ಗೃಹಾಲಂಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪಯೋಗ ಕಡಿಮೆಯಾಗದಂತೆ, ವೆಚ್ಚ ಹೆಚ್ಚದಂತೆ ಮನೆಗಳನ್ನು ಅಲಂಕರಿಸುವ ವಿಧಾನಗಳನ್ನು ಇಲ್ಲಿ ವಿವೇಚಿಸಲಾಗಿದೆ. ಮಾನವನ ಆವಶ್ಯಕತೆಗಳಲ್ಲಿ ಮನೆಗೆ ಹೆಚ್ಚಿನ ಸ್ಥಾನವಿದೆ. ಕುಟುಂಬವತ್ಸಲರಾದ ಭಾರತೀಯರಿಗಂತೂ ಮನೆಯೇ ಕೇಂದ್ರಬಿಂದು. ಬಡವ ಬಲ್ಲಿದರೆಲ್ಲರೂ ತಮ್ಮ ತಮ್ಮ ಮನೆಯನ್ನು ಬಹಳ ಪ್ರೀತಿಸುತ್ತಾರೆ. ದೊಡ್ಡ ದೊಡ್ಡ ನಗರಗಳಲ್ಲಿ ಜನಸಂಖ್ಯೆ ವಿಪರೀತವಾಗಿ ಹೆಚ್ಚಿ ಗಲ್ಲಿ ಗಲ್ಲಿಗಳಲ್ಲಿ ವಠಾರಜೀವನ ಪ್ರಾರಂಭವಾದ ಮೇಲೆ ವೈಯಕ್ತಿಕವಾಗಿ ಮನೆಗಳ ಅಚ್ಚುಕಟ್ಟು ಮಾಯವಾಗುತ್ತಿದೆಯಾದರೂ ಹಳ್ಳಿಗಳಲ್ಲಿ ಇಂದಿಗೂ ಜನ ತಮ್ಮ ಬಡ ಜೋಪಡಿಗಳನ್ನೇ ಅಂದವಾಗಿ ಇಟ್ಟುಕೊಂಡಿರುತ್ತಾರೆ. ಸುಣ್ಣ-ಬಣ್ಣ, ಸಾರಣೆ-ಕಾರಣೆ, ರಂಗವಲ್ಲಿ, ಹಸಿರು ತೋರಣ, ಮಂಚ ಚಾಪೆ, ಮಣೆ, ತೂಗುಮಣೆ, ದೀಪ-ಧೂಪ-ಇವು ಸಾಮಾನ್ಯವಾಗಿ ಹಿಂದಿನಿಂದ ನಡೆದು ಬಂದಿರುವ ಗೃಹಾಲಂಕರಣ ಸಾಧನಗಳು. thumb|ಗೃಹಾಲಂಕರಣ

ಇತಿಹಾಸ ಮತ್ತು ಪ್ರಸ್ತುತ ನಿಯಮಗಳು[ಬದಲಾಯಿಸಿ]

ಹಿಂದಿನ ಕಾಲದ ಮನೆಗಳಲ್ಲಿ ಒಟ್ಟುಕುಟುಂಬದವರು ವಾಸಿಸಲು ಯೋಗ್ಯವಾಗುವಂಥ ದೊಡ್ಡ ದೊಡ್ಡ ಪಡಸಾಲೆ, ದೇವರಮನೆ, ಅಡುಗೆಮನೆಗಳಿರುತ್ತಿದ್ದವು. ಅವರ ಆವಶ್ಯಕತೆಗೆ ಅಷ್ಟು ಸಾಕಾಗುತ್ತಿದ್ದವು. ಒಕ್ಕಲತನ, ವ್ಯಾಪಾರ ಅವರ ಮುಖ್ಯ ಉದ್ಯೋಗವಾದುದರಿಂದ ಮನೆಯ ಬಹುಭಾಗ ದನದ ಕೊಟ್ಟಿಗೆ, ಮತ್ತು ಉಗ್ರಾಣಗಳಾಗಿರುತ್ತಿದ್ದುವು. ಪಡಸಾಲೆಯಲ್ಲಿ ಒಂದು ಮಂಚ ಇರುತ್ತಿತ್ತು. ಅದರ ಮೇಲೆ ಸುಂದರವಾದ ಜಮಖಾನೆ ಹಾಸಿ ದಿಂಬುಗಳನ್ನಿಡುತ್ತಿದ್ದರು. ಪಡಸಾಲೆಯ ಗೋಡೆಯ ಮೇಲ್ಭಾಗವೆಲ್ಲ ಬಹುಪಾಲು ರವಿವರ್ಮನ, ಮಿಕ್ಕಂತೆ ಸ್ಥಳೀಯ ಕಲೆಗಾರರ ಚಿತ್ರಪಟಗಳಿಂದ ಅಲಂಕೃತವಾಗಿರುತ್ತಿತ್ತು. ಇದ್ದವರು ಕಾಡುಕೋಣ ಇಲ್ಲವೆ ಜಿಂಕೆಯ ಕೊಂಬುಗಳನ್ನೊ ಹುಲಿಯ ಮುಖವನ್ನೊ ಅಲಂಕಾರಕ್ಕಾಗಿ ಗೋಡೆಗೆ ತಗಲಿಸುತ್ತಿದ್ದರು. ನೆಲವನ್ನು ಸೆಗಣಿಯಿಂದ ಸಾರಿಸುತ್ತಿದ್ದರು. ನೆಲದ ಅಂಚಿಗೆ ಗೋಡೆಗೆ ಹೊಂದಿದಂತೆ ಸುಣ್ಣ ಹಾಗೂ ಕೆಮ್ಮಣ್ಣಿನ ಪಟ್ಟಿಗಳನ್ನು ಎಳೆಯುತ್ತಿದ್ದರು. ಗೋಡೆಗೆ ದಟ್ಟವಾಗಿ ಬಣ್ಣ ಹಚ್ಚುತ್ತಿದ್ದರು. ಇಲ್ಲವೆ ಸುಣ್ಣ, ಹಳದಿ ಮಟ್ಟಿ, ಹುರಿಮಂಜುಗಳಿಂದ ಇಡೀ ಗೋಡೆಯನ್ನು ಸಾರಿಸುತ್ತಿದ್ದರು. ಹಳದಿ, ಕೆಂಪು ಬಣ್ಣದ ಗೋಡೆ, ಸೆಗಣಿಯಿಂದ ಸಾರಿಸಿದ ಹಸಿರು ನೆಲ, ಅಂಚಿನ ಸುಣ್ಣ ಇತ್ಯಾದಿಗಳಿಂದ ಮನೆಗಳು ರಂಗುರಂಗಾಗಿ ಕಾಣುತ್ತಿದ್ದವು. ಬೆಳಗ್ಗೆ ಎದ್ದೊಡನೆ ಮನೆಯಂಗಳವನ್ನು ಸಾರಿಸಿ ರಂಗವಲ್ಲಿ ಹಾಕಿ, ಹೊಸ್ತಿಲನ್ನು ಪೂಜಿಸಿ ಮನೆಗೆಲಸ ಪ್ರಾರಂಭಿಸುವುದು ಗೃಹಿಣಿಯ ನಿತ್ಯ ನಿಯಮವಾಗಿತ್ತು. ಇಂದು ನಮ್ಮ ಬಾಳಿನ ಆವಶ್ಯಕತೆಗಳಿಗನುಸರಿಸಿ ಹುಸಿ (ವೆರಾಂಡ), ಪಡಸಾಲೆ (ಡ್ರಾಯಿಂಗ್‍ರೂಮ್), ಓದುವಕೋಣೆ, ಮಲಗುವ ಕೋಣೆ, ದೇವರಮನೆ, ಅಡುಗೆ ಮನೆ, ಊಟದಮನೆ, ದಾಸ್ತಾನು ಕೋಣೆ ಸ್ನಾನದಮನೆ-ಇತ್ಯಾದಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಮನೆಗಳು ಅವರವರ ಆರ್ಥಿಕ ಪರಿಸ್ಥಿತಿಗೆ, ಅವರವರ ಮನದೊಲವಿಗೆ ತಕ್ಕಂತೆ ನಿರ್ಮಾಣಗೊಳ್ಳುತ್ತವೆ. ಇತ್ತೀಚೆಗೆ ಪೌರಸ್ತ್ಯ ಹಾಗೂ ಪಾಶ್ಚಾತ್ಯ ಪದ್ಧತಿಗಳ ಸಮ್ಮಿಳನ ಭಾರತೀಯ ಗೃಹಾಲಂಕರಣಗಳಲ್ಲಿ ಹಾಸುಹೊಕ್ಕಾಗಿ ಕಂಡುಬರುತ್ತಿದೆ. ಮನೆಯ ಅಲಂಕಾರಕ್ಕೆ ಸಿರಿತನ ಬಡತನಗಳಿಗಿಂತ ಕಲಾ ದೃಷ್ಟಿಮುಖ್ಯ.

ಗಡಿಯಾರ

ವಿಶೇಷತೆಗಳು[ಬದಲಾಯಿಸಿ]

ಪಡಸಾಲೆಯ ಅಲಂಕಾರಕ್ಕೆ ಭಾರತೀಯರು ಹೆಚ್ಚು ಗಮನ ಕೊಡುತ್ತಾರೆ. ಅಪ್ಪಟ ಭಾರತೀಯ ಪದ್ಧತಿಯಲ್ಲಿ ಪಡಸಾಲೆ ಅಲಂಕೃತವಾಗಬೇಕು ಎನ್ನುವವರು, ಅದರ ಮಧ್ಯದ ಗೋಡೆಯ ಬಳಿ ಒಂದು ಮಂಚವನ್ನೋ ದಿವಾನವನ್ನೋ ಹಾಕುವರು. ಅದರ ಮೇಲೆ ಮೆತ್ತನೆಯ ಹಾಸಿಗೆ ಹಾಸಿ ಸುಂದರವಾದ ಹೆಣಿಗೆಯ ಇಲ್ಲವೆ ಅಚ್ಚಿನ ಬಣ್ಣಬಣ್ಣದ ಹೊದಿಕೆಯನ್ನು ಹಾಸಲಾಗುವುದು. ರಾಜಸ್ಥಾನ ಹಾಗೂ ಮಧ್ಯಭಾರತದಲ್ಲಿ ಮಂಚಗಳನ್ನು ಕಲಾಪೂರ್ಣವಾಗಿ ಮಾಡುತ್ತಾರೆ. ಹಾಸಿಗೆ ಹಾಸಿದ ಮಂಚದ ಎರಡೂ ಬದಿಗೆ ಉದ್ದವಾದ ಲೋಡುಗಳನ್ನಿಡುವರು. ಬೆನ್ನಿಗೆ ಆಸರವಾಗಲು ಬಣ್ಣಬಣ್ಣದ ದಿಂಬುಗಳನ್ನಿಡುವರು. ಮಂಚದ ಮುಂಭಾಗದಲ್ಲಿ ಭಾರತೀಯರ ಕಲಾಕೌಶಲದಿಂದ ಕಂಗೊಳಿಸುವ ಜಮಖಾನೆ, ರತ್ನಗಂಬಳಿ ಮೊದಲಾದವುಗಳಲ್ಲಿ ಒಂದನ್ನು ಹಾಸುವರು. ಮಂಚದ ಒಂದು ಬದಿಗೆ ಕಲಾಪೂರ್ಣ ವಸ್ತುಗಳ ಕಪಾಟು, ಇನ್ನೊಂದು ಬದಿಗೆ ಪುಸ್ತಕಗಳ ಕಪಾಟುಗಳನ್ನಿಡುವರು. ಮನೆಯ ಹಿರಿಯರು, ಮಕ್ಕಳು ಸದಾ ಆನಂದದಿಂದ ಪಡಸಾಲೆಯಲ್ಲಿಯೇ ಹೆಚ್ಚಿನ ವೇಳೆ ಕಳೆಯುವರು.

ಅಡುಗೆಮನೆಯಲ್ಲಿ ಸಾರಿಸಿದ ನೆಲದ ಮೇಲೆ ಬಣ್ಣಬಣ್ಣದ ಮಣೆಗಳನ್ನು ಹಾಕಿ ಹಸಿರು ಕುಡಿಬಾಳೆಯನ್ನಿಟ್ಟು ಅದರ ಸುತ್ತಲೂ ಕಲಾಪೂರ್ಣವಾದ ರಂಗವಲ್ಲಿಯನ್ನಿಕ್ಕಿ, ಹಬ್ಬಹರಿದಿನಗಳಲ್ಲಿ, ಅತಿಥಿ ಅಭ್ಯಾಗತರು ಬಂದಾಗ ಉಣಬಡಿಸುವುದು ಭಾರತೀಯ ಗೃಹಿಣಿಗೆ ಸಂತಸದ ಸುಗ್ಗಿ.

