ಗೃಹರಕ್ಷಕ ದಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಾಂಛನ
ರಕ್ಷಣ ವಿಧಾನ

ಭಾರತ ದೇಶದ ಆಂತರಿಕ ಭದ್ರತೆಯನ್ನು ರಕ್ಷಿಸಲು ನೆರವಾಗುವ ನಾಗರಿಕರ ಸುಸಂಘಟಿತ ಸ್ವಯಂಸೇವಕ ದಳ (ಹೋಂ ಗಾರ್ಡ್ಸ್).

ರಾಜಕೀಯ, ಕೋಮುವಾರು ಮತ್ತು ಭಾಷಾವಾರು ಪಂಗಡಗಳಿಂದ ದೂರವಿದ್ದು, ತಮ್ಮ ನಿತ್ಯದ ಉದ್ಯೋಗ ಮತ್ತು ದಿನಚರಿಯ ಜೊತೆಗೆ ದೇಶಸೇವೆಗೆ ಕೊಂಚ ಕಾಲವನ್ನು ಮೀಸಲಿಡುವ ರಾಷ್ಟ್ರಕರ ಸೇವಾದಳವಿದು. ನಾಡಿನ ಶಾಂತಿಪಾಲನೆ ಇದರ ಮುಖ್ಯ ಕರ್ತವ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂಚನೆಯಂತೆ ಹೊಣೆ ಯಾದ ಕರ್ತವ್ಯವನ್ನು ಮತ್ತೊಬ್ಬರಿಗೆ ಹೊರೆ ಆಗದಂತೆ ನೆರವೇರಿಸುತ್ತದೆ.

ಆರಂಭ[ಬದಲಾಯಿಸಿ]

1946ರ ಡಿಸೆಂಬರಿನಲ್ಲಿ ಗೃಹರಕ್ಷಕ ದಳದ ಬೀಜಾಂಕುರವಾಯಿತೆನ್ನಬಹುದು. ಮುಂಬಯಿ ಪ್ರಾಂತ ಕೋಮುಗಲಭೆಗಳಿಂದ ತತ್ತರಿಸುತ್ತಿದ್ದಾಗ ಕೆಲವು ಮಂದಿ ಸಮಾಜ ಸೇವಕರೂ ನಾಗರಿಕ ಪ್ರಜ್ಞೆಯುಳ್ಳ ಯುವಕರೂ ನಾಡಿನ ಶಾಂತಿಪಾಲನೆಗೆ, ಜನರ ಮಾನ, ಪ್ರಾಣ ಮತ್ತು ಆಸ್ತಿರಕ್ಷಣೆಗೆ ಮುಂದೆ ಬಂದರು. ಮುಂಬಯಿ ಸರ್ಕಾರ ಇಂಥ ಒಂದು ಸ್ವಯಂ ಸೇವಕ ದಳದ ಅಗತ್ಯತೆಯನ್ನು ಮನಗಂಡು ಮುಂಬಯಿ ಗೃಹರಕ್ಷಕ ದಳದ ಕಾಯಿದೆಯನ್ನು ಜಾರಿಗೆ ತಂದು (1947) ಗೃಹರಕ್ಷಕ ದಳವನ್ನು ಶಾಸನಬದ್ಧ ದಳವನ್ನಾಗಿ ಪರಿವರ್ತಿಸಿತು. ಇತರ ರಾಜ್ಯಸರ್ಕಾರ ಗಳು ಕ್ರಮೇಣ ಆ ಮಾರ್ಗವನ್ನು ಅನುಸರಿಸಿದುವು. ಮೊದಲು ಪೊಲೀಸರ ಜೊತೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇದರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಬರಬರುತ್ತ ಗೃಹರಕ್ಷದಳದ ಸೇವೆಯನ್ನು ರಾಷ್ಟ್ರದ ಎಲ್ಲ ರೀತಿಯ ಪರಿಸ್ಥಿತಿಗಳಲ್ಲೂ ಪೋಲಿಸರ ಮತ್ತು ರಾಷ್ಟ್ರ ರಕ್ಷಣಾ ಪಡೆಗಳ ಜೊತೆ ಉಪಯೋಗಿಸಿಕೊಳ್ಳಲಾಗುತ್ತಿದೆ.

ಆಡಳಿತ ವ್ಯವಸ್ಥೆ[ಬದಲಾಯಿಸಿ]

ಗೃಹರಕ್ಷಕ ದಳ ಕೇಂದ್ರಸರ್ಕಾರದ ಗೃಹ ಮಂತ್ರಾಲಯ ವಿಭಾಗಕ್ಕೆ ಸೇರಿದೆ. ನಾಗರಿಕ ರಕ್ಷಣಾ ಪ್ರಧಾನ ಕಾರ್ಯನಿರ್ವಹಣ ಅಧಿಕಾರಿಗಳು (ಡೈರೆಕ್ಟರ್-ಜನರಲ್, ಸಿವಿಲ್ ಡಿಫೆನ್ಸ್‌) ಕೇಂದ್ರದಿಂದ ಇಡೀ ರಾಷ್ಟ್ರದ ಗೃಹರಕ್ಷಕ ದಳವನ್ನು ನಿಯಂತ್ರಿಸುತ್ತಾರೆ. ಪ್ರತಿ ರಾಜ್ಯದ ರಾಜಧಾನಿಯಲ್ಲಿ ರಾಜ್ಯ ಗೃಹರಕ್ಷಕ ದಳದ ಕೇಂದ್ರ ಕಚೇರಿ ಇದ್ದು ಒಬ್ಬ ಐ.ಪಿ.ಎಸ್. ಗ್ರೇಡಿನ ಕಮಾಂಡೆಂಟ್ ಜನರಲ್ ಅದರ ಮುಖ್ಯಸ್ಥರಾಗಿರುತ್ತಾರೆ. ಇವರು ಇಡೀ ರಾಜ್ಯದ ಗೃಹರಕ್ಷಕ ದಳದ ತರಬೇತಿ, ಆಡಳಿತ ಮುಂತಾದ ಕಾರ್ಯವನ್ನು ನಿರ್ವಹಿಸುತ್ತಾರೆ. ರಾಜ್ಯಗಳ ಪ್ರಮುಖ ಜಿಲ್ಲೆಗಳಲ್ಲಿ ಜಿಲ್ಲಾ ಕಮಾಂಡೆಂಟರವರು ಇದ್ದು, ಡೆಪ್ಯುಟಿ ಕಮಾಂಡೆಂಟ್, ಅಡ್ಜ್ಯುಟೆಂಟ್ ಸ್ಟಾಫ್ ಆಫೀಸರ್ಸ್‌ ಇವರುಗಳ ನೆರವಿನಿಂದ ಜಿಲ್ಲಾ ಗೃಹರಕ್ಷಕ ದಳದ ತರಬೇತಿ, ನಿಯಂತ್ರಣ ಮತ್ತು ಆಡಳಿತವನ್ನು ನೋಡಿಕೊಳ್ಳುತ್ತಾರೆ. ಇವರಲ್ಲದೆ ಡಿವಿಷನಲ್ ಕಂಪನಿ ಮತ್ತು ಪ್ಲಟೂನ್ ಕಮಾಂಡರ್ಸ್‌, ಸಾರ್ಜೆಂಟ್ ಮೇಜರ್, ಪ್ಲಟೂನ್ ಸಾರ್ಜೆಂಟ್ಸ್‌ ಮತ್ತು ಸೆಕ್ಷನ್ ಲೀಡರ್ಸ್‌ ಎಂಬ ಕಿರಿಯ ಗೃಹರಕ್ಷಕ ಅಧಿಕಾರಿಗಳು ಸಹ ಇರುತ್ತಾರೆ. ಇವರೆಲ್ಲರೂ ಗೃಹರಕ್ಷಕ ದಳಕ್ಕೆ ಸೇರಿ ತರಬೇತು ಪಡೆದು ಮುಂದೆ ಆಯ್ಕೆಯಾಗಿ ಬಂದವರು.

ಇವರಿಗೆ ಗೊತ್ತಾದ ಸರ್ಕಾರಿ ಸಂಬಳವಿಲ್ಲ. ನಿಗದಿಯಾದ ಇತರ ಭತ್ಯಗಳು ಮಾತ್ರ ದೊರೆಯುತ್ತವೆ. ಸೇನಾದಳಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದಂಥವರಿಗೂ ಮಧ್ಯದಲ್ಲೇ ಸೇನೆಯಿಂದ ನಿವೃತ್ತಗೊಂಡ ಸೈನಿಕರಿಗೂ ಗೃಹರಕ್ಷಕ ದಳದಲ್ಲಿ ವಿಶೇಷ ಸ್ಥಾನಮಾನ ಕೊಡಲಾಗುವುದು.

ಮಹಿಳೆಯರೂ ಗೃಹರಕ್ಷಕದಳದಲ್ಲಿ ಉತ್ತಮ ಸೇವೆ ಸಲ್ಲಿಸಬಹುದೆಂದು ಮನಗಂಡು ಮಹಿಳಾ ಗೃಹರಕ್ಷಕ ದಳವನ್ನು ಸಹ ಜಾರಿಗೆ ತರಲಾಗಿದೆ. ಇಂದು ಭಾರತಾದ್ಯಂತ ಎಲ್ಲ ರಾಜ್ಯ ಗಳಲ್ಲೂ ಗೃಹರಕ್ಷಕ ದಳಗಳಿವೆ.


ಸೇರಲು ಅರ್ಹತೆಗಳು[ಬದಲಾಯಿಸಿ]

ಆಯಾ ಜಿಲ್ಲಾವಾಸಿಗಳಾದ ಭಾರತೀಯ ನಾಗರಿಕರು ಈ ದಳವನ್ನು ಸೇರಬಹುದು. ಅಂಥವರ ವಯಸ್ಸು 20-50ರ ಅಂತರದಲ್ಲಿರಬೇಕು. ಯಾವ ರೀತಿಯಿಂದಲೂ ನ್ಯಾಯಾಲಯದಿಂದ ಅವರು ಶಿಕ್ಷೆಗೆ ಒಳಗಾಗಿರಬಾರದು. ಸಮಾಜಕಂಟಕ ವ್ಯಕ್ತಿಗಳಾಗಿರಬಾರದು. ಅಂಟು ರೋಗ-ರುಜಿನಗಳೂ ಅಂಗ ನ್ಯೂನತೆಯೂ ಇರಬಾರದು. ನಿರ್ದಿಷ್ಟ ದೇಹದ ಅಳತೆಯಿಂದ ಕೂಡಿ ದೃಢಕಾಯ ರಾಗಿರಬೇಕು. ಓದು ಬರಹ ತಿಳಿದಿರಬೇಕು. ಒಮ್ಮೆ ಸೇರಿದ ಬಳಿಕ ಆ ವ್ಯಕ್ತಿಗೆ ವಯಸ್ಸು 55 ತುಂಬುವ ವರೆಗೂ ಆತನ ಸೇವೆಯನ್ನು ಬಳಸಿಕೊಳ್ಳಲಾಗುವುದು. ಮತ್ತು ಮುಂದುವರಿಸಬೇಕಾದರೆ ವ್ಯಕ್ತಿಯ ಘನತೆ, ದೇಹ ದೃಢತೆ, ಆತನ ಸೇವೆ ಮುಂತಾದವನ್ನು ಪರಿಗಣಿಸಲಾಗುವುದು. ಸರ್ಕಾರ ವಿಧಿಸಿರುವ ನಿಯಮಾನುಸಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಂಥವರಿಗೆ ಸಮವಸ್ತ್ರ, ಭುಜಕೀರ್ತಿ ಮುಂತಾದವುಗಳನ್ನು ಉಚಿತವಾಗಿ ಒದಗಿಸಿ ಯುಕ್ತ ಶಿಕ್ಷಣವನ್ನು ನೀಡಿ ತರಬೇತು ಮಾಡುತ್ತಾರೆ. ಭಾರತಾದ್ಯಂತ ಸಮವಸ್ತ್ರ ಒಂದೇ ರೀತಿ ಇರುವುದರಿಂದ ಹಾಗೂ ಒಂದೇ ರೀತಿಯ ಶಿಕ್ಷಣ ನೀಡುವುದರಿಂದ ಗೃಹರಕ್ಷಕ ದಳ ನಿಜಕ್ಕೂ ಇತರ ರಾಷ್ಟ್ರೀಯ ಬಲಗಳಾದ ರಕ್ಷಣಾಬಲಗಳು ಮತ್ತು ಪ್ರಾದೇಶಿಕ ಸೇನೆಗಳಂತೆ ಅಖಿಲ ಭಾರತೀಯವಾಗಿ ಇರುವುದು.


ತರಬೇತಿ[ಬದಲಾಯಿಸಿ]

ಎಲ್ಲ ಗೃಹರಕ್ಷಕ ಸದಸ್ಯರಿಗೆ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತರಬೇತು ನೀಡಲಾಗುವುದು. ವಾರಕ್ಕೆ 3 ರಿಂದ 4 ದಿವಸಗಳು ಬೆಳಗ್ಗೆ ನಿಯಮಿತ ಪೆರೇಡ್ ಇರುತ್ತದೆ. ದೈಹಿಕ ಆರೋಗ್ಯ, ದೃಢತೆ ಮತ್ತು ಶ್ರಮದಾಯಕ ಕೆಲಸಕ್ಕೆ ಸಹಾಯಕವಾಗುವ ರೀತಿ ಈ ಶಿಕ್ಷಣ ಉಂಟು. ಇದರ ಜೊತೆಗೆ ಕೆಲವು ವಿಶಿಷ್ಟವಾದ ಉಪಯುಕ್ತ ವಿಷಯಗಳಲ್ಲಿ ಎಂದರೆ ಪ್ರಥಮ ಚಿಕಿತ್ಸೆ, ಅಗ್ನಿಶಮನ ಮತ್ತು ರಕ್ಷಣೆ, ಲಾಠಿ, ಬಂದೂಕು ಇವನ್ನು ಉಪಯೋಗಿಸುವ ವಿಧಾನ ಮುಂತಾದವನ್ನು ಪರಿಣತರಿಂದ ಹೇಳಿಕೊಡಲಾಗುವುದು. ಶಸ್ತ್ರಸಹಿತ ಕವಾಯತಿ, ಜನರ ಗುಂಪಿನ ಹತೋಟಿ ಮತ್ತು ಹದ್ದುಮೀರಿದ ಗುಂಪನ್ನು ಶಾಂತಿರಕ್ಷಣೆಗಾಗಿ ಚದುರಿಸುವುದು ಮುಂತಾದವನ್ನು ಸಹ ಕಲಿಸುತ್ತಾರೆ. ಜಿಲ್ಲಾಮಟ್ಟದ ಈ ತರಬೇತಿಗಳಲ್ಲಿ ಉತ್ತೀರ್ಣರಾದ ಕೆಲವರನ್ನು ರಾಜ್ಯಮಟ್ಟದ ತರಬೇತಿಗಾಗಿ ಆಯ್ಕೆ ಮಾಡಿ ರಾಜ್ಯ ಗೃಹರಕ್ಷಕ ದಳದ ತರಬೇತಿ ಕೇಂದ್ರಕ್ಕೆ ಕಳಿಸಲಾಗುವುದು. ಅಲ್ಲಿ ಅವರಿಗೆ ನೀಡುವ ಶಿಕ್ಷಣ ವಿಷಯಗಳೆಂದರೆ ಅಗ್ನಿಶಮನ, ಪ್ರಥಮ ಚಿಕಿತ್ಸೆ, ಶಸ್ತ್ರದ ಉಪಯೋಗ ಇತ್ಯಾದಿ. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದವರ ಸೇವೆಯನ್ನು ಆಯಾ ಜಿಲ್ಲಾ ಗೃಹರಕ್ಷಕ ದಳ ತರಬೇತಿ ಕೇಂದ್ರಗಳು ಉಪಯೋಗಿಸಿಕೊಳ್ಳುವುವು. ಇಂಥವರಿಗೆ ಮುಂದೆ ವಾರ್ಷಿಕ ಬೇಸಗೆ ತರಬೇತಿ ಶಿಬಿರಗಳನ್ನು ಕೂಡ ನಡೆಸುವುದುಂಟು. ಒಬ್ಬ ನುರಿತ ಗೃಹರಕ್ಷಕ ಮೊದಲಾಗಿ ಒಬ್ಬ ಆದರ್ಶ ಪ್ರಜೆ; ಎರಡನೆಯದಾಗಿ ಆತ ಇತರರನ್ನು ಸರಿದಾರಿಗೆ ಎಳೆದು ತರಲು ಶಿಕ್ಷಣವನ್ನು ಪಡೆದಿರುವ ತಂತ್ರಜ್ಞ. ಇಂಥವರ ದಳ ರಾಷ್ಟ್ರದ ಆಂತರಿಕ ರಕ್ಷಣಾ ಸೇವೆಯಲ್ಲಿ ವಹಿಸುವ ಪಾತ್ರ ಮಹತ್ತ್ವವಾದದ್ದು. ಸಾಮಾನ್ಯವಾಗಿ ಈ ದೇಶಸೇವೆ ಒಪ್ಪೊತ್ತಿನದಾದರೂ-ಎಂದರೆ ಗೃಹರಕ್ಷಕರು ಬೇರೆ ಬೇರೆ ಸ್ವಂತ ಉದ್ಯೋಗಗಳಲ್ಲಿ ರುವವರು ನಿಯಮಿತ ವೇಳೆಯಲ್ಲಿ ಗೃಹರಕ್ಷಕ ದಳದ ಶಿಕ್ಷಣಕ್ಕೆ, ಸೇವೆಗೆ ಬರುವವರು-ಗಂಡಾಂತರ ಪರಿಸ್ಥಿತಿಗಳಲ್ಲಿ ಪುರ್ಣಾವಧಿ ಸೇವೆ ಸಲ್ಲಿಸಲು ಸಹ ಗೃಹರಕ್ಷಕರು ಬದ್ಧರು.

ಸೇವೆ ಮತ್ತು ಕೊಡುಗೆ[ಬದಲಾಯಿಸಿ]

ಕೇಂದ್ರ ಮತ್ತು ರಾಜ್ಯಗಳ ಮಹತ್ವಪುರ್ಣ ದಿನಗಳ ಪೆರೇಡುಗಳಲ್ಲಿ ಗೃಹರಕ್ಷಕ ದಳ ಭಾಗವಹಿಸುತ್ತದೆ. ಪೋಲಿಸ್ ಸೈನಿಕರ ಜೊತೆಗೂಡಿ ಪ್ರವಾಹಗಳ ಹಾವಳಿಗೆ ಸಿಕ್ಕಿದ ಜನರ ಪ್ರಾಣ ಆಸ್ತಿ ಇವುಗಳ ರಕ್ಷಣಾ ಕಾರ್ಯದಲ್ಲಿ ನೆರವಾಗುತ್ತದೆ. ರಾಜ್ಯ ಮತ್ತು ಕೇಂದ್ರ ಚುನಾವಣೆಗಳಲ್ಲಿ ಇದು ಸೇವೆ ಸಲ್ಲಿಸುತ್ತದೆ. ರಸ್ತೆಯಲ್ಲಿ ಜನ ಹಾಗೂ ವಾಹನ ನಿಯಂತ್ರಣ ಮಾಡಲಿಕ್ಕೂ ಗಲಭೆ ದೊಂಬಿ ಮುಂತಾದವನ್ನು ಹತ್ತಿಕ್ಕಿ ಶಾಂತಿಪಾಲಿಸಲಿಕ್ಕೂ ಇದರ ಉಪಯೋಗ ಉಂಟು. ಗೃಹರಕ್ಷಕ ದಳದ ಸೇವೆಯನ್ನು ಇಂದು ಪೋಲಿಸರ ಬದಲಾಗಿ ಅಲ್ಲದೇ ಅವರ ಸಂಖ್ಯೆ ಸಾಲದೆ ಬಂದಾಗ ಕೂಡ ಉಪಯೋಗಿಸಿಕೊಳ್ಳುವುದಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: