ಇಮ್ಮಡಿ ಕೃಷ್ಣರಾಜ ಒಡೆಯರ್
| ಇಮ್ಮಡಿ ಕೃಷ್ಣರಾಜ ಒಡೆಯರ್ | |
|---|---|
| ಮೈಸೂರಿನ ಮಹಾರಾಜ | |
| ಆಳ್ವಿಕೆ | ೧೭೩೫ ರಿಂದ ೧೭೬೬ |
| ಪಟ್ಟಾಭಿಷೇಕ | ೧೫ ಜೂನ್ ೧೭೩೫ |
| ಪೂರ್ವಾಧಿಕಾರಿ | ೭ನೇ ಚಾಮರಾಜ ಒಡೆಯರ್ (ಸಹೋದರ) |
| ಉತ್ತರಾಧಿಕಾರಿ | ನಂಜರಾಜ ಒಡೆಯರ್ (ಹಿರಿಯ ಮಗ) |
| ಗಂಡ/ಹೆಂಡತಿ | ದೇವಜ ಅಮ್ಮಣ್ಣಿಯವರು, ಪುತಜ ಅಮ್ಮಣ್ಣಿಯವರು, ಲಕ್ಷ್ಮಿ ಅಮ್ಮಣ್ಣಿ ದೇವಿಯವರು |
| ಸಂತಾನ | |
| ನಂಜರಾಜ ಒಡೆಯರ್, ೮ ನೇ ಚಾಮರಾಜ ಒಡೆಯರ್, ೯ ನೇ ಚಾಮರಾಜ ಒಡೆಯರ್ | |
| ತಂದೆ | ಚಾಮೇ ಅರಸು;
ಒಂದನೇ ದೊಡ್ಡ ಕೃಷ್ಣರಾಜ ಒಡೆಯರ್ (ಸಾಕು ತಂದೆ) |
| ತಾಯಿ | ದೇವಜಮ್ಮಣ್ಣಿ (ಸಾಕು ತಾಯಿ) |
| ಜನನ | ೧೭೨೮ |
| ಮರಣ | ೨೫ ಏಪ್ರಿಲ್ ೧೭೬೬ ಶ್ರೀರಂಗ ಪಟ್ಟಣ |
| ಧರ್ಮ | ಹಿಂದೂ ಧರ್ಮ |
ಕೃಷ್ಣರಾಜ ಒಡೆಯರ್ II (ಇಮ್ಮಡಿ ಕೃಷ್ಣರಾಜ ಒಡೆಯರ್; ೧೭೨೮ – ೨೫ ಏಪ್ರಿಲ್ ೧೭೬೬), ಇವರು ೧೭೩೪ ರಿಂದ ೧೭೬೬ ರವರೆಗೆ ಮೈಸೂರು ಸಾಮ್ರಾಜ್ಯದ ಹದಿನೆಂಟನೇ ಮಹಾರಾಜರಾಗಿದ್ದರು. ಅವರು ತನ್ನ ಸಂಪೂರ್ಣ ಆಳ್ವಿಕೆಯನ್ನು ಇನ್ನೊಬ್ಬರ ನಿಯಂತ್ರಣದಲ್ಲೇ ಮಾಡಬೇಕಾಯಿತು. ಮೊದಲು ದಳವಾಯಿ ದೇವರಾಜ ಅರಸು ಹಾಗೂ ಕೊನೆಯ ಐದು ವರ್ಷಗಳ ಕಾಲ, ಹೈದರ್ ಅಲಿಯ ನಿಯಂತ್ರಣ ಅವರ ಮೇಲಿತ್ತು.
೮ ಅಕ್ಟೋಬರ್ ೧೭೩೧ ರಂದು, ಮಹಾರಾಣಿ ದೇವಜಮ್ಮಣ್ಣಿ ಮತ್ತು ಮಹಾರಾಜ ಒಂದನೆಯ ಕೃಷ್ಣರಾಜ ಒಡೆಯರ್ ರವರು ಇಮ್ಮಡಿ ಕೃಷ್ಣರಾಜ ಒಡೆಯರ್ ರವರನ್ನು, ಚಿಕ್ಕ ಕೃಷ್ಣರಾಜ ಒಡೆಯರ್ ಎಂಬ ಶೀರ್ಷಿಕೆಯಡಿಯಲ್ಲಿ ದತ್ತು ಪಡೆದರು.
ಅವರ ಪಟ್ಟಾಭಿಷೇಕ ೧೭೩೫ ರ ಜೂನ್ ೧೫ ರಂದು ಮೈಸೂರಿನಲ್ಲಿ ನೆರವೇರಿತು. ಆಗ ಮೈಸೂರು ಆಡಳಿತದ ಉಸ್ತುವಾರಿಯನ್ನು ೧೭೨೪ ರಿಂದ ೧೭೪೬ ರವರೆಗೆ ವಹಿಸಿಕೊಂಡಿದ್ದ ದಳವಾಯಿ ದೇವರಾಜ ಅರಸುರವರ ನಿಯಂತ್ರಣದಲ್ಲಿ ಇಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ನಡೆಸಿದರು. ದಳವಾಯಿ ದೇವರಾಜ ಅರಸುರವರ ಪತನ ಮತ್ತು ಮರಣದ ನಂತರ, ಇನ್ನೊಬ್ಬ ದಳವಾಯಿ ಹೈದರ್ ಅಲಿ, ೧೭೬೧ ರಿಂದ ೧೭೮೨ ರವರೆಗೂ ಮೈಸೂರಿನ ವಾಸ್ತವಿಕ ಸರ್ವೋಚ್ಚ ಆಡಳಿತಗಾರ ಎಂದು ಪರಿಗಣಿಸಲ್ಪಟ್ಟನು.
ಇಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟದ ಅರಸರಾಗಿದ್ದರೂ, ದಳವಾಯಿ ಹಾಗೂ ನಂಜರಾಜರ ನಡುವಿನ ತ್ರಿಪಕ್ಷೀಯ ಹೋರಾಟದ ಕಾರಣ ಅವರು ಅಧಿಕಾರವನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಈ ಅಧಿಕಾರ ಸಂಘರ್ಷದಿಂದ ರಾಜ್ಯವು ದುರ್ಬಲವಾಯಿತು. ಕ್ರಮೇಣ ನಂಜರಾಜನ ಸ್ಥಾನವನ್ನು ಹೈದರ್ ಅಲಿ ತುಂಬಿದ. ಇಮ್ಮಡಿ ಕೃಷ್ಣರಾಜ ಒಡೆಯರ್ ತನ್ನ ಅಧಿಕಾರವನ್ನು ಮರಳಿ ಪಡೆಯಲು ಅನೇಕ ಉಪಾಯಗಳನ್ನು ರೂಪಿಸಿದರೂ ವಿರೋಧಿಗಳ ಸಂಪನ್ಮೂಲ ಹಾಗೂ ಒಗ್ಗಟಿನ ಕಾರಣಗಳಿಂದ ಅವರು ಯಶಸ್ವಿಯಾಗಲಿಲ್ಲ. ಇಮ್ಮಡಿ ಕೃಷ್ಣರಾಜ ಒಡೆಯರ್ ೧೭೬೬ ರ ಏಪ್ರಿಲ್ ೨೫ರಂದು ಅವರ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ನಿಧನರಾದರು.
ಮೈಸೂರಿನಿಂದ ಸಿರಾದ ನವಾಬ ಪಡೆಯುತ್ತಿದ್ದ ಕಪ್ಪವನ್ನು ತಾನು ಕಬಳಿಸಬೇಕೆಂದು ಆರ್ಕಾಟಿನ ನವಾಬನಾದ ದೋಸ್ತ್ ಆಲಿಖಾನ್ ಶ್ರೀರಂಗಪಟ್ಟಣವನ್ನು ಮುತ್ತಿದಾಗ ಮುಪ್ಪಿನ ದಳಪತಿ ದೇವರಾಜಯ್ಯ ಅವನನ್ನು ಹೊಡೆದಟ್ಟಿದ. ಈ ವೇಳೆಗೆ ದಳವಾಯಿಯಾಗಿದ್ದ ಕರಾಚುರಿ ನಂಜರಾಜ ಧಾರಾಪುರದ ಪಾಳೆಯಗಾರರ ಮೇಲೆ ದಂಡೆತ್ತಿ ಹೋಗಿದ್ದಾಗ ದಖನಿನ ಸುಬೇದಾರ ನಿಜಾಂ-ಉಲ್-ಮುಲ್ಕನ ಮಗ ನಾಸಿರ್‍ಜಂಗ್ ಶ್ರೀರಂಗಪಟ್ಟಣವನ್ನು ಮುತ್ತಲು, ಆಡಳಿತಾಧಿಕಾರಿಯಾಗಿದ್ದ ದೇವರಾಜಯ್ಯನ ನೇತೃತ್ವದಲ್ಲಿ ಕೃಷ್ಣರಾಜ ಒಡೆಯರು ಕಳುಹಿಸಿದ ನಿಯೋಗ ಸಂಧಾವನ್ನಾರಂಭಿಸಿತು. ಧಾರಾಪುರದಿಂದ ಜಯಶೀಲನಾಗಿ ಹಿಂತಿರುಗಿದ ನಂಜರಾಜನ ಮಗಳನ್ನು ಒಡೆಯರು ವಿವಾಹವಾದುದರಿಂದ ನಂಜರಾಜನ ಸ್ಥಾನ ಭದ್ರವಾಯಿತು.
1749ರಲ್ಲಿ ನಡೆದ ದೇವನಹಳ್ಳಿಯ ಪಾಳೆಯಗಾರರ ಮೇಲಿನ ದಾಳಿಯಲ್ಲಿ ನಂಜರಾಜನಿಗೆ ಸಹಾಯಕನಾಗಿ ಸೈನ್ಯ ಸೇರಿದ ಹೈದರ್ ಆಲಿ ಅಮಿತಶೌರ್ಯ ಸಾಹಸಗಳನ್ನು ಮೆರೆದು ಹೆಸರು ಗಳಿಸಿದ. 50 ಅಶ್ವಗಳ ಮತ್ತು 200 ಪದಾತಿಗಳ ಪಡೆಯ ನಾಯಕನಾದ.
ಈ ಮಧ್ಯೆ ದಖನಿನ ಸುಬೇದಾರ ಪದವಿಗೆ ನಡೆದ ಹೋರಾಟದಲ್ಲಿ ನಾಸಿರ್‍ಜಂಗನ ಪರ [[ಮೈಸೂರು]] ಸೈನ್ಯ ಹೊರಡಲು ಹೈದರ್ ಅದರಲ್ಲಿ ಸೇರಿಸಿದ್ದ. ಹೋರಾಟದಲ್ಲಿ ನಾಸಿರ್‍ಜಂಗ್ ಸತ್ತ. ಹೈದರ್ ಅಮಿತ ಐಶ್ವರ್ಯವನ್ನು ವಶಪಡಿಸಿಕೊಂಡು ದೇವನಹಳ್ಳಿಯಲ್ಲಿ ಅದನ್ನು ಬಚ್ಚಿಟ್ಟ
ಕರ್ಣಾಟಕದ ನವಾಬ ಪದವಿಗೆ ನಡೆದ ಹೋರಾಟದಲ್ಲಿ [[ನಂಜರಾಜ]]ನ ಸೈನ್ಯ ಮಹಮ್ಮದಾಲಿಯ ನೆರವಿಗೆ ಹೋಯಿತು. ಗುಪ್ತ ಒಡಂಬಡಿಕೆಯ ಪ್ರಕಾರ ತಿರುಚಿರಾಪಳ್ಳಿ ಯಿಂದ [[ಕನ್ಯಾಕುಮಾರಿ]]ಯವರೆಗಿನ ಪ್ರಾಂತ್ಯಗಳನ್ನು ಮೈಸೂರಿಗೆ ನೀಡುವುದಾಗಿ ಮಹಮ್ಮದಾಲಿ ಆಶೆ ತೋರಿಸಿದ್ದ. ಜಯಶೀಲನಾದ ಮೇಲೆ ಅವನು [[ಶ್ರೀರಂಗಂ]] ಮತ್ತು ನೆರೆಹೊರೆಯ ಪ್ರದೇಶಗಳ ಆದಾಯವನ್ನು ಮಾತ್ರ ಕೊಡಲೊಪ್ಪಿದ. ಹೀಗೆ ನಂಜರಾಜನಿಗೆ ನಿರಾಶೆಯಾಯಿತು. ಇದರಿಂದ ಮತ್ತು ನಂಜರಾಜನ ಇತರ ಕಾರ್ಯಗಳಿಂದ ರಾಜ್ಯದ ಬೊಕ್ಕಸ ಬರಿದಾಗಿತ್ತು. ಈ ಸಂದರ್ಭದಲ್ಲಿ ದಖನಿನ ಸುಬೇದಾರ ಸಲಾಬತಜಂಗ್ ಫ್ರೆಂಚರ ಸಹಾಯದಿಂದ ಮೈಸೂರನ್ನು ಮುತ್ತಿ ಕಪ್ಪಕಾಣಿಕೆಗಳನ್ನು ಕೊಡುವಂತೆ ಬಲಾತ್ಕರಿಸಿದ. ದೇವರಾಜ ವಿಧಿಯಿಲ್ಲದೆ 56 ಲಕ್ಷ ರೂ. ಕೊಡಲೊಪ್ಪಿದರೂ ಅಷ್ಟು ಹಣವನ್ನು ಒಟ್ಟುಗೂಡಿಸಲು ಆಗಲಿಲ್ಲ. ದೇಶದಲ್ಲಿ ಅನಾಯಕ ಪರಿಸ್ಥಿತಿ ತಲೆದೋರಿತು. ಈವರೆಗೂ ಪ್ರೇಕ್ಷಕರಂತಿದ್ದ ಕೃಷ್ಣರಾಜರು ತಮ್ಮ ಅಧಿಕಾರವನ್ನು ಮರಳಿ ಪಡೆದು ರಾಜ್ಯದ ಪರಿಸ್ಥಿತಿಯನ್ನು ತಹಬಂದಿಗೆ ತರಲು ನಿರ್ಧರಿಸಿದರು. ದಳವಾಯಿಗಳನ್ನು ಮೂಲೆಗೊತ್ತರಿಸುವ ನಿರ್ಧಾರ ಮಾಡಿದ್ದುದನ್ನು ತಿಳಿದ ನಂಜರಾಜ ಅವರನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ಅವರ ಪಕ್ಷದವರ ಕಿವಿಮೂಗುಗಳನ್ನು ಅವರ ಸಮ್ಮುಖದಲ್ಲೇ ಕತ್ತರಿಸಿ ಹಾಕಿದ. ಅಸಹಾಯಕರಾದ ಅರಸರ ಅವಮಾನವನ್ನು ಸಹಿಸದ ದೇವರಾಜಯ್ಯ ತಮ್ಮನ ಮೇಲೆ ಮುನಿದುಕೊಂಡು ಸತ್ಯಮಂಗಲಕ್ಕೆ ಹೊರಟುಹೋದ. ಈ ಮಧ್ಯೆ ಜೊತೆಗೆ ಹಣದ ತೊಂದರೆ ಹೆಚ್ಚಾಯಿತು. ಅಲ್ಲದೆ 1757ರಲ್ಲಿ ಮರಾಠರು ಬ್ರಿಟಿಷರ ಸಹಾಯದಿಂದ ದಾಳಿ ನಡೆಸಿ 32 ಲಕ್ಷ ರೂ.ಗಳನ್ನು ಕಾಣಿಕೆಯಾಗಿ ಕೇಳಿದರು. ಈ ಹಣ ಕೊಡಲಾರದ ನಂಜರಾಜ ರಾಜ್ಯದ ಕೆಲವು ಭಾಗಗಳನ್ನು ಅವರಿಗೆ ವಹಿಸಿಕೊಟ್ಟ. ಸೈನ್ಯಕ್ಕೆ ಸಂಬಳ ಸಂದಾಯವಾಗಿರಲಿಲ್ಲವಾಗಿ ಅದು ದಂಗೆಯೆದ್ದಿತು. ನಂಜರಾಜ ಅರಸರಲ್ಲಿ ತನ್ನ ತಪ್ಪೊಪ್ಪಿಕೊಂಡ. ದೇವರಾಜ ಹಿಂದಿರುಗಿದ. ಆದರೆ ಆರು ದಿನಗಳಲ್ಲಿ ಮೃತನಾದ.
ಹೈದರಾಲಿಯ ಆಡಳಿತ
[ಬದಲಾಯಿಸಿ]ಹೈದರ್ ಆಲಿ ಪರಿಸ್ಥಿತಿಯನ್ನು ಸುಧಾರಿಸುವ ಹೊಣೆ ಹೊತ್ತು ಸೈನಿಕರಿಗೆ ತನ್ನ ಬೊಕ್ಕಸದಿಂದ ಹಣ ಕೊಟ್ಟು, ಅಧಿಕಾರವನ್ನು ತಾನೇ ವಹಿಸಿಕೊಂಡ. ಮರಾಠರಿಗೆ ವಹಿಸಿದ್ದ ಪ್ರದೇಶಗಳನ್ನು ಹೈದರ್ ಆಲಿ ಪುನ: ವಶಪಡಿಸಿಕೊಂಡದ್ದರಿಂದ ಅವರು ದಂಡೆತ್ತಿ ಬಂದರು (1759). ಹೈದರ್ ಆಲಿ ಅವರನ್ನು ಸೋಲಿಸಿ, ಸಂಧಿ ಮಾಡಿಕೊಂಡ. ಅದರ ಪ್ರಕಾರ 32 ಲಕ್ಷ ಹಣ ಕೊಡಬೇಕಾಯಿತು. 16 ಲಕ್ಷ ಹಣ ಕೊಟ್ಟು ಉಳಿದುದನ್ನು ಕೊಡುವ ಜವಾಬ್ದಾರಿಯನ್ನು ಹೈದರನೇ ವಹಿಸಿಕೊಂಡ. ಹೈದರನ ಈ ಸಾಹಸಗಳಿಂದ ಸುಪ್ರೀತರಾದ ಕೃಷ್ಣರಾಜರು ಶ್ರೀರಂಗಪಟ್ಟಣದ ಆಸ್ಥಾನದಲ್ಲಿ ವೈಭವಪೂರ್ಣ ದರ್ಬಾರಿನಲ್ಲಿ ಹೈದರನಿಗೆ ಗೌರವ ನೀಡಿ ಫತ್ತೆ ಹೈದರ್ ಬಹಾದ್ದೂರ್ ಎಂಬ ಬಿರುದು ನೀಡಿದರು (1759). ಕೃಷ್ಣರಾಜ ಒಡೆಯರು ಹೈದರನ ವಿಷಯದಲ್ಲಿ ಹೆಚ್ಚುಹೆಚ್ಚು ಆದರ ತೋರಿ ಕ್ರಮೇಣ ಆಸ್ಥಾನದಲ್ಲಿ, ಆಡಳಿತದಲ್ಲಿ ಅವನ ಪ್ರಾಬಲ್ಯ ಹೆಚ್ಚುವಂತೆ ಮಾಡಿ, ನಂಜರಾಜನ್ನು ಅಧಿಕಾರದಿಂದ ತೆಗೆದು ಹಾಕಿದರು. ಕೊಣನೂರಿನಲ್ಲಿ ನೆಲಸಿದ ನಂಜರಾಜನಿಗೆ ಒಂದು ಲಕ್ಷ ರೂ.ಗಳ ವರಮಾನದ ಜಹಗೀರಿಯನ್ನು ಕೊಡಲಾಯಿತು. ನಂಜರಾಜನ ಮಗಳಾದ ಮಹಾರಾಣಿ ಈ ಮಧ್ಯೆ ತೀರಿಕೊಂಡಳು. ಒಡೆಯರು ಮತ್ತೆ ಇಬ್ಬರನ್ನು ವಿವಾಹವಾದರು. ಈ ಇಬ್ಬರಲ್ಲಿ ಒಬ್ಬರು ಮೈಸೂರಿನ ಇತಿಹಾಸದಲ್ಲಿ ಪ್ರಸಿದ್ಧರಾದ ಲಕ್ಷಮ್ಮಣ್ಣಿ. ಕ್ರಮೇಣ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಹೈದರ್ ಆಲಿ ಫ್ರೆಂಚರ ಜೊತೆಗೂಡಿ ಬ್ರಿಟಿಷರ ವಿರುದ್ಧ ಯುದ್ಧಕ್ಕಿಳಿದ. ಈ ಮಧ್ಯೆ ಹೈದರನ ವಿರುದ್ಧ ರಾಜಧಾನಿಯಲ್ಲಿ ಪಿತೂರಿ ನಡೆಯಿತು. ಅವನು ಎಚ್ಚರಿಕೆ ವಹಿಸಿ ತಲೆತಪ್ಪಿಸಿಕೊಂಡು ಆನೆಕಲ್ಲಿನಲ್ಲಿದ್ದ ತನ್ನ ಭಾವಮೈದುನ ಇಸ್ಮಾಯಿಲ್ ಆಲಿಯ ಆಶ್ರಯದಲ್ಲಿ ನಿಂತ. ಮೊದಲು ಹೈದರ್ ಆಲಿಯ ನಂಬಿಕೆಯ ಸಹಚರನಾಗಿದ್ದು ಆಮೇಲೆ ಒಡೆಯರ ಪರವಾಗಿ ಪಿತೂರಿಯ ಮುಖ್ಯನಾಗಿದ್ದ ಖಂಡೇರಾಯನನ್ನು ಸೋಲಿಸಿ, ಕೃಷ್ಣರಾಜ ಒಡೆಯರು ತನಗೆ ಸರ್ವಾಧಿಕಾರವನ್ನು ವಹಿಸುವಂತೆ ಮಾಡಿಕೊಂಡ. ಒಡೆಯರಿಗೆ 3 ಲಕ್ಷ ಮತ್ತು ಈ ಹೋರಾಟದಲ್ಲಿ ತನಗೆ ನೆರವು ನೀಡಿದ ಕರಾಚುರಿ ನಂಜರಾಜನಿಗೆ 1 ಲಕ್ಷ ಪಗೋಡಗಳ ವರ್ಷಾಶನ ನೀಡಿ ಖಂಡೇರಾಯನನ್ನು ಕೊಂದು ಹಾಕಿದ.
ಅಂತ್ಯ
[ಬದಲಾಯಿಸಿ]1761ರ ಅನಂತರ ಹೈದರ್ ಆಲಿಯ ಸರ್ವಾಧಿಕಾರದಲ್ಲಿ ಹೆಸರಿಗೆ ಮಾತ್ರ ಅರಸರಾಗಿ ಮುಂದುವರಿದ ಇಮ್ಮಡಿ ಕೃಷ್ಣರಾಜರು 1766ರಲ್ಲಿ ಮೃತರಾದರು.
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |