ವಿಷಯಕ್ಕೆ ಹೋಗು

ಘಾಜ಼ಿ ಉದ್-ದೀನ್ ಇಮಾದ್-ಉಲ್-ಮುಲ್ಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಮಾದ್-ಉಲ್-ಮುಲ್ಕ್‌ನ ಭಾವಚಿತ್ರ

ಘಾಜ಼ಿ ಉದ್-ದೀನ್ ಇಮಾದ್-ಉಲ್-ಮುಲ್ಕ್ ಮೊಗಲ್ ಚಕ್ರವರ್ತಿ ಔರಂಗಜೇಬನ ಮರಣಾನಂತರ ದೆಹಲಿಯ ಚಕ್ರವರ್ತಿ ನಿರ್ಮಾಪಕರಾಗಿದ್ದವರಲ್ಲಿ ಒಬ್ಬ.

ಹೈದರಾಬಾದಿನ ಪ್ರಥಮ ನಿಜಾಮನ ಹಿರಿಯ ಮಗನ ಮಗ.[] ಇವನ ತಂದೆ ವಿಷಪ್ರಯೋಗದಿಂದ ಕೊಲೆಗೆ ಈಡಾದಾಗ (1752) ಘಾಜೀ-ಉದ್-ದೀನ್ ಇಮಾದ್-ಉಲ್-ಮುಲ್ಕ್ ದೆಹಲಿಯಲ್ಲಿದ್ದ. ಅಲ್ಲಿಯ ಸಫ್ದರ್ ಜಂಗ್ ಎಂಬ ಆಸ್ಥಾನಿಕನೊಬ್ಬನ ಪ್ರಭಾವವನ್ನು ಬಳಸಿಕೊಂಡು ಮಹಾವೇತನಾಧಿಕಾರಿಯ ಹುದ್ದೆ ಗಳಿಸಿಕೊಂಡ. ತನಗೆ ಅಧಿಕಾರ ದೊರಕಿಸಿಕೊಟ್ಟ ಸಫ್ದರ್ ಜಂಗನಿಗೇ ಈತ ಕೃತಘ್ನನಾಗಿ[]: 154  ಮರಾಠರನ್ನು ಬರ ಮಾಡಿಕೊಂಡು ಅವರ ನೆರವಿನಿಂದ ತಾನೇ ವಜೀರನಾಗಿ ದೆಹಲಿಯ ಚಕ್ರವರ್ತಿ ಅಹಮದ್ ಷಾನನ್ನು ಸಿಂಹಾಸನದಿಂದ ಉರುಳಿಸಿ ಅವನ ಕಣ್ಣು ಕೀಳಿಸಿದ (1754).[][]: 156  ಆ ವೇಳೆಗೆ ದೆಹಲಿಯ ಸಿಂಹಾಸನದ ಅಧೀನದಲ್ಲಿದ್ದ ರಾಜ್ಯವೆಂದರೆ ಅದರ ಸುತ್ತಮುತ್ತಣ ಪ್ರದೇಶ ಮಾತ್ರ. ಘಾಜೀ-ಉದ್-ದೀನ್ ಚತುರನೇನೂ ಅಲ್ಲ. ಆದರೆ ಮಹತ್ತ್ವಾಕಾಂಕ್ಷಿ. ತನಗೆ ಹಿಂದೆ ಚಕ್ರವರ್ತಿ ನಿರ್ಮಾಪಕರಾಗಿ ಅಧಿಕಾರ ಬದಲಾಯಿಸುತ್ತಿದ್ದ ಸಯ್ಯಿದ್ ಸೋದರರಂತೆ ತಾನೂ ಆಗಬೇಕೆಂದು ಅವನು ಬಯಸಿದ. ಜಹಾಂದಾರ್ ಷಾನ ಮಗನಾದ ಅಜೀಜ್-ಉದ್-ದೀನ್‌ನನ್ನು ದೀರ್ಘಕಾಲದ ಬಂಧನದಿಂದ ಬಿಡುಗಡೆಗೊಳಿಸಿ, ಸಿಂಹಾಸನದ ಮೇಲೆ ಕೂರಿಸಿದ. ತಾನೂ ಔರಂಗ್‍ಜೇಬನಂತೆಂದು ಆತನ ಭ್ರಮೆ. ಆತ ತನ್ನನ್ನು 2ನೆಯ ಆಲಂಗೀರ್ ಎಂದು ಕರೆದುಕೊಂಡ. ಬಹು ಬೇಗ ಆ ಚಕ್ರವರ್ತಿಯ ಭ್ರಮೆ ಕರಗಿಹೋಯಿತು. ಸಿಂಹಾಸನದ ಮೇಲೆ ಕುಳಿತರೂ ಬಂಧಿಯಾಗಿಯೇ ಮುಂದುವರಿದ ಆತ ಸ್ವತಂತ್ರವಾಗಿ ವರ್ತಿಸಲು ಯತ್ನಿಸಿದಾಗ ಘಾಜೀ-ಉದ್-ದೀನನ ಕ್ರೂರದೃಷ್ಟಿ ಅವನ ಮೇಲೆ ಬಿತ್ತು. ಅವನನ್ನು ಘಾಜೀ-ಉದ್-ದೀನ್ ಕೊಲ್ಲಿಸಿದ (1759). 2ನೆಯ ಆಲಂಗೀರನ ಮಗನೂ,[] ಸಿಂಹಾಸನಕ್ಕೆ ಉತ್ತರಾಧಿಕಾರಿಯೂ ಆಗಿದ್ದ 2ನೆಯ ಷಾ ಆಲಂ ದೇಶಭ್ರಷ್ಟನಾಗಿ ಅಲೆದಾಡುತ್ತ ಇಂಗ್ಲಿಷರ ರಕ್ಷಣೆಯಲ್ಲಿ ಜೀವ ಉಳಿಸಿಕೊಳ್ಳಬೇಕಾಯಿತು.

ಈ ನಡುವೆ ದೆಹಲಿಯ ಮೇಲೆ ಶತ್ರುಗಳು ಪದೇಪದೇ ದಂಡೆತ್ತಿ ಬರುತ್ತಿದ್ದರು. ಘಾಜೀ-ಉದ್-ದೀನ್ ಇವರ ಮುಂದೆ ಏನೂ ಮಾಡಲಾರನಾಗಿದ್ದ. ಆಕ್ರಮಣಕಾರರ ಕೋಟಲೆ ಕಡಿಮೆಯಾದಾಗ ಇವನು ತನ್ನ ಅಧಿಕಾರ ಚಲಾಯಿಸುತ್ತಿದ್ದ. 2ನೆಯ ಆಲಂಗೀರನ ಕೊಲೆಯ ಅನಂತರ ಔರಂಗ್‌ಜೇಬನ ಕಿರಿಯ ಮಗನಾದ ಕಾಂಬಕ್ಷನ ಮೊಮ್ಮಗನಾದ 3ನೆಯ ಷಾಹಜಹಾನನನ್ನು ಸಿಂಹಾಸನದ ಮೇಲೆ ಕೂರಿಸಿದ. ಹಿಂದೆ ಎರಡು ಬಾರಿ ದೆಹಲಿಯ ಮೇಲೆ ದಂಡೆತ್ತಿ ಬಂದಿದ್ದ ಅಹಮದ್ ಷಾ ಅಬ್ದಾಲಿ ಮತ್ತೆ ಬಂದಾಗ ಘಾಜೀ-ಉದ್-ದೀನ್ ಭಯದಿಂದ ಜಾಟ್ ದೊರೆ ಸೂರಜ್ ಮಲ್ಲನ ಆಶ್ರಯ ಪಡೆದ. ಮರಾಠರ ನೆರವಿನಿಂದ ಅಬ್ದಾಲಿಯನ್ನೆದುರಿಸಬೇಕೆಂಬುದು ಅವನ ಇಚ್ಛೆಯಾಗಿತ್ತು. ಆದರೆ 3ನೆಯ ಪಾನಿಪತ್ ಯುದ್ಧದಲ್ಲಿ ಮರಾಠರು ಭಾರಿಯ ಪರಾಭವವನ್ನನುಭವಿಸಿದರು. ಅದಕ್ಕೂ ಮುಂಚೆಯೇ ಘಾಜೀ-ಉದ್-ದೀನ್ ಮರಾಠರನ್ನು ತ್ಯಜಿಸಿ ವಲ್ಲಭಗಢದಲ್ಲಿ ತಲೆಮರೆಸಿಕೊಂಡಿದ್ದ. ಅವನ ಹಂಚಿಕೆಗಳೆಲ್ಲ ಮಣ್ಣುಗೂಡಿದುವು. 1800ರಲ್ಲಿ ಆತ ಸತ್ತ.

ಉಲ್ಲೇಖಗಳು

[ಬದಲಾಯಿಸಿ]
  1. An oriental biographical dictionary: founded on materials collected by the late Thomas William Beale;2nd Edition; Publisher:W.H. Allen, 1894; page 143
  2. ೨.೦ ೨.೧ Dalrymple, William (2019). The Anarchy: The Relentless Rise of the East India Company. Bloomsbury Publishing. ISBN 9781408864371.
  3. François Xavier Wendel (1991). Jean Deloche (ed.). Wendel's Memoirs on the Origin, Growth and Present State of Jat Power in Hindustan (1768). Institut français de Pondichery. p. 124.
  4. Dalrymple, W. (2019),The Anarchy p89, London: Bloomsbury