ಗುಹಿಲರು

ವಿಕಿಪೀಡಿಯ ಇಂದ
Jump to navigation Jump to search

ಉತ್ತರಭಾರತದಲ್ಲಿಯ ರಾಜಸ್ತಾನ, ಪಂಜಾಬ್ ಮತ್ತು ಕಾಠಿಯಾವಾಡ್ ಪ್ರದೇಶಗಳನ್ನು ಆಳಿದ ಒಂದು ರಾಜವಂಶ.

Guhila headquarters at various times

ಈ ವಂಶದವರನ್ನು ಗುಹಿಲ ಪುತ್ರರು, ಗುಹಿಲೋತರು, ಗುಹಿಲೋಟರು, ಗೋಭಿಲಪುತ್ರರು, ಗುಹಿಲಗೋತ್ರರು, ಎಂದೂ ಈ ವಂಶವನ್ನು ಗುಹಿಲಾಂಗಜ, ಗೆಹಲೊಟ ಎಂದೂ ಕರೆಯಲಾಗಿದೆ.

ಚರಿತ್ರೆ[ಬದಲಾಯಿಸಿ]

ಇವರ ಚರಿತ್ರೆಯ ಪ್ರಾರಂಭದ ಪುಟಗಳು ಇನ್ನೂ ಅನೇಕ ವಿವಾದಯುತ ವಿಷಯಗಳಿಂದಲೇ ಕೂಡಿವೆ. ವಿಕ್ರಮ ಸಂವತ್ 1034ರಲ್ಲಿದ್ದ (977) ಈ ವಂಶದ ಅರಸನಾದ ಶಕ್ತಿಕುಮಾರನ ಆತಪುರ ಶಾಸನದಿಂದ ಇವರು ಮೂಲತಃ ಆನಂದಪುರದ ವಿಪ್ರಕುಲದವರೆಂದು ಮತ್ತು ಶ್ರೀಗುಹದತ್ತ ಈ ವಂಶದ ಮೊದಲ ರಾಜನೆಂದು ತಿಳಿದುಬಂದಿದೆ. ಇವರು ಸೂರ್ಯವಂಶದವರೆಂದೂ ರಾಮನ ವಂಶದವರೆಂದೂ ರಾಜಸ್ತಾನದ ಜನಪದ ಗೀತ ಹಾಗೂ ಕಥಾನಕಗಳಿಂದ ತಿಳಿದುಬರುತ್ತದೆ. ಇವರು ಮೇವಾಡ ಸಂಸ್ಥಾನದ ಅಧಿಪತಿಗಳಾಗಿದ್ದರು. ಆದರೆ ಪ್ರಾರಂಭದಲ್ಲಿ ಇವರು ಚಿತ್ತೋಡ (ಚಿತೋಡಗಡ) ಮೌರ್ಯ (ಮೋದಿ) ರಾಜರ, ಕನೌಜದ ಪ್ರತಿಹಾರರ, ಅಣಿಹಲ ಪಟ್ಟಣದ ಚಾಳುಕ್ಯರ ಮಾಳವಪರಮಾರರ ಮತ್ತು ಶಾಕಂಬರಿಯ ಚಾಹಮಾನರ ಮಾಂಡಲಿಕರಾಗಿದ್ದರು. ಈ ಚಾಳುಕ್ಯ, ಪರಮಾರ ಮತ್ತು ಚಾಹಮಾನರ ಸಾರ್ವಭೌಮತ್ವ ಗುಹಿಲವಂಶಜರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿತ್ತು. ಬಿಜಾಪುರ (ರಾಜಸ್ತಾನ) ಶಾಸನದಿಂದ ಪರಮಾರ ಮುಂಜ, ಚೆರವಾ ಶಾಸನದಿಂದ ಪರಮಾರ ಭೋಜ ಮತ್ತು ಚಿತ್ತೋಡ ಶಾಸನದಿಂದ ಚಾಳುಕ್ಯ ಕುಮಾರಪಾಲ ಇವರು ಈ ಪ್ರದೇಶಕ್ಕೆ ಒಡೆಯರಾಗಿದ್ದರೆಂಬುದು ಸ್ಪಷ್ಟವಿದೆ. ಪೃಥ್ವೀರಾಜ ವಿಜಯ ಗ್ರಂಥದಿಂದ ಚಹಮಾನರ 2ನೆಯ ವಾಕ್ಪತಿ ರಾಜನ ಕಾಲಕ್ಕೆ ಗುಹಿಲರ ರಾಜ್ಯ ಚಹಮಾನರ ಅಧೀನತೆ ಗೊಳಗಾಗಿತ್ತೆಂದು ತಿಳಿದುಬರುತ್ತದೆ. ಪೃಥ್ವೀರಾಜನ ತರುವಾಯ ಮುಸಲ್ಮಾನ ರಾಜರ ಕಾಲದಲ್ಲಿ ಇವರು ವಿಶೇಷ ಪ್ರಸಿದ್ಧಿ ಪಡೆದರು.

ಗುಹಿಲವಂಶದ ಬಳ್ಳಿ ಅನೇಕ ಮನೆತನಗಳಾಗಿ ಹಬ್ಬಿಕೊಂಡು ಬೆಳೆದಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ :

  1. ಮೇದಾಪಟದ (ಮೇವಾಡ) ಗುಹಿಲಪುತ್ರರದು,
  2. ಚಟ್ಸು ಮತ್ತು ದಬೋಕದ ಗುಹಿಲಪುತ್ರರದು
  3. ಸೌರಾಷ್ಟ್ರದ ಗುಹಿಲಪುತ್ರರದು,
  4. ಆಸಿಕದ ಗುಹಲಪುತ್ರರದು,
  5. ನಡೂಲಡಾಗಿಕದ ಗುಹಿಲಪುತ್ರರದು,
  6. ಸೆಸೋದಿಯಾದ ಗುಹಿಲಪುತ್ರರದು ಮತ್ತು
  7. ದುಂಗಪುರ ಹಾಗೂ ವಾಗ್ಡಾದ ಗುಹಿಲಪುತ್ರರದು. ಇವುಗಳಲ್ಲಿ ಮೇವಾಡದ ಮನೆತನವೇ ಮೂಲ ಹಾಗೂ ಮುಖ್ಯವಾದ್ದು. ನಾಗಹೃದ, ಚಿತ್ತೋಡ, ಆತಪುರ (ಆಹರ) ಇವು ಇವರಿಗೆ ರಾಜಧಾನಿಗಳಾಗಿದ್ದವು.


ಪ್ರಾರಂಭದಲ್ಲಿ ಆಳಿದ ರಾಜರ ವಿಷಯ ಆತಪುರ ಶಾಸನದಿಂದ ಈ ರೀತಿ ತಿಳಿದು ಬುರುತ್ತದೆ: ಗುಹದತ್ತ - ಭೋಜ -- ಮಹೇಂದ್ರ I - ನಾಗ - ಶೀಲ-ಅಪರಾಜಿತ-ಮಹೇಂದ್ರ II - ಕಾಲಭೋಜ - ಖೊಮ್ಮಾಣ I - ಭರ್ತೃಪಟ್ಟ I - ಸಿಂಹ - ಖೊಮ್ಮಾಣ II - ಮಹಾಯಕೋ-ಖೊಮ್ಮಾಣ III - (936) - ಭರ್ತೃಪಟ್ಟ II - ಅಲ್ಲಟ (951) - ನರವಾಹನ (971) - ಶಾಲಿವಾಹನ-ಶಕ್ತಿಕುಮಾರ (977). ಶಕ್ತಿಕುಮಾರನಿಗೆ ಮೇವಾಡರಾಷ್ಟ್ರದ ಆತಪುರ ರಾಜಧಾನಿಯಾಗಿತ್ತು. ತತ್ಪೂರ್ವದಲ್ಲಿ ಚಿತ್ತೋಡ ರಾಜಧಾನಿಯಾಗಿತ್ತು. ಈ ಅರಸರಲ್ಲಿ ಬಾಷ್ಪನೆಂಬ ಒಬ್ಬ ಬಹಳ ಪ್ರಸಿದ್ಧಿ ಹೊಂದಿದ್ದಾನೆ. ಬಾಷ್ಪನನ್ನು ಗುರುತಿಸುವುದು ಉಪಲಬ್ಧ ಸಾಮಗ್ರಿಯಿಂದ ಸಾಧ್ಯವಿಲ್ಲ. ಏಕೆಂದರೆ ಇವರಲ್ಲಿ ಗುಹದತ್ತನನ್ನು ಬಾಷ್ಪನೆಂದು ಸಿ.ವಿ. ವೈದ್ಯರು ಕಾಲಭೋಜನನ್ನು ಬಾಷ್ಪನೆಂದು ಜಿ.ಎಚ್. ಓರ್ಛಾ ಮತ್ತು 1ನೆಯ ಖೊಮ್ಮಾಣನನ್ನು ಬಾಷ್ಪನೆಂದು ಡಿ. ಆರ್. ಭಂಡಾರಕರ್ - ಹೀಗೆ ಭಿನ್ನಭಿನ್ನವಾಗಿ ಗುರುತಿಸಿದ್ದಾರೆ. 1ನೆಯ ಖೊಮ್ಮಾಣನ ಕಾಲಕ್ಕೆ ಅರಬರು ಮೇವಾಡದವರೆಗೆ ಬರಲು ಅವರನ್ನು ಹಿಂದಕ್ಕೆ ಅಟ್ಟಿದುದರಿಂದ ಆತನನ್ನೇ ಬಾಷ್ಪನೆಂದು ಜನ ಕರೆದಿರಬಹುದು. ಮತ್ತು ಖೊಮ್ಮಾಣ ರಾಸೊ ಗ್ರಂಥ ಆತನ ಪ್ರಶಸ್ತಿಯನ್ನು ಸೂಚಿಸುತ್ತದೆಂಬುದು ಭಂಡಾರ್ಕರರ ಅಭಿಪ್ರಾಯ. ಇದು ಗಮನಾರ್ಹವಾದ್ದು.


ಅಲ್ಲಟನ ಕಾಲದ ಪ್ರಾರಂಭದಲ್ಲಿ ಮೇವಾಡ ಗೂರ್ಜರ ಪ್ರತಿಹಾರರ ಅಧೀನದಲ್ಲಿತ್ತು. ಇವನು ಅದನ್ನು ಅವರಿಂದ ಪ್ರತಿಹಾರರ ದೇವಪಾಲನ ಕಾಲದಲ್ಲಿ ಸ್ವತಂತ್ರವನ್ನಾಗಿ ಮಾಡಿದ. ಇವನ ಕಾಲದಲ್ಲಿ ಮೇವಾಡ ಸಂಪತ್ಸಮೃದ್ಧಿಯಿಂದ ಕೂಡಿತ್ತೆಂದು ಸಾರಣೇಶ್ವರ ಶಿಲಾಶಾಸನದಿಂದ ತಿಳಿದುಬರುತ್ತದೆ. ಮುಂದೆ ಅಂಬಾಪ್ರಸಾದನ ಕಾಲಕ್ಕೆ ಇವರ ರಾಜ್ಯ ಚಹಮಾನ 2ನೆಯ ವಾಕ್ಪತಿರಾಜನ ಹಸ್ತಗತವಾಯಿತು. ಅನಂತರ ಮೇವಾಡ ಸ್ವಲ್ಪ ಅರಾಜಕತೆಗೆ ಒಳಗಾಯಿತು.


ಸು. 1108-1116ರ ಸಮಯಕ್ಕೆ ವಿಜಯಸಿಂಹನೆಂಬವನು ರಾಜ್ಯವಾಳುತ್ತಿದ್ದ ಬಗ್ಗೆ ತಿಳಿದುಬಂದಿದೆ. ಇವನಿಗೆ ರಾಣಿಯಾದ ಶಾಮಲದೇವಿಯ ಹೊಟ್ಟೆಯಲ್ಲಿ ಹುಟ್ಟಿದ ಅಲ್ಹಣದೇವಿಯೆಂಬ ಮಗಳಿದ್ದಳು. ಆಕೆಯನ್ನು ಕಳಚುರಿ ಗಯಕರ್ಣನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಸು. 1168ರಲ್ಲಿದ್ದ ರಣಸಿಂಹನ ಇಬ್ಬರು ಮಕ್ಕಳಾದ ಕ್ಷೇಮಸಿಂಹ ಮತ್ತು ರಾಹಪ ಇವರಿಂದ ಈ ಮನೆತನ ಎರಡಾಯಿತು. ಕ್ಷೇಮಸಿಂಹನ ವಂಶಜರು ರಾವಲ ಎಂದೂ ರಾಹಪನ ವಂಶಜರು ರಾಣಾ ಎಂದೂ ಪ್ರಸಿದ್ಧರಾದರು. ರಾಹಪನ ಮನೆತನದವರನ್ನು ಸೆಸೋದಿಯಾ ಮನೆತನದವರೆಂದೂ ಹೇಳಲಾಗುತ್ತದೆ. ಕ್ಷೇಮಸಿಂಹನಿಗೆ ಸಾಮಂತಸಿಂಹ ಮತ್ತು ಕುಮಾರಸಿಂಹ ಎಂಬ ಇಬ್ಬರು ಮಕ್ಕಳಿದ್ದರು. ಚಹಮಾನ ಕುಮಾರಪಾಲ ಮೇವಾಡವನ್ನು ಆಕ್ರಮಿಸಲು ಸಾಮಂತಸಿಂಹ ದುಂಗರಪುರ ಪ್ರದೇಶಕ್ಕೆ ಹೋಗಿ ಬನ್ಸವಾರದಲ್ಲಿ (ವಾಗ್ಡಾ) ನೆಲಸಿದ. ಮುಂದೆ ದುಂಗರಪುರದ ವಂಶ ಬೇರೆಯಾಗಿ ಬೆಳೆಯಿತು. ಆದರೆ ಸಾಮಂತಸಿಂಹನ ತಮ್ಮ ಕುಮಾರಸಿಂಹ ಚಹಮಾನರನ್ನು ಸೋಲಿಸಿ ಮೇವಾಡಕ್ಕಧಿಪತಿಯಾದ. ಇವನ ಮೊಮ್ಮಗನಾದ ಚೈತ್ರಸಿಂಹನ ಕಾಲಕ್ಕೆ (1213-56) ಗುಲಾಮಸಂತತಿಯ ಬಾದಶಹನಾದ ಅಲ್ತಮಷ್ ಈ ರಾಜ್ಯದ ಮೇಲೆ ದಾಳಿಮಾಡಿದ್ದ. ಈತನ ಅನಂತರ ತೇಜಸಿಂಹ, ಸಮರಸಿಂಹ ಮತ್ತು ರತನಸಿಂಹ ರಾಜ್ಯವನ್ನಾಳಿದರು.


ರತನಸಿಂಹನ ಕಾಲಕ್ಕೆ ಅಲ್ಲಾವುದ್ದೀನ್ ಖಲ್ಜಿ ರಾಜ್ಯದ ವಿಸ್ತರಕ್ಕೋ ರತನಸಿಂಹನ ಪತ್ನಿ ಪದ್ಮಿನಿಯ ಮೇಲಿನ ಮೋಹಕ್ಕೋ ಚಿತೋಡದ ಮೇಲೆ ಧಾಳಿ ಮಾಡಿ ಆ ದುರ್ಗವನ್ನು ವಶಪಡಿಸಿಕೊಂಡ. ಅಲ್ಲಾವುದ್ದೀನನ ಧಾಳಿಯ ಬಗ್ಗೆ ಅಮೀರ್ ಖುಸ್ರು, ಬರನೀ ಇವರು ಒಬ್ಬೊಬ್ಬರು ಒಂದೊಂದು ಬಗೆಯ ಅಭಿಪ್ರಾಯಗಳನ್ನು ಬರೆದಿದ್ದಾರೆ. ಇಬ್ಬರೂ ಸಮಕಾಲೀನವರೇ ಆಗಿದ್ದುದರಿಂದ ಈ ವಿಷಯ ಹೀಗೆ ಎಂದು ಸದ್ಯದಲ್ಲಿ ಹೇಳುವಂತಿಲ್ಲ. ಅಲ್ಲಾವುದ್ದೀನ ಚಿತ್ತೋಡವನ್ನು 1303ರ ಆಗಸ್ಟ್‌ 26ರಂದು ವಶಪಡಿಸಿಕೊಂಡ ಅದಕ್ಕೆ ಖಜ಼ರಾಬಾದ್ ಎಂದು ಹೆಸರಿಟ್ಟು ಆ ಪ್ರಾಂತದ ಆಡಳಿತವನ್ನು ತನ್ನ ಪುತ್ರ ಖಜ಼ರ್ಖಾನನಿಗೆ ವಹಿಸಿಕೊಟ್ಟ : ದಬ್ಬಾಳಿಕೆ, ಗೊಂದಲಗಳು ಹೆಚ್ಚಾಗಲು ಖಜ಼ರ್ಖಾನನು ರಾಜ್ಯಾಡಳಿತವನ್ನು ರಜಪುತ ಸೋನಿಗರ ವಂಶದ ಜಾಲೋರ್ ರಾಜ್ಯದ ರಾಜನಾದ ಮಾಲದೇವನಿಗೆ ವಹಿಸಿಕೊಟ್ಟ. ಮುಂದೆ ಕೆಲವು ವರ್ಷಗಳಲ್ಲಿ ರತನ್ಸಿಂಹನ ವಂಶದವನೇ ಆದ, ರಾಹಪನ ಸೆಸೋದಿಯಾ ಮನೆತನದ ರಾಣಾ ಹಮೀರ್ ಹಾಗೂ ಆತನ ಪುತ್ರ ಕ್ಷೇತ್ರಸಿಂಹ ಇವರು ಚಿತ್ತೋಡವನ್ನು ಪುನಃ ಗೆದ್ದು ಕೊಂಡರು. ಈ ತಂದೆ ಮಕ್ಕಳ ರಾಜ್ಯ ಮೇವಾಡಕ್ಕೆ ಮತ್ತೆ ಸುಕಾಲವನ್ನು ತಂದಿತು. ಸಂಪತ್ಸಮೃದ್ಧಿಯಿಂದ ಜನ ಸಂತೋಷಭರಿತರಾದರು. ಪುನರುಜ್ಜೀವನ ಹೊಂದಿದ ಮೇವಾಡದ ವೈಭವ ಕ್ಷೇತ್ರಸಿಂಹನ ತರುವಾಯ ರಾಜ್ಯವಾಳಿದ ಲಾಖ ಮತ್ತು ಮೋಕಲ್ ಇವರ ಸಮಯದಲ್ಲಿ ಸ್ಥಿರವಾಯಿತು. ಮುಂದೆ ಮಹಾರಾಣಾ ಕುಂಭನ ಕಾಲಕ್ಕೆ ಅದು ಇನ್ನಷ್ಟು ವರ್ಧಮಾನವಾಯಿತು. ಆತ ಮುಸಲ್ಮಾನರ ಹಸ್ತಗತವಾಗಿದ್ದ ಅನೇಕ ರಜಪುತ ರಾಜ್ಯಗಳನ್ನು ಮತ್ತೆ ಗೆದ್ದುಕೊಂಡ. ಹೀಗೆ ಆತನ ಆಡಳಿತಕ್ಕೊಳಪಟ್ಟ ರಾಜ್ಯಗಳೆಂದರೆ; ಬುಂದೇಲ್ಖಂಡ, ಮಾಂಡಲಗಡ, ಶಾಗರೋನ್, ಸಾರಂಗಪುರ, ಚಾಟುಸ್, ರಣಥಂಭೊರ್, ಖಾಟೂ, ಅಜಮೇರ್ ಮತ್ತು ನಾಗೋರ್, ಹಿರಿಮೆಗರಿಮೆಗಳ ಕುರುಹಾಗಿ ಆತನ ವಿಜಯ ಸ್ತಂಭ ಚಿತ್ತೋಡದಲ್ಲಿ ಇಂದಿಗೂ ನಿಂತಿದೆ. ಕುಂಭಸಿಂಹ ಶೂರನೂ ಧೀರನೂ ರಸಿಕನೂ ಕಲಾಪ್ರಿಯನೂ ಆಗಿದ್ದ. ಈತನ ಮೊಮ್ಮಗನೇ ರಾಣಾ ಸಾಂಗ.


ರಾಣಾ ಸಾಂಗನ ಮೂಲ ಹೆಸರು ರಾಣಾ ಸಂಗ್ರಾಮಸಿಂಹ. ಇವನು ಗುಜರಾತ್ ಹಾಗೂ ಮಾಲವದ ಸುಲ್ತಾನರನ್ನು ಸೋಲಿಸಿದ. ದಿಲ್ಲಿಯ ಸುಲ್ತಾನ ಇಬ್ರಾಹಿಂ ಲೋದಿಯನ್ನು ಹತ್ತಿಕ್ಕಿದ. ಇವನ ಕಾಲದಲ್ಲಿ ಮೊಗಲರ ಮೂಲಪುರುಷನಾದ ಬಾಬರ್ ಭಾರತದ ಮೇಲೆ ದಂಡೆತ್ತಿಬಂದ. ಬಾಬರ್ ಹಾಗೂ ರಾಣಾ ಸಾಂಗಾ ಇವರ ಮಧ್ಯೆ ಖಾನುವ ಎಂಬ ಸ್ಥಳದಲ್ಲಿ ಯುದ್ಧ ಜರುಗಿತು. ಇದರಲ್ಲಿ ರಾಣಾ ಸೋತ. ಈ ಸೋಲಿನಿಂದ ರಜಪುತ ರಾಜ್ಯದ ಮೇಲೆ ಅಳಿಸಲಾಗದ ಪರಿಣಾಮವುಂಟಾಯಿತು. 1568ರಲ್ಲಿ ಅಕ್ಬರನ ಕಾಲಕ್ಕೆ ಮೊಗಲರು ಮೇವಾಡವನ್ನು ಪೂರ್ತಿ ಗೆದ್ದುಕೊಂಡರು. ಈ ಸಮಯದಲ್ಲಿ ರಾಜನಾಗಿದ್ದ ರಾಣಾ ಪ್ರತಾಪ ಚಿತ್ತೋಡ ಹಾಗೂ ಉದಯಪುರ ಗಳನ್ನು ಬಿಟ್ಟು ಭಿಲ್ಲರ ಸೈನ್ಯವನ್ನು ಕಟ್ಟಿಕೊಂಡು ಕಾಡು ಮೇಡುಗಳಲ್ಲಿ ಅಲೆಯುವ ಪ್ರಸಂಗ ಬಂದರೂ ಮೊಗಲರ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲಿಲ್ಲ : ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲಿಲ್ಲ. ಈತ ಪ್ರಾರಂಭದಲ್ಲಿ ಕಷ್ಟಪಟ್ಟರೂ ಕಳೆದುಕೊಂಡ ರಾಜ್ಯದ ಎಷ್ಟೋ ಭಾಗವನ್ನು ಪುನಃ ಗೆದ್ದುಕೊಂಡ. ರಾಣಾ ಪ್ರತಾಪನ ಜೀವನಚರಿತ್ರೆ ರೋಮಾಂಚಕಾರಿಯಾಗಿದೆ. ಆತ ಸ್ವಾತಂತ್ರ್ಯಕ್ಕಾಗಿ ಕೊನೆಯವರೆಗೂ ಹೋರಾಡಿದ. ಅದಕ್ಕಾಗಿ ಹುಲ್ಲಿನ ಮೇಲೆ ಮಲಗುವ ಶಪಥ ಮಾಡಿದ್ದ. ಆತನ ತರುವಾಯ, ಮೊಗಲರ ಜಹಾಂಗೀರನ ಕಾಲದ ವೇಳೆಗೆ, ಆ ಮನೆತನ ಮೊಗಲರಿಗೆ ಸಂಪೂರ್ಣ ಶರಣಾಗತವಾಯಿತು. ಮುಂದೆ ಎಂದೂ ಅದು ಹಿಂದಿನ ವೈಭವದಿಂದ ಮೆರೆಯಲಿಲ್ಲ.

ಸು. 5-6 ಶತಮಾನದಿಂದ ರಾಜ್ಯಭಾರವನ್ನು ನಿರ್ವಹಿಸಿದ ಗುಹಿಲ ಪುತ್ರರು ರಜಪುತರ 36 ಮನೆತನಗಳಲ್ಲಿ ಬಹು ಶ್ರೇಷ್ಠಮನೆತನದವರೆಂದು ಪರಿಗಣಿತರಾಗಿದ್ದಾರೆ. ರಾಜಸ್ತಾನದ ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ. ಚಿತ್ರಕಲೆ ಎಲ್ಲವು ವೈಶಿಷ್ಟ್ಯಪೂರ್ಣವಾಗಿ ಬೆಳೆಯಲು ಇವರು ಬಹಳಮಟ್ಟಿಗೆ ಕಾರಣ. ಭಕ್ತೆ ಮೀರಾಬಾಯಿ ಈ ಮನೆತನದವಳು. ಶಿವಾಜಿಯೂ ಈ ವಂಶದವನೆಂದೇ ಹೇಳುವುದಿದೆ. ಆದರೆ ಅದು ನಿರ್ಧರಿಸಲಾಗದಿರುವ ವಿಷಯ. ಇವರ ಮನೆತನದವರು ಅಲ್ಲಲ್ಲಿ ಚಿಕ್ಕ ಸಂಸ್ಥಾನಾಧೀಶರಾಗಿ ಉಳಿದಿದ್ದರು. ಇವರ ಪ್ರದೇಶಗಳು 1947ರ ಅನಂತರ ಸ್ವತಂತ್ರಭಾರತದಲ್ಲಿ ವಿಲೀನವಾದುವು.


Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗುಹಿಲರು&oldid=894367" ಇಂದ ಪಡೆಯಲ್ಪಟ್ಟಿದೆ