ಚರ್ಮ ಗಂಟು ರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚರ್ಮ ಗಂಟು ರೋಗದಿಂದ ಬಳಲುತ್ತಿರುವ ಕರು

ಚರ್ಮ ಗಂಟು ರೋಗ ದನ ಎಮ್ಮೆ ಎತ್ತುಗಳಲ್ಲಿ ಕಂಡುಬರುವ, ವೈರಸ್‌ನಿಂದ ಹರಡುವ ಖಾಯಿಲೆ. ಫಾಕ್ಸ್‌ವೈರಿಡೆ ಕುಟುಂಬಕ್ಕೆ ಸೇರಿದ, ಕ್ಯಾಪ್ರಿಫಾಕ್ಸ್ ವೈರಸ್ ಕುಲದ ಲಂಪಿ ಸ್ಕಿನ್ ಡಿಸೀಸ್ ವೈರಸ್‌ನಿಂದ ಈ ಖಾಯಿಲೆ ಹರಡುತ್ತದೆ. ದೇಹದ ಬಹುತೇಕ ಭಾಗಗಳಲ್ಲಿ ಕಂಡುಬರುವ ಕೀವು ತುಂಬಿದ ಬಾವು, ಬಾಯಿಯ ಲೋಳೆ ಪೊರೆ, ಮೂಗಿನ ಹೊಳ್ಳೆ ಕೆಚ್ಚಲು ಮತ್ತು ಜನನಾಂಗದ ಹತ್ತಿರ ಹುಣ್ಣು- ಇವು ಮೇಲ್ನೋಟಕ್ಕೆ ಕಂಡುಬರುವ ಖಾಯಿಲೆಯ ಲಕ್ಷಣಗಳು[೧].

ವಿಶ್ವದಲ್ಲಿ ಮೊದಲಿಗೆ ಅಫ್ರಿಕಾದ ದಕ್ಷಿಣ ಪ್ರಾಂತ್ಯ ಮತ್ತು ಮಡಗಾಸ್ಕರ್‌ನಲ್ಲಿ ೧೯೨೯ರ ಸುಮಾರಿಗೆ ಈ ವೈರಸ್‌ನ ಇರುವಿಕೆಯನ್ನು ಪತ್ತೆ ಹಚ್ಚಲಾಯಿತು[೨].

ವೈರಸ್[ಬದಲಾಯಿಸಿ]

ಚರ್ಮ ಗಂಟು ರೋಗಕ್ಕೆ ಕಾರಣವಾದ ಲಂಪಿ ಸ್ಕಿನ್ ಡಿಸೀಸ್ ವೈರಸ್ ಫಾಕ್ಸ್‌ವೈರಿಡೆ ಕುಟುಂಬದ, ಕ್ಯಾಪ್ರಿಫಾಕ್ಸ್ ಕುಲದ ಸದಸ್ಯ. ಈ ಕ್ಯಾಪ್ರಿಫಾಕ್ಸ್, ಕೊರ್ಡೋಪಾಕ್ಸ್‌ವೈರಸ್ (ChPV) ಉಪಕುಟುಂಬದೊಳಗಿನ ಎಂಟು ಕುಲಗಳಲ್ಲಿ ಒಂದು. ಕುರಿ ಮತ್ತು ಮೇಕೆಗಳಿಗೆ ರೋಗ ತರುವ ವೈರಸ್‌ಗಳಾದ ಶೀಪ್‌ಫಾಕ್ಸ್ ವೈರಸ್ ಮತ್ತು ಗೋಟ್‌ಫಾಕ್ಸ್ ವೈರಸ್‌ಗಳೂ ಸಹ ಕ್ಯಾಪ್ರಿಫಾಕ್ಸ್ ಕುಲಕ್ಕೆ ಸೇರಿದವುಗಳಾಗಿವೆ.

ಫಾಕ್ಸ್‌ವೈರಿಡೆ ಕುಟುಂಬದ ಇತರ ವೈರಸ್‌ಗಳಂತೆ ಕ್ಯಾಪ್ರಿಪಾಕ್ಸ್‌ವೈರಸ್‌ಗಳು ಸಹ ಇಟ್ಟಿಗೆಯ ಆಕಾರದಲ್ಲಿರುತ್ತವೆ.

