ವಿಷಯಕ್ಕೆ ಹೋಗು

ಗಂಡಭೇರುಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗಂಡಬೇರುಂಡ ಇಂದ ಪುನರ್ನಿರ್ದೇಶಿತ)
ಕರ್ನಾಟಕ ಸರ್ಕಾರದ ಅಧಿಕೃತ ರಾಜ್ಯ ಲಾಂಛನ

ಗಂಡಭೇರುಂಡ (IAST: Gaṇḍabheruṇḍa) ಹಿಂದೂ ಪುರಾಣಗಳಲ್ಲಿ ವಿಷ್ಣುವಿನ ಒಂದು ರೂಪ. ದಂತಕಥೆಯ ಪ್ರಕಾರ, ವಿಷ್ಣುವಿನ ಅವತಾರವಾದ ನರಸಿಂಹನು ಶಿವನ ರೂಪವಾದ ಶರಭನನ್ನು ನಿಗ್ರಹಿಸಲು ಎರಡು ತಲೆಯ ಹದ್ದಿನ ರೂಪವನ್ನು ಧರಿಸುತ್ತಾನೆ.[] ಗಂಡಭೇರುಂಡನನ್ನು ಅವನ ಪತ್ನಿ ನರಸಿಂಹಿಯೊಂದಿಗೆ ಪೂಜಿಸಲಾಗುತ್ತದೆ, ಲಕ್ಷ್ಮಿಯ ಉಗ್ರ ರೂಪ, ಸಿಂಹಮುಖಿ ಲಕ್ಷ್ಮಿ ಎಂದೂ ಪೂಜಿಸಲಾಗುತ್ತದೆ.

ಮೈಸೂರು ಒಡೆಯರ ರಾಜ್ಯ ನಿರ್ಮಾಣದೊಂದಿಗೆ ಗಂಡಭೇರುಂಡ ಲಾಂಛನವು ಜೊತೆಯಾಗಿ ಬಂದು, ಇಂದಿನ ಕರ್ನಾಟಕ ಸರ್ಕಾರದ ಹಾಗೂ ಸಾರಿಗೆ ಸಂಸ್ಥೆಯ ಲಾಂಛನವಾಗಿ ಮನ್ನಣೆಗಳಿಸಿ, ಉಳಿದುಕೊಂಡು ಬಂದಿದೆ.

ಪ್ರಸ್ತಾವನೆ

[ಬದಲಾಯಿಸಿ]

ಈ ಪಕ್ಷಿಯ ಪರಿಕಲ್ಪನೆ ಆರ್ವಾಚಿನವಾದುದು. ಇದರ ಭೌಗೋಳಿಕ ವ್ಯಾಪ್ತಿ ಬಹು ವಿಶಾಲ. ಕ್ರಿ.ಪೂ.೧೦೦೦ವರ್ಷಗಳಿಗಿಂತಲೂ ಮುಂಚಿನ ಕೆಲವು ಹಿಟ್ನೆಟ್ ಕಲಾಕೇಂದ್ರಗಳಲ್ಲಿ ಗಂಡಭೇರುಂಡ ಪಕ್ಷಿಯ ಶಿಲೆ ಇದೆ.[] ಈಜಿಪ್ಟ್, ಅಸ್ಸೀರಿಯಾ ವೊದಲಾದ ದೇಶಗಳಲ್ಲಿ ಇದು ಫಲವಂತಿಕೆಯ ಆರಾಧನೆಗೆ(ಫರ್ಟಿಲಿಟಿ ಕಲ್ಟ್) ಸಂಬಂಧ ಪಟ್ಟ ಚಿಹ್ನೆಯಾಗಿತ್ತು ಎಂದು ಊಹಿಸಲಾಗಿದೆ. ಸಿಥಿಯನ್ನರಿಂದ ಇದು ರಷ್ಯಾ, ಜರ್ಮನಿ ಮೊದಲಾದ ದೇಶಗಳಿಗೆ ಹರಡಿತೆಂದು ಹೇಳಲಾಗಿದೆ. ತಕ್ಷಶಿಲೆಯಲ್ಲಿ ದೊರಕಿರುವ ಕ್ರಿಸ್ತಶಕಾರಂಭದ ಒಂದು ಶಿಲ್ಪ ಅತ್ಯಂತ ಪ್ರಾಚೀನವಾದುದೆಂದು ನಂಬಲಾಗಿದೆ. ಇದು ನಿಜವಾದ ಪಕ್ಷಿಯೋ, ಕಾಲ್ಪನಿಕ ಪಕ್ಷಿಯೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಜಿಜ್ಞಾಸೆ ಇದೆ.

ಗಂಡಭೇರುಂಡ ಪಕ್ಷಿಯ ಇತಿವೃತ್ತ

[ಬದಲಾಯಿಸಿ]

ಗಂಡಭೇರುಂಡ ಪಕ್ಷಿ ಭೌತಿಕವಾಗಿ ಅದನ್ನು ಅವಲೋಕಿಸಿದರೆ ಸಯಾಮಿ ಪಕ್ಷಿಯಂತೆ ಗೋಚರಿಸಿ ವಿಶೇಷವೆನಿಸುತ್ತದೆ. ಪಕ್ಷಿಯು ಎರಡು ತಲೆ, ಚೂಪಾದ ಕೊಕ್ಕು, ಎರಡು ತಲೆಯು ಎರಡು ದಿಕ್ಕಿಗೆ ಪರಸ್ಪರ ವಿರುದ್ದವಾಗಿ ನಿಂತಿದ್ದು ಒಂದೇ ಶರೀರವನ್ನು ಹೊಂದಿದೆ. ಶಿವವೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿರುವ ಗಂಡಭೇರುಂಡ ಪಕ್ಷಿಯ ಪ್ರತಿಮೆ[] ಕರ್ನಾಟಕದ ಗಂಡಭೇರುಂಡ ಶಿಲ್ಪಗಳಲ್ಲಿ ಅತ್ಯಂತ ಪ್ರಾಚೀನವಾದುದು. ಎತ್ತರವಾದ ಸ್ತಂಭದ ಮೇಲೆ ನಿಂತಿರುವ ಈ ಶಿಲ್ಪದ ಶರೀರ ಮಾನವಾಕಾರವನ್ನು ಹೊಂದಿದ್ದು, ಕಂಠದ ಮೇಲೆ ಮಾತ್ರ ಗಿಡುಗ ಪಕ್ಷಿಯ ರೀತಿಯ ಎರಡು ತಲೆಗಳಿವೆ. ಈ ಪಕ್ಷಿ ರಾಕ್ಷಸರನ್ನು ನುಂಗುತ್ತಿರುವಂತೆ ಚಿತ್ರಿತವಾಗಿದೆ. ಈ ಸ್ತಂಭದ ಅಡಿಯಲ್ಲಿರುವ ಶಾಸನದಲ್ಲಿ ಇದನ್ನು 'ಭೇರುಂಡೇಶ್ವರ' ಹೆಸರಿಸಿದೆ. ಇದನ್ನು ಕಲ್ಯಾಣ ಚಾಳುಕ್ಯರ ಮಹಾಮಂಡಲೇಶ್ವರನಾಗಿದ್ದ ಚಾವುಂಡರಾಯರಸ ಶಕ ೯೬೯ರಲ್ಲಿ ಇದನ್ನು ಸ್ಥಾಪಿಸಿದನೆಂದು ಅದೇ ಶಾಸನ ತಿಳಿಸುತ್ತದೆ.

ಛಾವಣಿಯ ಪ್ರತಿಮೆಯಾಗಿ ಗಂಡಭೇರುಂಡ, ರಾಮೇಶ್ವರ ದೇವಸ್ಥಾನ, ಕೆಳದಿ
ಛಾವಣಿಯ ಪ್ರತಿಮೆಯಾಗಿ ಗಂಡಭೇರುಂಡ, ರಾಮೇಶ್ವರ ದೇವಸ್ಥಾನ, ಕೆಳದಿ
ಅಲಂಕಾರಿಕ ಛಾವಣಿ ಚಿತ್ರದಲ್ಲಿ ಗಂಡಭೇರುಂಡ, ಬೃಹದೀಶ್ವರ ದೇವಾಲಯ, ತಂಜಾವೂರು
ಅಲಂಕಾರಿಕ ವರ್ಣಚಿತ್ರದಲ್ಲಿ ಗಂಡಭೇರುಂಡ, ಬೃಹದೀಶ್ವರ ದೇವಾಲಯ, ತಂಜಾವೂರು

ಪುರಾಣ ಹಿನ್ನೆಲೆ

[ಬದಲಾಯಿಸಿ]

ಋಗ್ವೇದದಲ್ಲಿ ಬರುವ ಎರಡು ಹಕ್ಕಿಗಳು, ವಿಷ್ಣುವಿನ ವಾಹನವಾದ ಗರುಡ ಇವುಗಳಿಂದ ಗಂಡಭೇರುಂಡ ಪಕ್ಷಿ ವಿಕಾಸಗೊಂಡಿರಬಹುದೆಂದು ಊಹಿಸಲಾಗಿದೆ. ಅಲ್ಲದೆ ವಿಷ್ಣು ನರಸಿಂಹಾವತಾರವನ್ನೆತ್ತಿ ಹಿರಣ್ಯಕಶಪುವನ್ನು ಸಂಹಾರ ಮಾಡಿದ ಮೇಲೂ ಅವನ ಕೋಪ ತಣ್ಣಗಾಗಲಿಲ್ಲವಂತೆ. ಅವನಿಂದ ಇಡೀ ವಿಶ್ವವೇ ನಾಶವಾದಿತೆಂದು ಅಂಜಿ ದೇವತೆಗಳು ಶಿವನನ್ನು ಪ್ರಾರ್ಥಿಸಿದಾಗ ಶಿವ ಶರಭಾವತಾರ ಎತ್ತಿ ನರಸಿಂಹನನ್ನು ಎದುರಿಸಿದ. ಆಗ ವಿಷ್ಣು ಶರಭನನ್ನು ಅಡಗಿಸಲು ಗಂಡಭೇರುಂಡ ಪಕ್ಷಿಯಾದನು ಎಂಬ ಕಥೆ ಕೆಲವು ಜನಮಾನಸದಲ್ಲಿದೆ. ಇದು ಶರಭಕ್ಕಿಂತ ಹೆಚ್ಚು ಶಕ್ತಿಯುತವಾದ ಪಕ್ಷಿ ಮತ್ತು ಶರಭವೇ ಇದಕ್ಕೆ ಆಹಾರವೆಂದೂ ಹೇಳಲಾಗುತ್ತದೆ. ಕೆಲವೊಮ್ಮೆ, ಋಗ್ವೇದದಲ್ಲಿ ಬರುವ ಚಿನ್ನದ ರೆಕ್ಕೆಯ ಪಕ್ಷಿ (ಸುಪರ್ಣ) ಎಂದೂ ಹೇಳಲಾಗುತ್ತದೆ. ಆದರೆ ಇವೆಲ್ಲ ಕಾಲ್ಪನಿಕ ಮತ್ತು ಜನಪ್ರಚಲಿತ ಕಥೆಗಳು.

ಇತಿಹಾಸದಲ್ಲಿ ಗಂಡಭೇರುಂಡ ಪಕ್ಷಿ

[ಬದಲಾಯಿಸಿ]

ಕರ್ನಾಟಕದಲ್ಲಿ ಗಂಡಭೇರುಂಡವನ್ನು ಅಧಿಕೃತವಾಗಿ ಪ್ರಾರಂಭ ಮಾಡಿದ್ದು ರಾಷ್ಟ್ರಕೂಟರ ಕಾಲದಲ್ಲಿ ಮಾನ್ಯಖೇಟ ಇವರ ರಾಜ್ಯಧಾನಿಯಾಗಿತ್ತು.ಇವರ ಆಡಳಿತದ ವಿಭಾಗವಾದ ತರ್ದವಾಡಿ ನಾಡಿನ ವಿಜಯಪುರದಲ್ಲಿ ೮ನೇ ಶತಮಾನದ ಸುಮಾರಿಗೆ ಲಾಂಛನವಾಗಿ ಬಳಸಲಾಗಿದೆ.ಇಲ್ಲಿ ಗಂಡಭೇರುಂಡದ ಬಗ್ಗೆ ಮೊದಲ ಉಪಲಬ್ದ ಉಬ್ಬು ಶಿಲ್ಪವಿದೆ. ನಂತರ ದೇವಗಿರಿ ಯಾದವರು ೧೨ -೧೩ನೇ ಶತಮಾನದಲ್ಲಿ ಕೋಟೆ ಮತ್ತು ಕಟ್ಟಡಗಳಲ್ಲಿ ಕೂಡಾ ಬಳಸಿದ್ದಾರೆ. ಎಂದು ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಇತಿಹಾಸಕಾರ ಲಾಯಪ್ಪ ಇಂಗಳೆ ಅದರ ಪ್ರಾಚೀನತೆ ಬಗ್ಗೆ ಧೃಢೀಕರಿಸಿದ್ದಾರೆ.ನಂತರ ೧೩ನೇ ಶತಮಾನದ ಉತ್ತರಾರ್ಧದಲ್ಲಿ. ಹೊಯ್ಸಳ ಅರಸ ೩ನೇ ನರಸಿಂಹ(೧೨೫೩-೧೨೯೩), ಮತ್ತು ೩ನೇ ಬಲ್ಲಾಳ(೧೨೯೩-೧೩೪೨) ಇವರ ಕಾಲದಲ್ಲಿ ಕೆಲವು ಶಿಲಾಶಾಸನಗಳ ಮೇಲೆ ಗಂಡಭೇರುಂಡ ಚಿತ್ರವಿದೆ. ವಿಜಯನಗರದ ಸಾಮ್ರಾಟನಾಗಿದ್ದ ಅಚ್ಯುತರಾಯ (೧೫೩೦-೧೫೪೨)ನ ಚಿನ್ನ ಮತ್ತು ತಾಮ್ರದ ನಾಣ್ಯಗಳ ಮೇಲೆ ಗಂಡಭೇರುಂಡದ ಮುದ್ರೆಯಿದೆ. ಇದರಲ್ಲಿ ಸೊಂಡಿಲು ಬಾಲವನ್ನೆತ್ತಿಕೊಂಡಿರುವ ಭಯಗ್ರಸ್ತವಾದ ಆನೆಗಳನ್ನು ಆ ಪಕ್ಷಿ ತನ್ನೆರಡು ಕಾಲುಗಳಲ್ಲಿ ಸಿಕ್ಕಿಸಿ ಕೊಂಡಿದೆ. ನಂತರ ಮಧುರೆಯ ನಾಯಕರು, ಕೆಳದಿಯ ಅರಸರು ಗಂಡಭೇರುಂಡವನ್ನು ಲಾಂಛನವಾಗಿ ಬಳಸಿದರು. ಮೈಸೂರು ಒಡೆಯರು[] ವಿಜಯನಗರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಾಗ ತಮ್ಮ ಧ್ವಜದ ಮೇಲೆ ಗಂಡಭೇರುಂಡವನ್ನು ಪ್ರತಿಷ್ಠಾಪಿಸಿಕೊಂಡರು. ಅಂದಿನಿಂದ ಇಂದಿನವರೆವಿಗೂ ಇದು ಮೈಸೂರು ಒಡೆಯರ ಲಾಂಛನವಾಗಿ ಉಳಿದು ಬೆಳೆದು ಬಂದಿದೆ.[]

ಪರಿಸಮಾಪ್ತಿ

[ಬದಲಾಯಿಸಿ]

ಹೊಯ್ಸಳರ ಕಾಲದ 'ನಾಶದ ಸರಪಣಿ'ಯ ಶಿಲ್ಪದಲ್ಲಿ ಗಂಡಭೇರುಂಡಕ್ಕೆ ಉಚ್ಚ ಸ್ಥಾನವನ್ನು ನೀಡಲಾಗಿದೆ. ಚೆನ್ನಕೇಶವ ದೇವಾಲಯ, ಬೇಲೂರು ಮತ್ತು ಕೋರಮಂಗಲದ ಬೂಜೇಶ್ವರ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಗಂಡಭೇರುಂಡ ಚಿತ್ರ ಪ್ರಾಚೀನ ಕಾಲದಿಂದಲೂ ಪ್ರಭುತ್ವದ ಲಾಂಛನವಾಗಿ ಕರ್ನಾಟಕದ ಹಲವು ರಾಜವಂಶಗಳಲ್ಲಿ ಪ್ರಚಲಿತವಾಗಿತ್ತು. ಗಂಡಭೇರುಂಡ ಶಕ್ತಿಯ ಪರಾಕಾಷ್ಠೆಯ ಚಿಹ್ನೆ. ಬಹುಶ: ಆ ಕಾರಣಕ್ಕಾಗಿಯೋ ಏನೋ ರಾಜರು ಗಂಡಭೇರುಂಡವನ್ನು ರಾಜ ಚಿಹ್ನೆಯಾಗಿ ಬಳಸಿಕೊಂಡಿರಬಹುದು. ಮೈಸೂರು ರಾಜ್ಯ ನಿರ್ಮಾಣದೊಂದಿಗೆ ಈ ಲಾಂಛನವು ಉಳಿದು ಬಂದು ಇಂದಿನ ಕರ್ನಾಟಕ ಸರ್ಕಾರದ ಲಾಂಛನವಾಗಿ ಮನ್ನಣೆ ಗಳಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Narayan, Aiyangar. Essays on Indo - Aryan Mythology - Vol. 1 (in ಇಂಗ್ಲಿಷ್). Asian Educational Services. p. 252. ISBN 978-81-206-0140-6.
  2. ಮೈಸೂರು ವಿಶ್ವವಿದ್ಯಾಲಯ : ಕನ್ನಡ ವಿಷಯ ವಿಶ್ವಕೋಶ – ಸಂಪುಟ ೧.
  3. ಬಳ್ಳಿಗಾವಿಯ ಒಂದು ವಿಶೇಷ ಗಂಡುಭೇರುಂಡದ ಶಿಲಾಮೂರ್ತಿ: Dunkin Jalki (2010-11-03), Gandaberunda, retrieved 2025-11-22
  4. "ಮೈಸೂರಿನ ಇತಿಹಾಸ". Archived from the original on 2016-03-06. Retrieved 2025-11-22.
  5. "ಇದು…ಕರ್ನಾಟಕದ ಹೆಮ್ಮೆಯ ಲಾಂಛನ ಗಂಡಭೇರುಂಡದ ರೋಚಕ ಇತಿಹಾಸ! | Udayavani - Latest Kannada News, Udayavani Newspaper". Udayavani. 9 October 2022. Retrieved 21 November 2025.