ಕೋಣನ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರಿಯನ್ನು ಆರಾಧಿಸುವ ಸಂಸ್ಕೃತಿ ಇಡೀ ಕರ್ನಾಟಕದ ಉದ್ದಲಗಲಕ್ಕೆ ಇದೆಯಾದರೂ ಮಾರಮ್ಮನ ಹಬ್ಬದ ಸಂದರ್ಭದ ಕಲೆಗಳು ಪ್ರಾದೇಶಿಕ ಕಾರಣಕ್ಕಾಗಿ ಭಿನ್ನ ಭಿನ್ನವಾಗಿ ಕಂಡುಬರುತ್ತವೆ. ಅಂಥ ಅಪರೂಪದ ಪ್ರಾದೇಶಿಕ ಕಲೆಗಳಲ್ಲಿ ಕೋಣನ ಕುಣಿತವೂ ಒಂದು. ಇದನ್ನು 'ದೊಡ್ಡು ಆಡಿಸುವುದು', 'ದೊಡ್ಡು ಕುಣಿತ' ಎಂದೂ ಕರೆಯಲಾಗುತ್ತದೆ. ಮೈಸೂರು ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಈ ಕುಣಿತ ಮಾರಮ್ಮನ ಹಬ್ಬದಲ್ಲಿ ನಡೆಯುತ್ತದಾದರೂ ಬೇಟೆಯ ಆಶಯವನ್ನು ವ್ಯಕ್ತಪಡಿಸುತ್ತದೆ.

ಹೇಗೆ ಆಚರಿಸುತ್ತಾರೆ?[ಬದಲಾಯಿಸಿ]

ಈ ಕುಣಿತದಲ್ಲಿ ಭಾಗವಹಿಸುವವರು ಹೊಲೆಯರು ಮಾತ್ರ ಎಂಬುದು ತಿಳಿದುಬಂದಿದೆ. ಹಬ್ಬ ಸಾರಿದ ಬಳಿಕ ನಿಯಮಿಸಲ್ಪಟ್ಟ ಕೆಲವು ಹೊಲೆಯರು ಕಾಡಿಗೆ ಹೋಗಿ ಬಿದಿರುಗಳನ್ನು ಕಡಿದು ತರುತ್ತಾರೆ. ಈ ಕ್ರಿಯೆ ತುಂಬ ನಿಯಮ ನಿಷ್ಠೆಯಿಂದ ನದೆಯುತ್ತದೆ. ಕಾಡಿನಿಂದ ತಂದ ಬಿದಿರುಗಳನ್ನು ಆ ಊರಿನ ಬಡಗಿಗಲು ಪಟ್ಟಿಗಳನ್ನಾಗಿ ಕತ್ತರಿಸಿ ೧೦ ಅಡಿ ಅಗಲ ಹಾಗೂ ೫ ಅಡಿ ಎತ್ತರಕ್ಕೆ ಗಾಡಿಯ ಮೇಲಿನ ಕಮಾನಿನ ಆಕಾರದಲ್ಲಿ ಬೋರಲು ಹಾಕಿದ ಒಂದು ದೊಡ್ಡ ಬುಟ್ಟಿಯಂತೆ ಹೆಣೆಯುತ್ತಾರೆ. ಮುಂಭಾಗದಲ್ಲಿ ಮರದಿಂದ ಮಾಡಿದ ಕೋಣನ ಮುಖವಾಡವನ್ನು ಇರಿಸಿ ಹಿಂಭಾಗದಲ್ಲಿ ಒಂದು ಹಗ್ಗವನ್ನು ಇಳಿಬಿಟ್ಟು ಬಾಲ ಮಾಡುತ್ತಾರೆ. ಈ ಕುಣಿತ ಸಾಮನ್ಯವಾಗಿ ರಾತ್ರಿ ಹೊತ್ತಿನಲ್ಲಿ ನಡೆಯುತ್ತದಾದ್ದರಿಂದ ಆ ಆಕೃತಿಯ ಇಡೀ ಮೈಗೆ ಕಪ್ಪು ಬಟ್ಟೆ ಹೊದಿಸಿ ಕೋಣನ ತರಹ ಕಾಣುವಂತೆ ಮಾಡುತ್ತಾರೆ. ಈ ಆಕೃತಿಯನ್ನು ಹಿಂದೆ ಮತ್ತು ಮುಂದೆ ಹೊತ್ತ ಇಬ್ಬರು ಕೋಣನ ನಾಲಿಗೆಯನ್ನೂ, ಬಾಲವನ್ನೂ ಸೂತ್ರದಿಂದ ಆಡಿಸುತ್ತಿರುತ್ತಾರೆ. ಇವರಲ್ಲದ ೪ ದಿಕ್ಕುಗಳಿಂದ ಕೋಣನಿಗೆ ಹಗ್ಗ ಬಿಗಿದು ೪ ಜನ ಅದನ್ನು ನಿಯಂತ್ರಿಸುವಂತೆ ಅಭಿನಯಿಸುತ್ತಾರೆ. ಅದಲ್ಲದೆ ಅದನ್ನು ಬೇಟೆಯಾಡಲು ಬಂದವರಂತೆ ತೋರಿಸಿಕೊಳ್ಳುವ ಬಿಲ್ಲುಬಾಣದವರೂ ಇರುತ್ತಾರೆ. ಈ ಇಡೀ ಚಿತ್ರ ಕಾಡೆಮ್ಮೆಯೊಂದನ್ನು ಬೇಟೆಯಾಡುವ ನೆನಪನ್ನು ತರುತ್ತದೆ. ಆದರೆ ಈ 'ದೊಡ್ಡು ಆಡಿಸುವ'ಪ್ರತಿಯೊಬ್ಬರೂ ತಲೆತಲಾಂತರದಿಂದ ನೇಮಿಸಲ್ಪಟ್ಟವರು. ಒಂದು ಪಕ್ಷ ಆ ನಿರ್ದಿಷ್ಟ ಮನೆತನದವರು ಬೇರೆ ಕದೆ ಹೋಗಿ ನೆಲೆಸಿದ್ದರೂ ಹಬ್ಬಕ್ಕೆ ಹಾಜರಾಗಿ ಆ ಕೆಲಸ ಮಾಡಲೇಬೇಕು. ಅದರಲ್ಲೂ ಕೋಣನನ್ನು ಹೊರುವವರು, ಹಿಡಿದು ಆಡಿಸುವವರು ಮತ್ತು ಬಿಲ್ಲುಗಾರರು ಕೂಡ ಬೇರೆ ಬೇರೆ ಮನೆತನದವರು ಎಂಬುದನ್ನು ಇಲ್ಲಿ ಗಮನಿಸಬಹುದು.

ನೋಡಲು ಅತ್ಯಂತ ಮನರಂಜಕವಾದ ಈ ಕುಣಿತ ಅಪಾರ ಜನರನ್ನು ಆಕರ್ಷಿಸುತ್ತದೆ. ನಿಗದಿತ ರಂಗಸ್ಥಳದಿಂದ ಸ್ವಲ್ಪ ದೂರದಲ್ಲಿರುವ 'ದೊಡ್ಡಿನ ಮನೆ'ಯಿಂದ 'ದೊಡ್ಡ'ನ್ನು ನಡೆಸಿಕೊಂಡು ಬಂದು, ರಂಗಸ್ಥಳದಲ್ಲಿ ನೆಟ್ಟ ಕಲ್ಲಿಗೆ ಒಂದು ಸುತ್ತು ಹಾಕಿದ ನಂತರ ಕುಣಿತ ಆರಂಭವಗುತ್ತದೆ. ಅಲ್ಲಿನ್ ಮತ್ತೊಂದು ವಿಶೇಷವೆಂದರೆ ಈ ಅಭಿನಯಪೂರ್ವಕ ಕುಣಿತದ ಹಿನ್ನೆಲೆಗೆ ತಮಟೆ, ನಗಾರಿ ಇತ್ಯಾದಿ ವಾದನಗಳಿರುವುದಿಲ್ಲ. ಬದಲಾಗಿ ೨ ಬೃಹತ್ 'ಹೆಬ್ರ'ಗಳ ಸದ್ದು ಧಮ್ ಧಮ್ ಧಮ್ಮನೆ ಮೊಳಗುತ್ತಿರುತ್ತದೆ. ಹೆಬ್ರ ಅಂದರೆ ೨ ಭಾರೀ ಗಾತ್ರದ ಡೊಳ್ಳು. ದೊಡ್ಡದಾಗಿ ಕೊರೆದು ಮಾಡಿದ ಮರದ ಕೊಳವೆಗೆ ಎರಡೂ ಕಡೆಯೂ ಚರ್ಮವನ್ನು ಬಿಗಿದು ಅದರ ಇಡೀ ಮೈಯನ್ನು ಹಗ್ಗಗಳಿಂದ ಬಿಗಿದಿರುತ್ತಾರೆ. ಈ ವಾದ್ಯವನ್ನು ಒಬ್ಬ ಹೊತ್ತು ನಿಂತು ಮತ್ತೊಬ್ಬ ಬಡಿಯಬೇಕು ಅಥವಾ ಎತ್ತರದ ಜಾಗದಲ್ಲಿ ಇತ್ತು ಬಡಿಯಬೇಕು. ಈ ಸದ್ದು ಗುಡುಗುಟ್ಟುವಾಗ ಆ ಇಡೀ ಅಭಿನಯಕ್ಕೆ ಗಾಂಭೀರ್ಯ ಬರುತ್ತದೆ.

ಹಿಂದಿನ ಕಥೆ[ಬದಲಾಯಿಸಿ]

ಕೊಳ್ಳೇಗಾಲೆ ತಾಲೂಕು ಮಂಗಲಂ ಎಂಬ ಗ್ರಾಮದಲ್ಲಿ ನಡೆಯುವ ಇದೇ ಹಬ್ಬದ ಸಂದರ್ಭದಲ್ಲಿ ಆಚರಿಸಲಾಗುವ 'ವೀರನ ಎಡೆ'ಎಂಬ ೧ ಸಂಪ್ರದಾಯವನ್ನು ಇಲ್ಲಿ ಉಲ್ಲೇಖಿಸುವ ಅಗತ್ಯವಿದೆ. ಆ ಸಂಪ್ರದಾಯಕ್ಕೆ ಹಿನ್ನೆಲೆಯಾಗಿ ೧ ಕಥೆಯೂ ಇದೆ. 'ವಲಸೆಯಿಂದ ಜೀವನ ಸಾಗಿಸುತ್ತಿದ್ದ ಮಾವ ಮತ್ತು ಅಳಿಯ ಕಾಡಿನ ಒಂದು ಭಾಗದಲ್ಲಿ ನೆಲೆ ನಿಲ್ಲಲು ತೀರ್ಮಾನಿಸುತ್ತಾರೆ. ಕಾಡಿನ ಮಧ್ಯಭಾಗದಲ್ಲಿ ತರಗು ಗುಡಿಸಿ ಮನೆ ಕಟ್ಟುವ ಜಾಗವನ್ನು ಹಸನು ಮಾಡುತ್ತಾರೆ. ಬಿದಿರು ಕಡಿದು ತರುವುದಕ್ಕಾಗಿ ಅಳಿಯ ಕಾಡಿನ ಒಳಭಾಗಕ್ಕೆ ಹೋಗುತ್ತಾನೆ. ಅಲ್ಲಿಯೇ ಇದ್ದ ಹುಲಿಯೊಂದು ಇವನ ಮೇಲೆರಗಿ ಕೊಲ್ಲುತ್ತದೆ. ಇದರಿಂದ ದುಃಖಗೊಂಡ ಮಾವ ಅ ಜಾಗವನ್ನು ಬಿಟ್ಟು ಬೇರೆದೆ ನೆಲೆಸುತ್ತಾನೆ. ಸತ್ತ ಅಳಿಯನ ನೆನಪಿಗಾಗಿ ಇಂದೂ ಕೂಡ ಮಂಗಲಂನ 'ಕೋಣನ ಮಾರಮ್ಮ'ನ ಹಬ್ಬದಲ್ಲಿ 'ವೀರ ಎಡೆ' ಇಡಲಾಗುತ್ತಿದೆ ಎಂದು ಅಲ್ಲಿನ ಜನ ಹೇಳುತ್ತಾರೆ. ವಲಸೆಗಾರೆ ಜನ ಒಂದೆಡೆ ನೆಲೆನಿಂತು ಕೃಷಿಗೆ ತೊಡಗಿದ ಸಂದರ್ಭದಲ್ಲಿ ದುಷ್ಟ ಪ್ರಾನಿಗಳಿಂದ ಅವರಿಗಾಗುತ್ತಿದ್ದ ಹಿಂಸೆ ಮತ್ತು ಅವರ ಬೆಳೆಗಳಿಗಾಗುತ್ತಿದ್ದ ನಾಶದ ಹಾವಳಿಯ ಹಿನ್ನೆಲೆಯಲ್ಲಿಯೇ ಈ ಆಚರಣೆ ಮತ್ತು ಕುಣಿತ ಎರಡೂ ಇರುವುದನ್ನು ನಾವು ಗಮನಿಸಬಹುದು.

ಆಚರಣೆಯ ಕೊನೆಯ ದಿವಸ[ಬದಲಾಯಿಸಿ]

'ಕೋಣನ ಮಾರಮ್ಮನ ಜಾತ್ರೆ'ಎಂದೇ ಕರೆಯಲಾಗುವ ಆ ಹಬ್ಬದಲ್ಲಿ ಕಡೆಯ ದಿನ ಜೀವಂತ ಕೋಣವನ್ನು ಕೂಡ ಬಲಿ ಕೊಡುವ ಪದ್ಧತಿ ಬೆಳೆದು ಬಂದಿದೆ. ಈ ಇಡೀ ಆಚರಣೆ ಮತ್ತು ಕುಣಿತ ಕೋಣಗಳ ಹಾವಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವ ಆಶಯವನ್ನು ಮತ್ತಷ್ಟು ದೃಢಪಡಿಸುತ್ತದೆ ಅಥವಾ ಒಂದಾನೊಂದು ಕಾಲದಲ್ಲಿ ರೂಢಿಯಲ್ಲಿದ್ದ ಕಾಡುಕೋಣನ ಬೇಟೆ ಈ ಆಚರಣೆ ಮೂಲಕ ಪಳೆಯುಳಿಕೆಯಾಗಿ ಉಳಿದಿರುವಂತಿದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕ ಜನಪದ ಕಲೆಗಳ ಕೋಶ ಹಿ. ಚಿ. ಬೋರಲಿಂಗಯ್ಯ, ೧೯೯೬, ಪ್ರಸಾರಾಂಗ:ಕನ್ನಡ ವಿಶ್ವವಿದ್ಯಾಲಯ, ಹಂಪಿ