ಖಾಯಿಲೆಯ ಇತಿಹಾಸ[ಬದಲಾಯಿಸಿ]

ಮೊದಲ ಬಾರಿಗೆ ೧೯೨೯ರ ಸುಮಾರಿಗೆ ಅಫ್ರಿಕಾ ಖಂಡದ ಜಾಂಬಿಯಾದಲ್ಲಿ ಚರ್ಮ ಗಂಟು ರೋಗ ಸಾಂಕ್ರಾಮಿಕ ರೂಪದಲ್ಲಿ ಬೃಹತ್ಪ್ರಮಾಣದಲ್ಲಿ ಕಂಡುಬಂದಿತು. ಆರಂಭದಲ್ಲಿ, ಇದು ವಿಷಜಂತು ಅಥವಾ ವಿಷದ ಕೀಟದ ಕಡಿತದ ಪರಿಣಾಮದಿಂದ ಈ ರೀತಿಯ ದದ್ದುಗಳು ಕಾಣಿಸಿರಬಹುದು ಎಂದು ಭಾವಿಸಲಾಗಿತ್ತು. 1943-1945 ರ ನಡುವೆ ಬೋಟ್ಸ್ವಾನಾ, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ಗಣರಾಜ್ಯದಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿತು. ಸರಿಸುಮಾರು, 1949ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 8 ಮಿಲಿಯನ್ ಜಾನುವಾರುಗಳು ಈ ಸೋಂಕಿಗೆ ಬಲಿಯಾದವು. ಇದು ಆ ದೇಶದಲ್ಲಿ ಅಗಾಧವಾದ ಆರ್ಥಿಕ ನಷ್ಟವನ್ನು ಉಂಟುಮಾಡಿತು. 1950 ಮತ್ತು 1980 ರ ನಡುವೆ ಆಫ್ರಿಕಾದಾದ್ಯಂತ- ಕೀನ್ಯಾ, ಸುಡಾನ್, ತಾಂಜಾನಿಯಾ, ಸೊಮಾಲಿಯಾ ಮತ್ತು ಕ್ಯಾಮರೂನ್‌ನಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿತು ಮತ್ತು ಮತ್ತು ಅಲ್ಲಿನ ಕೃಷಿ ಆಧಾರಿತ ಜನಜೀವನದ ಮೇಲೆ ತೀವ್ರತರವಾದ ದುಷ್ಪರಿಣಾಮವನ್ನು ಉಂಟು ಮಾಡಿತು.

ಅಫ್ರಿಕಾ ದೇಶಗಳ ಹೊರಗೆ ಮೊದಲ ಬಾರಿಗೆ ಈ ಪ್ರಾಣಿ ಸಾಂಕ್ರಾಮಿಕ ಹರಡಿದ್ದು 1989ರಲ್ಲಿ ಇಸ್ರೇಲ್ ದೇಶದಲ್ಲಿ. ಲಂಪಿ ಸ್ಕಿನ್ ಡಿಸೀಸ್ ವೈರಸ್ ಗಾಳಿಯ ಮುಖಾಂತರ ಈಜಿಪ್ಟ್‌ನ ಇಸ್ಮಾಯಿಲಿಯಾದಿಂದ ಇಸ್ರೇಲ್ ತುಂಬೆಲ್ಲ ಹರಡಿಕೊಂಡಿತು ಎಂದು ಭಾವಿಸಲಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ 1989 ರ ನಡುವಿನ 37 ದಿನಗಳ ಅವಧಿಯಲ್ಲಿ ಇಸ್ರೇಲ್‌ನ ಪಟ್ಟಣವಾದ ಪೆಡುಯಿಮ್‌ನಲ್ಲಿರುವ ಹದಿನೇಳು ಡೈರಿ ಹಿಂಡುಗಳಲ್ಲಿ ಹದಿನಾಲ್ಕು LSD ಸೋಂಕಿಗೆ ಒಳಗಾದವು. ಈ ವೈರಸ್ ಪ್ರಸರಣೆಯನ್ನು ತಡೆಗಟ್ಟುವ ಸಲುವಾಗಿ ಗ್ರಾಮದ ಎಲ್ಲಾ ಜಾನುವಾರುಗಳು ಹಾಗೂ ಕುರಿ ಮತ್ತು ಮೇಕೆಗಳ ಸಣ್ಣ ಹಿಂಡುಗಳನ್ನು ಹತ್ಯೆ ಮಾಡಲಾಯಿತು.

ಗುಣಲಕ್ಷಣಗಳು ಮತ್ತು ಹರಡುವಿಕೆ[ಬದಲಾಯಿಸಿ]

ಚರ್ಮ ಗಂಟು ರೋಗ ಸಾಮಾನ್ಯವಾಗಿ ದನ ಎತ್ತು ಎಮ್ಮೆ ಮುಂತಾದ ರಾಸುಗಳಲ್ಲಿ ಕಂಡುಬರುತ್ತದೆ. ಅಲ್ಲದೆ ಜಿರಾಫೆ ಮತ್ತು ಇಂಪಾಲ(ಕೃಷ್ಣಮೃಗವನ್ನು ಹೋಲುವ ಪ್ರಾಣಿ)ಗಳನ್ನೂ ಬಾಧಿಸುತ್ತದೆ. ಆದರೆ ಖಾಯಿಲೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಎಮ್ಮೆಗಳಿಗಿಂತ ದನಗಳಲ್ಲಿ ಈ ರೋಗ ತೀವ್ರವಾಗಿ ವರ್ತಿಸುತ್ತದೆ. ವಿದೇಶದ ತಳಿಗಳಲ್ಲಿ ತೆಳುವಾದ ಮೃದು ಚರ್ಮದ ಜಾನುವಾರುಗಳಾದ ಹೋಲ್‌ಸ್ಟೈನ್-ಫ್ರೀಸಿಯನ್ ಮತ್ತು ಜರ್ಸಿ ತಳಿಯ ದನಗಳು ಈ ರೋಗಕ್ಕೆ ಹೆಚ್ಚು ಒಳಗಾಗುತ್ತವೆ. ಆಫ್ರಿಕಾನರ್(ಆಫ್ರಿಕಾದ ಒಂದು ತಳಿ) ಮತ್ತು ಆಫ್ರಿಕಾನರ್ ಮಿಶ್ರತಳಿಗಳು ಸೇರಿದಂತೆ ದಪ್ಪ ಚರ್ಮದ ರಾಸುಗಳು ಕಡಿಮೆ ತೀವ್ರತೆಯುಳ್ಳ ರೋಗಲಕ್ಷಣಗಳನ್ನು ತೋರಿಸುತ್ತವೆ. ಗರಿಷ್ಠ ಹಾಲುಣಿಸುವ ಸಮಯದಲ್ಲಿ ಯುವ ಕರುಗಳು ಮತ್ತು ಹಸುಗಳು ಹೆಚ್ಚು ತೀವ್ರವಾದ ಕ್ಲಿನಿಕಲ್ ರೋಗಲಕ್ಷಣಗಳನ್ನು ತೋರಿಸುತ್ತವೆ, ಆದರೆ ಎಲ್ಲಾ ವಯಸ್ಸಿನ-ಗುಂಪುಗಳು ರೋಗಕ್ಕೆ ಒಳಗಾಗುತ್ತವೆ.

ಚರ್ಮ ಗಂಟು ರೋಗದ ಕೆಲವು ಮುಖ್ಯ ಲಕ್ಷಣಗಳು[ಬದಲಾಯಿಸಿ]

  • ಅತಿಯಾದ ಜ್ವರ, ಜ್ವರ ಪ್ರಾರಂಭವಾದ ೪೮ ಗಂಟೆಗಳಲ್ಲಿ ದೇಹದ ಬಹುತೇಕ ಭಾಗಗಳಲ್ಲಿ ೧ರಿಂದ ೨ ಸೆಂ.ಮೀ ಗಾತ್ರದ ಗಂತಿ ಅಥವಾ ದದ್ದುಗಳೇಳುತ್ತವೆ. ಗಂತಿಗಳು ಕ್ರಮೇಣ ಒಡೆದು ಕೀವು ಉಂಟಾಗುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ಮಾಡದಿದ್ದರೆ, ಒಡೆದ ಗುಳ್ಳೆಯಲ್ಲಿ ನೊಣಗಳು ಕೂತು ಹುಳ ಆಗಲೂಬಹುದು. ಸಣ್ಣಗಂಟುಗಳು ಕ್ರಮೇಣ ತನ್ನಿಂತಾನೆ ಗುಣವಾಗುತ್ತವೆ.
  • ಹಸುಗಳಲ್ಲಿ ಗರ್ಭಪಾತವಾಗಬಹುದು. ಗೂಳಿಗಳು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಬಂಜೆತನ ಉಂಟಾಗಬಹುದು.
  • ಕೀಲುಗಳಲ್ಲಿ ಬಾವು ಮತ್ತು ಊತ. ಬಾವಿನಿಂದಾಗಿ ಹಸು ೨೪-೪೮ ಗಂಟೆಗಳವರೆಗೆ ಮಲಗಲು ಸಾಧ್ಯವಾಗುವುದಿಲ್ಲ.

ರೋಗದ ಪಸರಿಕೆ[ಬದಲಾಯಿಸಿ]

ಹೆಚ್ಚಿನ ತಾಪಮಾನ ಮತ್ತು ಹೆಚ್ಚಿನ ಆರ್ದ್ರತೆಯ ಕಾಲದಲ್ಲಿ ಅಂದರೆ ಮಳೆಗಾಲ ಮತ್ತು ಬೇಸಿಗೆಯಲ್ಲಿ ಈ ರೋಗ ಹೆಚ್ಚಾಗಿ ಹರಡುವುದನ್ನು ಕಾಣಬಹುದು. ಭಾರತದಲ್ಲಿ ಮೊತ್ತಮೊದಲ ಬಾರಿಗೆ ಒಡಿಶಾ ರಾಜ್ಯದಲ್ಲಿ ೨೦೧೯ರ ಅಗಷ್ಟ್‌ನಲ್ಲಿ ಈ ರೋಗ ಹರಡಿತು. ತಗ್ಗು ಪ್ರದೇಶಗಳಲ್ಲಿ ಅಥವಾ ನೀರಿನ ಸಮೀಪವಿರುವ ಪ್ರದೇಶಗಳಲ್ಲಿ ಮಾತ್ರವಲ್ಲ ಶುಷ್ಕ ಋತುವಿನಲ್ಲಿಯೂ ಚರ್ಮ ಗಂಟು ರೋಗ ಹರಡಬಹುದು. ಸೊಳ್ಳೆ, ಉಣ್ಣಿ, ನೊಣಗಳು ಈ ರೋಗದ ಮುಖ್ಯ ಪ್ರಸಾರ ಮಾಧ್ಯಮಗಳಾಗಿವೆ.

ರೋಗ ನಿದಾನ ಮತ್ತು ಮದ್ದು[ಬದಲಾಯಿಸಿ]

ರೋಗ ಪತ್ತೆ[ಬದಲಾಯಿಸಿ]

ದೈಹಿಕವಾಗಿ ಮೇಲ್ನೋಟಕ್ಕೆ ಕಂಡುಬರುವ ಗುಣಲಕ್ಷಣಗಳ ಆಧಾರದ ಮೇಲೆ ಚರ್ಮಗಂಟು ರೋಗವನ್ನು ಅಂದಾಜಿಸಬಹುದು[೩]. ಚರ್ಮಗಂಟು ರೋಗವು ಉಗ್ರ ಸ್ವರೂಪದಲ್ಲಿ ಇದ್ದಾಗ ಕಂಡುಬರುವ ಚರ್ಮದ ಗಂಟುಗಳು, ಜ್ವರ ಮತ್ತು ಬಾಹ್ಯ ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆ- ಇವುಗಳ ಮೂಲಕ ಚರ್ಮಗಂಟು ರೋಗ ಬಂದಿದೆ ಎಂದು ಹೇಳಬಹುದು. ಸೌಮ್ಯ ಸ್ವರೂಪದ ಅಥವಾ ಆರಂಭಿಕ ಹಂತದ ಸೋಕುಗಳನ್ನು ಪತ್ತೆಮಾಡಲು ಪಾಲಿಮರೈಸ್ಡ್ ಚೈನ್ ರಿಯಾಕ್ಷನ್ (ಪಿಸಿಆರ್) ಪರೀಕ್ಷೆಯನ್ನು ಮಾಡುವಂತೆ ಪಶುವೈದ್ಯರು ಸಲಹೆ ನೀಡಬಹುದು. ಇನ್ನು ದೇಹದ ಗಂಟಿನ ಮಾದರಿ(ಬಯಾಪ್ಸಿ)ಯನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳಿಸಿ ರೋಗದ ಕಾರಣ ಮತ್ತು ಪರಿಹಾರಗಳನ್ನು ಪತ್ತೆ ಹಚ್ಚಲಾಗುತ್ತದೆ[೪].

ಲಸಿಕೆ ಮತ್ತು ಪರಿಹಾರ[ಬದಲಾಯಿಸಿ]

ಸಧ್ಯಕ್ಕೆ ಚರ್ಮಗಂಟು ರೋಗಕ್ಕೆ ನಿಖರವಾದ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಆದರೆ ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆಯನ್ನು ಪಶುವೈದ್ಯರು ನೀಡುತ್ತಾರೆ[೫]. ಭಾರತದಲ್ಲಿ ಮೇಕೆಸಿಡುಬಿಗೆ ನೀಡುವ ಲಸಿಕೆಯನ್ನೇ ಚರ್ಮಗಂಟು ರೋಗದ ನಿವಾರಣೆಗೆ ನೀಡಲಾಗುತ್ತಿದೆ[೬]. ವಿಪರೀತ ಜ್ವರವಿದ್ದಾಗ ಜ್ವರದ ಮಾತ್ರೆ ಮತ್ತು ಒದ್ದೆ ಬಟ್ಟೆಯನ್ನು ರೋಗಪೀಡಿತ ಹಸುವಿನ ಮೇಲೆ ಹೊದೆಸಲಾಗುತ್ತದೆ. ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕಿಸಿ ಗಂತಿನ ಗಾಯವನ್ನು ಪೊಟ್ಯಾಸಿಯಮ್ ಪರ್ಮಾಂಗನೆಟ್ ದ್ರಾವಣದಲ್ಲಿ ತೊಳೆದು ಬೇವಿನ ಎಣ್ಣೆಯನ್ನು ಹಚ್ಚುವ ಮೂಲಕ ಗಾಯದ ನಂಜನ್ನು ನಿವಾರಿಸಬಹುದು. ಜಾನುವಾರು ವಾಸಿಸುವ ಸ್ಥಳದಲ್ಲಿ ಸ್ವಚ್ಚತೆಯನ್ನು ಕಾಯ್ದುಕೊಂಡು ಅಗತ್ಯ ಬಿದ್ದಾಗ ಬೇವಿನ ಸೊಪ್ಪಿನ ಹೊಗೆಯನ್ನು ಹಾಕುವ ಮೂಲಕ ಸೊಳ್ಳೆ, ನೊಣ ಮತ್ತಿತರ ಕೀಟಗಳನ್ನು ದೂರವಿಡಬಹುದು.

ಭಾರತದಲ್ಲಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಚರ್ಮ ಗಂಟು ರೋಗದ ಬಗ್ಗೆ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳು" (PDF). ahvs.karnataka.gov.in. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಟಕ ಸರ್ಕಾರ. Retrieved 8 November 2022.
  2. "Lumpy Skin Disease Virus". sciencedirect.com. Elsevier. Retrieved 8 November 2022.
  3. "Epidemiology and diagnostic methods of lumpy skin disease: A Short Review". peertechzpublications.com. Peertechz. Archived from the original on 20 ನವೆಂಬರ್ 2022. Retrieved 20 November 2022.
  4. "ಚರ್ಮ ಗಂಟು ರೋಗದ ಬಗ್ಗೆ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳು" (PDF). ahvs.karnataka.gov.in. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಟಕ ಸರ್ಕಾರ. Retrieved 8 November 2022.
  5. "ರಾಸುಗಳಿಗೆ ಚರ್ಮಗಂಟು ರೋಗ ತಡೆಗಟ್ಟುವುದು ಹೇಗೆ ?". udayavani.com. Manipal Media Network Ltd. Retrieved 20 November 2022.
  6. "ಚರ್ಮ ಗಂಟು ರೋಗದ ಬಗ್ಗೆ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳು" (PDF). ahvs.karnataka.gov.in. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಟಕ ಸರ್ಕಾರ. Retrieved 8 November 2022.