ವಿಷಯಕ್ಕೆ ಹೋಗು

ಕೈಗಾರಿಕಾ ಸಮಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

18-19ನೆಯ ಶತಮಾನಗಳಲ್ಲಿ ಯೂರೋಪಿನಲ್ಲಿ ಆರಂಭವಾಗಿ ಕ್ರಮಕ್ರಮವಾಗಿ ವಿಶ್ವದ ಇತರ ಎಡೆಗಳಿಗೆ ಹಬ್ಬಿದ ಕೈಗಾರಿಕಾಕರಣದ ಫಲವಾಗಿ ನಿರ್ಮಿತವಾಗುತ್ತಿರುವ ಸಮಾಜ. ಜನರ ವೃತ್ತಿಗಳಲ್ಲಿ ತೀವ್ರ ಬದಲಾವಣೆ; ವಿವಿಧ ಜನರ ವರ್ಗಗಳ ನೇರ ಸಂಬಂಧಗಳ ಬದಲು ಪರೋಕ್ಷ ಅವ್ಯಕ್ತ ಸಂಬಂಧ ಸ್ಥಾಪನೆ; ಕುಟುಂಬ, ನಂಟು, ನೆರೆಹೊರಿಕೆ ಮುಂತಾದ ಸಂಬಂಧಗಳಲ್ಲಿ ಅದೃಢತೆ; ಜನರಲ್ಲಿ ಪರಸ್ಪರಾವಲಂಬನೆಯ ಬೆಳೆವಣಿಗೆ; ಆರ್ಥಿಕ ಕ್ಷೇತ್ರದಲ್ಲಿ ವ್ಯಕ್ತಿಗಳ, ಪ್ರದೇಶಗಳ, ರಾಷ್ಟ್ರಗಳ ವಿಶೇಷೀಕರಣ ಮತ್ತು ಶ್ರಮವಿಭಜನೆ; ಜನರ ಆಚಾರವಿಚಾರ ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಸಡಿಲತೆ-ಇವು ಇದರ ಕೆಲವು ಲಕ್ಷಣಗಳು. ಜನರು ನಗರ ಹಾಗೂ ಕೈಗಾರಿಕಾ ಕೇಂದ್ರಗಳಲ್ಲಿ ಹೆಚ್ಚು ಹೆಚ್ಚಾಗಿ ವಾಸಿಸುತ್ತಾರೆ. ಇಂದು ವಿಶ್ವದಲ್ಲಿ 120ಕ್ಕೂ ಹೆಚ್ಚು ನಗರಗಳು ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಉಳ್ಳಂಥವು.[]

ಕೈಗಾರಿಕಾ ಸಮಾಜಗಳ ಆರ್ಥಿಕತೆ

[ಬದಲಾಯಿಸಿ]

ಕೈಗಾರಿಕಾ ಸಮಾಜಗಳ ಆರ್ಥಿಕತೆ ಸರಳಸಮಾಜಗಳಲ್ಲಿಯದಕ್ಕಿಂತ ಭಿನ್ನವೂ ವೈಶಿಷ್ಟ್ಯಪೂರ್ಣವೂ ಆಗಿರುತ್ತದೆ. ಇವುಗಳ ಅರ್ಥವ್ಯವಸ್ಥೆ ಜಾತಿ, ಕುಲ, ಕಸಬು ಮತ್ತಿತರ ಅಂಶಗಳ ಮೇಲೆ ನಿಂತಿರುವುದಿಲ್ಲ. ಕೈಗಾರಿಕಾ ಸಮಾಜಗಳು ಹಣ ಸಂಬಂಧಿ. ವಿಶ್ವದ ಮಾರುಕಟ್ಟೆಗಳಲ್ಲಿ ಸರಕುಗಳನ್ನು ಕೊಳ್ಳುವವರೂ ವಿಕ್ರಯಿಸುವವರೂ ಪರಸ್ಪರ ಮುಖತಃ ಭೇಟಿಯಾಗದೆ ವ್ಯವಹಾರ ನಡೆಸುವುದು ಸಾಧ್ಯ. ಈ ಸಮಾಜಗಳಲ್ಲಿ ಸರಕು ಮತ್ತು ಸೇವೆಗಳನ್ನು ವಿಕ್ರಯಿಸುವವರಿಗೆ ಅದರ ಉತ್ಪಾದನೆ ಇಲ್ಲವೇ ಬಳಕೆಯ ಅರಿವಿರಬೇಕಾದ್ದಿಲ್ಲ. ಕಾರ್ಪೊರೇಷನ್‍ಗಳು, ಕಾರ್ಮಿಕ ಸಂಘಗಳು, ವೃತ್ತಿ ಪ್ರಧಾನ ಸಂಸ್ಥೆಗಳು, ಸರ್ಕಾರಿ ಉದ್ಯಮಗಳು ಮುಂತಾದವು ಇಂದಿನ ಕೈಗಾರಿಕಾ ಸಮಾಜದ ಆರ್ಥಿಕಘಟಕಗಳಾಗಿವೆ. ಇಂಥ ನೂತನ ಆರ್ಥಿಕ ಸಂಘಗಳ ಜೊತೆಗೆ ಕುಟುಂಬ ಸ್ವಾಮ್ಯ ಉದ್ಯಮಗಳೂ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯ ಉದ್ಯಮಗಳೂ ಕೆಲಸ ಮಾಡುತ್ತಿರುತ್ತವೆ. ಈ ಸಮಾಜಗಳಲ್ಲಿ ಕೈಗಾರಿಕಾ ಚಟುವಟಿಕೆಗಳು ಜೀವನೋಪಾಯದ ಮುಖ್ಯ ಸಾಧನಗಳು. ಇಲ್ಲಿಯ ಕಸಬುಗಳು ಹೆಚ್ಚಿನ ಶ್ರಮ ವಿಭಜನೆಯಿಂದ ಕೂಡಿರುತ್ತವೆ. ಈ ಸಮಾಜದ ಜನ ಬೇಸಾಯವಲ್ಲದೆ ವಿವಿಧ ಕಸಬುಗಳಲ್ಲಿ ತೊಡಗಿರುತ್ತಾರೆ. ಈ ಜನರ ವಾಸಸ್ಥಳಗಳು ಮತ್ತು ಕೆಲಸ ಮಾಡುವ ಸ್ಥಳಗಳು ಬೇರೆ ಬೇರೆಯಾಗಿರುತ್ತವೆ. ಪ್ರತಿನಿತ್ಯ ಜನಸಾರಿಗೆಯಲ್ಲಿ ಇರುವ ನೂಕುನುಗ್ಗಾಟ ಇದರ ಪ್ರತೀಕ. ಬೇರೆಬೇರೆ ಕಸಬುಗಳಿಗೆ ಸೇರಿದ ಜನ ತಂತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ವೃತ್ತಿಸಂಸ್ಥೆಗಳನ್ನು ಸ್ಥಾಪಿಸಿಕೊಂಡಿರುತ್ತಾರೆ. ಕೈಗಾರಿಕಾ ಸಮಾಜಗಳಲ್ಲಿ ಕೈಗಾರಿಕೋದ್ಯಮಿ ಮತ್ತು ಕಾರ್ಮಿಕರ ನಡುವೆ ಘರ್ಷಣೆ ಉದ್ಭವಿಸುವ ಸಂಭವ ಅಧಿಕ.

ಸಾಮಾಜಿಕ ರಚನೆ

[ಬದಲಾಯಿಸಿ]

ಈ ಸಂಕೀರ್ಣ ಸಾಮಾಜಿಕ ರಚನೆಗೆ ವ್ಯಕ್ತಿ ಹೊಂದಿಕೊಳ್ಳುವುದು ಕಷ್ಟಕರ. ಏಕೆಂದರೆ ಇದು ಸದಾ ವ್ಯತ್ಯಾಸವಾಗತಕ್ಕದ್ದು. ಇದರಲ್ಲಿ ವ್ಯಕ್ತಿಯ ಪಾತ್ರ ಸುಲಭವಾಗಿ ಬೇರ್ಪಡಿಸುವಂಥದು ಮತ್ತು ನಿರ್ದಿಷ್ಟಗುರಿ ಸಾಧಿಸಲು ಮಾತ್ರ ಮೀಸಲಾದ್ದು. ಇಲ್ಲಿ ಕಸಬೂ ಕೌಟುಂಬಿಕ ಜೀವನವೂ ಬೇರ್ಪಟ್ಟಿರುತ್ತವೆ. ವ್ಯಕ್ತಿಗಳು ವಿವಿಧ ಗುಂಪು ಇಲ್ಲವೇ ಸಮೂಹಗಳಿಗೆ ಸೇರಿರುತ್ತಾರೆ. ಇಂಥ ಗುಂಪುಗಳು ನಿರ್ದಿಷ್ಟ ಆಸಕ್ತಿ ಮತ್ತು ಗುರಿಗಳನ್ನು ಹೊಂದಿರುತ್ತವೆ. ಇವು ಅಧಿಕಾರಯುತ ಸಂಸ್ಥೆಗಳ ನಿರ್ದೇಶನಕ್ಕೆ ಒಳಗಾಗಿರುತ್ತವೆ. ಕೈಗಾರಿಕಾ ಸಮಾಜಗಳಲ್ಲಿ ಲೋಕರೂಢಿಗಿಂತ ಕಾನೂನು ಪ್ರಧಾನವಾಗಿ, ಅದು ಜನರ ಸಾಮಾಜಿಕ ನಡೆವಳಿಕೆಗಳನ್ನು ನಿಯಂತ್ರಿಸುತ್ತದೆ.[]

ಕುಟುಂಬದ ನಡೆವಳಿಕೆ

[ಬದಲಾಯಿಸಿ]

ಕುಟುಂಬದ ನಡೆವಳಿಕೆ ಬದಲಾಗುತ್ತಿರುವುದು ಕೈಗಾರಿಕಾ ಸಮಾಜದ ಫಲ. ಚಾರಿತ್ರಿಕವಾಗಿ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಪ್ರಧಾನವಾಗಿದ್ದ ಕುಟುಂಬ ವ್ಯವಸ್ಥೆ ಕೈಗಾರಿಕಾಕರಣದಿಂದಾಗಿ ತನ್ನ ಮಹತ್ತ್ವವನ್ನು ಕಳೆದುಕೊಳ್ಳುತ್ತಿದೆ. ಕೌಟುಂಬಿಕ ಜೀವನ ಬಹಳ ಸರಳವಾಗುತ್ತಿರುವುದು ಒಂದು ಪ್ರವೃತ್ತಿ. ಬಂಧುತ್ವ ಭಾವನೆ ಕ್ಷೀಣವಾಗುತ್ತಿದೆ. ಅವಿಭಕ್ತ ಕುಟುಂಬ ಒಡೆದು ಚೆಲ್ಲಾಪಿಲ್ಲಿಯಾಗುತ್ತಿರುವುದರಿಂದ ಅದರ ಸದಸ್ಯರಲ್ಲಿ ಸದುದ್ದೇಶ ಸಂಬಂಧ ಅಸಾಧ್ಯವಾಗಿ ಪರಿಣಮಿಸುತ್ತದೆ. ಇಲ್ಲಿ ವಿವಾಹದ್ದು ಪ್ರಣಯ ದೃಷ್ಟಿ. ಈ ಅಂಶ ಇಂದಿನ ಚಲನಚಿತ್ರ, ನಿಯತಕಾಲಿಕಗಳು ಮತ್ತು ಸಾಹಿತ್ಯ ಸಂಗೀತಗಳಲ್ಲಿ ಪ್ರತಿಬಿಂಬಿತವಾಗಿರುವುದನ್ನು ಕಾಣಬಹುದು. ಮನೆಯಲ್ಲಿ ತಂದೆ ತಾಯಿ ವಿವಾಹದ ಬಗೆಗೆ ಅಭಿಪ್ರಾಯವನ್ನು ಸೂಚಿಸಬಹುದೇ ಹೊರತು ಕಡ್ಡಾಯ ಮಾಡುವಂತಿಲ್ಲ. ಈ ಬದಲಾದ ಸನ್ನಿವೇಶಗಳಲ್ಲಿ ಕನ್ಯಾ ಶುಲ್ಕ, ಈ ಬಳುವಳಿಗಳು ಕಾಲಸ್ಥಿತಿಗೆ ತಕ್ಕುವಲ್ಲ. ಈ ವೈವಾಹಿಕಜೀವನ ನಿರೀಕ್ಷಿತ ಮಟ್ಟ ಮುಟ್ಟಿಲ್ಲದಿದ್ದಲ್ಲಿ ಅದರ ವಿಸರ್ಜನೆಗೆ ಆರ್ಥಿಕ ಸಾಮಾಜಿಕ ಇಲ್ಲವೇ ಕಾನೂನಿನ ಬಾಧೆ ಇಲ್ಲ. ಕೈಗಾರಿಕಾ ಕ್ರಾಂತಿಯಿಂದ ಕುಟುಂಬ ರಚನೆ ಹಾಗೂ ಕಾರ್ಯಗಳಲ್ಲೂ ಬದಲಾವಣೆಗಳುಂಟಾಗಿವೆ. ವಿವಾಹದ ವಯಸ್ಸು ಹೆಚ್ಚಿರುವುದರ ಜೊತೆಗೆ ಕುಟುಂಬ ನಿಯಂತ್ರಣ ಈಗಿನ ಆದರ್ಶ. ಕೈಗಾರಿಕಾ ಸಮಾಜದಲ್ಲಿ ಬಹುಪತ್ನಿತ್ವ ಇಲ್ಲವೇ ಬಹುಪತಿತ್ವ ನಿಷೇಧಿತ. ಕುಟುಂಬಗಳು ಮೊಟಕಾಗುತ್ತಿರುವುದು ಆಧುನಿಕ ಕೈಗಾರಿಕಾ ಸಮಾಜದ ಇನ್ನೊಂದು ಫಲ. ಕುಟುಂಬದಲ್ಲಿ ಸ್ತ್ರೀಗೆ ಹೆಚ್ಚಿನ ಸ್ವಾತಂತ್ರ್ಯವಿದ್ದು ಪುರುಷನೊಡನೆ ಸರಿಸಮಾನಳಾಗಿ ದುಡಿಯುವ ಅವಕಾಶವಿದೆ. ಕೈಗಾರಿಕಾಕರಣ ಮತ್ತು ಬದಲಾದ ಕೌಟುಂಬಿಕ, ಬಂಧುತ್ವ ನಡವಳಿಕೆಗಳು ಜನರನ್ನು ಹಲವಾರು ನಿರ್ಬಂಧ ಮತ್ತು ಜವಾಬ್ದಾರಿಗಳಿಂದ ಮುಕ್ತಗೊಳಿಸಿವೆ. ಇದರಿಂದಾಗಿ ಕೈಗಾರಿಕಾ ಸಮಾಜಗಳಲ್ಲಿ ಸಾಮಾಜಿಕ ನಿಯಂತ್ರಣ ಕಡಿಮೆ. ಕುಟುಂಬದ ಸದಸ್ಯರಲ್ಲಿ ಹಿಂದೆ ಇದ್ದ ಪರಸ್ಪರ ಆರ್ಥಿಕ ಸಹಕಾರ ನಶಿಸುತ್ತಿರುವುದರಿಂದ ಸಮಾಜದಲ್ಲಿ ಕುಟುಂಬದ ಯಜಮಾನನ ಮೇಲೆ ಹೆಚ್ಚಿನ ಆರ್ಥಿಕ ಒತ್ತಡ ಬಿದ್ದು ಕುಟುಂಬದ ಹಲವಾರು ಆವಶ್ಯಕತೆಗಳನ್ನು ಪೂರೈಸಲು ಅವನು ಅಸಮರ್ಥನಾಗುವುದುಂಟು. ಇದರ ಜೊತೆಗೆ ದುಡಿಯುವ ಮಹಿಳೆಯ ಸ್ವತಂತ್ರ ಮನೋಭಾವ ಹಲವೊಮ್ಮೆ ಕುಟುಂಬದ ಅವ್ಯವಸ್ಥೆಗೆ ಕಾರಣವಾಗಿರುವುದೂ ಉಂಟು. ಕುಟುಂಬದಲ್ಲಿ ಗಂಡಹೆಂಡಿರಿಬ್ಬರೂ ದಿನದ ಹೆಚ್ಚಿನ ವೇಳೆ ಮನೆಯ ಹೊರಗೆ ದುಡಿಮೆಯಲ್ಲಿ ಕಳೆಯುವುದರಿಂದ ಮಕ್ಕಳ ಪಾಲನೆ ಪೋಷಣೆಗಳಿಗೆ ಮೊದಲಿನಷ್ಟು ಗಮನ ನೀಡುವುದಾಗದು. ಇದರಿಂದಾಗಿ ಬಾಲಾಪರಾಧವೇ ಮುಂತಾದ ಸಾಮಾಜಿಕ ಸಮಸ್ಯೆಗಳು ಉದ್ಭವಿಸುತ್ತವೆ. ಕುಟುಂಬಸಹಜವಾದ ಪ್ರೀತಿಯ ಬೆಸುಗೆ ಒಡೆಯುತ್ತಿರುವುದೊಂದು ಸಾಮಾನ್ಯ ಪ್ರವೃತ್ತಿ.

ಸಾಂಪ್ರದಾಯಿಕ ನಂಬಿಕೆಗಳು ಮತ್ತು ಧಾರ್ಮಿಕ ಸಂಸ್ಥ

[ಬದಲಾಯಿಸಿ]

ಕೈಗಾರಿಕಾಕರಣದಿಂದ ಸಾಂಪ್ರದಾಯಿಕ ನಂಬಿಕೆಗಳು ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆ ಆಗಿರುವ ಪ್ರಭಾವವೂ ಅಗಾಧವೇ. ಮತಸಂಸ್ಥೆಗಳ ಹಿಡಿತ ಮೊದಲಿನಷ್ಟಿಲ್ಲ. ಅನೇಕ ವೇಳೆ ಅದು ಕೇವಲ ಸಾಂಕೇತಿಕ. ಕೈಗಾರಿಕಾ ಸಮಾಜದ ವೇಗದ ಜೀವನದಿಂದ ಜನರಲ್ಲಿ ಹಲವಾರು ಆತಂಕಗಳಿಗೆ ಎಡೆಯುಂಟಾಗಿದೆ. ಜನರು ನೆಮ್ಮದಿ ಪಡೆಯಲು ಹೊಸ ರೀತಿಯ ಧಾರ್ಮಿಕ ಪಂಥಗಳನ್ನು ಸ್ಥಾಪಿಸಿಕೊಳ್ಳುತ್ತಿದ್ದಾರೆ. ಈ ವಿಧದ ಸಂಸ್ಥೆಗಳು ಬೇರೆ ಬೇರೆ ಆಚಾರ ವಿಚಾರಗಳಿಗೆ ಸೇರಿದ ಸಮಾಜದ ಜನರನ್ನು ಒಗ್ಗೂಡಿಸುವಲ್ಲಿ ಸ್ವಲ್ಪಮಟ್ಟಿಗೆ ಸಫಲವಾಗಿರುವುದನ್ನು ಕಾಣಬಹುದು.

ಉಲ್ಲೇಖಗಳು

[ಬದಲಾಯಿಸಿ]