ಗಾಬ್ರಿಯೇಲ್ ದಾನೂನ್ ಟ್ಸ್ಯೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಬ್ರಿಯೇಲ್ ದಾನೂನ್ ಟ್ಸ್ಯೊ[ಬದಲಾಯಿಸಿ]

1863-1938. ಹತ್ತೊಂಬತ್ತನೆಯ ಶತಮಾನದ ಇಟಲಿಯ ಸಾಹಿತ್ಯದ ಮೇಲೆ ಅತ್ಯಂತ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದ ಕವಿ, ನಾಟಕಕಾರ, ಕಥೆಗಾರ, ಹಾಗೂ ಸಾಹಸಿ.

ಬದುಕು[ಬದಲಾಯಿಸಿ]

ಏಡ್ರಿಯಾಟಿಕ್ ಕಡಲುತೀರದ ಅಬ್ರೂಸಿ ಪ್ರಾಂತದ ಪೆಸ್ಕಾರಾದಲ್ಲಿ ಹುಟ್ಟಿ 1881ರಿಂದ 1915ರವರೆಗೆ ರೋಮ್, ನೇಪಲ್ಸ, ಅಬ್ರೂಸಿಗಳಲ್ಲಿ ತಿರುಗುತ್ತ ಅಸಾಧಾರಣ ಪ್ರತಿಭೆಯನ್ನು ಈತ, ತನ್ನ ವಿವಿಧ ಕೃತಿಗಳಲ್ಲಿ ಪ್ರದರ್ಶಿಸಿದ.

ಒಂದನೆಯ ಮಹಾಯುದ್ಧ ಪ್ರಾರಂಭವಾದಾಗ ಇಟಲಿ ಮಿತ್ರರಾಷ್ಟ್ರಗಳೊಡನೆ ಸೇರಬೇಕೆಂದು ಈತ ಪದೇ ಪದೇ ಒತ್ತಾಯಮಾಡಿ ಪ್ರಚಾರಲೇಖನಗಳನ್ನು ಬರೆದ. ಯುದ್ಧಕ್ಕೆ ತನ್ನ ದೇಶವೂ ಕಾಲಿಟ್ಟಾಗ ನೌಕಾ ಇಲಾಖೆಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸಮಾಡಿದ. ಏಡ್ರಿಯಾಟಿಕ್ ತೀರದ ವಿಮಾನ, ಕಡಲು, ಭೂ ಸೈನ್ಯಗಳ ಕಾರ್ಯಾಚರಣೆಯ ನಾನಾ ರಂಗಗಳಲ್ಲಿ ಕಾದಾಡಿ ಶತ್ರು ಶಿಬಿರಗಳ ಜೊತೆ ಹೋರಾಡಿ, ತನ್ನ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ. 1910ರಲ್ಲಿ ಫ್ಯೂಮೆ ಪಟ್ಟಣ ಇಟಲಿಗೆ ದಕ್ಕಲಾರದೆಂದು ಖಚಿತವಾದಾಗ ಮೇಲಧಿಕಾರಿಗಳ ಆಜ್ಞೆಯನ್ನು ಉಲ್ಲಂಘಿಸಿ ಸುಮಾರು 300 ಜನ ಅನುಯಾಯಿಗಳೊಡನೆ ಮುನ್ನುಗ್ಗಿ ಆ ಪಟ್ಟಣವನ್ನು ಹಿಡಿದು ಎರಡು ವರ್ಷಗಳ ಕಾಲ ಅಲ್ಲಿ ಸರ್ವಾಧಿಕಾರಿಯಾಗಿ ಅಧಿಕಾರ ನಡೆಸಿದ. ಆಗ ಈತ ತನ್ನ ಉಜ್ವಲಶೈಲಿಯಲ್ಲಿ ಹಲವಾರು ಭಾಷಣಗಳನ್ನು ಮಾಡಿದ. ಯುದ್ಧಕ್ಕೆ ಸಂಬಂಧಿಸಿದ ಮತ್ತು ರಾಜಕೀಯ ವಿಷಯಗಳನ್ನು ಕುರಿತ ಕಥೆ, ಕವನ, ಪ್ರಚಾರ ಲೇಖನಗಳನ್ನೂ ಬರೆದು ನಿರಂಕುಶ ಪ್ರಭುತ್ವದ ತತ್ತ್ವವನ್ನು ಸಾರಿದ. 1921ರಲ್ಲಿ ಇಟಲಿಯ ಸೈನ್ಯ ಫ್ಯೂಮೆ ಪಟ್ಟಣವನ್ನು ಮುತ್ತಲು ಬಂದಾಗ ಈತ ಅಧಿಕಾರವನ್ನು ತ್ಯಜಿಸಿ, ನಿವೃತ್ತನಾದ. ಗರ್ದ ಸರೋವರ ತೀರದ ಭವ್ಯ ಸೌಧವೊಂದರಲ್ಲಿ ವಾಸಿಸುತ್ತಿದ್ದು 1938ರಲ್ಲಿ ಕಾಲವಾದ.

ಬರಹ[ಬದಲಾಯಿಸಿ]

ಕ್ಯಾಂಟೋನೋ (ನ್ಯೂ ಸಾಂಗ್) ಎಂಬ ಕೃತಿ ಇವನಿಗೆ ಅಪಾರ ಕೀರ್ತಿಯನು ಗಳಿಸಿಕೊಟ್ಟಿತು. ಆಮೇಲೆ ಪ್ರಕಟಿಸಿದ ಇಂಟರ್ಮೆಸೊಂಡಿ ರೈಂ ಮುಂತಾದ ಕಾವ್ಯಗಳಲ್ಲಿ ಇವನ ಕಾವ್ಯಭಾಷೆ ಹುಚ್ಚು ಹೊಳೆಯಂತೆ ಹರಿದು ಇಳಿಗತಿಯತ್ತ ಸಾಗುವುದನ್ನು ಗಮನಿಸಬಹುದು. ಓಡಿ ನವಲಿ ಎಂಬ ಕೃತಿಯಲ್ಲಿ ಕಡಲು ಹಾಗೂ ನೌಕಾ ಜೀವನಗಳ ವರ್ಣನೆಯಿದೆ. ಇಟಲಿ ತನ್ನ ನೌಕಾಪಡೆಯನ್ನು ಬಲಪಡಿಸಿಕೊಳ್ಳಬೇಕೆಂದು ಸಾರುವ ಪ್ರಚಾರ ಗೀತೆಗಳೂ ಇದರಲ್ಲಿ ಸೇರಿವೆ. 1893-1900ರ ಸುಮಾರಿನಲ್ಲಿ ಈತ ಆಕಾಶ, ಸಮುದ್ರ, ಭೂಮಿ ಮತ್ತು ವೀರರನ್ನು ಕುರಿತ ಪ್ರಸಂಸೆ ಎಂಬ ನೀಳ್ಗವನವನ್ನು ಬರೆದ. ಇದರಲ್ಲಿ ಜೀವನ ಕಲೆ ಕಾವ್ಯ ಮತ್ತು ಪುರಾಣ ಕಥೆಗಳಲ್ಲಿನ ರಸನಿಮಿಷಗಳನ್ನು ವರ್ಣಿಸಲಾಗಿದೆ. ಆದರೆ ಈ ವರ್ಣನೆಗಳು ಸ್ವಾರ್ಥಿ, ಸ್ವೇಚ್ಛಾಚಾರಿ ವ್ಯಕ್ತಿಯೊಬ್ಬನ ಮನೋವಿಕಾರಗಳ ರಾಶಿಗಳಂತೆ ಕಾಣುತ್ತವೆ.

ಅನಂತರ ಪೆಸ್ಕಾರಾದ ಕಥೆಗಳು ಎಂಬ ಕಥಾಸಂಗ್ರಹ ಹೊರಬಂತು (1882). ಇದರಲ್ಲಿ ತನ್ನ ಊರಾದ ಅಬ್ರೂಸಿ ಪ್ರಾಂತದ ರೈತರ ವಾಸ್ತವಿಕ ಜೀವನವನ್ನು ಕವಿ ಮಾರ್ಮಿಕವಾಗಿ ಚಿತ್ರಿಸಿದ್ದಾನೆ. ಆದರೆ ಈ ಚಿತ್ರಣ ಯಾವ ವ್ಯಕ್ತಿತ್ವವೂ ಇಲ್ಲದೆ ಸ್ವಾರಸ್ಯರಹಿತವಾಗಿದೆ. ಅಂತಃಕರಣವನ್ನು ಅರಳಿಸಿ ಅನುಕಂಪೆಯನ್ನು ಪ್ರಚೋದಿಸುವ, ಜೀವನದ ಯಾವ ಮೌಲ್ಯವನ್ನೂ ಇಲ್ಲಿ ನಾವು ಕಾಣಲಾರೆವು. 1889ರಲ್ಲಿ ಈತ ಇಲ್ ಪಿಯಾಸೆರೊ (ಭೋಗಗಳು) ಫಾರ್ಸೆ ಚಿ ಸಿ, ಪಾರ್ಸೆ ಚಿ ನೊ (ಇದ್ದರೂ ಇರಬಹುದು, ಇಲ್ಲದಿರಬಹುದು) ಮುಂತಾದ ಏಳು ಕಾದಂಬರಿಗಳನ್ನು ಬರೆದ. ನೀಚೆಯ ತತ್ತ್ವಗಳಿಂದ ಪ್ರಭಾವಿತನಾಗಿ ಈತ ಟ್ರಿಯಾನ್ಫೊ ಡೆಲ ಮಾರ್ಟೆ ಎಂಬ ಸತ್ತ್ವಶಾಲಿ ಕಾದಂಬರಿಯನ್ನು ಬರೆದ. ಮನಃಕ್ಲೇಶ, ಸ್ವಾರ್ಥ, ನಿಷ್ಕಾರುಣ್ಯ, ಕ್ರೌರ್ಯ, ಭ್ರಷ್ಟಾಚಾರ, ವಿಷಯಲೋಲುಪ್ತಿ-ಇಂಥ ಮಾನವ ವಿಕಾರಗಳನ್ನು ವರ್ಣಿಸುವುದರಲ್ಲಿ ಈತನಿಗೆ ಆಸಕ್ತಿ ಹೆಚ್ಚು. ಈ ಎಲ್ಲ ಕಾದಂಬರಿಗಳಲ್ಲಿನ ಪಾತ್ರಗಳು-ನಿರುತ್ಸಾಹಿಗಳು, ಧರ್ಮಬಾಹಿರರು. ಉಲ್ಲಾಸವನ್ನರಿಯದ ಅಂಧ ಜೀವಿಗಳು.

1898ರಲ್ಲಿ ಇವನಿಗೆ ನಾಟಕದಲ್ಲಿ ಅಭಿರುಚಿ ಹುಟ್ಟಿ, ಸಿಟ್ಟ ಮಾರ್ಟ (ಮೃತನಗರ) ಎಂಬ ನಾಟಕ ಬರೆದ. ಆಮೇಲೆ ವರ್ಷಕ್ಕೊಂದರಂತೆ ಇಟಾಲಿಯನ್ ಅಥವಾ ಫ್ರೆಂಚ್ನಲ್ಲಿ ಹಲವು ನಾಟಕಗಳನ್ನು ಪ್ರಕಟಿಸಿದ. ಲ ಫಿಗ್ಲಿಯ ಡಿ ಲಾರಿಯೊ ಎಂಬ ನಾಟಕ ಹಿರಿಯಸ್ಥಾನ ಗಳಿಸಿತು.

ಕೇವಲ ಬುದ್ಧಿ ಪ್ರಧಾನವಾಗಿದ್ದು, ಶುಷ್ಕ ಪಾಂಡಿತ್ಯದ ಅಸಹಜತೆಯಿಂದ ಕೂಡಿದ ಅಂದಿನ ಇಟಲಿಯ ಕಾವ್ಯ ಶೈಲಿಯನ್ನು ಬದಲಾಯಿಸಿ ಈತ ಭಾವ ಪ್ರಧಾನವಾಗುವಂತೆ ಮಾಡಿದ. ಅದು ಮಾನವ ವಿಕಾರಗಳನ್ನೂ ಸಂವೇದನೆಗಳನ್ನೂ ರಾಗೋದ್ವೇಗಗಳನ್ನೂ ಅಭಿವ್ಯಕ್ತಗೊಳಿಸುವಂತೆ ಮಾಡಿ ಇಟಾಲಿಯನ್ ಭಾಷೆಯ ಸಂಪತ್ತನ್ನು ಹೆಚ್ಚಿಸಿದ.