ವಿಷಯಕ್ಕೆ ಹೋಗು

ಗಾಂಧರ್ವವಿವಾಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಂಧರ್ವ ವಿವಾಹ ಆಧುನಿಕ ಪ್ರೇಮವಿವಾಹವನ್ನು ಹೋಲುವ ಈ ಪದ್ಧತಿ ಸಾಕಷ್ಟು ಪ್ರಾಚೀನವಾದುದು, ಅಷ್ಟವಿವಾಹಗಳಲ್ಲಿ ಪ್ರಮುಖವಾದುದು. ದುಷ್ಯಂತ ಶಕುಂತಲೆಯರ ಮದುವೆ ಇದಕ್ಕೆ ಸುಪ್ರಸಿದ್ಧ ಉದಾಹರಣೆ.

ಮಹಾಭಾರತದಲ್ಲಿ ಬರುವ ದುಷ್ಯಂತ ಶಕುಂತಲೆಯರು. ಇವರ ಮಗನೇ ಭರತ

ಋಗ್ವೇದದಲ್ಲಿ ಇದು ಸೂಚಿತವಾಗಿದೆ. ಮಾತಾಪಿತೃಗಳು ಪ್ರೇಮಪ್ರಸಂಗಗಳಲ್ಲಿ ಕನ್ಯೆಯರನ್ನು ಪ್ರೋತ್ಸಾಹಿಸುತ್ತಿದ್ದರೆಂದೂ ಪ್ರೇಮಯಾಚನೆ ಗಾಗಿ ವಶೀಕರಣ ಮಂತ್ರಗಳಿವೆಯೆಂದೂ ಅಥರ್ವಣವೇದ ತಿಳಿಸುತ್ತದೆ. ಮುಂದೆ ಗೃಹ್ಯ ಮತ್ತು ಧರ್ಮಸೂತ್ರಗಳಲ್ಲೂ ಸ್ಮೃತಿಗಳಲ್ಲೂ ವಿವಾಹದ ಎಂಟು ರೂಪಗಳ ಪ್ರಸ್ತಾಪ ಬಂದಾಗಲೆಲ್ಲ ಗಾಂಧರ್ವವಿವಾಹಕ್ಕೂ ಸಾಕಷ್ಟು ಪ್ರಾಶಸ್ತ್ಯ ಸಿಕ್ಕಿದೆ. ಅದು ಬ್ರಾಹ್ಮಣವರ್ಣಕ್ಕೆ ಉಚಿತವಾದ, ಪ್ರಶಸ್ತ ಅಥವಾ ಧರ್ಮಪದ್ಧತಿ ಅಲ್ಲದಿದ್ದರೂ ಬೇರೆ ಅಪ್ರಶಸ್ತ ರೂಪಗಳಿಗಿಂತ ಉತ್ತಮ ಎಂಬ ಭಾವನೆ ಇತ್ತು.

ಗಾಂಧರ್ವ ವಿವಾಹ ಎಂದರೆ!

[ಬದಲಾಯಿಸಿ]
  • ವಧೂವರರಲ್ಲಿ ಪರಸ್ಪರ ಅನುರಾಗ ಬೆಳೆದು ತಮ್ಮ ಇಚ್ಛೆಯಿಂದಲೇ ಆಲಿಂಗನಾದಿ ಶರೀರ ಸಂಬಂಧ ಉಂಟಾಗಿ ಅನಂತರ ನಡೆಯುವ ವಿವಾಹ ಗಾಂಧರ್ವ ರೀತಿಯದು ಎಂದು ಮನುಸ್ಮೃತಿಯಲ್ಲಿ ಹೇಳಿದೆ. ಗಂಧರ್ವರು ಸ್ತ್ರೀ ಕಾಮುಕರಾದುದರಿಂದ ಈ ಹೆಸರು ಬಂದಿದೆಯೆಂದು ತೈತ್ತಿರೀಯ ಸಂಹಿತೆ ಮತ್ತು ಐತರೇಯ ಬ್ರಾಹ್ಮಣಗಳಿಂದ ತಿಳಿಯುತ್ತದೆ. ಇಲ್ಲಿ ತಂದೆಯಿಂದ ಕನ್ಯಾದಾನವಿಲ್ಲ. ಹೀಗೆ ಅವನ ಅಧಿಕಾರ ಮೊಟಕಾಗುತ್ತದೆ. ವಧೂವರರ ಪರಸ್ಪರ ಪ್ರೇಮವೇ ಇಲ್ಲಿ ಮುಖ್ಯ. ಧರ್ಮ ಮತ್ತು ಪ್ರಜಾಕಾರ್ಯಗಳಿಗಿಂತ ರತಿಗೇ ಹೆಚ್ಚು ಪ್ರಾಧಾನ್ಯ ಇರುವುದರಿಂದ ಹೆಚ್ಚಿನ ಧರ್ಮ ಶಾಸ್ತ್ರಕಾರರು ಇದನ್ನು ಅಪ್ರಶಸ್ತವೆಂದು ಪರಿಗಣಿಸಿದ್ದಾರೆ.
  • ಆದರೂ ಅದು ಹೇಯವಲ್ಲವೆಂದೂ ಕ್ಷತ್ರಿಯರಿಗೆ ಉಚಿತವಾದುದೆಂದೂ ಕೆಲವೊಮ್ಮೆ ಎಲ್ಲ ವರ್ಣಗಳೂ ಒಪ್ಪಬಹುದಾದ ವಿವಾಹವೆಂದೂ ಅನೇಕರು ಅಭಿಪ್ರಾಯಪಟ್ಟಿದ್ದಾರೆ. ವಾತ್ಸ್ಯಾಯನ 'ಕಾಮಸೂತ್ರ'ದಲ್ಲಿ ಮೊದಲಿಗೆ ಬ್ರಾಹ್ಮಣವಿವಾಹವೇ ಶ್ರೇಷ್ಠವೆಂದು ತಿಳಿಸಿದರೂ ಮುಂದೆ ಗಾಂಧರ್ವವೇ ಶ್ರೇಷ್ಠವೆಂದು ಹೇಳಿದೆ. ಪರಸ್ಪರ ಅನುರಾಗದ ಮೇಲೆ ನಿಂತಿರುವುದರಿಂದಲೂ ಅನೇಕ ಕ್ಲೇಶಗಳಿಂದ ಮುಕ್ತವಿರುವುದರಿಂದಲೂ ಗಾಂಧರ್ವವಿವಾಹ ವಿವಾಹಗಳಲ್ಲೆಲ್ಲ ಪುಜಿತವೆಂದು ವಾತ್ಸ್ಯಾಯನ, ಬೌಧಾಯನ ಮತ್ತು ನಾರದರು ಹೊಗಳಿದ್ದಾರೆ. ಕ್ಷತ್ರಿಯರಲ್ಲಿ, ಅದರಲ್ಲೂ ರಾಜಮನೆತನಗಳಲ್ಲಿ, ಅದು ಧಾರಾಳವಾಗಿ ಪ್ರಚಾರದಲ್ಲಿದ್ದಂತೆ ಕಾಣುತ್ತದೆ.
  • ಸ್ವಯಂವರ ಗಾಂಧರ್ವ ವಿವಾಹದ ಒಂದು ವಿಧವೆಂದು ಯಾಜ್ಞವಲ್ಕ್ಯ ಸ್ಮೃತಿಯ ಭಾಷ್ಯವಾದ ವೀರಮಿತ್ರೋದಯದಲ್ಲಿ ಹೇಳಿದೆ. ಅದರ ಒಂದು ಸರಳ ಪ್ರಕಾರವೆಂದರೆ ಋತುಮತಿಯಾದ ಕನ್ಯೆ ಮೂರು ವರ್ಷ ಕಾದ ಅನಂತರ ತನ್ನ ವರನನ್ನು ತಾನೇ ಆರಿಸಿಕೊಳ್ಳುವುದು. ಹಾಗೆಯೇ, ವಿವಾಹ ಮಾಡಿಸುವ ತಂದೆ ತಾಯಿಯರೂ ಪಾಲಕರೂ ಇಲ್ಲದಿರುವಾಗಲೂ ಕನ್ಯೆ ಸ್ವತಂತ್ರಳು. ಇದು ಎಲ್ಲ ಜಾತಿಗಳಿಗೂ ಅನ್ವಯಿಸುತ್ತದೆ. ಸಾವಿತ್ರಿ ಸತ್ಯವಾನನನ್ನು ಆರಿಸಿದ್ದು ಹೀಗೆಯೇ. ದಮಯಂತಿ, ಇಂದುಮತಿ ಶಕುಂತಲೆ ಮೊದಲಾದವರು ಪ್ರಸಿದ್ಧ ಉದಾಹರಣೆಗಳಾಗಿದ್ದಾರೆ.