ವಿಷಯಕ್ಕೆ ಹೋಗು

ಗೋಲ್ಡ್‌ಸ್ಟಕರ್, ಥಿಯಡೋರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಥಿಯಡೋರ್ ಗೋಲ್ಡ್‌ಸ್ಟಕರ್ 1822-72. ಸಂಸ್ಕೃತ ಹಾಗೂ ಭಾರತೀಯ ನ್ಯಾಯಶಾಸ್ತ್ರ ವಿದ್ವಾಂಸ ಮತ್ತು ಘನವೆತ್ತ ವಿಮರ್ಶಕ.

ಬದುಕು

[ಬದಲಾಯಿಸಿ]

ಜರ್ಮನಿಯ ಕೋನಿಷ್ಬರ್ಗ್ ನಗರದ ಯಹೂದಿ ಮನೆತನವೊಂದರಲ್ಲಿ ಜನಿಸಿದ ಈತ ವ್ಯಾಕರಣ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ. ಮುಂದೆ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, ಅದೇ ನಗರದ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ, ಇತಿಹಾಸ, ತತ್ತ್ವಶಾಸ್ತ್ರ ಮತ್ತು ಸಂಸ್ಕೃತ ಭಾಷೆಯನ್ನು ಅಭ್ಯಾಸ ಮಾಡಿ 1838ರಲ್ಲಿ ಪದವೀಧರನಾದ. ಅನಂತರ ಬಾನ್ ವಿಶ್ವವಿದ್ಯಾಲಯದಲ್ಲಿ ಅರಬ್ಬಿ, ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ವಿಷಯಗಳನ್ನು ತೆಗೆದುಕೊಂಡು ಎ.ಡಬ್ಲ್ಯು. ಫಾನ್ ಶ್ಲೆಗಲ್ ಮತ್ತು ಲ್ಯಾಸೆನ್ರವರಂಥ ಪ್ರಸಿದ್ಧ ವಿದ್ವಾಂಸರುಗಳ ಮಾರ್ಗದರ್ಶನದಲ್ಲಿ ಕೇವಲ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿಯನ್ನು (1840) ಪಡೆದ. 1842ರಿಂದ ಮೂರು ವರ್ಷಗಳ ಕಾಲ ಪ್ಯಾರಿಸಿನ ಪ್ರಸಿದ್ಧ ಸಂಸ್ಕೃತಜ್ಞ ಯೂಜಿನ್ ಬರ್ನೌಫ್ನಲ್ಲಿ ಸಂಸ್ಕೃತ ವ್ಯಾಕರಣ, ವೇದಾಂತ, ವೈದಿಕ ಸಾಹಿತ್ಯ ಮುಂತಾದ ವಿಷಯಗಳನ್ನು ಅಭ್ಯಸಿಸಿ ಪಾಂಡಿತ್ಯ ಸಂಪಾದಿಸಿದ.

ಈತ ಯಹೂದಿಯಾದುದರಿಂದ ಆಗಿನ ಪ್ರಷ್ಯ ಸರ್ಕಾರದ ವರ್ಣವಿದ್ವೇಷ ನೀತಿಯಿಂದಾಗಿ 1850ರಲ್ಲಿ ತಾಯ್ನಾಡು ಬಿಟ್ಟು ಹೊರಡಬೇಕಾಯಿತು.

1852-72 ರವರೆಗೆ ಲಂಡನ್ ವಿಶ್ವವಿದ್ಯಾಲಯದಲ್ಲಿ ಗೌರವ ಸಂಸ್ಕೃತ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ.

ಈತ ಭಾಷಾಶಾಸ್ತ್ರ ಸಂಘ, ರಾಯಲ್ ಏಷ್ಯಾಟಿಕ್ ಸೊಸೈಟಿಗಳಂಥ ವಿದ್ವತ್ ಸಂಘಗಳಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿದ್ದ. ಲಂಡನ್ನಿನಲ್ಲಿ ಈತನ ಮನೆ ಭಾರತೀಯ ಸಂಸ್ಕೃತಜ್ಞರಿಗೆ ಒಂದು ಯಾತ್ರಾಸ್ಥಳವಾಗಿತ್ತು.

ಕೊಡುಗೆಗಳು

[ಬದಲಾಯಿಸಿ]

ಬರ್ನೌಫ್ ಸಂಪಾದಿಸುತ್ತಿದ್ದ ಬುದ್ಧಿಸಮ್ ಇನ್ ನೇಪಾಳ್ ಎಂಬ ಗ್ರಂಥಸಂಪಾದನೆಗೆ ಈತ ನೆರವಾದ.

ಈತ ತನ್ನ ಇಪ್ಪತ್ತನೆಯ ವಯಸ್ಸಿನಲ್ಲೇ ಪ್ರಬೋಧಚಂದ್ರೋದಯ (1841) ಎಂಬ ದರ್ಶನ ಪ್ರಧಾನ ಸಂಸ್ಕೃತ ನಾಟಕವನ್ನು ಭಾಷಾಂತರಿಸಿದ. ಪ್ಯಾರಿಸಿನಲ್ಲಿದ್ದಾಗಲೇ ಮಹಾಭಾರತದ ವಿಮರ್ಶಾತ್ಮಕ ಮುದ್ರಣವೊಂದನ್ನು ಸಿದ್ಧಪಡಿಸಿದ (1842-45). ತನ್ನ ತಾಯ್ನಾಡಿನಲ್ಲಿ ಅಲೆಗ್ಸಾಂಡರ್ ಫಾನ್ ಹಂಬಾಲ್ಟ್‌ ಮುಂತಾದ ವಿದ್ವಾಂಸರ ಮೆಚ್ಚುಗೆಗೆ ಪಾತ್ರನಾದ.


ಆ ವೇಳೆಗೆ ಎಚ್.ಎಚ್. ವಿಲ್ಸನ್ ತಾನು ಪುನರ್ಮುದ್ರಣಕ್ಕೆ ಅನುಗೊಳಿಸುತ್ತಿದ್ದ ಸಂಸ್ಕೃತ-ಇಂಗ್ಲಿಷ್ ನಿಘಂಟನ್ನು ಸಿದ್ಧಪಡಿಸಲು ಈತನನ್ನು ಲಂಡನಿಗೆ ಆಹ್ವಾನಿಸಿದ. ಅಲ್ಲಿಂದ ಮುಂದೆ ಲಂಡನ್ ನಗರವೇ ಈತನ ಕಾರ್ಯಕ್ಷೇತ್ರವಾಯಿತು. 1861ರಲ್ಲಿ ಮಾನವಕಲ್ಪ ಸೂತ್ರವನ್ನು ಸಂಪಾದಿಸಿ ಅದರ ಮುನ್ನುಡಿಯಲ್ಲಿ ಪಾಣಿನಿ ಮತ್ತು ಸಂಸ್ಕೃತದಲ್ಲಿ ಅವನ ಸ್ಥಾನ ಎಂಬ ವಿದ್ವಲ್ಲೇಖನವೊಂದನ್ನು ಬರೆದ. ಇದೇ ಸಮಯದಲ್ಲಿ ಇನ್ಸ್ಪೈರ್ಡ್‌ ರೈಟಿಂಗ್ಸ್‌ ಆಫ್ ಹಿಂದೂಯಿಸಮ್ ಅಂಡ್ ಹಿಂದೂ ಎಪಿಕ್ ಪೊಯೆಟ್ರಿ-ದಿ ಮಹಾಭಾರತ-ಎಂಬ ಗ್ರಂಥವನ್ನು ಪ್ರಕಾಶಪಡಿಸಿದ. 1865ರಲ್ಲಿ ಮಾಧವಾಚಾರ್ಯರ ಜೈಮಿನೀಯ ನ್ಯಾಯಮಾಲಾವಿಸ್ತರ ಎಂಬ ಗ್ರಂಥದ ವಿಮರ್ಶಾತ್ಮಕ ಮುದ್ರಣವನ್ನು ಹೊರತಂದ. ಪಾಣಿನಿಯ ಅಷ್ಟಾಧ್ಯಾಯೀ, ಪಾತಂಜಲ ಮಹಾಭಾಷ್ಯ, ಕೈಯಟನ ವೃತ್ತಿ ಮತ್ತು ಭಟ್ಟೋಜಿ ದೀಕ್ಷಿತನ ಕೌಮುದೀ ಗ್ರಂಥಗಳ ಹಸ್ತಪ್ರತಿಗಳನ್ನೆಲ್ಲ ಕ್ರೋಡೀಕರಿಸಿ ಈಸ್ಟ್‌ ಇಂಡಿಯ ಕೌನ್ಸಿಲಿನ ಅನುಮತಿ ಪಡೆದು ಅವುಗಳ ಕಲ್ಲಚ್ಚಿನ ಪ್ರತಿಗಳನ್ನು ಸಿದ್ಧಪಡಿಸಿದ. ಅಲ್ಲದೆ ನೈಟ್ಸ್‌ ವಿಶ್ವಕೋಶ, ಛೇಂಬರ್ಸ್‌ ವಿಶ್ವಕೋಶಗಳಿಗೆ ಸಂಸ್ಕೃತ ಮತ್ತು ಭಾರತೀಯ ಸಾಹಿತ್ಯ ತತ್ತ್ವಶಾಸ್ತ್ರಗಳಿಗೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ಬರೆದುಕೊಟ್ಟ.


ಆಗಿನ ಕಾಲಕ್ಕೆ ಲಂಡನಿನಲ್ಲಿ ಭಾರತೀಯ ನ್ಯಾಯಶಾಸ್ತ್ರದಲ್ಲಿ ಅಧಿಕೃತ ವಿಮರ್ಶಕನೆಂಬ ಖ್ಯಾತಿ ಗಳಿಸಿದ್ದ. ಚರ್ಕವರ್ತಿಯವರ ಪ್ರೀವಿ ಕೌನ್ಸಿಲಿನಲ್ಲಿ ಭಾರತೀಯ ನ್ಯಾಯದ ವಿಷಯಗಳನ್ನು ಅರ್ಥವಿಸುವುದರಲ್ಲಿ ತಲೆದೋರುತ್ತ್ತಿದ್ದ ಕ್ಲಿಷ್ಟತೆಗಳ ಪರಿಹಾರಕ್ಕೆ ಈತನ ಕೊಡುಗೆ ಮೆಚ್ಚುವಂತಹುದು.