ಕ್ರೋಮ್ಯಾಗ್ನನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರೋಮ್ಯಾಗ್ನನ್ ಮಾನವ- ಕ್ರಿ.ಪೂ ಸುಮಾರು 35,000-8,000 ಅವಧಿಯಲ್ಲಿ ಮಾನವ ಬುಡಕಟ್ಟಿನ ಫಾಸಿಲ್,

ಪತ್ತೆ ಮತ್ತು ಹೆಸರು ನೀಡಿಕೆ[ಬದಲಾಯಿಸಿ]

ಫ್ರಾನ್ಸ್ ದೇಶದ ಡಾರ್ಡೊಗ್ನೆ ವಿಭಾಗಕ್ಕೆ ಸೇರಿದ ಲೆಈಜಿಸ್ ಎಂಬಲ್ಲಿರುವ ಕ್ರೋಮ್ಯಾಗ್ನನ್ ಗುಹೆಯಲ್ಲಿ ಲೂಯಿಸ್ ಲಾರ್ಟೆ ಎಂಬ ಭೂವಿಜ್ಞಾನಿ ಗತಕಾಲದ ಐದು ಮಾನವ ಕಂಕಾಲಗಳನ್ನು ಕಂಡುದಾಗಿ ವರದಿಮಾಡಿದ (1868). ಅವುಗಳ ಜೊತೆಯಲ್ಲಿ ಪ್ರಾಣಿಗಳ ಎಲುಬುಗಳು, ಸಾಗರಪ್ರಾಣಿಗಳ ಚಿಪ್ಪುಗಳಿಂದ ರಚಿತವಾದ ಕಂಠಹಾರಗಳು ಮತ್ತು ಆಯುಧಗಳು ಸಹ ಇದ್ದುವು. ಈ ಮಾನವ ಬುಡಕಟ್ಟಿಗೆ ಕ್ರೋಮ್ಯಾಗ್ನನ್ ಮಾನವ ಎಂಬ ಹೆಸರು ಬಂತು.

ಅಲ್ಲಿ ದೊರೆತ ಶಿಲಾಯುಧಗಳು ಎಡ್ವರ್ಡ್ ಲಾರ್ರೆಟ್ ಹಿಂದೆ ಅರಿಗ್ನಾತ್ ಎಂಬ ಸ್ಥಳದಿಂದ ಪಡೆದು ವರ್ಣಿಸಿದ್ದ ಶಿಲಾಯುಧಗಳನ್ನು ಹೋಲುತ್ತಿದ್ದುದಿಂದ ಕ್ರೋಮ್ಯಾಗ್ನನ್ ಮಾನವ ಹಳೆ ಶಿಲಾಯುಗದ ಆದಿಯ ಆರಿಗ್ನೇಷಿಯನ್ ಕಾಲದವನೆಂದು ಹೇಳಬಹುದು. ಅನಂತರ ಇದೇ ಮಾದರಿ ಅಸ್ಥಿಗಳು ಕೂಂಬ್-ಕ್ಯಾಂಪೆಲ್, ಮೆಂಟಾನ್ ಮತ್ತಿತರ ಕಡೆಗಳಲ್ಲೂ ದೊರೆತಿವೆ. ಈಗ ಆರಿಗ್ನೇಸಿಯನ್ ಕಾಲದಲ್ಲಿ ಪಶ್ಚಿಮ ಯೂರೋಪಿನಲ್ಲಿ ನೆಲೆಸಿದ್ದ ಮಾನವ ಕುಲಕ್ಕೆಲ್ಲ ಕ್ರೋಮ್ಯಾಗ್ನನ್ ಮಾನವ ಎಂಬ ಹೆಸರನ್ನು ಅನ್ವಯಿಸಲಾಗಿದೆ.

ಹರಹು[ಬದಲಾಯಿಸಿ]

ಕ್ರೋಮ್ಯಾಗ್ನನ್ ಮಾನವ ಬುಡಕಟ್ಟು ಆ ಕಾಲದಲ್ಲಿ ಯೂರೋಪಿನ ಆದ್ಯಂತ ಹಬ್ಬಿತ್ತು. ಫ್ರಾನ್ಸಿನಿಂದ ಬೆಲ್ಜಿಯಂ ಮತ್ತು ವೇಲ್ಸ್‍ನಿಂದ ಪೂರ್ವ ಯೂರೋಪಿನವರೆಗಿನ ಪ್ರದೇಶಗಳಲ್ಲಿ ಈ ಬುಡಕಟ್ಟಿನ ಸಾಂದ್ರತೆ ಹೆಚ್ಚಾಗಿತ್ತು.

ಆರಿಗ್ನೇಷಿಯನ್ ಕಾಲಕ್ಕಿಂತ ಹಿಂದೆ, ಅಂದರೆ ಮೌಸ್ಟೀರಿಯನ್ ಕಾಲದಲ್ಲಿ ಪಶ್ಚಿಮ ಯೂರೋಪಿನಲ್ಲಿ ಬೇರೊಂದು ಮಾನವ ಬುಡಕಟ್ಟು ಇತ್ತು. ನೆಯಾಂಡರ್‍ಟಾಲ್ ಮಾನವ ಎಂದು ಅದರ ಹೆಸರು. ಇವೆರಡು ಜನಾಂಗಗಳ ನಡುವೆ ಮೈಕಟ್ಟು ಸಂಸ್ಕøತಿ ಮತ್ತು ಬುಡಕಟ್ಟಿನ ಉಗಮಗಳಲ್ಲಿ ಭಿನ್ನತೆ ಎದ್ದುಕಾಣುತ್ತದೆ. ಆದ್ದರಿಂದ ಕ್ರೋಮ್ಯಾಗ್ನನ್ ಮಾನವ ಬೇರೆ ಕಡೆಗಳಿಂದ ಪಶ್ಚಿಮ ಯೂರೋಪಿಗೆ ವಲಸೆ ಬಂದು, ಸ್ಥಳೀಯ ನಿಯಾಂಡ್ರತಲ್ ಮಾನವನನ್ನು ನಿರ್ನಾಮಮಾಡಿ, ನೆಲೆಸಿರಬೇಕೆಂದು ಅಭಿಪ್ರಾಯಪಡಲಾಗಿದೆ. ಹೆಚ್ಚು ಬುದ್ಧಿಶಾಲಿಯೂ ಚತುರನೂ ಆಗಿದ್ದ ಕ್ರೋಮ್ಯಾಗ್ನನ್ ಮಾನವ ಈ ದಿಶೆಯಲ್ಲಿ ಜಯಗಳಿಸಿದುದು ಸ್ವಾಭಾವಿಕವೇ ಆಗಿದೆ. ನೀರ್ಗಲ್ಲುಯುಗದ ಅತಿಶೀತವಾಯುಗುಣ ಅವನಿಗೆ ಸಹಕಾರಿಯಾಗಿದ್ದಿರಬಹುದು. ಅವನ ಉಗಮ ಏಷ್ಯದಲ್ಲಿ ಆಗಿ ಆತ ಪಶ್ಚಿಮಾಭಿಮುಖವಾಗಿ ವಲಸೆ ಬಂದಿರಬೇಕೆಂದು ತಜ್ಞರ ಅಭಿಪ್ರಾಯ.

ಕ್ರೋಮ್ಯಾಗ್ನನ್ ಮಾನವನ ವಿಶೇಷ ಲಕ್ಷಣಗಳು[ಬದಲಾಯಿಸಿ]

ಇವನಲ್ಲಿ ಆಧುನಿಕ ಮಾನವನಲ್ಲಿರುವ ಲಕ್ಷಣಗಳೇ ಅತ್ಯಧಿಕವಾಗಿರುವುದು ಒಂದು ವೈಶಿಷ್ಟ್ಯ. ಈತ ಹಾಲಿ ಜೀವಿಸುತ್ತಿರುವ ಕಾಕಸಾಯಿಡ್ ಬುಡಕಟ್ಟಿನ ಒಂದು ಪ್ರಭೇದ ಎನ್ನಬಹುದು. ಆಧುನಿಕ ಮಾನವನಿಗಿಂತ ಎತ್ತರವಾಗಿಯೂ ದೃಢಕಾಯನಾಗಿಯೂ ಇದ್ದ. ಇವನ ಮಿದುಳು ಸಹ (1550-1750 ಘ.ಸೆಂಮೀ) ಆಧುನಿಕ ಮಾನವನ ಮಿದುಳಿಗಿಂತ (1350 ಘ.ಸೆಂಮೀ) ದೊಡ್ಡದು. ಇವನು ಪಂಚಭುಜಾಕೃತಿಯ ಅಡ್ಡತಲೆಯ ದೊಡ್ಡ ಬುರುಡೆಯ ಮಾನವ. ಮುಖ ಅಗಲ, ಆದರೆ ಚಿಕ್ಕದು. ಆಯಾಕಾರದ ಕಣ್ಣುಗುಳಿಗಳು. ಎರಡರ ಅಂತರ ಸ್ವಲ್ಪ ದೂರವೆಂದೇ ಹೇಳಬೇಕು. ದವಡೆಗಳು ಮುನ್‍ಚಾಚಿವೆ.

ಪ್ಲೀಸ್ಟೋಸೀನ್ ನೀರ್ಗಲ್ಲುಯುಗದ ಮೊದಲನೆಯ ಹಂತ ಮುಗಿದಮೇಲೆ ಯೂರೋಪಿನಲ್ಲಿ ನೀರ್ಗಲ್ಲುಗಳು ಉತ್ತರಕ್ಕೆ ಹಿಂಜರಿದುವು. ಯೂರೋಪು ಹುಲ್ಲುಗಾವಲು ಪ್ರದೇಶವಾಯಿತು. ಇಲ್ಲಿ ಕಾಡೆಮ್ಮೆಗಳು, ದನಗಳು, ಕುದುರೆಗಳು ಹೇರಳವಾಗಿ ಜೀವಿಸಿದ್ದುವು. ಉತ್ತರದ ಶೀತವಾಯುಗುಣ ಪ್ರದೇಶದಲ್ಲಿ ರೋಮ ಬೃಹದ್ಗಜಗಳು, ಹಿಮಸಾರಂಗಗಳು ಮತ್ತು ಖಡ್ಗಮೃಗಗಳು ಹೇರಳವಾಗಿದ್ದುವು, ಅಲ್ಲಿ ಕ್ರೋಮ್ಯಾಗ್ನನ್ ಮಾನವರು ಗುಂಪು ಕಟ್ಟಿಕೊಂಡು ಬೇಟೆಯಾಡುತ್ತಿದ್ದರು. ಈ ಪ್ರಾಣಿಗಳನ್ನು ಕಂಗೆಡಿಸಿ ಕಡಿದಾದ ಪ್ರಪಾತ, ಇಕ್ಕಟ್ಟಾದ ಕಮರಿ ಅಥವಾ ಕೊರಕಲಿನ ಕಡೆಗೆ ಪಲಾಯನ ಮಾಡುವಂತೆ ಮಾಡಿ ಆಯಕಟ್ಟಿನ ಸ್ಥಳಗಳಲ್ಲಿ ಎದುರಿಸುವುದು ಬೇಟೆಯ ಕೌಶಲವಾಗಿತ್ತು. ಈ ಪ್ರಾಣಿಗಳ ಮಾಂಸವೇ ಇವರ ಆಹಾರ. ಇವುಗಳ ಚರ್ಮವನ್ನು ಹೊದೆಯುವುದಕ್ಕೂ ಕೊಬ್ಬನ್ನು ದೀಪ ಉರಿಸುವುದಕ್ಕೂ ಎಲುಬನ್ನು ಆಯುಧಗಳ ತಯಾರಿಕೆಗೂ ಉಪಯೋಗಿಸುತ್ತಿದ್ದರು. ಜೊತೆಗೆ ಕ್ರೋಮ್ಯಾಗ್ನನ್ ಮಾನವ ಮೀನು ಹಿಡಿಯುವುದರಲ್ಲಿಯೂ ನಿಪುಣನಾಗಿದ್ದ. ಚಳಿಗಾಲದ ಹೆಚ್ಚು ಭಾಗವನ್ನು ಇವನು ಶಿಲೆಗಳ ಸಂದು ಅಥವಾ ಗವಿಗಳಲ್ಲಿ ಕಳೆಯುತ್ತಿದ್ದ. ಇವರಲ್ಲಿ ಸತ್ತವರನ್ನು ಹೂಳುತ್ತಿದ್ದರು. ಇವರಿಗಿಂತ ಹಿಂದೆ ಇದ್ದ ನಿಯಾಂಡ್ರತಲ್ ಮಾನವರಲ್ಲಿಯೂ ಇದೇ ಪದ್ಧತಿ ಇತ್ತು. ಆದ್ದರಿಂದ ಇವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇದ್ದ ಹಾಗೆ ಕಾಣುತ್ತದೆ. ಹೆಣಗಳಿಗೆ ಕಾವಿಮಣ್ಣನ್ನು ಸವರಿ ಹೂಳುತ್ತಿದ್ದರು. ಜೀವಿಸಿದ್ದಾಗಲೂ ತಮ್ಮ ಮೈಗೆ ಕೆಂಪು ಪಟ್ಟೆಗಳನ್ನು ಬಳಿದುಕೊಳ್ಳುವುದಿತ್ತು. ಕ್ರೋಮ್ಯಾಗ್ನನ್ ಮಾನವ ನಯವಾದ ಶಿಲಾಯುಧಗಳು ಮತ್ತು ಅಸ್ಥಿ ಆಯುಧಗಳ ತಯಾರಿಕೆಗೆ ಶಂಕುಸ್ಥಾಪನೆ ಮಾಡಿದುದೇ ಅಲ್ಲದೆ, ಪ್ರಪ್ರಥಮ ಕಲಾವಿದನಾಗಿ ಕಲೆಯ ಉಗಮಕ್ಕೆ ಕಾರಣೀಭೂತನೂ ಆಗಿದ್ದಾನೆ. ಅವನು ಕಂಡು ಮೆಚ್ಚಿದ ಮತ್ತು ಬೇಟೆಯಾಡಿದ ಪ್ರಾಣಿಗಳ ಚಿತ್ರಗಳನ್ನು ಕೆತ್ತನೆ, ಉಬ್ಬುಚಿತ್ರ ಮತ್ತು ಮೂರ್ತಿಶಿಲ್ಪಗಳ ಮೂಲಕ ಅಮರವಾಗಿಸಿದ್ದಾನೆ. ಅತಿಸೂಕ್ಷ್ಮಕಣಶಿಲೆಗಳು ಮತ್ತು ದಂತಗಳಲ್ಲಿ ಹೆಂಗಸರ ಚಿತ್ರ ಮತ್ತು ಪ್ರತಿಮೆಗಳನ್ನು ತಯಾರಿಸಿದ್ದಾನೆ. ಗರ್ಭಿಣಿಯರ ಉತ್ಪ್ರೇಕ್ಷಿತ ಚಿತ್ರ, ಕೆಲವು ಮಹಿಳೆಯರ ವಿಕಟ ಅಥವಾ ವಿರೂಪ ಚಿತ್ರ ಮತ್ತು ಮೂರ್ತಿಗಳನ್ನು ತಯಾರಿಸಿದ್ದಾನೆ. ದಂತದ ಆಯುಧಗಳಿಗೆ ಬಣ್ಣಹಾಕಿದ್ದಾನೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಎಲ್ಲೋರ ಅಜಂತ ಗುಹೆಗಳಲ್ಲಿರುವ ಹಾಗೆ ಕಲ್ಲುಗುಹೆಗಳಲ್ಲಿ ವರ್ಣ ಚಿತ್ರಗಳನ್ನು ತಯಾರಿಸುವುದು ಮಹತ್ತ್ವದ ಸಂಗತಿ. ಗುಹೆಗಳ ಗೋಡೆಗಳ ಮೇಲೆ ಆ ಕಾಲದ ಪ್ರಾಣಿಗಳ ಆಕೃತಿ, ನಿಸರ್ಗದಲ್ಲಿ ಕಂಡ ಅವುಗಳ ಬಣ್ಣ, ಅವನ್ನು ಬೇಟೆಯಾಡುವ ವಿಧಾನ ಮುಂತಾದವನ್ನು ಚಿತ್ರಿಸಿದ್ದಾನೆ. ಇವು ಅವನ ಮೃಗಾನ್ವೇಷಣೆಯ ಕಾರ್ಯದಲ್ಲಿ ಪ್ರಭಾವ ಹಾಗೂ ಚಾತುರ್ಯವನ್ನು ಇಮ್ಮಡಿಸುವ ಉದ್ದೇಶವಿರಬಹುದು. ಈ ಬುಡಕಟ್ಟಿನವರು ಸ್ಪಷ್ಪವಾದ ಭಾಷೆಯನ್ನು ಬಳಸುತ್ತಿದ್ದಿರಬೇಕು ಎಂದು ನಂಬಲಾಗಿದೆ. ಕ್ರೋಮ್ಯಾಗ್ನನ್ ಮಾನವ ದೈಹಿಕ ಮತ್ತು ಬೌದ್ಧಿಕ ಶಕ್ತಿಗಳೆರಡರಲ್ಲೂ ಉನ್ನತ ಹಂತವನ್ನು ತಲಪಿದ್ದ.

ಕ್ರೊಮ್ಯಾಗ್ನನ್ ಮಾನವನ ಕಾಲ[ಬದಲಾಯಿಸಿ]

ಇವನು ಕ್ರಿ.ಪೂ 30,000 ವರ್ಷಗಳ ಹಿಂದೆ ಇದ್ದನೆಂದು ಕಾರ್ಬನ್-14 ಕಾಲಮಾಪನೆ ಸೂಚಿಸುತ್ತದೆ. ಆದರೆ ಇವನ ಸಂಸ್ಕತಿಯ ಅವಶೇಷಗಳು 5,000-10,000 ವರ್ಷಗಳ ಹಿಂದೆ ಇದ್ದುದನ್ನು ಸೂಚಿಸುತ್ತದೆ. ಕ್ರೋಮ್ಯಾಗ್ನನ್ ಮಾನವನ ಅವಶೇಷಗಳು ಆರಿಗ್ನೇಷಿಯನ್ ಕಾಲದಿಂದ ವರ್ತಮಾನ ಕಾಲದವರೆಗಿನ ಎಲ್ಲ ಕಾಲಗಳ ಶಿಲೆಗಳಲ್ಲಿಯೂ ದೊರೆತಿವೆ. ಡಾರ್ಡೊಗ್ನೆ, ಸ್ಕ್ಯಾಂಡಿನೇವಿಯ, ಸ್ಪೇನ್ ದೇಶದ ಕೆಲವು ಭಾಗ ಮತ್ತು ಕ್ಯಾನರಿ ದ್ವೀಪಗಳಲ್ಲಿ ವಾಸಿಸುವ ಕೆಲವು ಜನಾಂಗಗಳಲ್ಲಿ ಕ್ರೋಮ್ಯಾಗ್ನನ್ ಲಕ್ಷಣಗಳು ಇವೆ ಎಂದು ಮಾನವಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. [೧][೨]

ಉಲ್ಲೇಖ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ರೋಮ್ಯಾಗ್ನನ್ ಮಾನವ|ಕ್ರೋಮ್ಯಾಗ್ನನ್ ಮಾನವ
  2. ಜೀವ ಜೀವನ ಗ್ರಂಥ