ಗಲಿಪೊಲಿ


ಗಲಿಪೊಲಿಐರೋಪ್ಯ ತುರ್ಕಿಯ ಚಾನಾಕ್ಕಾಲೆ ಪ್ರಾಂತ್ಯದಲ್ಲಿ, ಡಾರ್ಡನೆಲ್ಸ್ ಜಲಸಂಧಿಯ ಈಶಾನ್ಯ ತುದಿಯಲ್ಲಿ, ಮಾರ್ಮರ ಸಮುದ್ರದ ಪಶ್ಚಿಮ ಪ್ರವೇಶದ್ವಾರದ ಎಡೆಯಲ್ಲಿ ಉ.ಅ. 40° 26' ಮತ್ತು ಪು.ರೇ. 26° 38' ಮೇಲೆ ಇರುವ ಒಂದು ರೇವುಪಟ್ಟಣ. ಕಿರಿದಾದ ಪರ್ಯಾಯದ್ವೀಪವೊಂದರ ಮೇಲಿದೆ.
ಮೇಲ್ಮೈ ಲಕ್ಷಣ[ಬದಲಾಯಿಸಿ]
ಇದರ ಎರಡೂ ಬದಿಗಳಲ್ಲಿ-ಎಂದರೆ ಮಾರ್ಮರ ಸಮುದ್ರದ ಕಡೆಗೂ ಇಜೀಯನ್ ಸಮುದ್ರದ ಕಡೆಗೂ ಮುಖ ಮಾಡಿದಂತೆ-ಎರಡು ಬಂದರುಗಳಿವೆ. ಇಸ್ತಾಂಬೂಲಿಂದ ಇಲ್ಲಿಗೆ ಸು. 211ಕಿ.ಮೀ ದೂರ.
ಪ್ರಾಚೀನತೆ[ಬದಲಾಯಿಸಿ]
ಇಲ್ಲಿ ಅನೇಕ ಮಸೀದಿಗಳು, ರೋಮನ್ ಮತ್ತು ಬಿಜ಼ಾಂಟೈನ್ ಅವಶೇಷಗಳು, 483-565ರಲ್ಲಿದ್ದ 1ನೆಯ ಜಸ್ಟಿನಿಯನ್ ಚಕ್ರವರ್ತಿಯ ಮದ್ದಿನ ಉಗ್ರಾಣ, ಚಚ್ಚೌಕನಾದ ಕೋಟೆ ಮತ್ತು ಕೆಲವು ಗೋರಿಗಳು ಇವೆ. ಇಸ್ತಾಂಬೂಲಿನಿಂದ ಇಲ್ಲಿಗೆ ಹಡಗು ಸಂಚಾರವುಂಟು. ಹಡಗುಗಳಿಗೆ ಸೂಚನೆ ನೀಡುವುದಕ್ಕಾಗಿ ಕಟ್ಟಲಾದ ಎತ್ತರವಾದ ದೀಪಸ್ತಂಭವೊಂದು ಇಲ್ಲಿದೆ. ಇಲ್ಲಿಂದ ಎಡಿರ್ನೆಗೂ ಇಸ್ತಾಂಬೂಲಿಗೂ ಹೆದ್ದಾರಿಯಿದೆ.
ವಾಣಿಜ್ಯ[ಬದಲಾಯಿಸಿ]
ಇದೊಂದು ಮೀನುಗಾರಿಕೆ ಕೇಂದ್ರ. ಇಲ್ಲಿ ರೇಷ್ಮೆ, ಕರ್ಪುರ, ಚರ್ಮ, ಕಬ್ಬಿಣ ಮತ್ತು ಪೆಟ್ರೋಲಿಯಂ ಕೈಗಾರಿಕೆಗಳಿವೆ. ಇಸ್ತಾಂಬೂಲಿನ ರಕ್ಷಣೆಯ ದೃಷ್ಟಿಯಿಂದ ಇದು ಆಯಕಟ್ಟಿನ ಸ್ಥಳವಾಗಿದೆ. 1ನೆಯ ಮಹಾಯುದ್ಧದ ಕಾಲದಲ್ಲಿ 1915ರಲ್ಲಿ ಮಿತ್ರ ರಾಷ್ಟ್ರಗಳು ಟರ್ಕಿ ಮತ್ತು ಆಸ್ಟ್ರಿಯಾಗಳ ಮೇಲೆ ಧಾಳಿ ನಡೆಸಿ ಯುದ್ಧಕ್ಕೆ ಹೊಸ ತಿರುವು ಕೊಡಬಯಸಿದವು. ಆದರೆ ಬ್ರಿಟನ್ ಮತ್ತು ಫ್ರಾನ್ಸ್ ಯುದ್ಧ ನೌಕೆ ಡಾರ್ಡ್ನೆಲ್ಸ್‌ನಲ್ಲಿ ಭಾರಿ ನಷ್ಟವನ್ನನುಭವಿಸಿತು. ಈ ಯುದ್ಧ ಕಾಲದಲ್ಲಿ ಇದು ಬಹಳ ಮಟ್ಟಿಗೆ ನಾಶವಾಯಿತು.