ವಿಷಯಕ್ಕೆ ಹೋಗು

ಖಂಡೇರಾವ್ (ಐತಿಹಾಸಿಕ ವ್ಯಕ್ತಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಂಡೇರಾವ್ ಮೈಸೂರು ಸಂಸ್ಥಾನದ ಆಡಳಿತ ಸೂತ್ರ ಹೈದರನ ವಶವಾಗುವುದನ್ನು ತಪ್ಪಿಸಿ ಅದನ್ನು ರಾಜಮನೆತನದಲ್ಲಿ ಉಳಿಸಲು ಶ್ರಮಿಸಿ ಈ ಯತ್ನದಲ್ಲೇ ಪ್ರಾಣಾರ್ಪಣೆ ಮಾಡಿದ ಒಬ್ಬ ರಾಜಭಕ್ತ.

ಖಂಡೇರಾವ್ ಪರಾಕ್ರಮಿಯಾದ ಯೋಧನಾಗಿದ್ದ. ಅವನಿಗೆ ರಾಜಮನೆತನದಲ್ಲಿ ವಿಶೇಷವಾದ ಮಮತೆ, ಭಕ್ತಿ ಇದ್ದುವು. ಅವನು ಬುದ್ಧಿವಂತನಾಗಿದ್ದರೂ ತಂತ್ರದಲ್ಲಿ ಹೈದರನಿಗೆ ಸಾಟಿಯಾಗಿರಲಿಲ್ಲ. ರಾಜಮನೆತನವನ್ನು ಆಪತ್ತಿನಿಂದ ಪಾರುಮಾಡಲು ನಿಷ್ಠೆಯಿಂದ ಶ್ರಮಿಸಿ ಆ ಧ್ಯೇಯ ಸಾಧನೆಗಾಗಿಯೆ ಅವನು ಪ್ರಾಣಾರ್ಪಣೆ ಮಾಡಿದ.

ರಾಜಕೀಯ ಹಿನ್ನೆಲೆ

[ಬದಲಾಯಿಸಿ]

18ನೆಯ ಶತಮಾನದ ಮಧ್ಯಭಾಗದಲ್ಲಿ ಮೈಸೂರು ರಾಜ್ಯದಲ್ಲಿ 7ನೆಯ ಚಾಮರಾಜ ಒಡೆಯನ ಮರಣಾಂತರ ದಳವಾಯಿಗಳು ಪ್ರಾಬಲ್ಯಕ್ಕೆ ಬಂದರು. ಕೇವಲ 5 ವರ್ಷಗಳ ವಯಸ್ಸಿನ ಚಿಕ್ಕ ಕೃಷ್ಣರಾಜನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ದಳವಾಯಿ ನಂಜರಾಜಯ್ಯ ಆಡಳಿತ ಸೂತ್ರವನ್ನು ತಾನೇ ವಹಿಸಿದ್ದ. ನಂಜರಾಜಯ್ಯ ಪದಚ್ಯುತನಾಗುವುದಕ್ಕೆ ಕೆಲವು ವರ್ಷಗಳ ಹಿಂದೆ ಖಂಡೇರಾವ್ ಮತ್ತು ಹೈದರ್ ಪ್ರಸಿದ್ಧಿಗೆ ಬಂದರು. ಅವರಿಬ್ಬರೂ ಪ್ರಾರಂಭದಲ್ಲಿ ಪರಸ್ಪರ ಮೈತ್ರಿಯಿಂದಿದ್ದರು. 1756ರಲ್ಲಿ ಹೈದರ್ ದಳವಾಯಿಗಳ ನೇರ ಆಡಳಿತಕ್ಕೊಳಪಡದ ಕೆಲವು ಪ್ರದೇಶಗಳ ಆಡಳಿತವನ್ನು ಖಂಡೇರಾಯನಿಗೆ ದೊರಕಿಸಿಕೊಟ್ಟಿದ್ದ. ನಂಜರಾಜಯ್ಯ ಅಧಿಕಾರ ತ್ಯಜಿಸಿದ ಮೇಲೆ ಖಂಡೇರಾವ್ ಪ್ರಧಾನಿಯಾಗಿ ನೇಮಕಗೊಂಡಿದ್ದ. ಹೈದರ್ ಶೀಘ್ರವಾಗಿ ಆಡಳಿತದಲ್ಲಿ ತನ್ನ ಪ್ರಭಾವವನ್ನು ಸ್ಥಾಪಿಸಿದ.

