ಗುಜ್ರನ್ವಾಲಾ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪಾಕಿಸ್ತಾನದ ಲಾಹೋರ್ ವಿಭಾಗದಲ್ಲಿರುವ ಒಂದು ಜಿಲ್ಲೆ; ತಹಸೀಲು; ಲಾಹೋರಿಗೆ 64 ಕಿಮೀ ಉತ್ತರದಲ್ಲಿರುವ ಪಟ್ಟಣ.
ಇತಿಹಾಸ
[ಬದಲಾಯಿಸಿ]ಹಿಂದೆ ಈ ಪಟ್ಟಣ ಒಂದು ಹಳ್ಳಿಯಾಗಿತ್ತು. ಇದನ್ನು ಸ್ಥಾಪಿಸಿದವರು ಗುಜರರು. ಇಲ್ಲಿ ನೆಲಸಿದ ಅಮೃತಸರದ ಶಾನ್ಸಿ ಜಾಟರು ಖಾನ್ಪುರವೆಂದು ಇದನ್ನು ಕರೆದರು. ಆದರೂ ಹಳೆಯ ಹೆಸರೇ ಉಳಿಯಿತು. ಸಿಕ್ಖರ ಕಾಲದಲ್ಲಿ ಇದಕ್ಕೆ ಪ್ರಾಮುಖ್ಯ ಬಂತು.
ಗುಜ್ರನ್ವಾಲಾ ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಅಖಂಡ ಪಂಜಾಬ್ ಪ್ರಾಂತ್ಯಕ್ಕೆ ಸೇರಿತ್ತು. 630ರಲ್ಲಿ ಚೀನದ ಬೌದ್ಧಯಾತ್ರಿಕ ಯುವಾನ್ ಚಾಂಗ್ ಈ ಜಿಲ್ಲೆಯ ತಕಾಯಿ ಪ್ರದೇಶಕ್ಕೆ ಭೇಟಿ ನೀಡಿದ್ದ. ಈಗಿನ ಅಸುರಾರ ಗ್ರಾಮದ ಬಳಿ ಇರುವ ಒಡ್ಡು ಗತಕಾಲದ ರಾಜಧಾನಿಯ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಚರತ್ಸಿಂಗ್ ಗುಜ್ರನ್ವಾಲಾವನ್ನು ತನ್ನ ಆಡಳಿತಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಮುಂದೆ ಅವನ ಮೊಮ್ಮಗ ರಣಜಿತ್ ಸಿಂಗ್ ಇಲ್ಲಿ ಜನಿಸಿ ಮಹಾರಾಜನಾದ. 1847ರಲ್ಲಿ ಈ ಪ್ರದೇಶವನ್ನು ಬ್ರಿಟಿಷರು ಲಾಹೋರಿನಲ್ಲಿ ಸೇರಿಸಿದರು.
ಇತರ ಮಾಹಿತಿ
[ಬದಲಾಯಿಸಿ]ಮಹಾನ್ಸಿಂಗನ ಗೋರಿ, ಅವನ ಉದ್ಯಾನ ಇವು ಪ್ರೇಕ್ಷಣೀಯ ಸ್ಥಳಗಳು. ಪಂಜಾಬ್ ವಿಶ್ವವಿದ್ಯಾಲಯದಿಂದ ಮನ್ನಣೆ ಪಡೆದ ಎರಡು ಕಾಲೇಜುಗಳಿವೆ. ಪೆಷಾವರ್ ರೈಲುಮಾರ್ಗವೂ ಮಹಾ ಹೆದ್ದಾರಿಯೂ ಈ ಮೂಲಕ ಹಾದುಹೋಗುತ್ತವೆ. ಇಲ್ಲಿ ತಿಜೋರಿ ಮತ್ತು ಪಾತ್ರೆಗಳು ತಯಾರಾಗುತ್ತವೆ. ಜವಳಿ, ಹೆಣಿಗೆ, ವಿದ್ಯುತ್ಪಂಖ ಇವು ಈಚಿನ ತಯಾರಿಕೆಗಳು.
ಗೋದಿ, ಹತ್ತಿ ಇಲ್ಲಿಯ ಬೆಳೆಗಳು. ಇಲ್ಲಿಯ ಕೃಷಿ ಭೂಮಿಗೆ 1892ರಲ್ಲಿ ಚೀನಾಬ್ ನದಿಯ ಕೆಳಕಾಲುವೆಯಿಂದಲೂ 1912ರಲ್ಲಿ ಮೇಲುಕಾಲುವೆಯಿಂದಲೂ ನೀರಾವರಿ ಸೌಲಭ್ಯ ಒದಗಿಸಲಾಯಿತು.
ಗುಜ್ರನ್ವಾಲಾ ತಹಸೀಲಿನ ವಿಸ್ತೀರ್ಣ 936 ಚ.ಕಿ.ಮೀ.