ಗೀಳು ಮನೋರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೀಳು ಮನೋರೋಗ
ಅಸಮತೋಲಿತ ನರವಾಹಕಗಳನ್ನು ಹೊಂದಿರುವ ಮೆದುಳಿನ ಚಿತ್ರ
ವೈದ್ಯಕೀಯ ವಿಭಾಗಗಳುಮಾನಸಿಕ ರೋಗಗಳು
ಲಕ್ಷಣಗಳುಯಾವುದೇ ಆಲೋಚನೆ , ಅನುಮಾನ , ವಿಚಾರ ಅಥವಾ ಬಿಂಬ , ಘಟನೆ ಮನಸ್ಸಿನೊಳಕ್ಕೆ ಪದೇ ಪದೇ ಬರುವುದು
ವೈದ್ಯಕೀಯ ತೊಂದರೆಗಳುಖಿನ್ನತೆ,ಆತ್ಮಹತ್ಯಾ ಪೃವೃತ್ತಿ
ಕಾಯಿಲೆಯ ಗೋಚರ/ಪ್ರಾರಂಭ೩೫ನೇ ವಯಸ್ಸಿನ ಮೊದಲು
ಕಾರಣಗಳುನಿರ್ಧಿಷ್ಟ ಕಾರಣ ತಿಳಿದಿಲ್ಲ
ಅಪಾಯಕಾರಿ ಅಂಶಗಳುಮಾನಸಿಕ ಒತ್ತಡ, ಆತ್ಮಹತ್ಯೆ, ಹತ್ಯೆ
ರೋಗನಿರ್ಣಯಲಕ್ನಣಗಳಿಗೆ ಅನುಸಾರವಾಗಿ
ವಿಭಿನ್ನ ರೋಗನಿರ್ಣಯಆತಂಕ,
ಚಿಕಿತ್ಸೆಮನೋವಿಶ್ಲೇಷಣೆ, ಆಪ್ತಸಮಾಲೋಚನೆ, ದೀರ್ಘ ಕಾಲದ ಔಷಧಿಯ ಸೇವನೆ
ಆವರ್ತನ2.3%

ಗೀಳು, ಯಾವುದೇ ಆಲೋಚನೆ , ಅನುಮಾನ , ವಿಚಾರ ಅಥವಾ ಬಿಂಬ , ಘಟನೆ ಮನಸ್ಸಿನೊಳಕ್ಕೆ ಪದೇ ಪದೇ ಬರುವುದು. ಅಸಂಬದ್ಧ ಎಂಬುದಾಗಿ ವ್ಯಕ್ತಿಗೆ ಅರಿವಿದ್ದರೂ ಅವನನ್ನು ಎಡೆ ಬಿಡದೆ ಪಟ್ಟುಹಿಡಿದು ಕಾಡುವ ಅಹಿತವಾದ ಯೋಚನೆಗಳು ಇಲ್ಲವೆ ಭಾವನೆಗಳಿಗೂ ಇದೇ ಹೆಸರಿದೆ. ಇವು ವ್ಯಕ್ತಿಯ ಇಚ್ಛಾ ಪೂರ್ಣ ಹತೋಟಿಗೆ ಹೊರತಾಗಿಯೇ ಇರುತ್ತವೆ. ಈ ವಿಚಾರ ಅಥವಾ ಅನುಮಾನ ತನ್ನದೇ ಆದರೂ ಅದು ತನ್ನ ಮನಸ್ಸಿನೊಳಗೆ ಪದೇ ಪದೇ ನುಗ್ಗಿಬರಲು ತಾನು ಕಾರಣನಲ್ಲ ಎಂದು ಆತನಿಗೆ ಗೊತ್ತಿರುತ್ತದೆ.ಈ ರೀತಿಯ ಆಲೋಚನೆ , ಅನುಮಾನ , ಬಿಂಬಗಳನ್ನು ಆತ ಹತೋಟಿಯಲ್ಲಿಡಲು ಪ್ರಯತ್ನಿಸುತ್ತಾನೆ.ಹತೋಟಿಯಲ್ಲಿಡಲು ವಿಫಲನಾದಾಗ ಆತನನ್ನು ಭಯ, ಆತಂಕ, ಬೇಸರ, ದುಖಗಳು ಆವರಿಸುವ ಸ್ಥಿತಿಗೆ ಗೀಳು ಮನೋರೋಗ (ಆಂಗ್ಲ:obsessive compulsive disorder) ಎನ್ನುತ್ತಾರೆ[೧].ಇದರಿಂದಾಗಿ ಆ ವ್ಯಕ್ತಿ ತೀವ್ರ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾನೆ.

ಪ್ರಕಾರಗಳು[ಬದಲಾಯಿಸಿ]

ಮೂರು ಪ್ರಕಾರವಾಗಿ ಗೀಳು ಮನೋರೋಗವನ್ನು ವಿಭಾಗಿಸಬಹುದು.

ಗೀಳು ಯೋಚನೆಗಳು[ಬದಲಾಯಿಸಿ]

ಕೈ ಗಲೀಜಾಗಿದೆ, ಇಂದು ಮನೆಯಿಂದ ಹೊರಟಾಗ ಬಾಗಿಲಿಗೆ ಬೀಗ ಹಾಕಿದೆನೇ ಅಥವಾ ಕಾಗದವನ್ನು ಅಂಚೆಗೆ ಕಳಿಸುವ ಮುನ್ನ ಸಹಿ ಮಾಡಿದೆನೇ ಈ ಮುಂತಾದ ಯೋಚನೆಗಳು ,ದೇವಸ್ಥಾನದಲ್ಲಿ ದೇವರನ್ನು ನೋಡಿದ ಕೂಡಲೇ ಅವಾಚ್ಯ ಶಬ್ದಗಳು ಯೋಚಿಸುತ್ತೇನೆ,ನನಗೆ ಬಹುಶಃ ಕ್ಯಾನ್ಸರ್ ಇದೆ, ಪದೇ ಪದೇ ಈ ರೀತಿಯ ಯೋಚನೆಗಳು ಮನಸ್ಸಿಗೆ ಬರಲು ತೊಡಗುತ್ತವೆ ,ಇಲ್ಲ ಎಂದು ಗೊತ್ತಿದ್ದರೂ ಬೇರೆ ಏನೂ ಕೆಲಸವನ್ನು ಮಾಡಲು ಬಿಡದೆ ಈ ಯೋಚನೆಗಳು ಪದೇ ಪದೇ ತಲೆಗೆ ಹೊಕ್ಕಿ ಬಿಡುತ್ತವೆ .ಬೇರೆಯವರು ಇದು ಸಾಧ್ಯವಿಲ್ಲ ಇದು ನಿಜವಲ್ಲ ಎಂದು ಎಷ್ಟೇ ಪುರಾವೆಗಳನ್ನು ನೀಡಿದರೂ ಕೂಡ ಈ ಕಾಯಿಲೆಯಿಂದ ಬಳಲುವವರು ಒಪ್ಪುವುದಿಲ್ಲ .ಇಡೀ ದಿನ ಇದೇ ಯೋಚನೆಗಳು ಅಥವಾ ಈ ಯೋಜನೆಗೆ ಸಂಬಂಧಪಟ್ಟ ಪ್ರತಿಕೃತಿಗಳು ಮನಸ್ಸಿನಲ್ಲಿ ಬರುತ್ತಾ ಇರುತ್ತದೆ.ಶಬ್ದಗಳು ತಲೆಯಲ್ಲಿ ಗುಂಯ್ಗುಟ್ಟುವಿಕೆ ಕೂಡ ಗೀಳು ಯೋಚನೆಯ ಲಕ್ಷಣದಲ್ಲಿ ಒಂದು.

ಗೀಳು ವರ್ತನೆಗಳು[ಬದಲಾಯಿಸಿ]

ಈ ವರ್ತನೆಗಳು ಹೆಚ್ಚಾಗಿ ಗೀಳು ಯೋಚನೆಗಳ ಕಾರಣದಿಂದ ಉಂಟಾಗುತ್ತದೆ. ಕೈ ಗಲೀಜಾಗಿದೆ ಎಂಬ ಯೋಚನೆ ಇರುವವನು ಪದೇ ಪದೇ ಕೈ ತೊಳೆಯುವುದು, ದೇವರ ಮುಂದೆ ಹೋದ ಕೂಡಲೇ ದೇವರಿಗೆ ಕೆಟ್ಟ ಮಾತು ಬೈದು ಬಿಡುತ್ತೇನೆ ಎಂಬ ಹೆದರಿಕೆ ಆದ್ದರಿಂದ ಬಾಯಿಯನ್ನು ಗಟ್ಟಿಯಾಗಿ ಕೈಯಿಂದ ಮುಚ್ಚಿಕೊಳ್ಳುವುದು, ಬ್ಯಾಂಕಿನಲ್ಲಿ ಕ್ಯಾಷಿಯರ್ ಎಣಿಸಿದ ನೋಟನ್ನು ಪದೇ ಪದೇ ಎಣಿಸುವುದು, ಮುಂತಾದ ರೀತಿಯದ್ದಾಗಿರುತ್ತದೆ.

ಯೋಚನೆಗಳು ಮತ್ತು ವರ್ತನೆಗಳ ಮಿ‍ಶ್ರ ಪ್ರಕಾರ[ಬದಲಾಯಿಸಿ]

ಮನೆಯ ಸ್ವಚ್ಛತೆಯ ಬಗ್ಗೆ ಗಲೀಜು ತುಂಬಿದೆ ಎಂಬ ಗೀಳು ಇಟ್ಟುಕೊಂಡಿರುವ ಗೃಹಿಣಿ ಇಡೀ ಮನೆಯನ್ನು ದಿನಪೂರ್ತಿ ಹರಿಸುತ್ತಾ ಸಾರಿಸುತ್ತಾ ಇರುವುದು ,ದೇವರ ಮುಂದೆ ಕೆಟ್ಟ ಮಾತುಗಳು ಬರುತ್ತದೆ ಎಂದು ಹೆದರಿ ನಾನು ತಪ್ಪು ಮಾಡುವುದಿಲ್ಲ, ತಪ್ಪು ಮಾಡುವುದಿಲ್ಲ, ತಪ್ಪು ಮಾಡುವುದಿಲ್ಲ ಎಂದು ಇಪ್ಪತ್ತು ಬಾರಿ ದೇವರ ಮುಂದೆ ಕಿರುಚಿ ಕೊಳ್ಳುವುದು ,ಬಸ್ಸಿನಲ್ಲಿ ಹೋಗುವಾಗ ಹೆಂಗಸೊಬ್ಬಳನ್ನು ಮುಟ್ಟಿಬಿಡಬಹುದು ಎಂದು ಹೆದರಿ ಬಸ್ಸಿನ ಸೀಟ್ ಹ್ಯಾಂಡಲ್ ಅನ್ನು ಹಿಡಿದುಕೊಂಡು ಜಗ್ಗುವುದು ಈ ರೀತಿಯ ಲಕ್ಷಣಗಳು ಯೋಚನೆಗಳು ಮತ್ತು ವರ್ತನೆಗಳ ಮಿ‍ಶ್ರ ಪ್ರಕಾರದಲ್ಲಿ ಕಂಡು ಬರುವುದು.

ಪರಿಣಾಮ ಹಾಗೂ ನಿದರ್ಶನಗಳು[ಬದಲಾಯಿಸಿ]

ಅಸಂಗತ ಹಾಗೂ ತನ್ನ ಹತೋಟಿಗೆ ನಿಲುಕದ ಯೋಚನೆಗಳು ವ್ಯಕ್ತಿಗೆ ನೋವನ್ನು ಒದಗಿಸುವ ಮೂಲಗಳಾಗಿರುತ್ತವೆ. ಅನೇಕ ವೇಳೆ ರೋಗಿ ತಾನು ಹುಚ್ಚನಾಗುತ್ತಿದ್ದೇನೆಂದು ಭಾವಿಸುತ್ತಾನೆ. ಇಲ್ಲವೆ ತಾನು ಬದುಕಿರಲು ಯೋಗ್ಯನಲ್ಲ ಎಂದುಕೊಳ್ಳತ್ತಾನೆ. ಗೀಳು ತೀವ್ರತರವಾದಾಗ ವ್ಯಕ್ತಿಯು ಸಂಪೂರ್ಣ ಅಪ್ರಯೋಜಕನಾಗುತ್ತಾನೆ,ಇನ್ನಾವುದೇ ಬಗೆಯ ಯೋಚನೆಯನ್ನು ಮಾಡಲು ಅಸಮರ್ಥನಾಗುತ್ತಾನೆ. ತಲೆ ನೋವು , ನಿದ್ರಾಹೀನತೆ , ಸದಾ ಯೋಚನಾಮಗ್ನರಾಗುವುದು ಕೂಡ ಗೀಳು ಮನೋರೋಗದ ಲಕ್ಷಣಗಳಲ್ಲಿ ಒಂದು.ಸಂಶೋಧನೆಗಳ ಪ್ರಕಾರ ಗೀಳು ಮನೋರೋಗ ಹೊಂದಿರುವ ಶೇ ೧೮ ರಷ್ಟು ರೋಗಿಗಳು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುವ ಶೇ ೩೩ ರಷ್ಟು ರೋಗಿಗಳಿಗೆ ಆತ್ಮಹತ್ಯೆಯಂತಹ ಆಲೋಚನೆಗಳು ಪದೇ ಪದೇ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕ್ರೈಯನ್ಸ್ ಎಂಬಾತ ವರದಿ ಮಾಡಿರುವ ಒಬ್ಬ ಹುಡುಗಿಯ ಘಟನೆ ಗೀಳಿನ ತೀವ್ರಾವಸ್ಥೆಯ ಒಂದು ಉತ್ತಮ ನಿದರ್ಶನವನ್ನು ಒದಗಿಸುತ್ತದೆ. ಆ ಹುಡುಗಿ ಭೀಕರ ಯೋಚನೆಯನ್ನು ಹೊಂದಿದ್ದಳು. ಅವಳು ತಾನು ಪ್ರೀತಿಸಿದ ಸ್ನೇಹಿತನ ಬಗೆಗೆ ಯೋಚಿಸಿದಾಗ ಅವನು ಸಾಯಬಾರದೇ ಎಂದು ಹಾರೈಸುತ್ತಿದ್ದಳು ; ಅವಳ ತಾಯಿ ಮೆಟ್ಟಿಲುಗಳನ್ನಿಳಿದು ಕೆಳಕ್ಕೆ ಹೋಗುತ್ತಿದ್ದರೆ ಅವಳು ಕೆಳಕ್ಕೆ ಬಿದ್ದು ಕತ್ತನ್ನು ಮುರಿದುಕೊಳ್ಳ ಬಾರದೇ ಎಂದು ಹಾರೈಸುತ್ತಿದ್ದಳು ; ಅವಳ ಸೋದರಿ ತನ್ನ ಪುಟ್ಟ ಮಗಳೊಂದಿಗೆ ಸಮುದ್ರ ತೀರಕ್ಕೆ ಹೋಗುವ ಪ್ರಸ್ತಾಪ ಮಾಡಿದಾಗ, ಅವರಿಬ್ಬರೂ ನೀರಿನಲ್ಲಿ ಮುಳುಗಿ ಸಾಯಬಾರದೇ ಎಂದು ಆಶಿಸುತ್ತಿದ್ದಳು. ‘ಈ ಬಗೆಯ ಯೋಚನೆಗಳು ನನ್ನನ್ನು ಉದ್ರೇಕಗೊಳಿಸುತ್ತವೆ. ನಾನು ಅವರನ್ನು ಪ್ರೀತಿಸುತ್ತೇನೆ. ಹಾಗಾದರೂ ನಾನೇಕೆ ಈ ಬಗೆಯ ಭಯಂಕರ ವಿಚಾರಗಳನ್ನು ಹಾರೈಸಬೇಕು? ಇದೆಲ್ಲ ನನಗೆ ಹುಚ್ಚನ್ನೇ ಹಿಡಿಸುತ್ತದೆ. ನಾನು ಪ್ರೀತಿಸುವವರ ಬಗೆಗೆ ಈ ರೀತಿಯ ಭಯಂಕರ ಯೋಚನೆಗಳನ್ನು ಮಾಡುವುದಕ್ಕೆ ಬದಲಾಗಿ ನಾನು ಸಾಯುವ ಮೂಲಕ ಈ ಯೋಚನೆಗಳನ್ನು ಕೊನೆಗೊಳಿಸುವುದು ಮೇಲು ಎಂದು ಅವಳು ಅಂದುಕೊಳ್ಳುತ್ತಿದ್ದುದುಂಟು[೨].

ಕಾರಣ[ಬದಲಾಯಿಸಿ]

ನಮ್ಮ ಮಿದುಳಿನ ಮೇಲ್ಮೈಯಲ್ಲಿ ಸರಟೊನಿನ್ ಎಂಬ ನರವಾಹಕಗಳ ಅಸಮತೋಲನದಿಂದ ಈ ಕಾಯಿಲೆ ಬರುತ್ತದೆ ಎಂದು ಹೇಳುತ್ತಾರೆ. ಕುಟುಂಬದಲ್ಲಿ ಯಾರಿಗಾದರೂ ಗೀಳು ಮನೋರೋಗ ಇದ್ದಲ್ಲಿ ಐದಾರು ವರ್ಷದ ಮಕ್ಕಳಿಂದಲೇ ಇದು ಕಾಣಿಸಿಕೊಳ್ಳಬಹುದು[೩].ಶಾಲೆಯಲ್ಲಿ ತುಂಬಾ ಶಿಸ್ತಾಗಿ ಇರುವ ಮಗು, ಸಂಖ್ಯೆಗಳ ಬಗ್ಗೆ ಅಥವಾ ನಡೆಯುವಾಗ ಟೈಲ್ಸ್ ನ ಮೇಲೆ ಗೆರೆಯ ಬಗ್ಗೆ ಹೆಚ್ಚು ಗಮನ ಕೊಡುವ ಮಗು, ಸ್ವಚ್ಛತೆಯ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಂಡ ಮಗು ಮುಂದೆ ಗೀಳು ಮನೋರೋಗಕ್ಕೆ ತುತ್ತಾಗಬಹುದು .

ಪರಿಹಾರ[ಬದಲಾಯಿಸಿ]

ಗೀಳು ಮನೋರೋಗವನ್ನು ದೀರ್ಘ ಕಾಲದ ಔಷಧಿಯ ಸೇವನೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಇತ್ತೀಚಿಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಫ್ಲೂಯಾಕ್ಸಿಟಿನ್, ಕ್ಲೋಮಿಪ್ರಮಿನ್, ಸರ್ಟ್ರಾಲಿನ್ಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಔಷಧಿಯ ಸೇವನೆ ಮನೋವೈದ್ಯರ ಮಾರ್ಗದರ್ಶನಕ್ಕನುಗುಣವಾಗಿರಬೇಕು[೪].ಬೇಡದ ಆಲೋಚನೆಗಳನ್ನು ಮನಸ್ಸಿನೊಳಗೆ ಬರದಂತೆ ಮಾಡುವ ಮೈ ಮನಸ್ಸುಗಳಿಗೆ ಹತೋಟಿ ಸಾಧಿಸಲು ತರಬೇತಿ ಕೊಡುವ ನಡವಳಿಕಾ ಚಿಕಿತ್ಸೆಯೂ ಲಭ್ಯಮನಸ್ಸಿನ ದ್ವಂದ್ವಗಳಿಗೆ ಪರಿಹಾರ ಸೂಚಿಸಬಲ್ಲ , ಸಾಂತ್ವಾನ , ಸಮಾಧಾನ ಹೇಳಬಲ್ಲ ಮನೋಚಿಕಿತ್ಸೆಯೂ ಬಳಕೆಯಲ್ಲಿದೆ[೫].ಮನಸ್ಸನ್ನು ಉಲ್ಲಾಸಗೊಳಿಸುವ ಧ್ಯಾನ, ಯೋಗ, ಉಪವಾಸ, ಪ್ರಕೃತಿ ವೀಕ್ಷಣೆ, ಸಂಗೀತ, ದೀರ್ಘ ಉಸಿರಾಟ ಇವು ವ್ಯಕ್ತಿಯ ಭಯ , ಆತಂಕ , ಬೇಸರ ನಿವಾರಿಸಬಲ್ಲವು.

ಉಲ್ಲೇಖಗಳು[ಬದಲಾಯಿಸಿ]

  1. "ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಯ ಮಾಹಿತಿ".
  2. Osborn, Ian. Tourmenting Thoughts and Secrete rituals:The Hidden Epidemic of Obsessive Compulsive disorder (1998 ed.). Random House Publishing Group. ISBN 0-440-50847-9.
  3. https://pubmed.ncbi.nlm.nih.gov/19378573/
  4. "NEJM Group Website".
  5. https://www.sciencedirect.com/science/article/abs/pii/S0278584611000650?via%3Dihub