ಕ್ರಿಸ್ಟಿಯಾನ್ ಡಾಪ್ಲರ್
ಕ್ರಿಸ್ಟಿಯಾನ್ ಡಾಪ್ಲರ್ - (1803-1853). ಆಸ್ಟ್ರಿಯದ ಭೌತವಿಜ್ಞಾನಿ. ಡಾಪ್ಲರ್ ಪರಿಣಾಮ ಎಂಬ ಭೌತಆಷ್ಕಾರದ ಕರ್ತೃವಾಗಿ ಪ್ರಸಿದ್ಧನಾಗಿದ್ದಾನೆ.
ಬದುಕು ಮತ್ತು ಸಂಶೋಧನೆ
[ಬದಲಾಯಿಸಿ]ಸಾಲ್ಜಬರ್ಗ್ ನಲ್ಲಿ ಜನನ (29-11-1803), ವೆನಿಸ್‍ನಲ್ಲಿ (ಇಟಲಿ, ಆಗ ಆಸ್ಟ್ರಿಯದ ಅಧೀನದಲ್ಲಿತ್ತು) ಮರಣ (17-3-1853). ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಹುಟ್ಟಿದ ಊರಿನಲ್ಲಿಯೇ ಮುಗಿಸಿ ಆಸ್ಟ್ರಿಯದ ರಾಜಧಾನಿ ವಿಯೆನ್ನಕ್ಕೆ ಹೆಚ್ಚಿನ ವ್ಯಾಸಂಗಕ್ಕಾಗಿ ತೆರಳಿದ. ಉಚ್ಚ ಶಿಕ್ಷಣವನ್ನು ಮುಗಿಸಿದ ಬಳಿಕ ಪ್ರಾಗ್‍ನಲ್ಲಿ (ಚೆಕೊಸ್ಲೊವಾಕಿಯ) 1841 ರಿಂದ 1847ರವರೆಗೆ ತಾಂತ್ರಿಕ ಶಾಲೆಯಲ್ಲಿ ಗಣಿತದ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ. ಇದೇ ವೇಳೆ ಡಾಪ್ಲರ್ ಹೆಚ್ಚಿನ ಸಂಶೋಧನೆಯಲ್ಲಿ ಆಸಕ್ತಿಯನ್ನು ತಳೆದ. ಯಮಳ ನಕ್ಷತ್ರಗಳು ಒಂದು ವಿಚಿತ್ರರೀತಿಯಲ್ಲಿ ವರ್ತಿಸುವುದು ಆ ಕಾಲದಲ್ಲಿ ತಿಳಿದಿತ್ತು. ಅವುಗಳಿಂದ ದೊರೆಯುವ ವಿಕಿರಣವನ್ನು ವಿಶ್ಲೇಷಣೆ ಮಾಡಿದಾಗ ಕೆಲವೊಂದು ಸಲ ಅವುಗಳ ರೋಹಿತ ರೇಖೆಗಳು ದ್ವಿಗುಣಿವಾಗಿಯೂ ಅವೇ ಮತ್ತೆ ಕೆಲವೊಂದು ಸಲ ಒಂಟಿಯಾಗಿಯೂ ಕಂಡು ಬರುತ್ತಿದ್ದುವು. ಇದೂ ಅಲ್ಲದೆ ಯಮಳ ನಕ್ಷತ್ರಗಳಿಂದ ದೊರೆಯುತ್ತಿದ್ದ ವಿಕಿರಣ ತನ್ನ ಬಣ್ಣವನ್ನು ಬದಲಾಯಿಸುತ್ತಿರುವಂತೆಯೂ ಕಂಡು ಬರುತ್ತಿದ್ದುವು. ಯಮಳ ನಕ್ಷತ್ರಗಳ ವಿಕಿರಣದ ಬಣ್ಣವನ್ನು ವರ್ಣಿಸುವ ಮತ್ತು ಆ ವಿದ್ಯಮಾನಕ್ಕೆ ಸ್ಪಷ್ಟೀಕರಣ ನೀಡುವ ಲೇಖನವೊಂದನ್ನು 1842ರಲ್ಲಿ ಡಾಪ್ಲರ್ ಪ್ರಕಟಿಸಿದ. ಜರ್ಮನ್ ಭಾಷೆಯಲ್ಲಿ ಇರುವ ಆ ಲೇಖನದ ಶೀರ್ಷಿಕೆಯ ಅರ್ಥ 'ಯಮಳ ನಕ್ಷತ್ರಗಳ ವರ್ಣ-ರಂಜಿತ ಪ್ರಕಾಶ' ಎಂದಾಗುತ್ತದೆ. ಇದರಲ್ಲಿಯೇ ಈತ ಪ್ರಥಮವಾಗಿ ಡಾಪ್ಲರ್ ತತ್ತ್ವವನ್ನು ಮಂಡಿಸಿದ್ದು. ಈ ಸೈದ್ಧಾಂತಿಕ ನಿರೂಪಣೆಗೆ ಮತ್ತು ವಿಕಿರಣ ಎರಡಕ್ಕೂ ಸಂಬಂಧಿಸಿದಂತೆ ಪ್ರಾಯೋಗಿಕ ಸಮರ್ಥನೆ 1845ರಲ್ಲಿ ದೊರೆಯಿತು. ಶಬ್ದದ ಡಾಪ್ಲರ್ ಪರಿಣಾಮವನ್ನು ಸಿ.ಎಚ್.ಡಿ. ಬೈಸ್ ಬಲಾಟ್ಸ್ ಎಂಬಾತ ಪ್ರಾಯೋಗಿಕವಾಗಿ ದೃಢೀಕರಿಸಿದ. ಬೆಳಕಿನ (ವಿಕಿರಣದ) ಡಾಪ್ಲರ್ ಪರಿಣಾಮವನ್ನು ಸರಿಯಾಗಿ ಸ್ಪಷ್ಟೀಕರಿಸಿದಾತ ಆರ್ಮಾನ್ ಫೀeóÉೂೀ. ಡಾಪ್ಲರ್ ತನ್ನ (1842) ಲೇಖನದಲ್ಲಿ ಕೇವಲ ಈ ಮುಂದಿನಂತೆ ವಿವರಿಸಿದ್ದ: ಭೂಮಿಯ ಮೇಲಿನ ವೀಕ್ಷಕನೊಬ್ಬನಿಗೆ ಅವನಿಂದ ದೂರ ಧಾವಿಸುತ್ತಿರುವ ನಕ್ಷತ್ರಗಳಿಂದ ಬರುವ ವಿಕಿರಣ ಅಲೆಗಳು ಹೆಚ್ಚು ದೀರ್ಘವಾದಂತೆ ತೋರುತ್ತವೆ. ಆದ್ದರಿಂದ ಅವನನ್ನು ಸಮೀಪಿಸುತ್ತಿರುವ ಒಂದು ನಕ್ಷತ್ರಕ್ಕೆ ಹೋಲಿಸಿದಂತೆ ದೂರ ಸರಿಯುತ್ತಿರುವ ನಕ್ಷತ್ರ ಹೆಚ್ಚು ಕೆಂಪಗಾಗಿ ಕಾಣುತ್ತದೆ. ಆದರೆ, ಸ್ವಲ್ಪ ಕೂಲಂಕಷವಾಗಿ ನೋಡಿದರೆ ಹಾಗೆ ಕಾಣಬಾರದು. ಏಕೆಂದರೆ, ಡಾಪ್ಲರ್ ಪರಿಣಾಮವಾಗಿ ಅಲೆಯುದ್ದಗಳು ಹೆಚ್ಚಿ ದೃಗ್ಗೋಚರ ವ್ಯಾಪ್ತಿಯಲ್ಲಿನ ಅಲೆಗಳು ಅತಿರಕ್ತ ಭಾಗಕ್ಕೆ ಹೋಗುತ್ತವೇನೋ ನಿಜ. ಆದರೆ ಅತಿನೇರಿಳೆ ವಿಭಾಗದಿಂದ ಎಷ್ಟೊ ಅಲೆಯುದ್ದಗಳು ದೃಗ್ಗೋಚರ ವ್ಯಾಪ್ತಿಯಲ್ಲಿ (ಅದೇ ಡಾಪ್ಲರ್ ಪರಿಣಾಮದಿಂದಾಗಿ) ಬರುವುದರಿಂದಲೂ ನಕ್ಷತ್ರದ ಬಣ್ಣ ಒಟ್ಟು ವಿಸ್ತರಣ ಫಲವಾಗಿ ಪರಿಣಮಿಸುತ್ತದಾದ್ದರಿಂದಲೂ ಮೇಲಿನ ವಿದ್ಯಮಾನದಿಂದ ಅದರ ಬಣ್ಣ ಬದಲಾಗಬಾರದು. ಈ ವಿದ್ಯಮಾನದ ಸರಿಯಾದ ಸ್ಪಷ್ಟೀಕರಣವನ್ನು ಫೀಜೂ 1848ರಲ್ಲಿ ಕೊಟ್ಟ. ಆಕರ(ನಕ್ಷತ್ರ) ಮತ್ತು ಗ್ರಾಹಿಗಳ ನಡುವಣ ಸಾಪೇಕ್ಷ ವೇಗದ ಪರಿಣಾಮವಾಗಿ ನಕ್ಷತ್ರದಿಂದ ಬರುವ ವಿಕಿರಣದ ರೋಹಿತ ರೇಖೆಗಳು ಪಲ್ಲಟನ ಹೊಂದುತ್ತವೆ ಎಂದು ಅವನು ಹೇಳಿದ. ಹೀಗೆ ಸರಿಯಾದ ಸ್ಪಷ್ಟೀಕರಣವನ್ನು ನೀಡಿದ ಫೀಜೂನ ಹೆಸರನ್ನು ಕೂಡ ಪರಿಣಾಮದೊಡನೆ ಸಂಬಂಧಿಸಿ ಈಗ ಇದಕ್ಕೆ ಡಾಪ್ಲರ್- ಫೀಜೂನ ಹೆಸರನ್ನು ಕೂಡ ಪರಿಣಾಮದೊಡನೆ ಸಂಬಂಧಿಸಿ ಈಗ ಇದಕ್ಕೆ ಡಾಪ್ಲರ್-ಫೀಜೂ ಪರಿಣಾಮವನ್ನು ಬೆಲೊಪೊಲ್ಸ್ಕಿ ಎಂಬಾತ 1901ರಲ್ಲಿ ಪರಿಮಾಣತ್ಮಕವಾಗಿ ಪ್ರಯೋಗಶಾಲೆಯಲ್ಲಿ ದೃಢೀಕರಿಸಿದ.
1848 ರಿಂದ 1851ರವರೆಗೆ ಡಾಪ್ಲರನು ವಿಯೆನ್ನದಲ್ಲಿಯ ಪಾಲಿಟೆಕ್ನಿಕಲ್ ಇನ್ಸ್‍ಟಿಟ್ಯೂಟಿನಲ್ಲಿ ಪ್ರಾಧ್ಯಾಪಕನಾಗಿದ್ದ. 1850ರಲ್ಲಿ ಆ ಸಂಸ್ಥೆಯ ನಿರ್ದೇಶಕನೂ ಆದ. ಅನಂತರ 1851 ರಿಂದ 1853ರವರೆಗೆ ಅಂದರೆ ತನ್ನ ಮರಣದ ವರೆಗೆ ವಿಯೆನ್ನ ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಪ್ರಾಧ್ಯಾಪಕನಾಗಿದ್ದ.
ಭೌತವಿಜ್ಞಾನಕ್ಕೆ ಸಂಬಂಧಿಸಿದ ಈ ಮೇಲೆ ಹೇಳಿದ ಲೇಖನವಲ್ಲದೆ ಗಣಿತಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ಕೂಡ ಡಾಪ್ಲರ್ ಬರೆದಿದ್ದಾನೆ. ಆದಾಗ್ಯೂ ಅವನ ಹೆಸರು ಭೌತವಿಜ್ಞಾನದಲ್ಲಿಯೇ ಹೆಚ್ಚು ಪ್ರಸಿದ್ಧವಿದೆ. ಡಾಪ್ಲರನ ಇನ್ನೊಂದು ಮಹತ್ತ್ವದ ಲೇಖನದ ಶೀರ್ಷಿಕೆಯ ಅರ್ಥ 'ವರ್ಣಗಳ ಕ್ರಮಬದ್ಧ ವರ್ಗೀಕರಣ' ಎಂಬುದಾಗಿ ಇದೆ.
ಡಾಪ್ಲರೈಟ್ ಎಂದು ಕರೆಯಲ್ಪಡುವ ಖನಿಜದಿಂದ ಕೂಡ ಡಾಪ್ಲರನ ಹೆಸರು ಶಾಶ್ವತವಾಗಿ ಉಳಿಯುವಂತಾಗಿದೆ. ಇದು ಗಣಿಗಳಲ್ಲಿ ಪುಟಿತತೆ ಇರುವ ಅಥವಾ ಜೆಲಿ ತರಹದ ಪದಾರ್ಥಗಳಲ್ಲಿ ದೊರೆಯುತ್ತದೆ. ಈ ಅಸ್ಫಟಿಕೀಯ ಖನಿಜ, ತಾಜಾ ಸ್ಥಿತಿಯಲ್ಲಿದ್ದಾಗ ಕಪ್ಪು ಬಣ್ಣದ್ದಿರುತ್ತದೆ. ಅನಂತರ ಕಂದು ಬಣ್ಣದ್ದಾಗುತ್ತದೆ. ಇಂಥ ಗುಣಧರ್ಮಗಳ ಖನಿಜವನ್ನು ಪ್ರಪ್ರಥಮವಾಗಿ ಕಂಡವ ಡಾಪ್ಲರ್. ಆದ್ದರಿಂದಲೇ ಇದಕ್ಕೆ ಆತನ ಹೆಸರು ಬಂದಿದೆ.