ವಿಷಯಕ್ಕೆ ಹೋಗು

ಚರ್ಚೆಪುಟ:ಕನ್ನಡ ಸಾಹಿತ್ಯ ಪರಿಷತ್ತು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಷತ್ತು ಈ ಕಾಲಕ್ಕೆ ಏನು ಮಾಡಬೇಕು[ಬದಲಾಯಿಸಿ]

  • ನಮ್ಮಲ್ಲಿ ಪ್ರತಿಯೊಂದು ಸಂಸ್ಥೆಯೂ ಬಹು ಬೇಗ ಜಡವಾಗಿ ಹೋಗುವಂತೆ ಈ ಸಂಸ್ಥೆಯೂ ತೀರ ಜಡವಾಗಿ ಯಾಂತ್ರಿಕವಾಗಿ ಈವರೆಗೆ ಮಾಡಿಕೊಂಡು ಬಂದದ್ದನ್ನೇ ಮಾಡುತ್ತ ಹೋಗುತ್ತಿದೆ. ಇದನ್ನು ನಿವಾರಿಸುವ ದಾರಿ ಯಾವುದು ಎಂದು ನಾವೆಲ್ಲರೂ ಯೋಚಿಸಬೇಕು? ಸಾಹಿತ್ಯ ಕೃತಿಗಳಿಗೆ ಸಂಬಂಧಪಟ್ಟ ವಿಮರ್ಶೆ ಮೌಲ್ಯ ನಿರ್ಣಯ ಮುಂತಾದುವುಗಳಿಗಾಗಿಯೇ ಫ್ರೆಂಚ್ ಅಕಾಡೆಮಿಯ ರೀತಿಯ ಅತ್ಯುಚ್ಚ ಧೀಮಂತರ ಒಂದು ವಿಶಿಷ್ಟ ಸಂಸ್ಥೆಯನ್ನು ಸಾಹಿತ್ಯ ಪರಿಷತ್ತು ಸ್ಥಾಪಿಸಿ ಅದನ್ನು ಸ್ವತಂತ್ರವಾದ ಒಂದು ಸಣ್ಣ ಘಟಕವನ್ನಾಗಿ ನಡಸಿಕೊಂಡು ಬರುವುದು ಸಾಧ್ಯವಾದೀತೇ ಎಂದು ಪರೀಕ್ಷಿಸಿ ನೋಡಬೇಕು. ಇದು ತೀರ ದೊಡ್ಡ ಸಂಘವಾಗದೆ ಇಡೀ ಕರ್ನಾಟಕದಲ್ಲಿ ಅತ್ಯುತ್ತಮ ಧೀಮಂತರಾದ ಹತ್ತು ಹದಿನೈದು ಮಂದಿ ನಿಷ್ಪಕ್ಷಪಾತ ವಿದ್ವಾಂಸರಿಗೆ ಆ ಕೆಲಸವನ್ನು ಒಪ್ಪಿಸಬಹುದು ಎಂದು ನನ್ನ ಸೂಚನೆ. ಆ ವಿದ್ವಾಂಸ ಮಂಡಳಿಯಲ್ಲಿ ಸಾಹಿತಿಗಳೇ ಇರಬೇಕಾದ ಅಗತ್ಯವಿಲ್ಲ. ಇತರ ಕಲೆಗಳು ಶಾಸ್ತ್ರಗಳ ವಿಜ್ಞಾನಗಳ ಪರಿಣತರೂ ಇರಬಹುದು. ಶ್ರೇಷ್ಠತೆಯ ಪ್ರಶ್ನೆ, ತತ್ವದ ಪ್ರಶ್ನೆ, ಮೌಲ್ಯಮಾಪನದ ಪ್ರಶ್ನೆ ಬಂದಾಗ ಆ ಪ್ರಶ್ನೆಗಳು ಈ ಸ್ವತಂತ್ರ ಧೀಮಂತ ಮಂಡಳಿಗೆ ಒಪ್ಪಿಸಿ ಅದರ ತೀರ್ಮಾನವನ್ನು ಎಲ್ಲರೂ ಗೌರವಿಸಬಹುದು.
  • ಶ್ರೇಷ್ಠ ಕೃತಿಗಳ ಪ್ರಕಟನೆ -: ಪ್ರಜಾತಂತ್ರದ ಸಂದರ್ಭದಲ್ಲಿ ಇಂಥ ಒಂದು ಮಂಡಳಿ ಅತ್ಯಗತ್ಯ ಎಂದು ನನಗೆ ತೋರುತ್ತದೆ. ಆಗ ಪರಿಷತ್ತು ತನ್ನ ಈ ಪ್ರಜಾತಂತ್ರದ ಚೌಕಟ್ಟಿನಲ್ಲೇ ಸಾರ್ವಜನಿಕ ಶಿಕ್ಷಣದ ಕೆಲಸವನ್ನೂ ಇನ್ನೂ ಯಾರೂ ಪ್ರಕಟಿಸಲು ಮುಂದೆ ಬಾರದೆ ಇರಬಹುದಾದ ಆದರೆ ಅತ್ಯಂತ ಶ್ರೇಷ್ಠವಾದ ಕೃತಿಗಳನ್ನು ಪ್ರಕಟಿಸುವುದು, ಸಾಹಿತ್ಯಾಭ್ಯಾಸಕ್ಕೆ ಅಗತ್ಯವಾದ ನಿಘಂಟು ಮುಂತಾದ ಸಹಾಯಕ ಪ್ರೌಢ ಗ್ರಂಥಗಳನ್ನು ಪ್ರಕಟಿಸುವುದು, ಒಂದು ವರ್ಷದಲ್ಲಿ ಪ್ರಕಟವಾದ ಅತ್ಯುತ್ತಮ ಕವನಗಳನ್ನೋ ಕಥೆಗಳನ್ನೋ ಪ್ರಬಂಧಗಳನ್ನೋ ಪುಸ್ತಕ ರೂಪದಲ್ಲಿ ಪ್ರಕಟಿಸುವುದು ಮುಂತಾದ ಕೆಲಸಗಳನ್ನು ಮಾಡಬಹುದು. ಪ್ರಕಟಿಸುವಾಗ ಅತ್ಯುತ್ತಮವಾದವುಗಳನ್ನೇ ಆರಿಸಲು ತಕ್ಕ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
  • ಗದ್ಯಾನುವಾದಗಳು ಬೇಡ-:ಹಳೆಗನ್ನಡ ಕಾವ್ಯಗಳ ಗದ್ಯಾನುವಾದಗಳನ್ನು ಪ್ರಕಟಿಸುವ ಒಂದು ಯೋಜನೆಯನ್ನು ಪರಿಷತ್ತು ಇನ್ನೂ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಯಾವ ಕಾವ್ಯವನ್ನೇ ಆಗಲಿ ಅದನ್ನು ಕಾವ್ಯರೂಪದಲ್ಲೇ ಓದಬೇಕಲ್ಲದೆ ಅದರ ಗದ್ಯ ರೂಪವನ್ನು ಸಿದ್ಧಪಡಿಸಿದರೆ ಕವಿಗೆ ಭಾರೀ ಅಪಚಾರ ಮಾಡಿದಂತೆ. ನಮ್ಮ ವಿದ್ಯಾರ್ಥಿಗಳನೇಕರು ಕವನವನ್ನು ಓದದೆ ಅವುಗಳ ಸಾರಾಂಶವನ್ನೇ ಗೈಡುಗಳಲ್ಲಿ ಕೊಟ್ಟಿರುವ ಗದ್ಯ ಭಾಷಾಂತರಗಳನ್ನೇ ಓದಿ ಕಾವ್ಯದಿಂದ ಸಿಕ್ಕುವ ಸಂಸ್ಕಾರಕ್ಕೆ ಬಾಹಿರವಾಗುತ್ತ ಬರುತ್ತಿದ್ದಾರೆ. ಈ ರೋಗವನ್ನು ಇನ್ನಷ್ಟು ಸಾರ್ವಜನಿಕವಾಗಿ ಮಾಡುವ ಈ ಪ್ರಯತ್ನ ಅತ್ಯಂತ ಹಾಸ್ಯಾಸ್ಪದವಾದುದಾದರೂ ನಮ್ಮ ಇಂದಿನ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನನಗೆ ಅಳು ಬರುವಂತೆ ಮಾಡುತ್ತಿದೆ. ಕಾವ್ಯದ ಅಭ್ಯಾಸಕ್ಕೆ ಬೇಕಾದ ಕಠಿಣ ಪದಗಳ ಅರ್ಥ, ವಿಶೇಷ ಸಂದರ್ಭಗಳ ವಿವರ, ಟೀಕೆ ಟಿಪ್ಪಣಿ ಇವು ನಮ್ಮ ಕಾವ್ಯಗಳಿಗೆ ಅಗತ್ಯವಾಗಬಹುದು. ಆದರೆ ಗದ್ಯಾನುವಾದ ಖಂಡಿತ ಅಲ್ಲ. ಇಂದೂ ಕೂಡ ನಮ್ಮ ಜನ ಪಂಪನನ್ನು ನಾರಣಪ್ಪನನ್ನೂ ಓದಬೇಕು, ಸರಿಯಾಗಿ ಲಯ ಹಿಡಿದು ಓದುವುದಕ್ಕೆ ಕಲಿಯಬೇಕು ಅದರಿಂದಲೇ ನಮ್ಮ ಜನದಲ್ಲಿ ಕಾವ್ಯಾಭಿರುಚಿ ಹುಟ್ಟುವುದು ಸಾಧ್ಯ. ಆ ಬಗ್ಗೆ ಪರಿಷತ್ತು ತಕ್ಕ ಏರ್ಪಾಟು ಮಾಡಲಿ. ಆದರೆ ನಾನು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ ಇಂಥ ಗದ್ಯಾನುವಾದಗಳನ್ನು ಸಾಹಿತ್ಯ ಪರಿಷತ್ತು ಖಂಡಿತವಾಗಿ ಪ್ರಕಟಿಸಬಾರದು. ಕಾವ್ಯದ ಅನುಭವದಲ್ಲಿ ಅರ್ಥದಲ್ಲಿ ಕೊನೆಯ ಪಕ್ಷ ಅರ್ಧದಷ್ಟನ್ನಾದರೂ ಅದರ ಲಯವೇ ಪದಸಮ್ಮಿಳನದ ನಾದವೇ ಹುಟ್ಟಿಸುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಸಾಹಿತ್ಯ ಪರಿಷತ್ತು ಖಂಡಿತವಾಗಿಯೂ ಮರೆಯಬಾರದು. (ಇವು ಸಾಹಿತಿ ಎಂ.ಗೋಪಾಲಕೃಷ್ಣ ಅಡಿಗರ ಅಮೂಲ್ಯ ಸಲಹೆಗಳು) ಪರಿಷತ್ತು ಅಂತರಜಾಲ ಬಳಸಿಕೊಂಡು ಈ ಕೆಲಸ ಮಾಡಲಿ: ಕೇವಲ ನಾಲ್ಕೈದು ಕೋಟಿ ಖರ್ಚಿನ ಸಮ್ಮೇಳನದಿಂದ ಏನು ಪ್ರಯೋಜನ?? Bschandrasgr (ಚರ್ಚೆ) ೧೬:೦೫, ೧೫ ಜೂನ್ ೨೦೧೮ (UTC)
ಈ ಚರ್ಚೆ ಈ ಪುಟದಲ್ಲಿ ನಡೆಸಿ ಏನು ಪ್ರಯೋಜನ? ಈ ಚರ್ಚಾಪುಟವಿರುವುದು ಈ ಲೇಖನದ ಬಗೆಗೆ ಚರ್ಚಿಸಲೇ ವಿನಾ ಕಸಾಪ ಬಗ್ಗೆ ಚರ್ಚಿಸಲು ಅಲ್ಲ--ಪವನಜ (ಚರ್ಚೆ) ೧೭:೦೮, ೧೫ ಜೂನ್ ೨೦೧೮ (UTC)
  • ಖಂಡಿತ ನಿಜ! ಇದನ್ನು ಈ ಪುಟದ ಲೇಖನದಲ್ಲಿ ಸೇರಿಸಲು ಬರುವುದಿಲ್ಲ; ಬದಲಿಗೆ ಓದುಗರಿಗೆ ಪರಿಷತ್ತಿನಲ್ಲಿ ಏನಾಗಬೇಕೆಂದು ತಿಳಿಯಲಿ ಎಂಬ ಬಯಕೆಯಿಂದ ಹಾಕಿದೆ. ಬೇರೆ ಎಲ್ಲೂ ಖಾಯಂ ಆಗಿ ತಿಳಿಸುವ ಅವಕಾಶವಿಲ್ಲ. ಅವರು ತಮ್ಮ ವೆಬ್ ನಲ್ಲಿ ಹಾಕಿದ ಎರಡು ಮೂರು ಹಿಂದಿನ ಕಾವ್ಯಗಳನ್ನು ಅಳಿಸಿದ್ದಾರೆ. ಅನಗತ್ಯವೆನಿಸಿದರೆ ತೆಗೆಯಬಹುದು. Bschandrasgr (ಚರ್ಚೆ) ೧೭:೨೬, ೧೫ ಜೂನ್ ೨೦೧೮ (UTC)