ಗಲಗು

ವಿಕಿಪೀಡಿಯ ಇಂದ
Jump to navigation Jump to search
ಗಲಗು

ಗಲಗು-ಸೋರ್ಗಂ ಹ್ಯಾಲಪೆನ್ಸ್ ಎಂಬ ವೈಜ್ಞಾನಿಕ ಹೆಸರಿನ ಏಕದಳ ಸಸ್ಯ. ಪೋಯೇಸೀ ಕುಟುಂಬಕ್ಕೆ ಸೇರಿದೆ.

ಯುರೋಪು ಮತ್ತು ಆಫ್ರಿಕದ ಮೆಡಿಟರೇನಿಯನ್ ಪ್ರದೇಶಗಳ ಮೂಲನಿವಾಸಿಯಾದ ಈ ಸಸ್ಯವನ್ನು ಮೊಟ್ಟಮೊದಲು ಕರ್ನಲ್ ಜಾನ್ಸನ್ ಎಂಬಾತ ತಂದು ಬೆಳೆಸಿದ್ದರಿಂದ ಇದನ್ನು ಜಾನ್ಸನ್ ಹುಲ್ಲು ಎಂದೂ ಕರೆಯುವುದುಂಟು. ದಪ್ಪವಾಗಿ ಎತ್ತರಕ್ಕೆ ಬೆಳೆಯುತ್ತದೆ. ಇದೊಂದು ಬಹುವಾರ್ಷಿಕ ಹುಲ್ಲು. ಇದಕ್ಕೆ ಅಗಲವಾದ ಎಲೆಗಳಿವೆ. ಎಲೆಯ ಮಧ್ಯನಾಳ ದಪ್ಪ ಮತ್ತು ಬಿಳುಪಾಗಿರುತ್ತದೆ. ಹೂಗಳು ಅಗಲವಾದ ಪ್ಯಾನಿಕಲ್ ಮಾದರಿಯ ಗೊಂಚಲಲ್ಲಿ ಜೋಡಣೆಗೊಂಡು ಅರಳಿದಾಗ ಎದ್ದುಕಾಣುತ್ತದೆ. ಬೀಜಗಳು ಬಲಿತಾಗ ಸಿಡಿದು ಪ್ರಸಾರವಾಗುತ್ತವೆ. ಇತರ ಹುಲ್ಲುಸಸ್ಯಗಳಲ್ಲಿರುವ ತೊಡಕು ಬೇರುಗಳ ಜೊತೆಗೆ ಇದಕ್ಕೆ ಅನೇಕ ಗುಪ್ತಕಾಂಡಗಳೂ ಇವೆ. ಗುಪ್ತಕಾಂಡಗಳ ಗೆಣ್ಣುಗಳಿಂದ ಕೊಂಬೆಗಳು ಹೊರಟು ಹೊಸಗಿಡಗಳಾಗಿ ಬೆಳೆಯುತ್ತವೆ. ಮಣ್ಣಿನಲ್ಲಿ 15-20 ಸೆಂ.ಮೀ ಕೆಳಕ್ಕೆ ಇವು ಅಡಗಿರುತ್ತವೆ. ಕಾಂಡ 7-15 ಸೆಂ.ಮೀ ಎತ್ತರಕ್ಕೆ ಬೆಳೆಯುತ್ತದೆ.

ನದಿಯ ಮೆಕ್ಕಲುಮಣ್ಣಿನ ಮತ್ತು ಎರೆಮಣ್ಣಿನ ಭೂಮಿಗಳಲ್ಲಿ ಗಲಗು ಚೆನ್ನಾಗಿ ಬೆಳೆಯುತ್ತದೆ. ಇದು ಚೆನ್ನಾಗಿ ಬೆಳೆಯಲು ಮಳೆ, ಹಳ್ಳಗಳಿಂದ ಉಕ್ಕುವ ನೀರು, ನೀರಾವರಿಯ ಪ್ರದೇಶ ಇತ್ಯಾದಿಗಳಿಂದ ಒದಗುವ ತೇವ ಆವಶ್ಯಕ. ಬಿಸಿಲನ್ನು ಬಯಸುವ ಈ ಸಸ್ಯ ಉಷ್ಣತೆ ಹೆಚ್ಚಾಗಿರುವೆಡೆ ಚೆನ್ನಾಗಿ ಬೆಳೆಯುತ್ತದೆ. ಸು.1/2 ಹೆಕ್ಟೇರಿಗೆ ಸುಮಾರು 10-12 ಕೆ.ಜಿ ಬೀಜ ಬಿತ್ತನೆಗೆ ಬೇಕಾಗುತ್ತದೆ. ಚೆನ್ನಾಗಿ ಬೆಳೆದು ಫಲ ಬಿಟ್ಟ ಮೇಲೆ ಪೈರನ್ನು ಕತ್ತರಿಸಿದ ಅನಂತರ ಮತ್ತೆ ಗಿಡ ಚಿಗುರಿ ಮರುಫಸಲು ನೀಡುತ್ತದೆ. ಹೀಗೆ ವರ್ಷಕ್ಕೆ ಎರಡು ಬೆಳೆ ಬೆಳೆಸಬಹುದು. ನೀರಾವರಿ ಭೂಮಿಯಲ್ಲಿ ಎಕರೆಗೆ 5-6 ಟನ್ ಫಸಲು ದೊರಕುತ್ತದೆ. ನದೀ ಬಯಲು ಭೂಮಿಯಲ್ಲಿ 3-4 ಟನ್ ಫಸಲನ್ನು ಪಡೆಯಬಹುದು. ಮಳೆ ನೀರನ್ನು ಆಶ್ರಯಿಸಿರುವೆಡೆ ಎಕರೆಗೆ 1-3 ಟನ್ ಫಸಲು ದೊರಕುವುದು. ತೆನೆ ಬಂದಾಗ ಅಥವಾ ಹಾಲು ಹಿಡಿದಾಗ ಕಟಾವು ಮಾಡುವುದರಿಂದ ಸಸಾರಜನಕಾದಿ ವಸ್ತು ಅತ್ಯಧಿಕ ಪ್ರಮಾಣದಲ್ಲೂ ನಾರು ಕಡಿಮೆ ಪ್ರಮಾಣದಲ್ಲೂ ಇರುತ್ತವೆ. ಮೇವಿನಲ್ಲಿ ಶೇ.3.9 ಭಸ್ಮಾಂಶ (ಆ್ಯಷ್), ಶೇ.7.8 ಸಸಾರಜನಕಾದಿ ವಸ್ತುವೂ ಶೇ.1.7 ಮೇದೋಭಾಗವೂ ಶೇ.32.0 ನಾರೂ ಇರುತ್ತವೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಗಲಗು&oldid=831065" ಇಂದ ಪಡೆಯಲ್ಪಟ್ಟಿದೆ