ಗುಂಪುಮದುವೆ
ಗುಂಪು ಮದುವೆ (ಇಂಗ್ಲೀಷಿನಲ್ಲಿ ಗ್ರುಪ್ ಮ್ಯಾರೇಜ್, ಕಮ್ಯೂನಲ್ ಮ್ಯಾರೇಜ್) - ಒಂದು ಗಂಡಸರ ಗುಂಪು ಮತ್ತೊಂದು ಹೆಂಗಸರ ಗುಂಪನ್ನು ವಿವಾಹವಾಗುವ ಪದ್ಧತಿ. ಇದರ ಪ್ರಕಾರ ಗುಂಪಿನ ಪ್ರತಿಯೊಬ್ಬ ಗಂಡಸಿಗೂ ಇನ್ನೊಂದು ಗುಂಪಿನ ಪ್ರತಿ ಹೆಂಗಸೂ ಹೆಂಡತಿಯಾಗುತ್ತಾಳೆ.
ಎಲ್ಲಿ ವ್ಯಕ್ತಿಗಳ ಇಚ್ಛೆಗೆ ಪುರಸ್ಕಾರವಿಲ್ಲದೆ ಸಂಪೂರ್ಣವಾಗಿ ಗುಂಪೊಂದು ಮದುವೆಗಳನ್ನು ಏರ್ಪಡಿಸುತ್ತದೆಯೋ ಅಂಥ ವಿವಾಹಗಳನ್ನು ಗುಂಪು ಮದುವೆಗಳೆಂದು ರಾಬರ್ಟ್ ಬ್ರಿಫಾಲ್ಟ್ ಎಂಬಾತ ಕರೆದಿದ್ದಾನೆ. ಅಂದರೆ ವ್ಯಕ್ತಿ ತನಗೆ ಒಪ್ಪಿಗೆಯಾದ ಸಂಗಾತಿಯನ್ನು ತಾನೇ ಹುಡುಕಿ ಮದುವೆಯಾಗುವಂತಿಲ್ಲ. ಕುಟುಂಬ ಅಥವಾ ಗುಂಪು ಅವನ ಪರವಾಗಿ ಆ ಕೆಲಸವನ್ನು ತಾನು ಮಾಡುತ್ತದೆ. ಇನ್ನೊಂದು ಪದ್ದತಿಯ ಪ್ರಕಾರ ಸಮುದಾಯ ತನಗಾಗಿ ಆರಿಸಿಟ್ಟ ಹೆಣ್ಣುಗಳಲ್ಲಿ ಒಂದನ್ನು ಗಂಡು ಆರಿಸಬೇಕಾಗುತ್ತದೆ. ಸಮುದಾಯ ಆರಿಸಿದ ಹುಡುಗಿಯರನ್ನು ಬಿಟ್ಟು ಬೇರಾವ ಗುಂಪಿನ ಹುಡುಗಿಯನ್ನು ಆಯ್ದು ಮದುವೆಯಾದರೂ ಅಂಥವರಿಗೆ ಮರಣದಂಡನೆ ವಿಧಿಸಲ್ಪಡುತ್ತದೆ.
ಸಮಾಜಶಾಸ್ತ್ರಜ್ಞರ ಅಭಿಪ್ರಾಯಗಳು
[ಬದಲಾಯಿಸಿ]ಬಹುಪತ್ನೀತ್ವ (ಪಾಲಿಗಮಿ), ಬಹುಪತಿತ್ವ (ಪಾಲಿಯಾಂಡ್ರಿ). ಏಕಪತ್ನಿತ್ವ ಅಥವಾ ಏಕಪತಿತ್ವ (ಮಾನೊಗಮಿ), ಒಬ್ಬ ಹೆಂಡತಿ ಬದುಕಿರುವಾಗಲೆ ಮತ್ತೊಬ್ಬಳನ್ನೊ ಮತ್ತೆ ಅನೇಕರನ್ನೊ ಮದುವೆಯಾಗುವುದು (ಪಾಲಿಜಿನಿ)- ಈ ವಿಷಯಗಳನ್ನು ಎಲ್ಲ ಶಾಸ್ತ್ರಜ್ಞರೂ ಒಪ್ಪಿದ್ದಾರಾದರೂ ಗುಂಪು ಮದುವೆಯ ವ್ಯಾಪ್ತಿ ಮತ್ತು ಅದರಲ್ಲಿನ ದಾಂಪತ್ಯ ಸಂಬಂಧದ ಬಗ್ಗೆ ಅವರಲ್ಲಿ ಏಕಮತವಿಲ್ಲ.
ರಾಬರ್ಟ್ ಎಚ್ ಲೋವಿ ಎಂಬ ಪ್ರಸಿದ್ಧ ಸಮಾಜಶಾಸ್ತ್ರಜ್ಞ ಈ ಬಗ್ಗೆ ಇರುವ ವಿವಿಧ ಅಭಿಪ್ರಾಯಗಳನ್ನು ಪರಿಶೀಲಿಸಿ ತನ್ನದೇ ಆದ ಇತ್ಯರ್ಥಕ್ಕೆ ಬರುತ್ತಾನೆ.
ವಿಕಾಸವಾದದ ಹಿನ್ನೆಲೆಯಲ್ಲಿ
[ಬದಲಾಯಿಸಿ]ಬ್ರಿಫಾಲ್ಟ್ ಮತ್ತು ಮಾರ್ಗನರು ವಿವಾಹದ ಬೆಳೆವಣಿಗೆಯನ್ನು ವಿಕಾಸವಾದದ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ. ಇವರ ಪ್ರಕಾರ ಲೈಂಗಿಕ ಸಾಮ್ಯವಾದ ಮಾನವ ಸಮಾಜದಲ್ಲಿ ಮೊಟ್ಟಮೊದಲು, ಇತರ ಪ್ರಾಣಿಗಳಲ್ಲಿದ್ದಂತೆ ಇದ್ದಿತೆಂದು ತಿಳಿಸಿ, ಎರಡನೆಯ ಹಂತ ಗುಂಪು ವಿವಾಹವೆಂದೂ ಅನಂತರ ಕ್ರಮವಾಗಿ ಬಹುಪತಿವಿವಾಹ ಬಹುಪತ್ನಿ ವಿವಾಹ ಕೊನೆಗೆ ಏಕಪತ್ನಿ ವಿವಾಹ. ಹೀಗೆ ವಿವಾಹ ಪದ್ಧತಿಯ ಬೆಳೆವಣಿಗೆಯಾಗಿದೆ ಎಂದೂ ಅವರ ಅಭಿಪ್ರಾಯ.
ಸತ್ತವನ ಹೆಂಡತಿಯನ್ನು ಅವನ ತಮ್ಮ ಅಥವಾ ಹತ್ತಿರದ ಸಂಬಂಧಿ ಮದುವೆಯಾಗುವುದು (ಲೀವಿರೆಟ್), ಹೆಂಡತಿ ಇರುವಾಗಲೊ ಆಕೆ ಸತ್ತ ಮೇಲೋ ಅವಳ ತಂಗಿಯನ್ನು ಮದುವೆಯಾಗುವುದು (ಸೊರೊರೆಟ್). ಹವಾಯಿ ಜನರಲ್ಲಿ ಬಳಕೆಯಲ್ಲಿದ್ದಂತೆ ಸಹೋದರರು ಒಟ್ಟಾಗಿ ಬೇರೊಂದು ಗುಂಪಿನ ಸಹೋದರಿಯನ್ನು ವರಿಸುವುದು (ಪುನಾಲ), ಆಸ್ಟ್ರೇಲಿಯದ ಆದಿವಾಸಿಗಳಲ್ಲಿದ್ದಂತೆ ಮದುವೆಯಾದ ಗಂಡ ಅಥವಾ ಹೆಂಡತಿಯಲ್ಲದೆ ಬೇರೊಬ್ಬ ಸಂಗಾತಿಯನ್ನು ಹೊಂದುವುದು (ಪಿರೌರ) - ಇವು ಕೂಡ ವಿವಾಹ ವಿಕಾಸದಲ್ಲಿನ ಕೆಲವು ಮುಖ್ಯ ಸ್ತರಗಳು.
ಬ್ರಿಫಾಲ್ಟ್, ಮಾರ್ಗನ್ ಸ್ಪೆನ್ಸರ್ ಮತ್ತು ಗಿಲಿನ್ನರ ಅಧ್ಯಯನಗಳು ಲೈಂಗಿಕ ಸಂಬಂಧದಲ್ಲಿನ ವಿವಿಧ ಹಂತಗಳನ್ನು ತೋರುತ್ತವೆಯೇ ಹೊರತು ಅವು ಗುಂಪು ಮದುವೆಯ ಅಸ್ತಿತ್ವಕ್ಕೆ ಸಾಕಷ್ಟು ಆಧಾರಗಳನ್ನು ಒದಗಿಸುವುದಿಲ್ಲ - ಎಂಬುದು ಲೋವಿಯ ಅಭಿಮತ.
ಬೇರೆ ಬೇರೆ ಜನಾಂಗಗಳಲ್ಲಿ
[ಬದಲಾಯಿಸಿ]ಅರವಾಕರಲ್ಲಿ ಈ ಪದ್ದತಿಯನ್ನು ಕಾಣುತ್ತೇವೆ. ಕಾದಿರರಲ್ಲಿ ಒಂದು ಹಳ್ಳಿಯ ಒಬ್ಬ ಯುವಕ ಬೇರೊಂದು ಗೊತ್ತಾದ ಹಳ್ಳಿಯ ಹುಡುಗಿಯ ಸಂಗಡ ವಿವಾಹವಾಗಬೇಕಾದ ಅಗತ್ಯವಿತ್ತು. ಯುವಕ ಆ ಹಳ್ಳಿಗೆ ಹೋಗಿ ಒಂದು ವರ್ಷ ದುಡಿದು, ಅಲ್ಲಿಯ ಹುಡುಗಿಯರನ್ನು ಪರಿಶೀಲಿಸಿ, ಒಬ್ಬಳನ್ನು ಮದುವೆಯಾಗಲು ನಿರ್ಧರಿಸುತ್ತಿದ್ದ. ಆದರೆ ವಿವಾಹದ ವಿಚಾರದಲ್ಲಿ ಹುಡುಗಿಯ ನಂಟರಲ್ಲಿ ಯಾವ ಮಾತುಕತೆಯನ್ನೂ ಆತ ಆರಂಭಿಸುವಂತಿರಲಿಲ್ಲ. ತನ್ನ ಸ್ವಂತ ಗ್ರಾಮಕ್ಕೆ ಹೋಗಿ ಅಲ್ಲಿ ಗ್ರಾಮಸ್ಥರ ಅನುಮತಿಯನ್ನು ಪಡೆದು ಅನಂತರ ಮದುವೆಯಾಗಬೇಕಿತ್ತು. ಈ ಸಂದರ್ಭಗಳಲ್ಲಿ ಒಂದು ಗ್ರಾಮದಲ್ಲಿ ವಾಸವಾಗಿರುವವರೆಲ್ಲರೂ ಒಂದೇ ಬುಡಕಟ್ಟಿಗೆ ಸೇರಿದವರಾಗಿರುತ್ತಿದ್ದರು.
ಪೂರ್ವ ಮಂಗೋಲರಲ್ಲಿ ಮದುವೆಯ ವಿಷಯವಾಗಿ ವ್ಯವಹಾರ ಮಾಡಲು ವಿವಾಹವಾಗುವ ವ್ಯಕ್ತಿಗಳಿಗಾಗಲೀ ಅಥವಾ ಅವರ ಕುಟುಂಬದವರಿಗಾಗಲೀ ಸ್ವಲ್ಪವೂ ಸ್ವಾತಂತ್ರ್ಯವಿರಲಿಲ್ಲ. ಹುಡುಗನ ಬಂಧುಗಳೆಲ್ಲರೂ ಹುಡುಗಿಯ ಬಂಧುಗಳ ಸಂಗಡ ಒಂದು ಸಂತೆಯ ದಿವಸ ಚರ್ಚಿಸಿ ಒಪ್ಪಂದಕ್ಕೆ ಬರುತ್ತಿದ್ದರು. ಅಂದು ಒಪ್ಪಂದವಾಗದಿದ್ದರೆ ಮುಂದಿನ ಸಂತೆಗೆ ತಮ್ಮ ಚರ್ಚೆಯನ್ನು ಮುಂದೆ ಹಾಕುತ್ತಿದ್ದರು.
ಗಿಲಿಯಾಕರಲ್ಲಿರುವ ಪದ್ಧತಿಯನ್ನು ಬ್ರಿಫಾಲ್ಟ್ ವಿವರಿಸಿದ್ದಾನೆ. ಇವರಲ್ಲಿ ಒಂದೂರಿನಲ್ಲಿ ಒಂದೇ ಕುಟುಂಬದ ಸದಸ್ಯರು ವಾಸಿಸುತ್ತಿದ್ದರು. ಅಲ್ಲಿದ್ದ ದೊಡ್ಡವರೆಲ್ಲರೂ ತಂದೆತಾಯಿಗಳು, ಸಣ್ಣವರೆಲ್ಲರೂ ಮಕ್ಕಳು ಮತ್ತು ಕಿರಿಯರು; ಪರಸ್ಪರವಾಗಿ ಅಕ್ಕತಂಗಿಯರು ಅಣ್ಣತಮ್ಮಂದಿರು. ಆದುದರಿಂದ ಮದುವೆಯ ಕಾರ್ಯ ಅವರವರಲ್ಲೇ ನಡೆಯುವಂತಿರಲಿಲ್ಲ. ಒಂದು ಬುಡಕಟ್ಟಿನವರು ಮತ್ತೊಂದು ಬುಡಕಟ್ಟಿನವರೊಡನೆ ಸಂಬಂಧ ಬೆಳೆಸುತ್ತಿದ್ದರು. ಒಬ್ಬ ವಿವಾಹವಾಗಬಹುದಾದ ಹುಡುಗಿಗೆ ಅಂಗೆಜ್ ಎಂದು ಹೆಸರು; ಹುಡುಗನಿಗೆ ಪೂ ಎಂದು ಹೆಸರು. ವಿವಾಹ ಪ್ರಮುಖವಾಗಿ ಆರ್ಥಿಕ ದೃಷ್ಟಿಯಿಂದ ಜರಗುತ್ತಿತ್ತು. ಇಂಥ ಮದುವೆಯಲ್ಲಿ ಪತಿಗೆ ವಿವಾಹವಾದ ಹುಡುಗಿಯ ಮೇಲೆ ಸಂಪೂರ್ಣವಾದ ಲೈಂಗಿಕ ಅಧಿಕಾರವಿಲ್ಲ. ಆಕೆಯ ಮೇಲೆ ಎಲ್ಲ ಪೂಗಳಿಗೂ ಲೈಂಗಿಕ ಸಂಬಂಧದ ಅಧಿಕಾರವಿರುತ್ತದೆ. ಒಟ್ಟಿನಲ್ಲಿ ಪೂ ಮತ್ತು ಅಂಗೆಜ್ ವಿವಾಹ ಪೂರ್ವದಲ್ಲಿ ಹೇಗೋ ಹಾಗೆ ವಿವಾಹವಾದ ಮೇಲೆಯೂ ಲೈಂಗಿಕ ವಿಚಾರವಾಗಿ ಸ್ವತಂತ್ರರು. ಒಂದು ಬುಡಕಟ್ಟಿನವರೆಲ್ಲರೂ ಸೋದರಸೋದರಿಯರೆಂದು ಪರಿಗಣಿಸಲ್ಪಟ್ಟಿರುವುದರಿಂದ ಆ ಬುಡಕಟ್ಟಿನ ಯುವಕರೆಲ್ಲರೂ ಪೂಗಳಾಗುತ್ತಾರೆ; ಅದರಂತೆ ಮದುವೆಯಾಗಬೇಕಾದ ಬುಡಕಟ್ಟಿನ ಯುವತಿಯರೆಲ್ಲ ಅಂಗೆಜ್ಗಳಾಗುತ್ತಾರೆ.
ಈ ಗಿಲಿಯಾಕರಲ್ಲಿ ಪೂರ್ವ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟಿನವರಿಗೂ ಪಶ್ಚಿಮ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟಿನವರಿಗೂ ಒಂದು ವ್ಯತ್ಯಾಸವಿದೆ. ಪೂರ್ವ ಗಿಲಿಯಾಕರಲ್ಲಿ ತಮ್ಮಂದಿರು ಅಣ್ಣಂದಿರ ಹೆಂಡತಿಯರೊಡನೆ ಲೈಂಗಿಕ ಸಂಬಂಧವನ್ನು ಬೆಳೆಸುವ ಹಕ್ಕಿದೆ. ಆದರೆ ಅಣ್ಣಂದಿರು ತಮ್ಮಂದಿರ ಹೆಂಡತಿಯರ ಮೇಲೆ ಅಂಥ ಅಧಿಕಾರವನ್ನು ಹೊಂದಿಲ್ಲ.
ಆಸ್ಟ್ರೇಲಿಯ ಡೈಯರಿ ಜನಾಂಗದಲ್ಲಿ ಇದೇ ಪದ್ಧತಿಗಳಿವೆ. ಸ್ತ್ರೀಗೆ ಗಂಡನೊಬ್ಬನೇ ಆದರೂ ಅನೇಕ ಪುರುಷರು ಆಕೆಯ ಸಂಗಡ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ. ಆದರೆ ಉರಬನ್ನರಲ್ಲಿ, ಸ್ಪೆನ್ಸರ್ ಮತ್ತು ಗಿಲ್ಲಿನ್ನರ ಪ್ರಕಾರ, ವೈಯಕ್ತಿಕ ವಿವಾಹ ಹೆಸರಿಗಾಗಲೀ ನಡವಳಿಕೆಯಲ್ಲಾಗಲೀ ಇಲ್ಲ. ಯಾವ ಹೆಂಗಸಿನ ಮೇಲೆ ಯಾವ ಗಂಡಸಿಗೂ ಲೈಂಗಿಕ ವಿಚಾರದಲ್ಲಿ ಪ್ರತ್ಯೇಕ ಅಧಿಕಾರವಿಲ್ಲ ಎಂಬುದು ಅವರ ಅಭಿಪ್ರಾಯ.