ಗೋರಖನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gorakhnath, Old Pratima (At Gorakhnath Temple, odadar, Porbandar, Gujarat, India)

ಗೋರಖ್‍ನಾಥ ಭಾರತದ ಪ್ರಸಿದ್ಧ ಹಠಯೋಗಿಗಳಲ್ಲೊಬ್ಬ. ಕಾನ್‍ಫಟ ಎಂಬ ಪಂಥದ ಸ್ಥಾಪಕ. ಈತನ ಕಾಲ ನಿಷ್ಕರ್ಷೆಯಾಗಿಲ್ಲ. ಏಳನೆಯ ಶತಮಾನದ ನೇಪಾಳಿ ರಾಜಮನೆತನಕ್ಕೆ ಸಂಬಂಧಪಟ್ಟವನೆಂದು ಒಂದು ಪ್ರತೀತಿ ಇದೆ. ಸು. 1120 ಎಂದು ಹೇಳುವವರೂ ಇದ್ದಾರೆ. ಈತ ಮತ್ಸ್ಯೇಂದ್ರನಾಥನ ಶಿಷ್ಯನೆಂದು ಹೇಳಲಾಗಿದೆ. ಗುರುವಿಗೆ ಒಮ್ಮೆ ಉಂಟಾದ ಅತೀವ ಸ್ತ್ರೀವ್ಯಾಮೋಹವನ್ನು ಈತ ಹೋಗಲಾಡಿಸಿ ಅಧಃಪತನದಿಂದ ಆತನನ್ನು ಪಾರುಮಾಡಿದನಂತೆ. ತನ್ನ ಪಂಥದ ಶಿಷ್ಯರನ್ನು ಗುರುತು ಹಚ್ಚುವ ಸಲುವಾಗಿ ಅವರ ಕಿವಿಗಳನ್ನು ಸೀಳುವ ಪದ್ಧತಿಯನ್ನು ಈತ ಜಾರಿಗೆ ತಂದ. ಕಾನ್ಫಟ ಎಂದರೆ ಕಿವಿ ಸೀಳಿದ ಯೋಗಿಗಳು ಎಂದು ಅರ್ಥ. ಸೀಳಿದ ಕಿವಿಗಳಲ್ಲಿವರು ದೊಡ್ಡ ದೊಡ್ಡ ಕುಂಡಲಗಳನ್ನು ಧರಿಸುತ್ತಾರೆ. ಗೋರಖ್‍ನಾಥ ಸಂಸ್ಕೃತದಲ್ಲಿ ರಚಿಸಿರುವ ಹಠಯೋಗ ಮತ್ತು ಗೋರಕ್ಷಕ ಶತಕ ಎಂಬೆರಡು ಕೃತಿಗಳು ಉಪಲಬ್ಧವಿವೆ. ಹಠಯೋಗದಿಂದ ಪಡೆಯಬಹುದಾದ ದೇಹಶುದ್ಧಿಗೆ ಗೋರಖ್‍ನಾಥ ಹೆಚ್ಚು ಗಮನ ಕೊಟ್ಟಿದ್ದಾನೆ. ಆಸನ, ಶೋಧನ, ಪ್ರಾಣಾಯಾಮ, ಮುದ್ರಾ-ಇವುಗಳಿಂದ ಅನೇಕ ಸಿದ್ಧಿಗಳನ್ನು ಪಡೆದು ಕಡೆಗೆ ಸಮಾಧಿಯನ್ನು ಹೊಂದಬಹುದೆಂದು ಈತನ ಅಭಿಮತ. ಈತ ದೇವಾಂಶಸಂಭೂತನೆಂದು ಇವನ ಪಂಥದವರು ನಂಬುತ್ತಾರೆ. ನೇಪಾಳದಲ್ಲಂತೂ ಇವನನ್ನು ಸಂರಕ್ಷಕ ದೇವತೆಯೆಂದು ಆರಾಧಿಸುತ್ತಾರೆ. ಉತ್ತರಭಾರತದಲ್ಲಿ ಇವನ ಹೆಸರಿನಲ್ಲಿ ಅನೇಕ ದೇವಸ್ಥಾನಗಳಿವೆ. ಇವನ ಮುಖ್ಯ ಮಂದಿರ ಗೋರಖ್‍ನಾಥ ಎನ್ನುವ ಸ್ಥಳದಲ್ಲಿದೆ.

ವೀರಶೈವ ವಿಭೂತಿಗಳಾದ ಪ್ರಭುದೇವ, ರೇವಣಿಸಿದ್ಧ, ಸಿದ್ಧರಾಮರು, ಗೋರಖ್‍ನಾಥನನ್ನು ಜಯಸಿದಂತೆ ತತ್ಸಂಬಂಧವಾದ ಪುರಾಣಗಳಲ್ಲಿ ಉಲ್ಲೇಖವಿದೆ. ಸತಾರ ಜಿಲ್ಲೆಯಲ್ಲಿ ಗೋರಖ್‍ನಾಥ ಹೆಸರಿನ ಒಂದು ವನವಿದೆ. ಅಲ್ಲಿನ ಆರು ಹುಣಸೆಮರಗಳನ್ನು ಬಹು ಪವಿತ್ರವೆಂದು ಪರಿಗಣಿಸಲಾಗಿದೆ.

ಸತ್ತಾಗ ಈ ಪಂಥದ ಯೋಗಿಗಳನ್ನು ಸುಡುವುದಿಲ್ಲ. ಪದ್ಮಾಸನದಲ್ಲಿ ಕೂಡಿಸಿ ಸಮಾಧಿ ಮಾಡುತ್ತಾರೆ.ಈ ಪಂಥದವರಲ್ಲಿ ಅನೇಕ ವಾಮಾಚಾರಗಳು ಬಳಕೆಯಲ್ಲಿವೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೋರಖನಾಥ&oldid=1172934" ಇಂದ ಪಡೆಯಲ್ಪಟ್ಟಿದೆ