂತರ ತತ್ತ್ವಗಸಿ, ಸಾಮಾನ್ಯರ ಮತ್ತು ಬಹುಸಂಖ್ಯಾತರ ಹಿತಕ್ಕೆ ಅನುಕೂಲವಾದದ್ದು ಮತ್ತು ವಿಜ್ಞಾನಕ್ಕೆ ಸಂಗತವಾದದ್ದು ಸಾರವತ್ತಾದ ತತ್ತ್ವ. ಈ ದೃಷ್ಟಿಯಿಂದ ಈಗ ಚೀನಿಯರು ತಮ್ಮ ಹಿಂದಿನ ತತ್ತ್ವವನ್ನು ವಿಮರ್ಶಿಸುತ್ತಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Ancient Chinese Philosophy". Ancient History Encyclopedia. Retrieved 11 January 2020.
  2. Perkins, Franklin (2019). "Metaphysics in Chinese Philosophy". The Stanford Encyclopedia of Philosophy. Metaphysics Research Lab, Stanford University. Retrieved 11 January 2020.
  3. "Chinese Philosophy - General - The Basics of Philosophy". www.philosophybasics.com. Retrieved 11 January 2020.
  4. "Chinese philosophy". Encyclopedia Britannica. Retrieved 11 January 2020. {{cite news}}: Cite has empty unknown parameter: |1= (help)
  5. "Chinese Philosophy | Encyclopedia.com". www.encyclopedia.com. Retrieved 11 January 2020.
  6. "Philosophy of Taoism". Highbrow. 2 May 2015. Retrieved 11 January 2020.