ದೇವರಮನೆಯಲ್ಲಿ ಜಗಲಿಯ ಮೇಲೆ ಮಂಟಪವನ್ನಿಟ್ಟು ಅದರಲ್ಲಿ ಆರಾಧ್ಯ ದೇವತೆಯ ಮೂರ್ತಿಯನ್ನಿರಿಸುವರು. ಮಂಟಪದ ಎರಡೂ ಬದಿಗೆ ಅಂದಚೆಂದದ ನಂದಾದೀವಿಗೆಗಳು; ಸುತ್ತಲೂ ರಂಗವಲ್ಲಿ, ಗಂಟೆಜಾಗಟೆ, ಪಂಚಾರತಿ, ಬಗೆಬಗೆಯ ದೀಪಸ್ತಂಭಗಳು, ಬಣ್ಣ ಬಣ್ಣದ ಹೂಗಳಿಂದ ದೇವರಮನೆ ಕಲಾಪೂರ್ಣವಾಗಿ ಕಂಗೊಳಿಸುವುದು.[೧]

ಇಂದಿನ ಗೃಹಿಣಿ ಹಳೆಯ ಪದ್ಧತಿ ಹೊಸಪದ್ಧತಿಗಳಲ್ಲಿಯ ಒಳ್ಳೆಯದನ್ನು, ಕಲಾಪೂರ್ಣವಾದುದನ್ನು ಆಯ್ದುಕೊಂಡು ಗೃಹಾಲಂಕಾರ ಮಾಡುವುದು ವಾಡಿಕೆಯಾಗಿದೆ. ಕಸದಲ್ಲಿಯೂ ರಸವನ್ನು ತೆಗೆಯಬಲ್ಲ ಕುಶಲ ಕಲೆಗಾರ್ತಿಯಾದ ಅವಳು ಮನೆಯನ್ನು ಸೊಬಗಿನ ಬೀಡನ್ನಾಗಿ ಮಾಡುವಳು. ಇತ್ತೀಚೆಗೆ ಬಣ್ಣಗಳ ಭಾವಗಳನ್ನರಿತು ಬೇರೆ ಬೇರೆ ಕೋಣೆಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚುತ್ತಾರೆ. ಪಡಸಾಲೆಗೆ ಕೆನೆಬಣ್ಣವಾದರೆ ಊಟದ ಮನೆಗೆ ತಿಳಿಗುಲಾಬಿ, ಮಲಗುವ ಕೋಣೆಗೆ ತಿಳಿಹಳದಿ, ಅಡುಗೆಯ ಮನೆಗೆ ತಿಳಿಹಸಿರು ಇಲ್ಲವೆ ತಿಳಿನೀಲಿ, ಬಣ್ಣಗಳನ್ನು ಹಚ್ಚುವದರಲ್ಲಿಯೂ ಗೃಹಾಲಂಕರಣ ಕಲೆ ಅಡಗಿದೆ. ಮನೆಯ ಆಕರ್ಷಣೆಗೆ ಬಣ್ಣವೇ ಆಧಾರ. ಕೋಣೆ ಸಣ್ಣದಿದ್ದರೂ ತಿಳಿಬಣ್ಣ ಹಚ್ಚಿದರೆ ನೋಡಲಿಕ್ಕೆ ವಿಶಾಲವಾಗಿ ಕಾಣುವುದು. ಬಣ್ಣಗಳ ಪರಿಣಾಮ ವಾತಾವರಣದ ಮೇಲೆ ಆಗುತ್ತದೆ. ದಟ್ಟ ಬಣ್ಣಗಳು ಉತ್ಸಾಹದಾಯಕವಾಗಿ ವರ್ಣರಂಜಿತವಾಗಿ ಕಾಣಿಸುತ್ತವೆ. ತಿಳಿ ಬಣ್ಣಗಳು ಶಾಂತಿದಾಯಕವಾಗಿ, ಉಲ್ಲಾಸದಾಯಕವಾಗಿ ತೋರುತ್ತವೆ. ನೆಲಕ್ಕೆ ಸಿಮೆಂಟ್ ಕಾಂಕ್ರೀಟ್ ಇಲ್ಲವೆ ಮೊ¸óÁಯಿಕ್ ಮಾಡಿಸುವುದು ರೂಢಿಯಾಗಿದೆ. ಮೇಲ್ಚಾವಣಿಗೆ ಬಿಳಿ ಇಲ್ಲವೆ ತಿಳಿಬಣ್ಣಗಳನ್ನು ಉಪಯೋಗಿಸುವರು.

ಶ್ಯಲಿ[ಬದಲಾಯಿಸಿ]

ಹುಸಿಯಲ್ಲಿ ಕೆಲವು ಖುರ್ಚಿಗಳನ್ನಿಡುವರು[೨]. ಪಕ್ಕದ ಟೀಪಾಯಿಯ ಮೇಲೆ ಓದುವ ಪತ್ರಿಕೆಗಳನ್ನು ಜೋಡಿಸಿಡುವರು. ಪಡಸಾಲೆಯಲ್ಲಿ ಸೋಫಾಸೆಟ್, ದಿವಾನ, ರೇಡಿಯೊ, ಟಿವಿ ಅಲಂಕಾರದ ಕಲಾಕುಶಲ ವಸ್ತುಗಳ ಕಪಾಟು, ಪುಸ್ತಕಗಳ ಕಪಾಟು ಇವನ್ನು ಕಾಣಬಹುದು. ಹಿಂದಿನಂತೆ ಹತ್ತಾರು ಚಿತ್ರಗಳನ್ನು ಸದಾ ಕಾಲವೂ ತೂಗುಹಾಕುವ ಬದಲು ಒಂದೆರಡು ನಿಸರ್ಗ ಸೌಂದರ್ಯದ ವರ್ಣಚಿತ್ರಗಳನ್ನು ಗೋಡೆಗೆ ಹಾಕಿದ್ದು ಮಾಸಕ್ಕೊ ಪಕ್ಷಕ್ಕೊ ಒಮ್ಮೆ ಅವನ್ನು ಬದಲಿಸುವರು. ನೆಲಕ್ಕೆ ಚಾಪೆ ಇಲ್ಲವೆ ರತ್ನಗಂಬಳಿ ಹಾಸುವರು. ಹೂದಾನಿಗಳಲ್ಲಿ ಜಪಾನಿ ಪದ್ಧತಿಯಂತೆ ಹೂಗಳನ್ನಲಂಕರಿಸಿ ಪಡಸಾಲೆಯ ನಡುವಿನಲ್ಲೊ ಮೂಲೆಯೊಂದರಲ್ಲೊ ಇಡುವುದು ಗೃಹಾಲಂಕರಣದ ಮುಖ್ಯ ಅಂಗವಾಗಿದೆ. ಹೂಗಳಲ್ಲಿ ಮನವನ್ನರಳಿಸುವ ಶಕ್ತಿ ಇದೆ. ಅವುಗಳ ಬಣ್ಣ ಪಡಸಾಲೆಯ ಒಟ್ಟಂದದ ಬಣ್ಣಕ್ಕೆ ಹೊಂದಿಕೆಯಾಗುವಂತಿದ್ದರೆ ಬಹು ಚೆನ್ನು.

ಆಧುನಿಕ ಗೃಹಾಲಂಕಾರ ಕಲೆಯಲ್ಲಿ ಬಾಗಿಲು, ಕಿಟಕಿಗಳಿಗೆ ಪರದೆಯನ್ನು ಹಾಕುವುದು ಮುಖ್ಯವಾಗಿದೆ. ಕಿಟಕಿಗಳ ಮೂಲಕ ಚೆನ್ನಾಗಿ ಗಾಳಿ, ಬೆಳಕು ಬರುವಂತೆ ಅಲ್ಲಿನ ಪರದೆಗಳು ತೆಳ್ಳಗಿರಬೇಕು. ತಿಳಿಬಣ್ಣದವಾಗಿರಬೇಕು. ಬಾಗಿಲು ಪರದೆಗಳು ದಪ್ಪಬಟ್ಟೆಯವಿರಬೇಕು. ದಟ್ಟಬಣ್ಣದವಿರಬೇಕು. ಗೋಡೆಯ ಬಣ್ಣಕ್ಕೆ ಹೊಂದಿಕೆಯಾಗುವಂತಿರಬೇಕು. ವರ್ಣಗಳ ಸಾಮರಸ್ಯದಂತೆ ಅನೇಕ ವೇಳೆ ವರ್ಣಭಿನ್ನತೆಯೂ ಕಣ್ಣಿಗೆ ಹಿತವಾಗಬಲ್ಲದು. ಕುರ್ಚಿ, ದಿವಾನಗಳ ಹಾಗೂ ದಿಂಬುಗಳ ಹೊದಿಕೆಗಳು ಒಂದೇ ಬಣ್ಣದವಿರಬೇಕು. ಅವುಗಳ ಮೇಲೆ ಕಲಾಪೂರ್ಣವಾದ ಕಸೂತಿಕೆಲಸ, ಇಲ್ಲವೆ ಬಣ್ಣದ ಚಿತ್ರಗಳು ಇದ್ದರೆ ಒಳ್ಳೆಯದು.

ಊಟದ ಮನೆಯಲ್ಲಿ ಕುರ್ಚಿ, ಮೇಜು, ಕೈ ತೊಳೆಯಲು ಸಿಂಕ್, ಊಟ ಹಾಗೂ ಚಹಗಳಿಗೆ ಬೇಕಾಗುವ ಪಿಂಗಾಣಿಯ ಪಾತ್ರೆಗಳನ್ನಿಸುವ ಕಪಾಟು-ಇವು ಇರಬೇಕು. ಊಟದ ಮನೆಯ ಗೋಡೆಗಳಿಗೆ ಹಣ್ಣು ಹಂಪಲದ, ಸೃಷ್ಟಿ ಸೊಬಗಿನ ವರ್ಣಚಿತ್ರಗಳನ್ನು ಹಾಕುವುದು ವಾಡಿಕೆ. ಬಣ್ಣಬಣ್ಣದ ಹೂಗಳಿಂದಲಂಕೃತವಾದ ಹೂದಾನಿ ಮತ್ತು ಹಣ್ಣಿನ ತಟ್ಟೆಗಳು ಊಟದ ಮನೆಗೆ ಅಲಂಕಾರವಾಗುತ್ತವೆ.

ಆಧುನಿಕ ಅಡುಗೆಮನೆಗಳು ಬಹಳ ಅಚ್ಚುಕಟ್ಟಾಗಿರುತ್ತವೆ. ಗ್ಯಾಸ್ ಇಲ್ಲವೆ ವಿದ್ಯುತ್ ಒಲೆಗಳ ಮೇಲೆ ಅಡಿಗೆ ಮಾಡುವುದರಿಂದ ಹೊಗೆ ಹೊಲಸು ಅಲ್ಲಿ ಪ್ರವೇಶಿಸುವಂತಿಲ್ಲ. ಆಹಾರಧಾನ್ಯಗಳನ್ನು, ಅಡುಗೆ ಪದಾರ್ಥಗಳನ್ನು ಹಿತ್ತಾಳೆ, ಸ್ಟೀಲು, ಅಲ್ಯುಮಿನಿಯಮ್ ಇಲ್ಲವೆ ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿ ಒಪ್ಪವಾಗಿ ಓರಣವಾಗಿ ಇಡುವುದರಿಂದ ಅಡುಗೆಮನೆಯ ಶೋಭೆ ಹೆಚ್ಚುತ್ತದೆ. ಉಪ್ಪಿನಕಾಯಿ, ಮೊರಬ್ಬಗಳನ್ನು ಗಾಜಿನ ಭರಣಿಗಳಲ್ಲಿ (ಜಾಡಿ) ಹಾಕಿ ಸಾಲುಸಾಲಾಗಿ ಇಡುವರು. ಅಡುಗೆಮನೆಯಲ್ಲಿ ತರಕಾರಿಗಳನ್ನೇ ಹೂದಾನಿಗಳಲ್ಲಿ ಅಲಂಕರಿಸಿ ಇಡಬಹುದಾಗಿದೆ.

ಮಲಗುವ ಕೋಣೆಯ ಗೋಡೆಗಳಿಗೆ ಕಣ್ಣಿಗೆ ತಂಪನ್ನೀಯಬಲ್ಲ ತಿಳಿಬಣ್ಣವನ್ನು ಉಪಯೋಗಿಸುತ್ತಾರೆ. ಬಾಗಿಲು, ಕಿಟಕಿಗಳಿಗೆ ಕಲಾಪೂರ್ಣವಾದ ಅಂದಚೆಂದದ ಪರದೆಗಳನ್ನಿಳಿಬಿಡುತ್ತಾರೆ. ಮಂಚಕ್ಕೆ ಸೊಳ್ಳೆಪರದೆ, ನೆಲಕ್ಕೆ ಚಾಪೆ, ಬಾಗಿಲಿಗೆ ಕಾಲೊರಸಿ ಹಾಕುತ್ತಾರೆ. ಮಲಗುವ ಕೋತ್ಣೆಯಲ್ಲಿ ವೈಯಕ್ತಿಕ ಭಾವಚಿತ್ರಗಳನ್ನು ಹಾಕಬಹುದು. ಹೂದಾನಿಗಳಲ್ಲಿ ಹೊಸ ಹೂಗಳಿದ್ದರೆ ದುಡಿದು ದಣಿದು ಬಂದ ದೇಹಕ್ಕೆ ಶಾಂತಿಯೂ ಮನಸ್ಸಿಗೆ ಆನಂದವೂ ಸಿಗುತ್ತವೆ.

ಮನೆಯ ಒಳಗಿನ ಅಲಂಕರಣದಂತೆ ಮನೆಯ ಹೊರಗಿನ ಅಲಂಕರಣವೂ ಮುಖ್ಯ ವಿಷಯವಾಗಿದೆ. ಮನೆಯ ಹೊರಬಾಗಿಲಿನ ಅಕ್ಕಪಕ್ಕಗಳಲ್ಲಿ ಬಣ್ಣ ಬಣ್ಣದ ಕ್ರೋಟನ್ ಮತ್ತು ಹೂಗಳ ಗಿಡಗಳಿರಬೇಕು. ಬಾಗಿಲ ಮೇಲೆ ಏರಿದಂತೆ ಮಲ್ಲಿಗೆಯೋ ಜಾಜಿಯೋ ಬೋಗನ್‍ವಿಲವೋ ಹಬ್ಬಿದ್ದರೆ ಸೊಗಸು ಇನ್ನೂ ಹೆಚ್ಚುತ್ತದೆ. ಮನೆಗೆ ನೇರ ಎದುರಿಗೊ ಒಂದು ಪಕ್ಕದಲ್ಲೊ ಸಣ್ಣ ಹೂತೋಟ ಒಂದಿದ್ದು ಅದರ ನಡುವೆ ನಾಲ್ಕು ತೋಟದ ಕುರ್ಚಿಗಳನ್ನು ಹಾಕಿದ್ದರೆ ಅಲ್ಲಿ ಕೂಡಲು ದೇಹಕ್ಕೂ ಮನಸ್ಸಿಗೂ ಬಹಳ ಹಿತ. ಕುಂಡಗಳಿದ್ದರೆ ಜಾಗದ ಮಿತವ್ಯಯವಾಗುತ್ತದಲ್ಲದೆ ಅವುಗಳ ವಿನ್ಯಾಸದಲ್ಲೂ ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ದೇಹಾಲಂಕರಣದಂತೆ ಗೃಹಾಲಂಕರಣವೂ ಎಂದು ಔಚಿತ್ಯದ ಎಲ್ಲೆಯನ್ನು ಮೀರಬಾರದು. ರಬ್ಬಾರುಬ್ಬಿಯಾದ ಬಣ್ಣಗಳು, ಅತ್ಯಲಂಕರಣದ ಆಣೆಕಟ್ಟುಗಳು, ಪರದೆಗಳು ಇದ್ದಲ್ಲಿ ಇಡೀ ಮನೆ ರಸಿಕರ ಮನೆಗೆ ಜುಗುಪ್ಸೆಯನ್ನು ತರಬಲ್ಲದು. ಆದ್ದರಿಂದ ಮಿತಾಲಂಕರಣವೇ ನಿಜವಾಗಿ ಸರಿಯಾದ ಅಲಂಕರಣ.

ಮಿಕ್ಕ ವಿಷಯಗಳಲ್ಲಿ ಹೇಗೋ ಹಾಗೆ ಗೃಹಾಲಂಕರಣ ವಿಚಾರದಲ್ಲೂ ಆಗಲೇ ಒಂದು ಸಂಪ್ರದಾಯ ಏರ್ಪಟ್ಟು ಬಿಟ್ಟಿದೆ. ಇದರಿಂದಾಗಿ ಅನೇಕ ಮನೆಗಳ ಆಂತರಿಕ ವಿನ್ಯಾಸ ಏಕರೀತಿಯದಾಗಿ ತೋರುತ್ತದೆ. ಇದನ್ನು ಮುರಿದು ಹೊಸ ಬಗೆಯಲ್ಲಿ ಹೊಸ ಅಭಿರುಚಿಗಳನ್ನು ವ್ಯಕ್ತಪಡಿಸುವಂತೆ ಮನೆಗಳನ್ನು ಅಲಂಕರಿಸುವುದರ ಕಡೆ ಗಮನ ಕೊಡುವುದು ಒಳ್ಳೆಯದು.

ಅಲಂಕರಣಕ್ಕೂ ಶುಚಿತ್ವಕ್ಕೂ ಹತ್ತಿರದ ಸಂಬಂಧವಿದೆ. ಒಂದು ದೃಷ್ಟಿಯಿಂದ, ಅಲಂಕರಣಗಳು ಇಲ್ಲದಿದ್ದರೂ ತೀರ ಶುಚಿಯಾಗಿರುವ ಮನೆ ಸುಂದರವಾಗಿಯೇ ಕಾಣುತ್ತದೆ. ಒಂದು ವೇಳೆ ಕಿಟಕಿ, ಬಾಗಿಲುಗಳಿಗೆ ತೆರೆಗಳನ್ನು ಧಾರಾಳವಾಗಿ ಉಪಯೋಗಿಸಿದ್ದರೆ, ನೆಲಕ್ಕೆ ರತ್ನಗಂಬಳಿಯನ್ನು ಹಾಸಿದ್ದರೆ ಕೇವಲ ಒಂದೇ ವಾರದಲ್ಲಿ ಅವುಗಳಲ್ಲಿ ಒಂದು ಗಾಡಿ ದೂಳು, ಕೊಳೆ ಸೇರಿಬಿಡುತ್ತವೆ. ಹಾಗಾದಲ್ಲಿ ಅವುಗಳಿಂದ ಆರೋಗ್ಯಕ್ಕೆ ತುಂಬ ಅಪಾಯ. ಆಣಿಕಟ್ಟುಗಳ ಸಂದಿನಲ್ಲಿ ದೂಳು, ಹೂಳು, ತಿಗಣೆಗಳು ಮನೆಮಾಡುತ್ತವೆ. ದಿನಕ್ಕೆ ಎರಡು ಬಾರಿ ದೂಳು ಹೊಡೆದು, ವಾರ ಎರಡು ವಾರಗಳಿಗೊಮ್ಮೆ ಪರೀಕ್ಷಿಸಿ ಅವನ್ನು ಸಂರಕ್ಷಿಸಬೇಕಾಗುತ್ತದೆ.

ಗೃಹಾಲಂಕರಣ ವಿದ್ಯೆ ಈಗ ಒಂದು ಶಾಸ್ತ್ರವಾಗಿ ಬೆಳೆದಿದೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿದು ಡಿಪ್ಲೊಮ ಮತ್ತು ಪದವಿ ಪರೀಕ್ಷೆಗಳ ಪಠ್ಯವಾಗಿದೆ. (ಎಸ್.ಎಚ್.ಎಂ.)

ಉಲ್ಲೇಖನಗಳು[ಬದಲಾಯಿಸಿ]

  1. Pile, J., 2003, Interior Design, 3rd edn, Pearson, New Jersey, USA
  2. Brief History of Interior Design (2007) Retrieved December 7, 2012, from www.interior-design-school.net