ಜಾಟರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಜಾಟರು - ಆಗ್ರ ಮತ್ತು ಮಥುರಾ ನಗರಗಳ ಸುತ್ತ ವಾಸಿಸುವ ದೃಢಕಾಯ ಜನ; ಭರತಪುರ ರಾಜ್ಯವನ್ನು ಸ್ಥಾಪಿಸಿದವರು. ರಜಪೂತರಂತೆಯೇ ಇವರೂ ಹೊರಗಿನಿಂದ ಬಂದವರೆಂದು ಹೇಳಲಾಗಿದೆ.

ಇತಿಹಾಸದಲ್ಲಿ[ಬದಲಾಯಿಸಿ]

ಸ್ವತಂತ್ರ ಮನೋವೃತ್ತಿಯ ಇವರು ಔರಂಗ್‍ಜೇಬನ ಕಾಲದಲ್ಲಿ ಆತನ ರಾಜನೀತಿಗೆ ರೋಸಿ ಅವನ ವಿರುದ್ಧ ದಂಗೆ ಎದ್ದರು. 1669ರಲ್ಲಿ, ಶಿವಾಜಿಯ ಪ್ರಾಬಲ್ಯ ಹೆಚ್ಚುತ್ತಿದ್ದಂತೆ, ಜಾಟರೂ ದಂಗೆ ಎದ್ದರು. ಅಕ್ಬರನ ಗೋರಿಯನ್ನು ಹಾಳುಗೆಡವಿ ಅವನ ದೇಹದ ಮೂಳೆಗಳನ್ನು ಹೊರಗೆಳೆದು ಸುಟ್ಟರು. ಇವರ ಕಿರುಕುಳಗಳಿಂದ ಮೊಘಲರ ಆಡಳಿತ ಅಸ್ತವ್ಯಸ್ತಗೊಂಡಿತು. ಇವರನ್ನು ಹತ್ತಿಕ್ಕಲು ಔರಂಗಜೇóಬ ಬಹಳ ಶ್ರಮಿಸಿದ. ಇವರು ಒಂದಾಗಿ, ಚುರುಮನ್ ಸಿಂಗನನ್ನು ತಮ್ಮ ನಾಯಕನಾಗಿ ಆರಿಸಿಕೊಂಡರು. ಈತ ಥುನ್ ಎಂಬಲ್ಲಿ ಕೋಟೆಯೊಂದನ್ನು ಕಟ್ಟಿ, ಸ್ವತಂತ್ರ ರಾಜ್ಯವೊಂದರ ಕನಸನ್ನು ಕಂಡನಾದರೂ 1721ರ ಸುಮಾರಿಗೆ ಈತ ಸೋಲನ್ನನುಭವಿಸಿ ತನ್ನ ಯೋಜನೆಯನ್ನು ಕೈಬಿಟ್ಟ. ಆದರೆ ಈತನ ಸೋದರಳಿಯ ಬದನ್ ಸಿಂಹ ಚದುರಿದ ಜಾಟರನ್ನು ಒಟ್ಟುಗೂಡಿಸಿ ಭರತಪುರ ರಾಜ್ಯವನ್ನು ಸ್ಥಾಪಿಸಿದ (1756). ಇವನ ದತ್ತುಪುತ್ರ ಸೂರಜ್ ಮಲ್ ಈ ಹೊಸ ರಾಜ್ಯಕ್ಕೆ ಆಗ್ರ, ಧೋಲ್ ಪುರ, ಮೈನ್ ಪುರಿ, ಹಥ್ರಸ್, ಅಲೀಗಢ, ಎಟಾವಾ, ಮಥುರಾ ಮತ್ತು ಗುರ್ಗಾವ್ ಜಿಲ್ಲೆಗಳನ್ನು ಸೇರಿಸಿ ರಾಜ್ಯವನ್ನು ವಿಸ್ತರಿಸಿದ. ಭರತಪುರದಲ್ಲಿ ಭದ್ರವಾದ ಕೋಟೆಯನ್ನು ಕಟ್ಟಿಸಿದ.

ಮೂರನೆಯ ಪಾಣೀಪತ್ ಕದನದಲ್ಲಿ ಮರಾಠರು ಇವರ ನೆರವನ್ನು ಕೋರಿದರು. ಆದರೆ ಸದಾಶಿವ ಭಾವುವಿನ ಅಹಂಕಾರ ಮನೋಭಾವದಿಂದಾಗಿ ಜಾಟರು ಅವರಿಂದ ದೂರ ಸರಿದು ಮೌನಪ್ರೇಕ್ಷಕರಾಗಿ ಉಳಿದರು. ಮರಾಠರಿಗೂ, ಇಂಗ್ಲಿಷರಿಗೂ ನಡೆದ ಎರಡನೆಯ ಕದನದ ಸಂದರ್ಭದಲ್ಲಿ ಗವರ್ನರ್-ಜನರಲ್ ಲಾರ್ಡ್‍ವೆಲ್‍ಸ್ಲಿಯ ಸೇನಾನಿ ಲಾರ್ಡ್‍ಲೇಕ್, ಅಲೀಗಢ ಹಾಗೂ ದೆಹಲಿಯ ಕೋಟೆಗಳನ್ನು ವಶಪಡಿಸಿಕೊಂಡ. ಈತ ಭರತಪುರದ ಕೋಟೆಯನ್ನು ಮುತ್ತಿದಾಗ ಜಾಟರು ಭೀಕರವಾಗಿ ಹೋರಾಡಿ ಶತ್ರುವನ್ನು ಓಡಿಸಿದರು. ಲಾರ್ಡ್‍ವೆಲ್‍ಸ್ಲಿ ತನ್ನ ಪದವಿಯಿಂದ ನಿವೃತ್ತನಾಗಿ ಸ್ವದೇಶಕ್ಕೆ ಹಿಂದಿರುಗಲು ಈ ಸೋಲು ಕಾರಣವಾಯಿತು.

ಆದರೆ ಭರತಪುರ ಶೀಘ್ರದಲ್ಲೇ ಬ್ರಿಟಿಷರ ಸ್ನೇಹಹಸ್ತವನ್ನು ಸ್ವೀಕರಿಸಿ, ಅವರಿಗೆ ಅಧೀನವಾಗಿರಲು ಒಪ್ಪಿಕೊಂಡಿತು. 1824ರಲ್ಲಿ ಬ್ರಿಟಿಷರು ಬರ್ಮದ ವಿರುದ್ಧ ಹೂಡಿದ ಕದನದಲ್ಲಿ ಹಿಮ್ಮೆಟ್ಟಬೇಕಾದ ಪರಿಸ್ಥಿತಿಯ ಪ್ರಯೋಜನವನ್ನು ಪಡೆದುಕೊಂಡು ದುರ್ಜನ್ ಸಾಲ್ ಎಂಬ ಜಾಟ್ ನಾಯಕ ಭರತಪುರ ಸಿಂಹಾಸನಕ್ಕಾಗಿ ಬ್ರಿಟಿಷರ ವಿರುದ್ಧ ದಂಗೆ ಎದ್ದ. ಇವನ ಕಿರಿಯ ಸೋದರ ಸಂಬಂಧಿಯೊಬ್ಬನನ್ನು ರಾಜನೆಂದು ಅವರು ಮಾನ್ಯ ಮಾಡಿದ್ದು ಇದಕ್ಕೆ ಕಾರಣ. ಆದರೆ ಲಾರ್ಡ್‍ಕಂಬರ್ ಮಿಯರನ ನೇತೃತ್ವದಲ್ಲಿ ಬ್ರಿಟಿಷರ ಸೈನ್ಯ ಭರತಪುರಕ್ಕೆ ಬಂದು ಇವನನ್ನು ಸೋಲಿಸಿ ರಾಜ್ಯದಿಂದ ಹೊರದೂಡಿ, ತನ್ನ ಆಶ್ರಿತನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿತು (1826). ಅಂದಿನಿಂದ ಭಾರತ ಸ್ವತಂತ್ರವಾಗುವವರೆಗೂ ಭರತಪುರ ಸಂಸ್ಥಾನ ಬ್ರಿಟಿಷರ ಆಶ್ರಯದಲ್ಲಿ ಮುಂದುವರೆಯಿತು. ಅನಂತರ ಉತ್ತರಪ್ರದೇಶ ರಾಜ್ಯದಲ್ಲಿ ಲೀನವಾಯಿತು.

"https://kn.wikipedia.org/w/index.php?title=ಜಾಟರು&oldid=1060626" ಇಂದ ಪಡೆಯಲ್ಪಟ್ಟಿದೆ