ಹೈದರ್‌ನ ಮೇಲೆ ಮೊದಲ ಗೆಲುವು

[ಬದಲಾಯಿಸಿ]

ಹೈದರ್ ಪ್ರಾಬಲ್ಯಕ್ಕೆ ಬರುತ್ತಿದ್ದುದನ್ನು ಗಮನಿಸಿದ ಖಂಡೇರಾವ್ ಅರಮನೆಯ ಪಕ್ಷಕ್ಕೆ ಮರಾಠರ ನೆರವು ದೊರಕುವಂತೆ ಏರ್ಪಡಿಸಿ ಹೈದರನನ್ನು ಎದುರಿಸಲು ಸಿದ್ಧತೆ ಮಾಡಿಕೊಂಡ. 1759ರ ಆಗಸ್ಟಿನಲ್ಲಿ ಹೈದರ್ ಆರ್ಕಾಟಿನಿಂದ ಮಿತಸೈನ್ಯದೊಡನೆ ಶ್ರೀರಂಗಪಟ್ಟಣಕ್ಕೆ ಬಂದಾಗ ಖಂಡೇರಾವ್ ಧೈರ್ಯದಿಂದ ತನ್ನ ಸೈನ್ಯದ ಮುಖಂಡತ್ವ ವಹಿಸಿ ಹೈದರನ ಸೈನ್ಯವನ್ನು ಬಗ್ಗುಬಡಿದ. ಹೈದರ್ ಶ್ರೀರಂಗಪಟ್ಟಣದಿಂದ ತಲೆತಪ್ಪಿಸಿಕೊಂಡು ಓಡಿಹೋದ. ಅವನ ಹೆಂಡತಿ ಮಕ್ಕಳನ್ನು ಖಂಡೇರಾವ್ ಅತ್ಯಂತ ಗೌರವದಿಂದ ನಡೆಸಿಕೊಂಡು ಅವರ ರಕ್ಷಣೆಗೆ ಸೂಕ್ತ ಏರ್ಪಾಟು ಮಾಡಿದ.

ಹೈದರ್‌ನ ಮೇಲೆ ಎರಡನೆಯ ಬಾರಿ ಗೆಲುವು

[ಬದಲಾಯಿಸಿ]

1760ರಲ್ಲಿ ಫ್ರೆಂಚ್ ದಳವೊಂದರ ಸಹಾಯದಿಂದ ಖಂಡೇರಾಯನನ್ನು ಸೋಲಿಸಿ ತನ್ನ ಅಧಿಕಾರವನ್ನು ಸ್ಥಾಪಿಸಲು ಹೈದರ್ ಶ್ರೀರಂಗಪಟ್ಟಣದತ್ತ ಮುಂದುವರಿದ. ಆದರೆ ಖಂಡೇರಾವ್ ಸೈನ್ಯಸಮೇತನಾಗಿ ಹೊರಟು ನಂಜನಗೂಡಿನ ಸಮೀಪದಲ್ಲಿ ಹೈದರನ ಸೈನ್ಯವನ್ನು ಎದುರಿಸಿ ಹೋರಾಡಿ ಅವನನ್ನು ಸಂಪೂರ್ಣವಾಗಿ ಸೋಲಿಸಿದ. ಹೈದರ್ ಹರದನಹಳ್ಳಿಯ ಕಡೆಗೆ ಓಡಿಹೋದ.

ಹೈದರ್‌ನ ಮೇಲೆ ಮೂರನೆಯ ಬಾರಿ ಗೆಲುವು

[ಬದಲಾಯಿಸಿ]

ಖಂಡೇರಾಯನನ್ನು ಸೋಲಿಸುವುದು ಅಸಾಧ್ಯವೆಂದು ತಿಳಿದ ಹೈದರ್ ಮತ್ತೊಂದು ತಂತ್ರ ಹೂಡಿದ. ಗೌರವನಿಮಿತ್ತವಾಗಿ ಸರ್ವಾಧಿಕಾರಿ ಎಂಬ ಬಿರುದನ್ನೂ, ಚಿಕ್ಕ ಯೋಧಪಡೆಯೊಂದನ್ನೂ ಹೊಂದಿ ಕೊಣನೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ನಂಜರಾಜಯ್ಯನ ಬಳಿಗೆ ಹೈದರ್ ಗೋಪ್ಯವಾಗಿ ಹೋಗಿ ಅವನ ಪಾದಕ್ಕೆ ನಮಸ್ಕರಿಸಿ, ಕ್ಷಮಾಯಾಚನೆ ಬೇಡಿ ತನ್ನ ಹಿಂದಿನ ಸೇವಕನನ್ನು ಕಾಪಾಡಬೇಕೆಂದು ದೈನ್ಯದಿಂದ ಬೇಡಿದ. ನಂಜರಾಜಯ್ಯ ಅವನಲ್ಲಿ ಕನಿಕರ ತಳೆದು ತನ್ನ ಬಲವನ್ನೆಲ್ಲ ಕೂಡಿಸಿ ಹೈದರನಿಗೆ ಕೊಟ್ಟು ತನ್ನ ಹೆಸರನ್ನು ಉಪಯೋಗಿಸಿಕೊಳ್ಳುವಂತೆ ಅನುಮತಿ ನೀಡಿದ.[][] ತನ್ನ ಬಲವನ್ನು ವೃದ್ಧಿಪಡಿಸಿಕೊಂಡು ಶ್ರೀರಂಗಪಟ್ಟಣವನ್ನು ಮುತ್ತಬೇಕೆಂಬ ಹೈದರನ ಹವಣಿಕೆಯನ್ನು ತಿಳಿದು ಖಂಡೇರಾವ್ ಹೈದರನನ್ನು ಕಟ್ಟೆಮಳವಾಡಿಯ ಬಳಿ ಪುನಃ ಸೋಲಿಸಿದ.

