ಗುಪ್ತ ಮತದಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮತದಾರ ಯಾರಿಗೆ ಮತ ನೀಡಿದನೆಂಬುದು ಬೇರಾರಿಗೂ ಗೊತ್ತಾಗದಂತೆ ಮಾಡಿದ ಮತದಾನ; ಅಂಥ ಪದ್ಧತಿ, ವ್ಯವಸ್ಥೆ (ಸೀಕ್ರೆಟ್ ಬ್ಯಾಲಟ್). ಹೊರಗಿನ ಪ್ರಭಾವಗಳಿಂದ ಮತದಾರನನ್ನು ಮುಕ್ತನನ್ನಾಗಿ ಮಾಡಲು ಬಹುತೇಕ ಎಲ್ಲ ಪ್ರಜಾಸತ್ತಾತ್ಮಕ ದೇಶಗಳ ಸಂಘಸಂಸ್ಥೆ ಸಭೆಗಳ ಚುನಾವಣೆಗಳಲ್ಲೂ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.

ಮತದಾನದಲ್ಲಿ ರಹಸ್ಯವನ್ನು ಮೊಟ್ಟಮೊದಲು ಜಾರಿಗೆ ತಂದ ರಾಜ್ಯ ದಕ್ಷಿಣ ಆಸ್ಟ್ರೇಲಿಯ, 1858ರಲ್ಲಿ. ಆದ್ದರಿಂದ ಇದಕ್ಕೆ ಆಸ್ಟ್ರೇಲಿಯನ್ ಮತದಾನ ಪದ್ಧತಿ ಎಂದೂ ಹೆಸರಿದೆ.

ಈಚೆಗೆ ಚುನಾವಣೆಗಳಲ್ಲಿ ಯಂತ್ರಗಳು ಬಳಕೆಗೆ ಬಂದಿವೆ. ಇವುಗಳಿಂದ ರಹಸ್ಯ ಪಾಲನೆಗೂ ತಪ್ಪಿಲ್ಲದ ಮತ್ತು ಪ್ರಾಮಾಣಿಕ ಮತ ಎಣಿಕೆಗೂ ಅವಕಾಶವುಂಟಾಗಿದೆ. ಮತಪತ್ರ ಮತ್ತು ಮತದಾನ ವಿಧಾನಗಳಲ್ಲಿ ಸುಧಾರಣೆಯ ಪ್ರಯತ್ನಗಳು ನಡೆಯುತ್ತಲೇ ಇವೆ.

ಭಾರತದಲ್ಲಿ[ಬದಲಾಯಿಸಿ]

ಎಲೆಕ್ಟ್ರಾನಿಕ್ ಮತಯಂತ್ರ ಜಾರಿಗೆ ಬರುವ ಮೊದಲು[ಬದಲಾಯಿಸಿ]

ಭಾರತದ ಮತದಾನ ಯಂತ್ರ


ಭಾರತದಲ್ಲಿ ಇದಕ್ಕಾಗಿ ಚಚ್ಚೌಕವಾದ, ಮೇಲುಗಡೆ ಮುಚ್ಚಳವಿರುವ ಪೆಟ್ಟಿಗೆಯನ್ನು ಬಳಸಲಾಗುತ್ತಿತ್ತು. ಮತಪತ್ರವನ್ನು ಪೆಟ್ಟಿಗೆಯೊಳಕ್ಕೆ ಹಾಕುವುದು ಸಾಧ್ಯವಾಗುವಂತೆ ಈ ಪೆಟ್ಟಿಗೆಯ ಮುಚ್ಚಳದ ಮಧ್ಯದಲ್ಲಿ ಸೀಳುಗಂಡಿಯೊಂದಿರುತ್ತಿತ್ತು. ಚುನಾವಣೆ ಆರಂಭವಾಗುವುದಕ್ಕೆ ಮೊದಲು ಮತಗಟ್ಟೆಯ ಅಧಿಕಾರಿ ಅಭ್ಯರ್ಥಿಗಳ ಅಥವಾ ಅವರ ಪ್ರತಿನಿಧಿಗಳ ಎದುರಿನಲ್ಲಿ ಪೆಟ್ಟಿಗೆಯನ್ನು ತೆರೆದು ಅದು ಬರಿದೆಂಬುದನ್ನು ದೃಢಪಡಿಸಿ ಅದನ್ನು ಮುಚ್ಚಿ ಬಾಗಿಲಿಗೆ ಮುದ್ರೆ ಹಾಕುತ್ತಿದ್ದನು. ಚುನಾವಣೆಯ ಕಾಲದಲ್ಲಿ ಮತದಾರರು ಇದರೊಳಕ್ಕೆ ತಮ್ಮ ಮತಪತ್ರಗಳನ್ನು ಹಾಕುತ್ತಿದ್ದರು. ಚುನಾವಣೆ ಗೊತ್ತುಮಾಡಿದ ಕಾಲ ಮುಗಿದ ಮೇಲೆ ಅದನ್ನು ಸರಿಯಾದ ರಕ್ಷಣೆಗೆ ಒಳಪಡಿಸಿ ಇಟ್ಟಿದ್ದು, ಗೊತ್ತಾದ ಕಾಲದಲ್ಲಿ ಅಭ್ಯರ್ಥಿಗಳ ಅಥವಾ ಅವರ ಪ್ರತಿನಿಧಿಗಳ, ಸಾರ್ವಜನಿಕರ ಎದುರಿನಲ್ಲಿ ಪೆಟ್ಟಿಗೆಯ ಮುದ್ರೆಯೊಡೆದು ಅದನ್ನು ತೆರೆದು ಮತಪತ್ರಗಳನ್ನು ಎಣಿಸಲಾಗುತ್ತಿತ್ತು. ಮತ ನೀಡಿದವರನ್ನು ಗುರುತಿಸುವ ಯಾವ ಚಿಹ್ನೆಯಾಗಲಿ ಬರಹವಾಗಲಿ ಪತ್ರದ ಮೇಲೆ ಇರುವುದಿಲ್ಲವಾದ್ದರಿಂದ ಸರ್ವರೀತಿಯಲ್ಲೂ ರಹಸ್ಯವನ್ನು ಪಾಲಿಸಲು ಸಾಧ್ಯವಾಗುತ್ತಿತ್ತು.


ಮತದಾರ ಚುನಾವಣೆಯ ದಿನದಂದು, ಅದಕ್ಕಾಗಿ ನಿಗದಿಯಾದ ಕಾಲದಲ್ಲಿ, ಅವನಿಗಾಗಿ ಗೊತ್ತುಮಾಡಿದ ಮತಗಟ್ಟೆಗೆ ಮತ ನೀಡಲು ಹೋದಾಗ ಚುನಾವಣಾಧಿಕಾರಿ ಅವನ ಹೆಸರು, ವಯಸ್ಸು, ವಿಳಾಸ ಇತ್ಯಾದಿಗಳನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿ ಅವನನ್ನು ಕುರಿತ ವಿವರಗಳು ಆ ಕಟ್ಟೆಗೆ ಸಂಬಂಧಿಸಿದಂತೆ ಪಟ್ಟಿಯಲ್ಲಿವೆಯೆಂಬುದು ದೃಢಪಟ್ಟಾಗ ಅವನ ಸಹಿ ತೆಗೆದುಕೊಂಡು ಕಾನೂನು ರೀತ್ಯ ಗೊತ್ತುಪಡಿಸಲಾದ ಆಕಾರದ ಕಾಗದದಲ್ಲಿ ಮುದ್ರಿಸಿದ, ಚುನಾವಣಾ ಅಭ್ಯರ್ಥಿಗಳ ಹೆಸರು, ಚಿಹ್ನೆ ಇರುವ, ಮತಪತ್ರ ಕೊಡುತ್ತಿದ್ದನು. ಇದಲ್ಲದೆ ಬೇರೆ ಪತ್ರವನ್ನು ಉಪಯೋಗಿಸುವಂತಿರಲಿಲ್ಲ. ಮತನೀಡಿಕೆಯ ರಹಸ್ಯವನ್ನು ಕಾಪಾಡಲು ಅದಕ್ಕಾಗಿ ಮರೆಯಾದ ಸ್ಥಳಗಳನ್ನು ನಿರ್ಮಿಸಲಾಗಿರುತ್ತಿತ್ತು. ಮತ ಪತ್ರ ಪಡೆದ ಮತದಾರ ಆ ಸ್ಥಳಕ್ಕೆ ಹೋಗಿ ತಾನು ಮತ ನೀಡಬಯಸುವ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯ ಮುಂದೆ ಆ ಕಟ್ಟೆಯ ಮುಖ್ಯಾಧಿಕಾರಿ ಕೊಟ್ಟ ಮುದ್ರೆಯನ್ನೊತ್ತಿ ಮುದ್ರೆಯ ಭಾಗ ಮಡಿಕೆಯ ಒಳಗಡೆ ಬರುವಂತೆ ಪತ್ರವನ್ನು ನಾಲ್ಕು ಮಡಿಕೆಗಳಾಗಿ ಅದನ್ನು ಮುಖ್ಯಾಧಿಕಾರಿಯ ಮುಂದೆ ಇಟ್ಟಿರುವ ಮತಪೆಟ್ಟಿಗೆಯೊಳಗೆ ಹಾಕುತ್ತಿದ್ದನು. ಒಂದು ಸಾರಿ ಮತ ನೀಡಿದವನು ಮತ್ತೆ ಆ ಚುನಾವಣೆಯಲ್ಲಿ ಮತ ನೀಡುವುದನ್ನು ತಪ್ಪಿಸಲು, ಅವನ ಮತ ನೀಡಿಕೆಯಾಗಿದೆಯೆಂಬುದನ್ನು ಗುರುತಿಸಲು, ಶೀಘ್ರವಾಗಿ ಅಳಿಸಿಹೋಗದ ಶಾಯಿಯಿಂದ ಅವನ ತೋರುಬೆರಳಿನ ಮೇಲೆ ಗುರುತು ಮಾಡಲಾಗುತ್ತಿತ್ತು.

ಗ್ರೇಟ್ ಬ್ರಿಟಿನಿನಲ್ಲಿ[ಬದಲಾಯಿಸಿ]

ಗ್ರೇಟ್ ಬ್ರಿಟಿನಿನಲ್ಲಿ ಪಾರ್ಲಿಮೆಂಟ್ ಮತ್ತು ಪೌರಸಭೆಗಳ ಚುನಾವಣೆಗಳಲ್ಲಿ ಗುಪ್ತಮತದಾನ ಪದ್ಧತಿಗಳನ್ನು 1872ರ ಕಾಯಿದೆಯ ಮೂಲಕ ಜಾರಿಗೆ ತರಲಾಯಿತು. 1913ರ ವರೆಗೂ ಫ್ರಾನ್ಸಿನ ಮತದಾನ ಪದ್ಧತಿ ಅಸಮರ್ಪಕವಾಗಿತ್ತು. ಅಭ್ಯರ್ಥಿಗಳು ಮತಪತ್ರಗಳನ್ನು ಮತದಾನ ಕೇಂದ್ರಗಳ ಹೊರಗಡೆ ಹಂಚುತ್ತಿದ್ದರು. ಮತದಾರರು ಪತ್ರಗಳನ್ನು ಮಡಿಸಿ, ಅದನ್ನು ಮತಪೆಟ್ಟಿಗೆಯಲ್ಲಿ ಹಾಕಲು ಮತಗಟ್ಟೆಯ ಮುಖ್ಯಾಧಿಕಾರಿಗೆ ಕೊಡುತ್ತಿದ್ದರು. ಅವನ್ನು ಲಕೋಟೆಗಳಲ್ಲಿ ಹಾಕುವ ಕ್ರಮವನ್ನು ಆ ವರ್ಷ ಜಾರಿಗೆ ತರಲಾಯಿತು. 1919ರಿಂದ ಮುಂದಕ್ಕೆ ಸರ್ಕಾರವೇ ಅಭ್ಯರ್ಥಿಗಳ ಖರ್ಚಿನಲ್ಲಿ ಮತಪತ್ರಗಳನ್ನು ಅಚ್ಚುಮಾಡಿ ಅವನ್ನು ಅಂಚೆಯ ಮೂಲಕ ಮತದಾರರಿಗೆ ಕಳುಹಿಸುತ್ತಿತ್ತು.

ಅಮೆರಿಕದಲ್ಲಿ[ಬದಲಾಯಿಸಿ]

ಅಮೆರಿಕದ ಸಂಯುಕ್ತಸಂಸ್ಥಾನ 1884ರ ಅಧ್ಯಕ್ಷ ಚುನಾವಣೆಯ ಅನಂತರ ಗುಪ್ತಮತದಾನ ಪದ್ಧತಿಯನ್ನು ಜಾರಿಗೆ ತಂದಿತು. 1960ರಿಂದ ಈಚೆಗೆ ಸಾಮಾನ್ಯವಾಗಿ ಮತಪತ್ರಗಳನ್ನು ಸರ್ಕಾರದ ವೆಚ್ಚದಲ್ಲಿ ಅಚ್ಚುಮಾಡಿಸಿ, ಮತದಾನ ಕೇಂದ್ರಗಳಲ್ಲಿ ಹಂಚಲಾಗುತ್ತಿದೆ. ಮತನೀಡಿಕೆ ರಹಸ್ಯವಾಗಿ ನಡೆಯುತ್ತದೆ.

ಇಂಡೋನೇಷ್ಯದಲ್ಲಿ[ಬದಲಾಯಿಸಿ]

ಇಂಡೋನೇಷ್ಯದಲ್ಲಿ ಅನಕ್ಷರಸ್ಥರು ಅಧಿಕ ಸಂಖ್ಯೆಯಲ್ಲಿರುವುದರಿಂದ ಪ್ರತಿಯೊಂದು ಪಕ್ಷಕ್ಕೂ ಒಂದು ಚಿಹ್ನೆಯನ್ನು ಕೊಟ್ಟು ಅದನ್ನು ಮತ ಪತ್ರದ ಮೇಲೆ ಅಚ್ಚುಮಾಡಿರುತ್ತದೆ. ಮತಕೇಂದ್ರದಲ್ಲಿ ಮತನೀಡಿಕೆಗಾಗಿ ಇಟ್ಟಿರುವ ಮೊಳೆಯಿಂದ ಮತದಾರರ ಆ ಪತ್ರದ ಮೇಲೆ ರಂಧ್ರ ಮಾಡುತ್ತಾನೆ. ಭಾರತದಲ್ಲೂ ಮೊದಲನೆಯ ಮಹಾಚುನಾವಣೆಗಳಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ಅವನ ಚಿಹ್ನೆಯಿರುವ ಪೆಟ್ಟಿಗೆಯನ್ನಿಡಲಾಗಿತ್ತು. ಮತದಾರ ತಾನು ಮತ ಕೊಡಬಯಸುವ ಅಭ್ಯರ್ಥಿಯ ಚಿಹ್ನೆಯಿರುವ ಪೆಟ್ಟಿಗೆಯೊಳಕ್ಕೆ ತನ್ನ ಮತ ಪತ್ರವನ್ನು ಹಾಕಬೇಕಾಗಿತ್ತು. ಭಾರತ, ಬ್ರಿಟನ್ ಮುಂತಾದ ಕಡೆ ಚುನಾವಣೆಯ ಸಮಯದಲ್ಲಿ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಹಾಜರಿರುತ್ತಾರೆ. ಮತಗಳ ಎಣಿಕೆಯ ಕಾಲದಲ್ಲೂ ಅವರು ಹಾಜರಿರುತ್ತಾರೆ; ಕುಲಗೆಟ್ಟ ಅಥವಾ ನಿರ್ಣಯಿಸಲಾಗದ ಮತಗಳ ಬಗ್ಗೆ ಇರಬಹುದಾದ ತಕರಾರುಗಳನ್ನು ಸೂಚಿಸುತ್ತಾರೆ.

ಇವನ್ನೂ ನೋಡಿ[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: