ಗುಳೇಲಕ್ಕಮ್ಮ ದೇವಿಯ ಜಾತ್ರೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಕೂಡ್ಲಿಗಿ: ತಾಲ್ಲೂಕಿನ ರಾಮದುರ್ಗದ ಗ್ರಾಮದಲ್ಲಿ ಜನರು ಊರು ಬಿಡುವ ಮೂಲಕ ಈ ಭಾಗದಲ್ಲಿ ವಿಶಿಷ್ಟ ಗುಳೆ ಲಕ್ಕಮ್ಮ ಜಾತ್ರೆ ಆಚರಿಸಿದರು. ಗ್ರಾಮದ ಎಲ್ಲಾ ಮನೆಗಳಿಗೆ ಬೀಗ ಹಾಕಲಾಗಿತ್ತು.

ಐದು ವರ್ಷಕ್ಕೊಮ್ಮೆ ನಡೆಯುವ ಗುಳೆ ಲಕ್ಕಮ್ಮ ಜಾತ್ರೆ ಸಂದರ್ಭದಲ್ಲಿ ಊರಿನ ಜನರೆಲ್ಲರೂ ಊರ ಹೊರಗಿನ ಹೊಲ, ತೋಟಗಳಲ್ಲಿ ಬಿಡಾರ ಹೂಡುತ್ತಾರೆ. ಅದರಂತೆ ಮಂಗಳವಾರ ರಾತ್ರಿ ಗುಳೆ ಲಕ್ಕಮ್ಮ ದೇವಿಯ ಗಂಗೆ ಪೂಜೆ ಮಾಡಿ, ದೇವಸ್ಥಾನದ ಮುಂದೆ ಪ್ರತಿಷ್ಠಾಪನೆ ಮಾಡಲಾಗಿತ್ತು. ನಂತರ ರಾತ್ರಿ 12 ಗಂಟೆಯಿಂದ ಗ್ರಾಮಸ್ಥರೆಲ್ಲ ಅಕ್ಕಿ ಬೇಳೆ, ಬೆಲ್ಲಗಳಿಂದ ದೇವಿಗೆ ಉಡಿ ತುಂಬಿದರು.

ಬೆಳಗಿನ ಜಾವ ನಾಲ್ಕು ಗಂಟೆಯಿಂದ ವಿವಿಧ ಬಗೆಯ ಅಡುಗೆ, ತಿಂಡಿ, ತಿನಿಸುಗಳನ್ನು ಮಾಡಿಕೊಂಡು 10 ಗಂಟೆಯಿಂದ ಸಕಲ ವಾದ್ಯಗಳೊಂದಿಗೆ ದೇವಿಯ ಮೆರವಣಿಗೆ ಮಾಡಿಕೊಂಡು ಊರಿನ ಎಲ್ಲಾ ಜನ ತಮ್ಮ ಸಾಕು ಪ್ರಾಣಿಗಳೊಂದಿಗೆ ಹೊರಟು, ಗ್ರಾಮದ ಹೊರ ವಲಯದಲ್ಲಿರುವ ಮರದ ಕೆಳಗೆ ಗುಳೆ ಲಕ್ಕಮ್ಮನನ್ನು ಪ್ರತಿಷ್ಠಾಪನೆ ಮಾಡಿದರು.

ಗ್ರಾಮ ಹೊರ ವಲಯದಲ್ಲಿ ಬೀಡು ಬಿಟ್ಟ ಜನರು ತಮ್ಮ ಬೀಗರು, ಸ್ನೇಹಿತರೊಂದಿಗೆ ತಾವು ತಂದಿದ್ದ ವಿವಿಧ ಭಕ್ಷ್ಯ ಭೋಜನಗಳನ್ನು ಸವಿದು ಸಂಜೆ ನಾಲ್ಕು ಗಂಟೆಯ ನಂತರ ಮತ್ತೆ ಗ್ರಾಮದತ್ತ ನಡೆದರು.

ಜನರು ಗ್ರಾಮಕ್ಕೆ ಮರಳುವ ಮೊದಲು ಅಕ್ಕಿ ಬೆಲ್ಲದಿಂದ ಗುಳೆ ಲಕ್ಕಮ್ಮ ಪೂಜಾರಿಯೇ ಸಿದ್ದಪಡಿಸಿದ್ದ ಚರಗವನ್ನು ಗ್ರಾಮದಲ್ಲಿ ಚೆಲ್ಲಲಾಯಿತು.

ಇದರ ನಂತರ ದೇವಿಯೊಂದಿಗೆ ಜನರು ಗ್ರಾಮದೊಳಕ್ಕೆ ಹೋಗಿ ಗುಡಿ ತುಂಬಿಸುವುದರೊಂದಿಗೆ ಜಾತ್ರೆ ಸಂಪನ್ನವಾಯಿತು.

ಗುಳೇ ಲಕ್ಕಮ್ಮದೇವಿಯ ಜಾತ್ರೆ[ಬದಲಾಯಿಸಿ]

ಉತ್ತರ ಕರ್ನಾಟಕದ ಸಂಡೂರು’ ತಾಲ್ಲೂಕಿನ ’ಚೋರನೂರು ಗ್ರಾಮ’ ’ಗುಳೇ ಲಕ್ಕಮ್ಮ’ ಯೆಂಬ ಗ್ರಾಮದೇವತೆಯ ಜಾತ್ರೆಯ ಸಂದರ್ಭ ವರ್ಷದಲ್ಲಿ ಒಂದುಬಾರಿ ೩ ದಿನಗಳ ವರೆಗೆ ನಡೆಯುತ್ತದೆ. ಅಪ್ಪಟ ಹಳ್ಳಿಗಾಡಿನ ಸೊಗಸನ್ನು ’ಸಂಡೂರು’ ಹಾಗೂ ’ಕೂಡ್ಲಿಗಿ’ ತಾಲ್ಲೂಕುಗಳಲ್ಲಿ ನಡೆಯುತ್ತದೆ.'ರಾಮದುರ್ಗ' ಚೋರನೂರು, ಹಿರೇಹೆಗ್ದಾಳ, ’ಬುಡ್ಡೇನಹಳ್ಳಿ’, ’ಗೌರೀಪುರ’, ’ಓಬಳಾಪುರ’, ’ಜಿಗನೆಹಳ್ಳಿ’, ’ತ್ಯಾಗದ ಹಾಳ’, ’ಮಲ್ಲಾಪುರ’, ’ವಡ್ಡರಹಟ್ಟಿ’, ’ವಡ್ಡಿನಕಟ್ಟೆ’, ’ಬೊಮ್ಮಘಟ್ಟ’, ’ಹಿರಾಳ’, ಮಲ್ಲಾರಹಳ್ಳಿ’ಗಳ ಜನ ವಿಶೇಷವಾಗಿ ಪಾಲ್ಗೊಳ್ಳುತ್ತಾರೆ.

'ಹಿರೇಹೆಗ್ದಾಳ ಗ್ರಾಮ' ದಲ್ಲಿ ನಡೆಯುವ ಜಾತ್ರೆ ವಿಶಿಷ್ಠವಾದದ್ದು[ಬದಲಾಯಿಸಿ]

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ, 'ಹಿರೇಹೆಗ್ದಾಳ ಗ್ರಾಮ' ದಲ್ಲಿ ಇಂತಹ ವಿಶಿಷ್ಠ ಜಾತ್ರೆನಡೆಯುತ್ತದೆ. ನಮ್ಮ ನಾಡಿನ ಹಲವಾರು ಜಾತ್ರೆಗಳಲ್ಲಿ ತನ್ನದೇ ಅದ ವಿಶಿಷ್ಠವಾದ ಕ್ರಮವನ್ನು ಹೊಂದಿದೆ. ಜಾತ್ರೆಯದಿನ ಗ್ರಾಮಕ್ಕೆ ಗ್ರಾಮವೇ ಗುಳೆಹೋಗುವ, ಅಥವಾ ಗ್ರಾಮವೆಲ್ಲಾ ಖಾಲಿಯಾಗುವ ವಿಶೇಷ ಸಂಪ್ರದಾಯವನ್ನು ಈ ಜಾತ್ರೆಯಲ್ಲಿ ಚಾಚೂ ತಪ್ಪದೆ ನಡೆಸಲಾಗುತ್ತದೆ. ಗ್ರಾಮಸ್ಥರು ಒಂದು ದಿನದಮಟ್ಟಿಗೆ ತಮ್ಮ ಸಾಕುಪ್ರಾಣಿಗಳ ಸಮೇತ ಗ್ರಾಮವನ್ನು ತೊರೆಯುವ ಸಂಪ್ರದಾಯ, 'ಗುಳೇ ಲಕ್ಕನಜಾತ್ರೆ' ಯ ವಿಶೇಷತೆಗಳಲ್ಲೊಂದು. ಊರಿನ ಹೊರವಲಯದ ಹೊಲ, ತೋಟ, ಶಾಲೆಗಳ ಕೊಠಡಿ, ಗಿಡ-ಮರಗಳ ಅಡಿಯಲ್ಲಿ ವಾಸ್ತವ್ಯಹೂಡಿ, ಮಾರನೆಯದಿನ ಮನೆಗಳಿಗೆ ವಾಪಸ್ಸಾಗುತ್ತಾರೆ. 'ಗುಳೇ ಲಕ್ಕಮ್ಮ ದೇವಿಯ ಜಾತ್ರೆ' ಯನ್ನು ಎಂದು ಆಚರಿಸಲಾಗುವುದೆಂದು ನಿರ್ಧರಿಸಿ, ಗ್ರಾಮದಲ್ಲಿ ಮುಂಚಿತವಾಗಿಯೇ ಸಾರಲಾಗುವುದು. ಗ್ರಾಮಸ್ಥರು, ಅಂದು ಬೆಳಿಗ್ಯೆ, ದೈನಂದಿನ ಕೆಲಸಗಳನ್ನು ಮುಗಿಸಿ, ತಮ್ಮ ಕುಟುಂಬಸಮೇತರಾಗಿ, ಗ್ರಾಮದ ಹೊರವಲಯದಲ್ಲಿ ಬೀಡುಬಿಡುತ್ತಾರೆ. ಗ್ರಾಮಸ್ಥರೆಲ್ಲಾ ಊರಹೊರಗೆ ಬೀಡುಬಿಟ್ಟದ್ದಾರೆಂದು ಖಚಿತಪಡಿಸಿಕೊಂಡ ಗ್ರಾಮದ ಪ್ರಮುಖರು, ಗ್ರಾಮದೇವತೆಯನ್ನು ದೈವಸ್ಥರು ಪೂಜಿಸಿ, ಕೊನೆಯಲ್ಲಿ ಗ್ರಾಮದಿಂದ ಮೆರವಣಿಗೆಯೊಡನೆ ಹೊರತರುತ್ತಾರೆ. ಆಗ ಇಡೀಗ್ರಾಮ ಖಾಲಿಯಾಗಿರುತ್ತದೆ. ಗ್ರಾಮದ ಹೊರವಲಯದಲ್ಲಿ ಯಾಗೂ ಒಳಗೆ ಪ್ರವೇಶಿಸಲಾಗದಂತೆ, ಮುಳ್ಳುಬೇಲಿಹಾಕುತ್ತಾರೆ. ಇಲ್ಲಿಗೆ ಜಾತ್ರೆಯವಿಧಿಗಳಲ್ಲಿ ಒಂದು ಮುಗಿದಂತೆ.

’ಚೋರನೂರುಗ್ರಾಮದ ಜಾತ್ರೆಯ ಆಚರಣೆ,' ಮುದಕೊಡುವಂತಹದು[ಬದಲಾಯಿಸಿ]

’ಚೋರನೂರುಗ್ರಾಮ’ದಲ್ಲಿನ ಆಚರಣೆ ಅತ್ಯಾಕರ್ಷಕ. ಜಾತ್ರೆಗೆ ೮ ದಿನಗಳ ಮೊದಲೇ ಜಾತೆನಡೆಸುವ ಬಗ್ಗೆ ’ಸಾರು’ ಹಾಕಲಾಗುತ್ತದೆ(ಘೋಷಣೆ) ಅಂದಿನಿಂದ ಶುರುವಾಗಿ, ದೇವಿಯ ಚರಗ (ಪಾಯಸ ನೈವೇದ್ಯ) ವನ್ನು ಊರಿನ ಕರೆಗಲ್ಲಿಗೆ ಅಥವಾ ಗಡಿಕಲ್ಲಿಗೆ ಸಮರ್ಪಿಸುವವರೆವಿಗೂ ಯಾರಮನೆಯಲ್ಲೂ ಒಲೆಹಚ್ಚುವಂತಿಲ್ಲ. ಅಂದರೆ, ತಿಂಡಿ-ತಿನಸು, ಒಗ್ಗರಣೆ ಹಾಕುವುದು ಮಾಂಸಾಹಾರ ವರ್ಜಿತ. ಊರಿನಿಂದಾಚೆಗೆ ಬುತ್ತಿಗಂಟನ್ನೂ ಸಹ ಒಯ್ಯುವಂತಿಲ್ಲ. ಜಾತ್ರೆ ಮುಗಿಯುವವರೆವಿಗೂ ಕಸಬರಿಕೆ ಹಿಡಿದು ಉಡುಗುವಂತಿಲ್ಲ ಹಾಗೂ ಸೆಗಣಿಯನ್ನು ಸಹಿತ ಬಳಿಯುವಂತಿಲ್ಲ. ಜಾತ್ರೆಗೆ ಇನ್ನೂ ೩-೪ ದಿನಗಳಿರುವಾಗಲೇ ಸಾಮೂಹಿಕ ಭೋಜನಕ್ಕೆ ತಯಾರಿ ನಡೆಯುತ್ತದೆ. ಸಜ್ಜೆ ರೊಟ್ಟಿ, ಸಿಹಿ ಎಳ್ಳಿನ ಪುಡಿ, ಕಡ್ಲೆಪುಡಿ, ಬದನೆಕಾಯಿ ಪಲ್ಯ, ಬೀನ್ಸ್ ಪಲ್ಯ ಮುಂತಾದ ವೈವಿಧ್ಯಮಯ ವ್ಯಂಜನಗಳು ತಯಾರಾಗುತ್ತವೆ. ಜಾತ್ರೆಯ ಹಿಂದಿನ ದಿನ ಎಲ್ಲರಮನೆಯಲ್ಲೂ ’ನಂದಾದೀಪ’ ಹಚ್ಚಿದನಂತರವೇ, ಗುಳೆಹೊರಡುತ್ತಾರೆ. ಆ ನಂದಾದೀಪ ೨ ದಿನ ಶಾಂತವಾಗದಂತೆ ಅತ್ಯಂತ ಎಚ್ಚರಿಕೆ ವಹಿಸಲಾಗುವುದು.

ಲಕ್ಕಮ್ಮದೇವಿಯರ ಪುನರ್ಪವೇಶ, ಗ್ರಾಮದೊಳಗೆ[ಬದಲಾಯಿಸಿ]

'ಗುಳೇ ಲಕ್ಕಮ್ಮದೇವಿಯವರು' ಮತ್ತೆ ಊರಿನೊಳಗೆ ಪ್ರವೇಶಿಸುವ ಉತ್ಸವ, ಕೊನೆಯ ವಿಧಿ. ಗ್ರಾಮಸ್ಥರು ತಾವು ಬೀಡುಬಿಟ್ಟ ಸ್ಥಳದಲ್ಲಿಯೇ ಒಲೆಹೂಡಿ ಸಿಹಿ-ಅಡುಗೆಮಾಡುತ್ತಾರೆ. ಚೆನ್ನಾಗಿ ಊಟಮಾಡಿದಮೇಲೆ ಹರಟೆಹೊಡೆಯುತ್ತಾರೆ. ಅಂದು ಯಾರಾದರೂ ಅಪರಿಚಿತರು ಗ್ರಾಮಕ್ಕೆ ಬಂದರೆ, ಅವರನ್ನು ಹಳಿಯಲ್ಲಿ ಹೋಗಲು ತಡೆದು ತಮ್ಮಲ್ಲಿಯೇ ಊರಹೊರಗೆ ಸತ್ಕರಿಸುತ್ತಾರೆ. ಜಾತ್ರೆಯಬಗಗೆ ತಿಳಿಹೇಳಿ, ಸಂಜೆಯ ವರೆಗೆ ಈ ಪ್ರಕ್ರಿಯೆ ನಡೆಯುತ್ತದೆ. ನಂತರಗ್ರಾಮದೇವತೆಯನ್ನು ಅರ್ಚಿಸಿ, ದೇವತೆಯನ್ನು ಮೊದಲು ಊರಿನೊಳಗೆ ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ. ಹಿಂದಿನಿಂದ ಗ್ರಾಮಸ್ಥರು ಸಾಕುಪ್ರಾಣಿಗಳ ಸಮೇತವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ. ಇದೇ ಗುಳೇ ಲಕ್ಕಮ್ಮ ದೇವಿಯ ಜಾತ್ರೆ.

'ಹಿಂದಿನ ಕಾಲದಿಂದ ನಡೆದುಕೊಂಡು ಬರುತ್ತಿರುವ ಜಾತ್ರೆಯ ಪದ್ಧತಿಗಳು ಸಾರುವ ಸಂದೇಶಗಳು ಹೀಗಿವೆ'[ಬದಲಾಯಿಸಿ]

ಹಿಂದೆ, ಕಾಲರಾ, ಪ್ಲೇಗ್, ಮುಂತಾದ ಮಹಾಮಾರಿ ಕಾಯಿಲೆಗಳು ಗ್ರಾಮದ ಜನರನ್ನು ಸಾವುನೋವಿಗೆ ಈಡುಮಾಡುತ್ತಿದ್ದವು. ಅಂತಹ ಸಮಯದಲ್ಲಿ ಊರಿನವರೆಲ್ಲಾ ಖಾಲಿಮಾಡಿ ’ಗುಳೆಹೋಗುತ್ತಿದ್ದರು’. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ನಂತರ, ವಾಪಸ್ ಗ್ರಾಮಕ್ಕೆ ಹಿಂದಿರುಗಿ ಮತ್ತು ಪರಿಸರವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಜೀವನವನ್ನು ಮುಂದುವರೆಸುವ ಪದ್ಧತಿ ಜಾರಿಯಲ್ಲಿತ್ತು. ಜಾನಪದ ಪರಂಪರೆ, ಮತ್ತು ಆಚರಣೆಗಳ ಪದ್ಧತಿಯಲ್ಲಿನ ಸಂಭ್ರಮ ಅಚ್ಚುಕಟ್ಟುತನ, ಮತ್ತು ಆಶಯಗಳನ್ನು ಕಾಣಬಹುದು.