ಗಿಡಿಗೆರೆ ರಾಮಕ್ಕ
ಶ್ರೀಮತಿ ರಾಮಕ್ಕ ಮುಗ್ಗೇರ್ತಿ ತುಳುನಾಡಿನ ಪಾಡ್ದನ ಕವಿ ಹಾಗು ಗಾಯಕಿ[೧]. ಇವರು ತುಳು ಪಾಡ್ದನಗಳನ್ನು ಸಂಗ್ರಹಿಸುವುದಲ್ಲದೆ, ರಚನಾ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ಮೂವತ್ತಕ್ಕೂ ಹೆಚ್ಚು ಸುದೀರ್ಘ ಪಾಡ್ದನ ಕಾವ್ಯಗಳನ್ನು ಹದಿನೈದಕ್ಕೂ ಹೆಚ್ಚು ' ಕಬಿತ ' ಗಳನ್ನೂ ಮಾನಸಿಕ ಪಠ್ಯ ರೂಪದಲ್ಲಿ ತಮ್ಮಲ್ಲಿ ದಾಖಲಿಸಿಕೊಂಡಿರುವರು.
ಜನನ, ಜೀವನ
[ಬದಲಾಯಿಸಿ]ರಾಮಕ್ಕ ಮುಗ್ಗೇರ್ತಿ ಇವರು ಮಂಗಳೂರು ತಾಲೂಕಿನ ವಾಮಂಜೂರಿನಲ್ಲಿ ಜನಿಸಿದರು. ತಂದೆ ಕೂಕ್ರ ಮುಗ್ಗೇರ ಹಾಗು ತಾಯಿ ದುಗ್ಗಮ್ಮ. ತಮ್ಮ ೧೭ನೇ ವಯಸ್ಸಿನಲ್ಲಿ ಕಟೀಲಿನ ಸಮೀಪದ ಗಿಡಿಗೆರೆಯ ಕಾಪೀರ ಮುಗ್ಗೇರ ಇವರನ್ನು ಮದುವೆಯಾದರು. ಮುಂದೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪಾಡ್ದನ ಕಟ್ಟುವ, ಅದನ್ನು ನಾಟಿಗದ್ದೆಗಳಲ್ಲಿ ಹಾಡುವ ಕೆಲಸ ಅವರಿಂದ ನಡೆಯಿತು. ಇವರಿಗೆ ತುಳು ಕವಿತೆ, ಪಾಡ್ದನ ಮತ್ತು ಸಂಧಿಗಳು ತಮ್ಮ ಅಜ್ಜಿಯಿಂದ ಬಳುವಳಿಯಾಗಿ ಬಂದಿದೆ.
ಇತರೆ ವಿಷಯಗಳು
[ಬದಲಾಯಿಸಿ]ಅಕ್ಷರಾಭ್ಯಾಸದ ಹೊರತಾಗಿಯೂ ಓ ಬೆಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ, ಕನಡ,ಮಾಲ್ಂಡ್ ಮರ, ಕುಮಾರ, ಸಿರಿ, ಬಂಟರು, ಅಬ್ಬಗ-ದಾರಗೆ ಸೇರಿದಂತೆ ಹಲವಾರು ದೈವಿಕ ಆಚರಣೆ ಹಾಗು ಶ್ರಮಿಕ ಸಂಸ್ಕ್ರತಿಯ ಸಂಧಿ- ಪಾಡ್ದನಗಳು ಇವರಿಗೆ ಕಂಠಪಾಠ. ಇವರು ದೀರ್ಘವಾಗಿ ಹಾಡಿರುವ ' ಸಿರಿ ಪಾಡ್ದನ ' ವು ಎ.ವಿ.ನಾವಡರ ಸಂಪಾದಕತ್ವದಲ್ಲಿ ' ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನ ' ಎಂದು ಗ್ರಂಥರೂಪದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದೆ.
ಪ್ರಶಸ್ತಿಗಳು
[ಬದಲಾಯಿಸಿ]- ೨೦೦೦ ದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಟೀಲು ದೇವಳದ ' ಪಾಡ್ದನ ಕೋಗಿಲೆ ' ಬಿರುದು[೨].
- ೨೦೦೧ ರಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ.
- ೨೦೧೫ ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ.
- ೨೦೦೪-೦೫ನೆ ಸಾಲಿನ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಸದಸ್ಯತ್ವ.
ಉಲ್ಲೇಖಗಳು
[ಬದಲಾಯಿಸಿ]- ↑ ಜಾನಪದ ಶೋಧ, ಫ್ರೊ.ಎ.ವಿ.ನಾವಡ,ಅಸ್ಮಿತೆ ಪ್ರಕಾಶನ, ಪ್ರಥಮ ಮುದ್ರಣ ೨೦೧೫, ಪುಟ ೬೪೬
- ↑ https://kannada.oneindia.com/news/2001/11/05/gidigere.html