ಮೋಸದಿಂದ ಹೈದರನ ಗೆಲುವು, ಖಂಡೇರಾವ್ ಬಂಧನ, ಸಾವು

[ಬದಲಾಯಿಸಿ]

ತೀಕ್ಷ್ಣಮತಿಯಾದ ಹೈದರ್ ಖಂಡೇರಾಯನನ್ನು ಸೋಲಿಸಲು ಮತ್ತೊಂದು ತಂತ್ರ ಹೂಡಿದ. ಖಂಡೇರಾಯನ ದಳಪತಿಗಳು ಅವನನ್ನು ಹೈದರನಿಗೆ ಒಪ್ಪಿಸುವಂತೆ ನಂಜರಾಜಯ್ಯನ ಸಹಿಯಿದ್ದ ಕರಪತ್ರಗಳನ್ನು ಸೃಷ್ಟಿ ಮಾಡಿ ಅವು ಖಂಡೇರಾಯನ ಕೈಗೆ ಸಿಗುವಂತೆ ಮಾಡಿದ. ಹೈದರನ ಕುತಂತ್ರವನ್ನರಿಯದ ಖಂಡೇರಾವ್ ಅವನ್ನು ನಿಜವೆಂದೇ ನಂಬಿ ಎದೆಗುಂದಿ ಶ್ರೀರಂಗಪಟ್ಟಣಕ್ಕೆ ಧಾವಿಸಿದ. ಅವನ ಸೈನಿಕರು ಹತಾಶರಾದರು. ತನ್ನ ಸಂಚು ಫಲಿಸಿದ್ದನ್ನರಿತ ಹೈದರ್ 1761ರ ಮೇ ತಿಂಗಳಲ್ಲಿ ಶ್ರೀರಂಗಪಟ್ಟಣದ ಬಳಿ ಬೀಡು ಬಿಟ್ಟು ಒಂದು ವಾರ ಕಾಲ ಸಂಧಾನ ನಡೆಸುವವನಂತೆ ನಟಿಸಿ ಕೊನೆಗೆ ಹಠಾತ್ತನೆ ನದಿಯನ್ನು ದಾಟಿ ಪಟ್ಟಣವನ್ನು ಪ್ರವೇಶಿಸಿ ವಿಜಯ ಘೋಷಿಸಿದ. ಈ ಘಟನೆಯಿಂದ ರಾಜ ತತ್ತರಿಸಿಹೋದ. ಖಂಡೇರಾಯನನ್ನು ತನಗೆ ಒಪ್ಪಿಸುವಂತೆಯೂ ತಾನು ಅವನನ್ನು ಗಿಳಿಯಂತೆ ಸಾಕುವುದಾಗಿಯೂ ಹೈದರ್ ದೊರೆಗೆ ನಿರೂಪ ಕಳಿಸಿದ. ಸೆರೆ ಸಿಕ್ಕಿದ ಖಂಡೇರಾಯನನ್ನು ಹೈದರ್ ಕಬ್ಬಿಣದ ಪಂಜರದಲ್ಲಿಟ್ಟು,[] ಆಹಾರವಾಗಿ ಹಾಲು ಅನ್ನ ನೀಡುವಂತೆ ಏರ್ಪಾಟು ಮಾಡಿದ. ಖಂಡೇರಾವ್ ಈ ಸ್ಥಿತಿಯಲ್ಲಿ ಹಲವು ದಿವಸಗಳ ಕಾಲ ಬದುಕಿದ್ದು ಕೊನೆಯುಸಿರೆಳೆದ.

ಉಲ್ಲೇಖಗಳು

[ಬದಲಾಯಿಸಿ]
  1. Bowring, p. 32
  2. Rao Punganuri, p. 9
  3. Rao Punganuri, p. 10


ಗ್ರಂಥಸೂಚಿ

[ಬದಲಾಯಿಸಿ]
  • Bowring, Lewin (1899). Haidar Alí and Tipú Sultán, and the Struggle with the Musalmán Powers of the South. Oxford: Clarendon Press. OCLC 11827326.
  • Rao Punganuri, Ram Chandra (1849). Brown, Charles Philip (ed.). Memoirs of Hyder and Tippoo: Rulers of Seringapatam, Written in the Mahratta Language. Madras: Simkins. OCLC 123942796. Rao Punganuri was, according to Brown, in the employ of both Hyder and Tipu.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: