ಗಾಲ್ಜಿ, ಕ್ಯಾಮಿಲೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾಮಿಲೊ ಗಾಲ್ಜಿ, 1843-1926. ಇಟಲಿಯ ಸುಪ್ರಸಿದ್ಧ ಅಂಗಾಂಶಶಾಸ್ತ್ರಜ್ಞ, ಕೋಶ ವಿಜ್ಞಾನಿ ಹಾಗೂ ವೈದ್ಯ.

ಬದುಕು[ಬದಲಾಯಿಸಿ]

1843ನೆಯ ಇಸವಿ ಜುಲೈ 9 ರಂದು ಲಾಂಬರ್ಡಿ ಪ್ರಾಂತ್ಯದ ಕಾರ್ಟಿನೋ ನಗರದಲ್ಲಿ ಜನಿಸಿದ. ತಂದೆ ವೈದ್ಯ. ಈತನೂ ತಂದೆಯ ವೃತ್ತಿಯನ್ನೇ ಕೈಗೊಳ್ಳುವ ಸಲುವಾಗಿ ಪಾಡುವ ವಿಶ್ವವಿದ್ಯಾಲಯದಲ್ಲಿ ವೈದ್ಯವಿಜ್ಞಾನವನ್ನು ಓದಿ 1865ರಲ್ಲಿ ಪದವಿ ಪಡೆದ. ಅನಂತರ ಅಬ್ಬಿಯ ಟೆಗ್ರಾಸೊ ಎಂಬ ಹಳ್ಳಿಯಲ್ಲಿ ವೈದ್ಯವೃತ್ತಿಯನ್ನು ಆರಂಭಿಸಿದ.

ನರಮಂಡಲದ ಬಗ್ಗೆ ನಡೆಸಿದ ಸಂಶೋಧನೆಗಳಿಗಾಗಿ ಗಾಲ್ಜಿಗೆ 1906ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು. 1926ನೆಯ ಇಸವಿ ಜನವರಿ 21ನೆಯ ತಾರೀಖು ಗಾಲ್ಜಿ ಪಾವೀಯದಲ್ಲಿ ನಿಧನನಾದ.

ಸಾಧನೆ[ಬದಲಾಯಿಸಿ]

ಉತ್ತಮ ಸಂಶೋಧನ ಸೌಲಭ್ಯವಿರದಿದ್ದರೂ ಟೆಗ್ರಾಸೊದಲ್ಲಿಯೇ ಈತ ಸಂಶೋಧನೆಗಳನ್ನು ನಡೆಸಿ ನರಜೀವಕೋಶಗಳನ್ನೂ ನರಮಂಡಲಗಳನ್ನೂ ವಿಶಿಷ್ಟವಾಗಿ ವರ್ಣೀಕರಿಸುವ ಸಿಲ್ವರ್ ನೈಟ್ರೇಟ್ ವಿಧಾನವನ್ನು ಕಂಡುಹಿಡಿದ. ಇದರಿಂದ ನರಮಂಡಲದ ಸೂಕ್ಷ್ಮ ರಚನೆಯ ಅಭ್ಯಾಸ ಸುಲಭವಾಯಿತು. ಒಂದು ರೀತಿಯಲ್ಲಿ ನರವಿಜ್ಞಾನದ ಆಧುನಿಕ ಅಭ್ಯಾಸ ಈತನಿಂದ ಆರಂಭವಾಯಿತು ಎಂದರೆ ಉತ್ಪ್ರೇಕ್ಷೆಯಿಲ್ಲ. ಇದೇ ರೀತಿ ತನ್ನ ಹೊಸ ವಿಧಾನಗಳ ಬಳಕೆಯಿಂದ ಪ್ರಾಣಿಗಳ ಜೀವಕೋಶದಲ್ಲಿ ಸೆಂಟ್ರೋಸೋಮನ್ನು ಸುತ್ತುವರಿದಿರುವ ಮತ್ತು ರಾಸಾಯನಿಕವಾಗಿ ಲೋಹೀಯ ಲವಣಗಳಿಗೆ ಒಲವನ್ನು ತೋರುವ ಕೆಲವು ವಿಶೇಷ ರಚನೆಗಳನ್ನು ಮೊಟ್ಟ ಮೊದಲ ಬಾರಿಗೆ ಈತ ಕಂಡುಹಿಡಿದ. ಈ ರಚನೆಗಳಿಗೆ ಇವನ ಗೌರವಾರ್ಥವಾಗಿ ಗಾಲ್ಜಿ ರಚನೆಗಳೆಂದು ಹೆಸರು ಕೊಡಲಾಗಿದೆ. ಜೀವಕೋಶಗಳ ಅಧ್ಯಯನಕ್ಕೆ ಲೋಹ ಲವಣಗಳನ್ನು ಬಳಸುವ ವಿಧಾನವನ್ನು ಮೊದಲು (1873) ಬಳಕೆಗೆ ತಂದವನೂ ಇವನೇ. ಈ ಲವಣಗಳ ಬಳಕೆಯಿಂದ ಜೀವಕೋಶಗಳು ಸೂಕ್ಷ್ಮದರ್ಶಕದಲ್ಲಿ ಚೆನ್ನಾಗಿ ಕಾಣುತ್ತವೆ. ಕೇಂದ್ರ ನರಮಂಡಲ, ಸಂವೇದನಾಂಗ, ಸ್ನಾಯು ಮತ್ತು ಗ್ರಂಥಿಗಳ ಅಭ್ಯಾಸಕ್ಕೂ ಈ ವಿಧಾನವನ್ನು ಅನ್ವಯಿಸಲಾಗಿದೆ. ಗಾಲ್ಜಿ 1879ರಲ್ಲಿ ಸಿಯೆನ ವಿಶ್ವವಿದ್ಯಾಲಯದ ಅಂಗರಚನಾವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಮರುವರ್ಷ ಪಾವೀಯ ವಿಶ್ವವಿದ್ಯಾಲಯದಲ್ಲಿ ಅಂಗಾಂಶವಿಜ್ಞಾನ ಮತ್ತು ರೋಗನಿಧಾನ ವಿಜ್ಞಾನದ ಪ್ರಾಧ್ಯಾಪಕನಾದ. ಅನಂತರ 1880ರಲ್ಲಿ ಮಲೇರಿಯ ರೋಗದ ಕಡೆಗೆ ಗಮನ ಹರಿಸಿ ರೋಗಾಣುವಿನ ಜೀವನಚರಿತ್ರೆಯನ್ನು ಅಭ್ಯಸಿಸಿದ. ರೋಗಾಣು ಮನುಷ್ಯದೇಹದಲ್ಲಿ ನಡೆಸುವ ಜೀವನಚಕ್ರವನ್ನು ಕಂಡುಹಿಡಿದ ಕೀರ್ತಿ ಈತನದೇ. ಇದಕ್ಕಾಗಿ ಈ ಚಕ್ರಕ್ಕೆ ಗಾಲ್ಜಿಚಕ್ರ ಎಂದೇ ಹೆಸರು ಕೊಡಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: