ಗಾಂಧಿ- ಇರ್ವಿನ್ ಒಪ್ಪಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೯೩೧ರಲ್ಲಿ ಲಂಡನ್ ನಲ್ಲಿ ನಡೆದ ಎರಡನೇ ದುಂಡು ಮೇಜಿನ ಸಭೆಗಿಂತಲೂ ಮುಂಚೆ ಮಾರ್ಚ್ ೫, ೧೯೩೧ ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪರವಾಗಿ ಮಹಾತ್ಮ ಗಾಂಧಿ ಹಾಗು ಬ್ರಿಟೀಷರ ಪರವಾಗಿ ಆಗಿನ ಭಾರತದ ವೈಸ್ ರಾಯ್ ಲಾರ್ಡ್ ಇರ್ವಿನ್ ಒಪ್ಪಂದವೊಂದಕ್ಕೆ ಸಹಿ ಮಾಡುತ್ತಾರೆ. ಇದನ್ನೇ ಗಾಂಧಿ-ಇರ್ವಿನ್ ಒಪ್ಪಂದವೆನ್ನಲಾಗುತ್ತದೆ.

ಹಿನ್ನೆಲೆ[ಬದಲಾಯಿಸಿ]

1930ರ ಏಪ್ರಿಲ್ 6ರಂದು ಗಾಂಧಿಯವರು ಆರಂಭಿಸಿದ ಕಾನೂನು ಭಂಗ ಚಳವಳಿಯ ಪ್ರತಿಭಟನೆಯನ್ನು ಹತ್ತಿಕ್ಕಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿತ್ತು. ಭಾರತೀಯ ಜನರ ಮೇಲೆ ಕಾಂಗ್ರೆಸ್ ಹೊಂದಿದ್ದ ಪ್ರಭಾವವನ್ನು ಸರ್ಕಾರ ಸರಿಯಾಗಿ ಅರಿತಿರಲಿಲ್ಲ. ಕಾಂಗ್ರೆಸಿನಷ್ಟು ಪ್ರಭಾವಶಾಲಿಯಲ್ಲದ, ಪ್ರತಿಗಾಮಿಯಾಗಿದ್ದ ಹಲವಾರು ಸಣ್ಣಪುಟ್ಟ ಪಕ್ಷಗಳಿಗೆ ಅದು ವಿಶೇಷವಾಗಿ ಉತ್ತೇಜನ ನೀಡಲು ಯತ್ನಿಸಿತು. ಸರ್ಕಾರದ ದಮನನೀತಿಯಿಂದ ಸ್ವಾತಂತ್ರ್ಯ ಹೋರಾಟ ಇನ್ನೂ ಬಿರುಸಾಯಿತು. ಭಾರತದ ರಾಜಕೀಯ ಭವಿಷ್ಯದ ಬಗ್ಗೆ ಸಮಾಲೋಚಿಸಲು 1930ರ ನವೆಂಬರಿನಲ್ಲಿ ಸಮಾವೇಶಗೊಂಡಿದ್ದ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸ್ ಪ್ರತಿನಿಧಿ ಯಾರೂ ಇರಲಿಲ್ಲ. ಕಾಂಗ್ರೆಸ್ ಇಲ್ಲದ ಯಾವ ಸಮಾಲೋಚನೆಯೂ ಫಲಪ್ರದವಾಗುವಂತಿರಲಿಲ್ಲ. ಪರಿಷತ್ತಿನ ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸುವುದೆಂಬುದು ಬ್ರಿಟಿಷ್ ಪ್ರಧಾನಿಯ ಆಶಯವಾಗಿತ್ತು. 1931ರ ಫೆಬ್ರವರಿ 17ರಂದು ಗಾಂಧೀ ಇರ್ವಿನರ ನಡುವೆ ಮಾತುಕತೆಗಳು ಆರಂಭವಾದುವು. ಮಾರ್ಚ್ 5ರಂದು ಒಪ್ಪಂದಕ್ಕೆ ಸಹಿಯಾಯಿತು.

ಇರ್ವಿನರ ಅಭಿಲಾಷೆಗಳು ಪ್ರಾಮಾಣಿಕವಾಗಿವೆಯೆಂದು ಗಾಂಧಿಯವರಿಗೆ ಖಚಿತವಾಗಿತ್ತು. ಲಿಬರಲ್ ಪಕ್ಷದ ನಾಯಕರಾದ ತೇಜ್ಬಹದ್ದೂರ್ ಸಪ್ರು, ಎಂ.ಆರ್. ಜಯಕರ್, ವಿ. ಎಸ್. ಶ್ರೀನಿವಾಸ ಶಾಸ್ತ್ರಿ ಇವರು ಸಂಧಾನ ಫಲಪ್ರದವಾಗಲು ಪ್ರಮುಖ ಪಾತ್ರ ವಹಿಸಿದ್ದರು.

೩೨ ಗಂಟೆಗಳ ಅವಧಿಯೊಳಗೆ ಎಂಟು ಸಭೆಗಳಿಗೆ ಹಾಜರಾದ ಗಾಂಧಿ ಹಾಗು ಇರ್ವಿನ್ ಅವರನ್ನು ಸರೋಜಿನಿ ನಾಯ್ಡು 'ಉಭಯ ಮಹಾತ್ಮರು' ಎಂದೇ ಸಂಭೋದಿಸುತ್ತಾರೆ. ಇರ್ವಿನ್ ತಮ್ಮ ನಡೆತೆಯಿಂದಲೇ ಗಾಂಧೀಜಿಯವರಿಗೆ ಬಹಳ ಪ್ರೀತಿ ಪಾತ್ರರಾಗಿದ್ದರು.

ಶಿಫಾರಸ್ಸು ಮಾಡಿದ ಅಂಶಗಳು[ಬದಲಾಯಿಸಿ]

ಒಪ್ಪಂದಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷ್ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಅಂಶಗಳು

  • ನಾಗರೀಕ ಅಸಹಕಾರ ಚಳುವಳಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ನಿಲ್ಲಿಸುವುದು.
  • ಮುಂದೆ ನಡೆಯುವ ಎಲ್ಲ ದುಂಡು ಮೇಜಿನ ಸಭೆಗಳಲ್ಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಾಲ್ಗೊಳ್ಳುವುದು.
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೇಲೆ ಬ್ರಿಟಿಷ್ ಸರ್ಕಾರ ಹೇರಿರುವ ಎಲ್ಲ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲು ಆಗ್ರಹ.
  • ಹಿಂಸೆಯಾಗದ ವಿಚಾರಗಳನ್ನು ಅಪರಾಧಗಳು ಎಂಬ ಹಣೆಪಟ್ಟಿಯಿಂದ ಹೊರಗಿಟ್ಟು ಅವುಗಳ ಮೇಲಿರುವ ಕಾನೂನಾತ್ಮಕ ಅಧಿಕಾರವನ್ನು ವಿಸರ್ಜಿಸುವುದು.(ಭಾರತೀಯರ ದೇಶ ಭಕ್ತಿ, ದೇಶ ಭಕ್ತಿಯ ಕುರಿತು ಹೋರಾಡುತ್ತಿದ್ದ ಜಾಥಾ, ಪತ್ರಿಕಾ ಪ್ರಕಟಣೆಗಳನ್ನು ಕೂಡ ಬ್ರಿಟಿಷ್ ಸರ್ಕಾರ ಅಪರಾಧವೆಂದು ಪರಿಗಣಿಸಿತ್ತು.)
  • ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡು ಜೈಲಿಗೆ ಸೇರಿದವರನ್ನೆಲ್ಲ ಬಿಡುಗಡೆಗೊಳಿಸುವುದು.
  • ಉಪ್ಪಿನ ಮೇಲೆ ವಿಧಿರುವ ತೆರಿಗೆಯನ್ನು ಬ್ರಿಟಿಷ್ ಸರ್ಕಾರ ಹಿಂಪಡೆಯಬೇಕು, ಇದರಿಂದ ಉಪ್ಪನ್ನು ಉತ್ಪಾದಿಸುವ, ಮಾರಾಟ ಮಾಡುವ, ಕೊಳ್ಳುವ ಹಾಗು ತಮ್ಮ ಉಪಯೋಗಕ್ಕೆ ಬಳಸುವ ಅವಕಾಶ ಭಾರತೀಯರಿಗೆ ಒದಗಿ ನೆಮ್ಮದಿಯಿಂದ ಜೀವನ ಸಾಗಿಸಲು ಅನುವಾಗುವುದು.

ಭಾರತ ಹಾಗು ಇಂಗ್ಲೆಂಡ್ ನಲ್ಲಿದ್ದ ಹಲವಾರು ಬ್ರಿಟಿಷ್ ಅಧಿಕಾರಿಗಳಿಗೆ ಈ ಮೇಲಿನ ಒಪ್ಪಂದ ಕರಾರುಗಳು ನುಂಗಲಾರದ ತುತ್ತಾದವು. ಈ ಒಪ್ಪಂದದಿಂದ ಇಡೀ ಬ್ರಿಟಿಷ್ ರಾಜ್ ವ್ಯವಸ್ಥೆಯನ್ನೇ ಭಾರತೀಯರು ಸುಲಭವಾಗಿ ಅಲುಗಾಡಿಸಬಹುದು ಎಂದು ಹಲವಾರು ಅಧಿಕಾರಿಗಳು ಅರಿಹಾಯ್ದರು. ವಿನ್ ಸ್ಟನ್ ಚರ್ಚಿಲ್ ಇದೆ ಸಂಧರ್ಭದಲ್ಲಿ ಗಾಂಧೀಜಿಯವರ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆಗಳನ್ನು ಕೊಟ್ಟು ಭಾರತೀಯರಿಗೆ ಅಪಮಾನವಾಗುವಂತೆ ನಡೆದುಕೊಂಡಿದ್ದರು.

ಒಪ್ಪಿದ ಅಂಶಗಳು[ಬದಲಾಯಿಸಿ]

ಬ್ರಿಟಿಷ್ ಸರ್ಕಾರ ಒಪ್ಪಿದ ಅಂಶಗಳು

  • ಅಪರಾಧವೆಂದು ಪರಿಗಣಿಸಬಹುದಾದ ಕಾನೂನಿನಲ್ಲಿ ಸಡಿಲಿಕೆ.
  • ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದವರನ್ನು ಹೊರತುಪಡಿಸಿ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡು ಸೆರೆಯಾದವರನ್ನು ಬಿಡುಗಡೆ ಮಾಡಲು ಬದ್ಧ.
  • ಸತ್ಯಾಗ್ರಹಿಗಳಿಂದ ವಶಪಡಿಸಿಕೊಂಡ ವಸ್ತುಗಳನ್ನು ಮರಳಿ ನೀಡಲು ಬದ್ಧ.
  • ಶಾಂತಿಯುತವಾಗಿ ಮದ್ಯ ಹಾಗು ವಿದೇಶಿ ಉಡುಪು ಮಳಿಗೆಗಳನ್ನು ತೆರೆಯಲು ಅವಕಾಶ.
  • ಸಮುದ್ರ ತೀರಾ ವಾಸಿಗಳಿಂದ ತೆರಿಗೆ ರಹಿತ ಉಪ್ಪು ಉತ್ಪಾದನೆ ಹಾಗು ಮಾರಾಟಕ್ಕೆ ಅವಕಾಶ.
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೇಲಿದ್ದ ನಿರ್ಬಂಧ ಹಿಂತೆಗೆತ.

ಮಹತ್ವ[ಬದಲಾಯಿಸಿ]

ಆಧುನಿಕ ಭಾರತದ ಇತಿಹಾಸದಲ್ಲಿ ಇದು ಒಂದು ಮುಖ್ಯ ಘಟನೆ. ಬ್ರಿಟಿಷ್ ಸಾಮ್ರಾಜ್ಯದ ಪ್ರತಿನಿಧಿ ವೈಸ್ರಾಯಿಗೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ರಾಷ್ಟ್ರೀಯ ಕಾಂಗ್ರೆಸಿನ ನೇತಾರರಾದ ಗಾಂಧಿಯವರಿಗೂ ಪ್ರಥಮ ಬಾರಿಗೆ ಸಮಾನ ಅಂತಸ್ತಿನಲ್ಲಿ ವಿಚಾರವಿನಿಮಯ ನಡೆದು ಅದು ಈ ಒಪ್ಪಂದದಲ್ಲಿ ಪರ್ಯವಸಾನ ವಾಯಿತು. ಇದರಿಂದ ಕಾಂಗ್ರೆಸಿಗೆ ಪ್ರಾಮುಖ್ಯ ಅಧಿಕವಾಗಿ ಅದರ ಕೀರ್ತಿಯೂ ಹೆಚ್ಚಿತು. ದುಂಡುಮೇಜಿನ ಪರಿಷತ್ತಿನ ಎರಡನೆಯ ಅಧಿವೇಶನದಲ್ಲಿ ಕಾಂಗ್ರೆಸ್ ಭಾಗವಹಿಸಲು ಅವಕಾಶವಾಯಿತು.

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: