ಗೀಳು

ವಿಕಿಪೀಡಿಯ ಇಂದ
Jump to navigation Jump to search

ಅಭಿಪ್ರಾಯ. ಕಲ್ಪನೆ, ಆಶೆ ಇತ್ಯಾದಿಗಳಲ್ಲಿ ಯಾವುದಾದರೂ ಒಂದು ವ್ಯಕ್ತಿಯ ಆಲೋಚನೆಗಳನ್ನು ಇಲ್ಲವೆ ಭಾವನೆಗಳನ್ನು ಆಕ್ರಮಿಸಿ ಕಾಡುವುದು (ಅಬ್ಸೆಷನ್). ಅಸಂಬದ್ಧ ಎಂಬುದಾಗಿ ವ್ಯಕ್ತಿಗೆ ಅರಿವಿದ್ದರೂ ಅವನನ್ನು ಎಡೆ ಬಿಡದೆ ಪಟ್ಟುಹಿಡಿದು ಕಾಡುವ ಅಂಥ ಅಹಿತವಾದ ಯೋಚನೆಗಳು ಇಲ್ಲವೆ ಭಾವನೆಗಳಿಗೂ ಇದೇ ಹೆಸರಿದೆ. ಇವು ವ್ಯಕ್ತಿಯ ಇಚ್ಛಾ ಪೂರ್ಣ ಹತೋಟಿಗೆ ಹೊರತಾಗಿಯೇ ಇರುತ್ತವೆ. ಅಸಂಗತ ರೀತಿಯಲ್ಲಿ ಅವನ ಚೇತನಕ್ಕೆ ಹಾಯ್ದು ಬರುತ್ತವೆ ಮತ್ತು ಎಷ್ಟೇ ಪ್ರಯತ್ನಪಟ್ಟರು ಸ್ವಇಚ್ಚೆಯಿಂದ ಅವನ್ನು ಹೊರಹಾಕುವುದು ವ್ಯಕ್ತಿಗೆ ಅಸಾಧ್ಯವಾಗಿ ತೋರಬಹುದು. ಕಾಯಂ ಅಲ್ಲದ, ಲಘು ಗೀಳಿನ ಅನುಭವಕ್ಕೆ ಪ್ರತಿಯೊಬ್ಬನೂ ಒಂದಲ್ಲ ಒಂದು ಭಾರಿ ತುತ್ತಾಗಿಯೇ ಇರುತ್ತಾನೆ. ಇಂದು ಮನೆಯಿಂದ ಹೊರಟಾಗ ಬಾಗಿಲಿಗೆ ಬೀಗ ಹಾಕಿದೆನೇ ಅಥವಾ ಕಾಗದವನ್ನು ಅಂಚೆಗೆ ಕಳಿಸುವ ಮುನ್ನ ಸಹಿ ಮಾಡಿದೆನೇ ಈ ಮುಂತಾದ ಯೋಚನೆಗಳು ಲಘು ಗೀಳಿನ ನಿದರ್ಶನಗಳಾಗಿವೆ. ಶಬ್ದಗಳು ತಲೆಯಲ್ಲಿ ಗುಂಯ್ಗುಟ್ಟುವಿಕೆ ಲಘು ಗೀಳಿನ ಇನ್ನೊಂದು ಅನುಭವ. ಈ ಬಗೆಯ ಲಘು ಗೀಳಿನ ಅನುಭವಗಳು ವ್ಯಕ್ತಿಗೆ ಕಿರಿಕಿರಿ ಎನ್ನಿಸಬಹುದಾದರೂ ಅವನ ಮಾನಸಿಕ ಹೊಂದಾಣಿಕೆಗೆ ಅಡ್ಡಿ ಬರುವುದಿಲ್ಲ.


ತೀವ್ರತರವಾದ ಗೀಳುಗಳು ಮನೋಬೇನೆಯ ರೂಪಗಳೇ ಆಗಿವೆ. ಅವು ವ್ಯಕ್ತಿಯ ಹೊಂದಾಣಿಕೆಗೆ ಅಡ್ಡಿಯುಂಟುಮಾಡುತ್ತವೆ. ಅಂಥವು ಸಾವು, ಆತ್ಮಹತ್ಯೆ, ಕೊಲೆ- ಈ ವಿಚಾರಗಳ ಸುತ್ತ ಕೇಂದ್ರಿಕೃತವಾಗಿರುತ್ತವೆ. ಸಾಮಾನ್ಯವಾಗಿ ಗೀಳುಗಳು ಹತ್ತಿಕ್ಕಲಾರದ ಹಠಾತ್ತಾದ ಪ್ರವೃತ್ತಿಗಳಲ್ಲಿ ತೊಡಗಬಹುದೆಂಬ ಭಯವನ್ನು ಒಳಗೊಂಡಿರುತ್ತವೆ. ಯಾರ ಎದುರಿನಲ್ಲಾದರೂ ಅಶ್ಲೀಲ ಪದವೊಂದನ್ನು ಕೂಗಿಕೊಳ್ಳುತ್ತೇನೋ ಏನೋ ಅಥವಾ ನನ್ನ ಗಂಡನನ್ನು ಚೂರಿಯಿಂದ ತಿವಿದು ಹಾಕುತ್ತೀನೇನೋ ಈ ಮೊದಲಾದ ಭಯಗಳು ವ್ಯಕ್ತಿಯನ್ನು ಕಾಡಬಹುದು. ಕೆಲವೊಮ್ಮೆ ಗೀಳುಗಳು ಹಠಾತ್ತಾದ ಕಾರ್ಯಪ್ರವೃತ್ತಿಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಉದಾ: ತನ್ನ ತಾಯಿಯೋ ಅತ್ತೆಯೋ ಸತ್ತುಹೋದರೊಳ್ಳೆಯದೆಂದು ಪದೇ ಪದೇ ಹಾರೈಸುವಿಕೆ. ಈ ಬಗೆಯ ಯೋಚನೆಗಳು ಅಸಂಬದ್ಧ ಮಾತ್ರವಲ್ಲ ; ಅನೈತಿಕವೂ ಜುಗುಪ್ಸೆ ಮತ್ತು ಭಯ ಹುಟ್ಟಿಸುವಂಥವೂ ಆಗಿರುತ್ತವೆ. ಆ ಯೋಚನೆಗಳು ಕಾರ್ಯರೂಪಕ್ಕೆ ಬಾರದಿದ್ದರೂ ವ್ಯಕ್ತಿಗೆ ನೋವನ್ನು ಒದಗಿಸುವ ಮೂಲಗಳಾಗಿರುತ್ತವೆ. ಅನೇಕ ವೇಳೆ ರೋಗಿ ತಾನು ಹುಚ್ಚನಾಗುತ್ತಿದ್ದೇನೆಂದು ಭಾವಿಸುತ್ತಾನೆ. ಇಲ್ಲವೆ ತಾನು ಬದುಕಿರಲು ಯೋಗ್ಯನಲ್ಲ ಎಂದುಕೊಳ್ಳತ್ತಾನೆ. ಗೀಳು ತೀವ್ರತರವಾದಾಗ ವ್ಯಕ್ತಿಯು ಸಂಪೂರ್ಣ ಅಪ್ರಯೋಜಕನಾಗುತ್ತಾನೆ ; ಇನ್ನಾವುದೇ ಬಗೆಯ ಯೋಚನೆಯನ್ನು ಮಾಡಲು ಅಸಮರ್ಥನಾಗುತ್ತಾನೆ.


ಕ್ರೈಯನ್ಸ್ ಎಂಬಾತ ವರದಿ ಮಾಡಿರುವ ಒಬ್ಬ ಹುಡುಗಿಯ ಘಟನೆ ಗೀಳಿನ ತೀವ್ರಾವಸ್ಥೆಯ ಒಂದು ಉತ್ತಮ ನಿದರ್ಶನವನ್ನು ಒದಗಿಸುತ್ತದೆ. ಆ ಹುಡುಗಿ ಭೀಕರ ಯೋಚನೆಯನ್ನು ಹೊಂದಿದ್ದಳು. ಅವಳು ತಾನು ಪ್ರೀತಿಸಿದ ಸ್ನೇಹಿತನ ಬಗೆಗೆ ಯೋಚಿಸಿದಾಗ ಅವನು ಸಾಯಬಾರದೇ ಎಂದು ಹಾರೈಸುತ್ತಿದ್ದಳು ; ಅವಳ ತಾಯಿ ಮೆಟ್ಟಿಲುಗಳನ್ನಿಳಿದು ಕೆಳಕ್ಕೆ ಹೋಗುತ್ತಿದ್ದರೆ ಅವಳು ಕೆಳಕ್ಕೆ ಬಿದ್ದು ಕತ್ತನ್ನು ಮುರಿದುಕೊಳ್ಳ ಬಾರದೇ ಎಂದು ಹಾರೈಸುತ್ತಿದ್ದಳು ; ಅವಳ ಸೋದರಿ ತನ್ನ ಪುಟ್ಟ ಮಗಳೊಂದಿಗೆ ಸಮುದ್ರತೀರಕ್ಕೆ ಹೋಗುವ ಪ್ರಸ್ತಾಪ ಮಾಡಿದಾಗ, ಅವರಿಬ್ಬರೂ ನೀರಿನಲ್ಲಿ ಮುಳುಗಿ ಸಾಯಬಾರದೇ ಎಂದು ಆಶಿಸುತ್ತಿದ್ದಳು. ‘ಈ ಬಗೆಯ ಯೋಚನೆಗಳು ನನ್ನನ್ನು ಉದ್ರೇಕಗೊಳಿಸುತ್ತವೆ. ನಾನು ಅವರನ್ನು ಪ್ರೀತಿಸುತ್ತೇನೆ. ಹಾಗಾದರೂ ನಾನೇಕೆ ಈ ಬಗೆಯ ಭಯಂಕರ ವಿಚಾರಗಳನ್ನು ಹಾರೈಸಬೇಕು? ಇದೆಲ್ಲ ನನಗೆ ಹುಚ್ಚನ್ನೇ ಹಿಡಿಸುತ್ತದೆ. ನಾನು ಪ್ರೀತಿಸುವವರ ಬಗೆಗೆ ಈ ರೀತಿಯ ಭಯಂಕರ ಯೋಚನೆಗಳನ್ನು ಮಾಡುವುದಕ್ಕೆ ಬದಲಾಗಿ ನಾನು ಸಾಯುವ ಮೂಲಕ ಈ ಯೋಚನೆಗಳನ್ನು ಕೊನೆಗೊಳಿಸುವುದು ಮೇಲು ಎಂದು ಅವಳು ಅಂದುಕೊಳ್ಳುತ್ತಿದ್ದುದುಂಟು.


ಒಂದು ದೃಷ್ಟಿಯಲ್ಲಿ ಗೀಳುಗಳನ್ನು ಆಂತರಿಕ ಘರ್ಷಣೆಯಿಂದ ಪರಿಣಮಿಸುವ ಉದ್ವಿಗ್ನತೆಯನ್ನು ಪರಿಹರಿಸುವ ರಕ್ಷಣಾತಂತ್ರಗಳು ಎಂಬುದಾಗಿ ತಿಳಿಯಬಹುದು. ವ್ಯಕ್ತಿಯಲ್ಲಿ ಹುದುಗಿರುವ ಆಶೆಗಳು ಮತ್ತು ದ್ವೇಷಭಾವನೆಗಳನ್ನೂ ಕ್ರಿಯಾರೂಪಕ್ಕೆ ಬಾರದಂತೆ ತಡೆಹಿಡಿಯುವಲ್ಲಿ ಗೀಳುಗಳು ಸಹಾಯಕವಾಗಬಹುದು. ಗೀಳುಗಳನ್ನು ಹೆಚ್ಚು ಆತಂಕಕಾರಿ ವಿಚಾರಗಳಿಂದ ವಿಮುಕ್ತಿ ಪಡೆಯಲು ಸಹಾಯಮಾಡುವ ಬದಲೀ ಚಟುವಟಿಕೆಗಳು ಎಂಬುದಾಗಿಯೂ ವಿವರಿಸಬಹುದು ಚಟ.

"https://kn.wikipedia.org/w/index.php?title=ಗೀಳು&oldid=526878" ಇಂದ ಪಡೆಯಲ್ಪಟ್ಟಿದೆ