ಕೈಗಾರಿಕಾ ವಾಸ್ತುಶಿಲ್ಪ

ವಿಕಿಪೀಡಿಯ ಇಂದ
Jump to navigation Jump to search

ಕಾರ್ಖಾನೆಗಳು, ಆಡಳಿತಕ್ಕೆ ಸಂಬಂಧಪಟ್ಟ ಕಟ್ಟಡಗಳು ಪ್ರಯೋಗಶಾಲೆ ಮುಂತಾದವುಗಳ ನಿರ್ಮಾಣಗಳಿಗೆ ಸಂಬಂಧಿಸಿದ ವಿಜ್ಞಾನ (ಇಂಡಸ್ಟ್ರಿಯಲ್ ಆರ್ಕಿಟೆಕ್ಚರ್).


ಸಾಮಾನ್ಯ ಬೆಳವಣಿಗೆ[ಬದಲಾಯಿಸಿ]

ವಾಸ್ತುಶಿಲ್ಪದ ದೃಷ್ಟಿಯಿಂದ ಕೈಗಾರಿಕಾ ಕಟ್ಟಡಗಳು ಮೂರು ರೀತಿಯ ಅವಸ್ಥೆಗಳನ್ನು ಈ ಕೆಳಕಂಡ ಕ್ರಮದಲ್ಲಿ ಪಡೆದಿವೆಯೆನ್ನಬಹುದು. ಜಲಶಕ್ತಿಯನ್ನು ಬಳಸುತ್ತಿದ್ದ ಕಾಲದಲ್ಲಿ ಮರದ ಮತ್ತು ಕಲ್ಲಿನ ಕಟ್ಟಡಗಳೂ ಉಗಿಶಕ್ತಿ ಬಳಕೆಗೆ ಬಂದಾಗ ಇಟ್ಟಿಗೆ ಮತ್ತು ಲೋಹಗಳನ್ನು ಉಪಯೋಗಿಸಿಕೊಂಡ ನಿರ್ಮಾಣಗಳೂ ವಿದ್ಯುಚ್ಛಕ್ತಿಯ ಕಾಲದಲ್ಲಿ ಉಕ್ಕನ್ನೊಳಗೊಂಡ ಭದ್ರಸಿಮೆಂಟ್ ಕಾಂಕ್ರೀಟಿನ ರಚನೆಗಳೂ ಬಳಕೆಗೆ ಬಂದುವು. 18ನೆಯ ಶತಮಾನದ ಅಂತ್ಯಭಾಗದಲ್ಲಿ ಕಟ್ಟಲಾದ ಗಿರಣಿಗಳು ಹೊರನೋಟಕ್ಕೆ ವಿದ್ಯಾ ಮಂದಿರಗಳಂತೆ ಕಾಣುತ್ತಿದ್ದುವು. ಎಷ್ಟೋ ವೇಳೆ ಕ್ಯುಪೋಲಾಗಳು ಸಾರ್ವಜನಿಕ ಕಟ್ಟಡಗಳಂತಿರುತ್ತಿದ್ದುವು. 19ನೆಯ ಶತಮಾನದಲ್ಲಿ ಕಾರ್ಖಾನೆಗಳು ಆಗಿನ ಕಾಲದ ಶೈಲಿ ಮಾದರಿಗಳಾದ ಗ್ರೀಕ್, ಗಾಥಿಕ್ ಮತ್ತು ಇಟಾಲಿಯನ್ ಭವನಗಳ ಶೈಲಿಗಳನ್ನು ಅನುಸರಿಸಿದುವು. ಆ ಗೃಹಗಳ ಮೇಲೆ ಇರುತ್ತಿದ್ದಂಥ ಗೋಪುರಗಳು ಮತ್ತಿತರ ವಿವರಗಳು ಈ ಕಾರ್ಖಾನೆಗಳ ಮೇಲೂ ಕಂಗೊಳಿಸಿದುವು. ಅದೇ ಶತಮಾನದ ಉತ್ತರಾರ್ಧದಲ್ಲಿ ಬಹುಪಾಲು ವಾಸ್ತುಶಿಲ್ಪಿಗಳು ತಮ್ಮ ಬುದ್ಧಿಚಾತುರ್ಯವನ್ನೆಲ್ಲ ಸಾರ್ವಜನಿಕ ಕಟ್ಟಡಗಳಿಗೆ ಮತ್ತು ರಾಜಗೃಹಗಳಿಗೆ ಮೀಸಲಾಗಿರಿಸಿ ಅಕಲಾತ್ಮಕವೆಂದು ತಿಳಿಯಲಾಗಿದ್ದ ಕಾರ್ಖಾನೆಗಳನ್ನು ಎಂಜಿನಿಯರರಿಗೆ ಬಿಟ್ಟುಬಿಟ್ಟಿದ್ದರು. ಎಂಜಿನಿಯರರು ಈ ಸಮಸ್ಯೆಯನ್ನು ಬಹಳ ರಚನಾತ್ಮಕವಾಗಿ ನಿಭಾಯಿಸಿ ಅಪ್ಪಟವಾದ ಮೌಲ್ಯಗಳುಳ್ಳ ಕಟ್ಟಡಗಳನ್ನು ರಚಿಸಿದರು. ಇವರು ಈ ಕಾರ್ಯದಲ್ಲಿ ಎಷ್ಟು ಕಸುವನ್ನು ವ್ಯಕ್ತಪಡಿಸಿದರೆಂದರೆ 20ನೆಯ ಶತಮಾನದ ಆರಂಭಕಾಲದಲ್ಲಿ ಕಾರ್ಯಪ್ರವೃತ್ತತೆಯ (ಫಂಕ್ಷನಲಿಸಂ) ಆಧಾರತತ್ತ್ವದ ಮೇಲೆ ಹೊಸ ವಾಸ್ತುಶಿಲ್ಪವೊಂದು ಉದ್ಭವವಾದಾಗ ಎಂಜಿನಿಯರರು ನಿಯೋಜಿಸಿದ ಕಟ್ಟಡಗಳೇ ಜಯಭೇರಿ ಹೊಡೆದುವು. ಅವು ವೈಜ್ಞಾನಿಕವಾಗಿಯೂ ತರ್ಕಸಮ್ಮತವಾಗಿಯೂ ಇದ್ದುವು. ಅವನ್ನು ನಿರ್ಮಿಸುವಲ್ಲಿ ಇಟ್ಟುಕೊಂಡಿದ್ದ ಉದ್ದೇಶಗಳನ್ನು ಅವು ನೇರವಾಗಿ ಅಭಿವ್ಯಕ್ತಿಗೊಳಿಸುತ್ತಿದ್ದವು. ಅಂಥ ಕಟ್ಟಡಗಳಲ್ಲಿ ಅಸಂಬದ್ಧವಾದ ಅಭಿರುಚಿಗಾಗಿ ನಿರ್ಮಾಣ ವಸ್ತುಗಳನ್ನು ವ್ಯಯ ಮಾಡುತ್ತಿರಲಿಲ್ಲ. ಷಿಕಾಗೋದ ಇಲಿನಾಯ್‍ನಲ್ಲಿ ಕಟ್ಟಲಾದ ಧಾನ್ಯದ ಎತ್ತುಗಗಳು (ಗ್ರೇನ್ ಎಲಿವೇಟರ್ಸ್), ಕಾರ್ಖಾನೆಗಳು ಮತ್ತು ಕಛೇರಿಗಳು ಉತ್ಕøಷ್ಟವಾದ ರಚನೆಗಳೆಂದು ಘೋಷಿಸಲ್ಪಟ್ಟವು. 1925ರ ಹೊತ್ತಿಗೆ ಒಂದು ಹೊಸದಾದ ವಾಸ್ತು ಶಿಲ್ಪದ ಶೈಲಿಯೇ ಹುಟ್ಟಿಕೊಂಡಿತ್ತು. ಇದಕ್ಕೆ ಆಧುನಿಕ ಶೈಲಿ ಅಥವಾ ಅಂತರರಾಷ್ಟ್ರೀಯ ಶೈಲಿ ಎಂದು ಹೆಸರು ಬಂದಿತು. ಮಧ್ಯಯುಗಗಳ ಮುಕ್ತಾಯದಿಂದೀಚೆಗೆ ಪಾಶ್ಚಾತ್ಯ ಸಂಸ್ಕøತಿಯಲ್ಲಿ ಹಳೆಯ ಸಂಪ್ರದಾಯದಿಂದ ಸಂಪೂರ್ಣವಾಗಿ ವಿಮುಕ್ತಿಗೊಂಡಂಥ ಯಾವುದೂ ಕಂಡುಬಂದಿರಲಿಲ್ಲ. ಆದ್ದರಿಂದ ಕೈಗಾರಿಕಾ ಕ್ರಾಂತಿಯಿಂದಾದ ತಡವಾದ ಆದರೆ ವಿಲಕ್ಷಣವಾದ ಪರಿಣಾಮವೆಂದರೆ ಒಂದು ಹೊಸಕಲೆಯ ಉಗಮ. ಇದನ್ನು ಅರಿಯಬೇಕಾದರೆ ಜರ್ಮನಿಯ ಡುಸೆಲ್ ಡಾರ್ಫ್‍ನಲ್ಲಿ 1911ರಲ್ಲಿ ಕಟ್ಟಲಾದ ಪೀಟರ್ ಬೆಹ್ರಿನ್ ಎಂಬಾತನ ಕೊಳವೆ ಕಾರ್ಖಾನೆಯನ್ನೂ ಆತನೇ 1920-24ರಲ್ಲಿ ಹೋಸ್ಟ್ ಆಮ್ ಮೇಯ್ನ್‍ನಲ್ಲಿ ಕಟ್ಟಿಸಿದ ರಾಸಾಯನಿಕ ಕಾರ್ಖಾನೆಯನ್ನು 1912ರಲ್ಲಿ ಹ್ಯಾನ್ಸ್ ಫೋಲ್‍ಜಿûಗ್ ಎಂಬಾತ ಪೋಲೆಂಡ್‍ನ ಲ್ಯೂಬಾನ್‍ನಲ್ಲಿ ಕಟ್ಟಿಸಿದ ರಾಸಾಯನಿಕ ಕಾರ್ಖಾನೆಯನ್ನೂ 1916ರಲ್ಲಿ ಆಗಸ್ಟ್ ಪೆರಿ ಎಂಬಾತ ಪ್ಯಾರಿಸಿನಲ್ಲಿ ಕಟ್ಟಿಸಿದ ಬಟ್ಟೆಯ ಕಾರ್ಖಾನೆಯನ್ನು ಗಮನಿಸಬೇಕು. ಈ ಬಟ್ಟೆಯ ಕಾರ್ಖಾನೆಗೆ ಮನೋಹರವಾದ ಉಕ್ಕನ್ನೊಳಗೊಂಡ ಕಾಂಕ್ರೀಟಿನ ಕಮಾನುಗಳನ್ನು ಕೊಡಲಾಗಿತ್ತು. ಇವೆಲ್ಲಾ ಒಂದು ವೀರ್ಯವತ್ತಾದ ಅಭಿವ್ಯಕ್ತಿಯನ್ನು ಪ್ರತಿಪಾದಿಸಿದುವು. ಎಸ್. ವಾನ್ ರ್ಯಾವೆಸ್ಟಿನ್ ಎಂಬಾತ ಡಚ್ ರೈಲ್ವೆಗಳಿಗಾಗಿ ಕಟ್ಟಿಸಿದ ಕಟ್ಟಡಗಳಲ್ಲಿ ಸ್ಫುಟತ್ವ, ಲಘುತ್ವ (ಲೈಟ್‍ನೆಸ್) ಇವುಗಳ ಸೂಕ್ಷ್ಮ ಬಳಕೆ ಮತ್ತು ಸಮ್ಮಿಳನವನ್ನು ಕಾಣಬಹುದು. ಇದರ ಆಕರ್ಷಣೆಯನ್ನು 19ನೆಯ ಶತಮಾನದಲ್ಲೇ ಕೆಲವು ಸೂಕ್ಷ್ಮಗ್ರಾಹಿ ವ್ಯಕ್ತಿಗಳು ಕಂಡುಕೊಂಡಿದ್ದರು. ಈ ಶೈಲಿಯ ಗಾತ್ರ ಮತ್ತು ಅಳತೆಗಳ ಅಪರಿಚಿತತ್ವ ಮೊದಲನೆಯ ಮಹಾಯುದ್ಧದ ಅನಂತರ ಕಡಿಮೆಯಾಯಿತು. ಉತ್ತಮವಾದ ಕಟ್ಟಡಗಳ ಸೌಂದರ್ಯಗುಣ ವಿಶೇಷಗಳನ್ನು ಬಲವಂತವಾಗಿ ಪ್ರಚುರಪಡಿಸಲಾಯಿತು. ನ್ಯೂಕ್ಯಾಸಲ್ ಹತ್ತಿರದಲ್ಲಿರುವ ಡನ್ಸ್ ಟನ್ನಿನಲ್ಲಿ ಕಟ್ಟಿರುವ ಮರ್ಸ್ ಮತ್ತು ಮ್ಯಾಕ್‍ಕ್ಲೆಲ್ಲಾನ್‍ರ ವಿದ್ಯುದುತ್ಪಾದನ ಕೇಂದ್ರಕ್ಕೆ ಉಕ್ಕಿನ ಹಂದರವೂ ಗಾಜಿನ ಮರೆಗೋಡೆಗಳೂ ಇವೆ. ಪ್ರಪಂಚದಾದ್ಯಂತ ಸಾವಿರಗಟ್ಟಲೆ ಕಟ್ಟಿರುವ ಉತ್ತಮವಾದ ಕೈಗಾರಿಕಾ ಕಟ್ಟಡಗಳಲ್ಲಿ ಕೇವಲ ಕೆಲವನ್ನು ಮಾತ್ರ ಹೆಸರಿಸಲು ಸಾಧ್ಯ. ಆದಾಗ್ಯೂ ಎಷ್ಟೋ ಕೆಟ್ಟ ನಿಯೋಜನೆಯ ಕೈಗಾರಿಕಾ ಕಟ್ಟಡಗಳೂ ನಿರ್ಮಿಸಲ್ಪಟ್ಟವು. ಇವುಗಳಲ್ಲಿ ರೇಖೆಗಳು ಮತ್ತು ಮಟ್ಟಕ್ಷೇತ್ರಗಳಿಗೆ (ಪ್ಲೇನ್ಸ್) ಬದಲಾಗಿ ವಸ್ತುರಾಶಿಗೇ (ಮಾಸ್) ಆದ್ಯತೆ ಕೊಡಲಾಗಿತ್ತು. ಈ ಕಟ್ಟಡಗಳು ಸರಳತೆಯ ಸೋಗನ್ನು ಧರಿಸಿದ್ದು, ಸೌಂದರ್ಯಸಾಧನೆಗಾಗಿ ಸರಿಯಾದ ಮಾರ್ಗದರ್ಶನವಿಲ್ಲದ ಪ್ರಯತ್ನವನ್ನು ಮಾಡಿ, ಸಂಪ್ರದಾಯಕ್ಕೆ ಜೋತುಬಿದ್ದಿದ್ದವು. ಎಲ್ಲೆಲ್ಲೂ ಜಾರ್ಜಿಯನ್ ಅಥವಾ ಟ್ಯೂಡರ್ ಮುಂಭಾಗಗಳುಳ್ಳ ಹಾಸ್ಯಾಸ್ಪದವಾದ ಕಾರ್ಖಾನೆಗಳನ್ನು ಕಾಣಬಹುದಾಗಿತ್ತು. [೧]

ಲೋಹ ನಿರ್ಮಾಣಗಳು[ಬದಲಾಯಿಸಿ]

18ನೆಯ ಶತಮಾನದ ಕೊನೆಯ ವೇಳೆಗೆ, ಕಂಬ ಮತ್ತು ತೊಲೆಗಳಿಗೆ ಮರದ ಬದಲು ಕಬ್ಬಿಣದ ಬಳಕೆ ಪ್ರಾರಂಭವಾಯಿತು. ಇಂಗ್ಲೆಂಡ್ ನ ಸ್ಯಾಲ್‍ಫರ್ಡಿನಲ್ಲಿ 1801ರಲ್ಲಿ ಕಟ್ಟಲಾದ ಏಳಂತಸ್ತಿನ ಅಗ್ನಿ ನಿರೋಧಕ ಗಿರಣಿ ಇದಕ್ಕೆ ಉತ್ತಮ ಉದಾಹರಣೆ. ಈ ಕಟ್ಟಡದ ಒಳಭಾಗದಲ್ಲಿ 9-14 ಅಂತರದಲ್ಲಿರುವ ಕಂಬಗಳ ಒಂದು ಅಪಾರಸಮೂಹವೇ ಇದೆ. 1853ರಲ್ಲಿ ಇಂಗ್ಲೆಂಡಿನ ಸಾಲ್ವೇರ್‍ನಲ್ಲಿ ಸರ್. ವಿಲಿಯಮ್ ಫಿಯರ್ ಬೆಯರ್ನ್ ಎಂಬ ಎಂಜಿನಿಯರ್ ಗಿರಣಿ ಕಟ್ಟಡಗಳನ್ನು ಕಟ್ಟಿದ. ಅರ್ಧ ಶತಮಾನದ ಅನಂತರ ಕಟ್ಟಡಗಳ ಗಾತ್ರದ ಪ್ರಗತಿ ಎಷ್ಟಾಗಿತ್ತೆಂಬುದು ಇವುಗಳಿಂದ ಅರಿವಾಗುತ್ತದೆ. ಇಂಥ ಒಂದು ಕಟ್ಟಡದ ಮೇಲಂತಸ್ತು 550'ಘಿ 50' ಇದರ ಒಳಗಡೆ ಯಂತ್ರಗಳನ್ನು ಅತ್ಯಂತ ದಕ್ಷವಾಗಿ ಜೋಡಣೆ ಮಾಡಬಹುದು. ಈ ಕಟ್ಟಡಗಳಲ್ಲಿ ತೂಕಗಳನ್ನು ಹೊರಬಲ್ಲ ಕಲ್ಲು ಅಥವಾ ಇಟ್ಟಿಗೆಗೋಡೆಗಳ ಹೊರ ಆವರಣಗಳಿರುತ್ತಿದ್ದುವು. ಸಾಮಾನ್ಯ ರೀತಿಯ ಕಟ್ಟಡವೇ ಇಲ್ಲದೆ ತೂಕವನ್ನು ಹೊರಬಲ್ಲ ಎಲ್ಲ ಭಾಗಗಳನ್ನೂ ಬರಿಯ ಲೋಹದಲ್ಲೇ ನಿರ್ಮಿಸಲಾದ ಮೊದಲ ಕಾರ್ಖಾನೆಯೆಂದರೆ ಮೀನಿಯರ್ ಚಾಕೊಲೇಟ್ ಕಾರ್ಖಾನೆ. ಇದನ್ನು ಫ್ರಾನ್ಸ್‍ನ ನಾಯಿಸೀಲ್‍ನಲ್ಲಿ 1871ರಲ್ಲಿ ಕಟ್ಟಲಾಯಿತು.ಸಂಯುಕ್ತ ಸಂಸ್ಥಾನಗಳ ಜೇಮ್ಸ್ ಬೋಗಾರ್ಡನ್ ಎಂಬಾತ ಕಬ್ಬಿಣದ ಹಂದರಗಳುಳ್ಳ ಅತಿ ಜಾಣ್ಮೆಯ ನಿರ್ಮಾಣ ವ್ಯವಸ್ಥೆಗಳನ್ನು 1848ರಿಂದ ನಿಯೋಜಿಸತೊಡಗಿದ. ಉಕ್ಕನ್ನು ರಚಿಸುವಲ್ಲಿ ಬೆಸಿಮರ್ ವಿಧಾನವನ್ನು ಕಂಡುಹಿಡಿದ ಮೇಲೆ ಉಕ್ಕಿನ ಪೂರೈಕೆ ಅಧಿಕವಾಯಿತು. ಉಕ್ಕು ಕ್ರಮೇಣ ಕಬ್ಬಿಣದ ಸ್ಥಾನವನ್ನು ಆಕ್ರಮಿಸಿತು. ಇದರಿಂದಾಗಿ ಅಗಲವಾದ ಕೋಣೆಗಳನ್ನೂ ದೊಡ್ಡದಾದ ಕಿಟಿಕಿಗಳನ್ನೂ ಕೊಡಲು ಸಾಧ್ಯವಾಯಿತು. ಸೇತುವೆಗಳ ಅಗಲವಾದ ಅಂತರಗಳಿಗೆ, ರೈಲುಷೆಡ್ಡುಗಳಿಗೆ ಮತ್ತು ವಸ್ತುಪ್ರದರ್ಶನದ ಅಂಗಳಗಳಿಗೆ ಲೋಹದ ಆಧಾರಗಳ ಉಪಯೋಗ 19ನೆಯ ಶತಮಾನದ ಶಿಲ್ಪವಿಜ್ಞಾನದಲ್ಲಿ ಅತ್ಯಂತ ಗಮನಾರ್ಹವಾದ ಬೆಳೆವಣಿಗೆ. 1860ರ ಹೊತ್ತಿಗೆ 200 ಅಂತರಗಳನ್ನು ಸುಲಭವಾಗಿ ಸಾಧಿಸಿ ಆ ಶತಮಾನದ ಕೊನೆಯ ವೇಳೆಗೆ 300 ಅಂತರಗಳನ್ನೂ ಬಳಸತೊಡಗಿದರು. ಇತಿಹಾಸದಲ್ಲಿ ಕಲ್ಲು ಕಟ್ಟಡವೇ ಆಗಲಿ ಮರವೇ ಆಗಲಿ 80'ಗಿಂತ ಜಾಸ್ತಿ ಅಂತರವನ್ನು ಸಾಧಿಸಿರಲಿಲ್ಲ. ಈ ಸಾಧನೆಗಳು 20ನೆಯ ಶತಮಾನದ ವರೆಗೆ ಕೈಗಾರಿಕಾ ಕಟ್ಟಡಗಳ ಮೇಲೆ ಹೆಚ್ಚು ಪ್ರಭಾವವನ್ನು ಬೀರಲಿಲ್ಲ. ಇಷ್ಟರಲ್ಲಿ ಒಂದು ಹೊಸ ನಿರ್ಮಾಣಮಾಧ್ಯಮವನ್ನು ಕಂಡು ಹಿಡಿಯಲಾಯಿತು. ಕಾಂಕ್ರೀಟನ್ನೂ ಹೆಚ್ಚು ಎಳೆತ ಶಕ್ತಿಯ ಉಕ್ಕನ್ನೂ ಒಟ್ಟಿಗೆ ಸೇರಿಸಿ ಉಪಯೋಗಿಸುವುದೇ ಆ ಮಾಧ್ಯಮ. 1860ರಲ್ಲಿ ಪ್ರಾರಂಭಿಸಿ ಅನೇಕ ವರ್ಷಗಳ ಕಾಲ ಪ್ರಯೋಗಗಳನ್ನು ನಡೆಸಿದ ಅನಂತರ ಎಂಜಿನಿಯರುಗಳಲ್ಲಿ ಸಾಕಷ್ಟು ವಿಶ್ವಾಸ ಹುಟ್ಟಿ ಆ ಶತಮಾನದ ಮುಕ್ತಾಯದ ವೇಳೆಗೆ ಈ ಮಾಧ್ಯಮದ ವಿಶಾಲ ಉಪಯೋಗ ಪ್ರಾರಂಭವಾಯಿತು. ಮೊದಲ ಮಹಾಯುದ್ಧದ ಅನಂತರ ಸಾಂಪ್ರದಾಯಿಕವಾದ ಕಲ್ಲು ಅಥವಾ ಇಟ್ಟಿಗೆ ರಚನೆಗಳನ್ನು ದೊಡ್ಡ ಕಟ್ಟಡಗಳಿಗೆ ಉಪಯೋಗಿಸುವುದು ಬಹಳ ಕಡಿಮೆಯಾಯಿತು.[೨]

20ನೆಯ ಶತಮಾನದ ಕೈಗಾರಿಕಾ ವಾಸ್ತುಶಿಲ್ಪ[ಬದಲಾಯಿಸಿ]

1900ರ ಅನಂತರ ಕೈಗಾರಿಕಾ ಕಟ್ಟಡಗಳಲ್ಲಿ ನಾಲ್ಕು ಗಮನಾರ್ಹವಾದ ಬೆಳೆವಣಿಗೆಗಳಾದವು: (1) ಅಗಾಧವಾದ ಒಂದಂತಸ್ತಿನ ನಕ್ಷೆಗಳು; (2) 40'-80' ಅಂತರಗಳಿಗೆ ಹಗುರವಾದ ಸೂರಿನ ಆಧಾರಗಳನ್ನು ಉಪಯೋಗಿಸುವುದು; (3) ಹೊರಗಡೆಯ ಮರೆಮಾಡುವ ಕಲ್ಲು ಅಥವಾ ಇಟ್ಟಿಗೆ ಕಟ್ಟಡಕ್ಕೆ ಬದಲು ಗಾಜಿನ ಆವರಣವನ್ನು ಕೊಡುವುದು; ಇನ್ನೂ ಕೆಲವು ವಿಧಾನಗಳಲ್ಲಿ ಆವರಣಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿಬಿಡುವುದು; (4) ಕೈಗಾರಿಕಾ ಕಟ್ಟಡಗಳ ನಿರ್ಮಾಣ ಸ್ಥಳಗಳನ್ನು ಪಟ್ಟಣಕ್ಕೆ ಬದಲು ಊರಿನಿಂದಾಚೆಯ ಪ್ರದೇಶದಲ್ಲಿ ಆಯ್ಕೆ ಮಾಡುವುದು. ಇದಕ್ಕೆ ಮುಖ್ಯ ಕಾರಣ, ಭೂಮಿಯ ಕಡಿಮೆ ಬೆಲೆ ಮತ್ತು ರಸ್ತೆ ಸಾಗಾಣಿಕೆ ಸೌಲಭ್ಯಗಳು ಹೆಚ್ಚಾದುದು.ಒಂದು ಅಂತಸ್ತಿನ ಕಾರ್ಯಾಗಾರಗಳು: ಉತ್ಪಾದನೆಯ ವಿಭಾಗಗಳಲ್ಲಾದ ಮಹತ್ತರ ಬದಲಾವಣೆಗಳಿಂದಾಗಿ ಸ್ವಯಂಚಾಲಿತ ವಾಹನಗಳ ಭಾಗಗಳನ್ನು ಉತ್ಪಾದಿಸುವ ಕಾರ್ಯಾಗಾರವನ್ನು ನಿರ್ಮಿಸಲು ಸಾಧ್ಯವಾಯಿತು. ಒಂದು ಜೋಡಣೆಯ ಸಾಲನ್ನು ನಿರ್ಮಿಸಿ, ಅದರಲ್ಲಿ ಸಾಗುಪಟ್ಟಿಗಳ ಸಹಾಯದಿಂದ ನಿಖರವಾಗಿ ಯಂತ್ರಕಾರ್ಯಕ್ಕೊಳಪಡಿಸಿದ ಬಿಡಿಭಾಗಗಳನ್ನು ಸೇರಿಸುತ್ತ ಹೋಗಿ, ಕಡೆಗೆ ಆ ಸಾಲಿನಿಂದಾಚೆಗೆ ಲೆಕ್ಕವಿಲ್ಲದಷ್ಟು ಸ್ವಯಂಚಾಲಿತ ವಾಹನಗಳು ಹೊರ ಹೊರಡುವಂತೆ ಮಾಡುವುದು ಇಲ್ಲಿನ ಮುಖ್ಯ ತತ್ತ್ವ. ಇದಕ್ಕೆ ಬಹು ವಿಶಾಲವಾದ ಜಾಗ ಬೇಕಾಗುತ್ತದೆ. ಒಂದು ಅಂತಸ್ತು ಇದಕ್ಕೆ ಬಹಳ ಸೂಕ್ತವಾದುದು. ಮಿಚಿಗನ್ನಿನ ಡೆಟ್ರಾಯಿಟ್‍ನಲ್ಲಿನ ಕಾರ್ಖಾನೆ ಮತ್ತು ಇಟಲಿಯ ಟ್ಯೂರಿನ್‍ನಲ್ಲಿ ಕಟ್ಟಿದ ಮ್ಯಾಟೆಟ್ರೂಕೋರವರ ಫಿಯಟ್ ಕಾರ್ಖಾನೆ (1922) ಇಂಥ ನಿರ್ಮಾಣಗಳ ಮೊದಲ ಉದಾಹರಣೆಗಳು. ಸೂರನ್ನು ಮತ್ತು ಗೋಡೆಗಳ ಆಧಾರಗಳನ್ನು ಕಡಿಮೆ ಮಾಡಿದುದು: ಕಾರ್ಖಾನೆಗಳ ಕಿಟಕಿಗಳು ಮೊದಲಿನಿಂದಲೂ ವಿಪುಲವಾದ ಗಾತ್ರದವಾಗಿದ್ದರೂ ಮುಖ್ಯ ಕಟ್ಟಡದಿಂದ ಬೇರೆಯಾಗಿರುವಂಥ ಗಾಜಿನ ಗೋಡೆ ಬರುವುದು ಬಹಳ ನಿಧಾನವಾಯಿತು. 19ನೆಯ ಶತಮಾನದ ಬಹುಪಾಲು ಕಾರ್ಖಾನೆಗಳು ದೀರ್ಘವಾದ, ಗಡುಸಾದ ವಿಭಾಗಗಳಾಗಿದ್ದು, ಅವು ಮೂರು ನಾಲ್ಕು ಅಂತಸ್ತಿನವಾಗಿದ್ದು, ಮೇಲಂತಸ್ತಿಗೆ ಬೆಳಕು ಗವಾಕ್ಷಗಳಿಂದ ಬರುವಂತಿದ್ದು, ಇಟ್ಟಿಗೆಯ ಗೋಡೆಗಳನ್ನು ಅಲ್ಲಲ್ಲೇ ಕ್ರಮವಾದ ದೂರಗಳಲ್ಲಿ ಕೊರೆದು ಕಿಟಕಿಗಳನ್ನು ಏಕತಾನೀಯವಾಗಿ ರಚಿಸುತ್ತಿದ್ದರು. ಈ ಶತಮಾನದ ಕೊನೆಯ ಹೊತ್ತಿಗೆ, ಮಧ್ಯದ ಆಧಾರಗಳಿಗೆ ಮಾತ್ರ ಉಪಯೋಗಿಸಲ್ಪಡುತ್ತಿದ್ದ ಕಂಬಗಳನ್ನು ಹೊರಗೋಡೆಗಳಿಗೂ ಉಪಯೋಗಿಸಲಾರಂಭಿಸಿದರು. ಈ ಹೊರಗೋಡೆ ತೆಳುವಾದ, ಪಾರದರ್ಶಕವಾದ, ಗಾಳಿಯಿಂದ ಮಾತ್ರ ರಕ್ಷಣೆಯನ್ನು ನೀಡುವ ಒಂದು ಪರದೆಯಾಗಿ ಮಾರ್ಪಟ್ಟಿತು. ಕಟ್ಟಡದ ಹಂದರ ಕಬ್ಬಿಣ ಅಥವಾ ಉಕ್ಕನ್ನೊಳಗೊಂಡ ಕಾಂಕ್ರೀಟಿನದಾಗಿರುತ್ತಿದ್ದು, ಇದನ್ನು ಷಿಕಾಗೋದ ಮಾಂಟ್ಗಮರಿ ವಾರ್ಡ್ (1909) ಮತ್ತು ಜರ್ಮನಿಯ ಆಲ್‍ಫೆಲ್ಡ್‍ನಲ್ಲಿ ವಾಲ್ಟರ್ ಗ್ರೋಪಿಯಸ್ ಮತ್ತು ಅಡೋಲ್ಫ್ ಮೆಯರ್‍ರವರು ಕಟ್ಟಿಸಿದ (1911) ಆಡಳಿತ ಗೃಹಗಳಲ್ಲಿ ಚೆನ್ನಾಗಿ ಗಮನಿಸಬಹುದು. ಇಂಥ ಕಟ್ಟಡಗಳಲ್ಲಿ ಗಾಜು ಮತ್ತು ಗೋಡೆಗಳ ಪರಿಮಾಣ ಮೂರನೆಯ ಒಂದು ಭಾಗದಿಂದ 10ನೆಯ 9 ಭಾಗಕ್ಕೆ ಏರಿಸಲ್ಪಟ್ಟಿದ್ದಿತು. ಇವುಗಳಲ್ಲಿ ಆಧರಿಸುವ ಕಂಬಗಳನ್ನು ಗೋಡೆಗಳ ಮಟ್ಟಕ್ಷೇತ್ರದಿಂದ ಹಿಂದಕ್ಕೆ ಸರಿಸಿ, ಕಟ್ಟಡದ ಸುತ್ತಲೂ ಗಾಜಿನ ರಚನೆಯನ್ನು ಹಾಕಿರುತ್ತಾರೆ. 20ನೆಯ ಶತಮಾನದ ಮಧ್ಯಭಾಗದವರೆಗಿನ ಈ ಸರಣಿಯ ಕೊನೆಯ ಘಟ್ಟವೆಂದರೆ ಟೆಕ್ಸಾಸ್‍ನ ಕಾರ್ಪಸ್ ಕ್ರಿಸ್ಟಿಯಲ್ಲಿರುವ ಬ್ಲೂ ಬಾನೆಟ್ ಕಾರ್ಯಾಗಾರ. ಇದರಲ್ಲಿ ತಯಾರಿಕಾ ವಿಧಾನದ ಕೆಲವು ಘಟ್ಟಗಳಿಗೆ ಹೊರಗಡೆಯ ಮರೆಗೋಡೆಯಾಗಲೀ ಸೂರಾಗಲೀ ಅಲ್ಲಿಯ ವಾತಾವರಣಕ್ಕೆ ಬೇಕಿಲ್ಲವೆಂಬ ಅಂಶ ಗಮನಾರ್ಹವಾದುದು. ಒಂದು ದೃಷ್ಟಿಯಿಂದ ಪರಿಗಣಿಸಿದರೆ, ಯಂತ್ರಗಳೇ ಒಟ್ಟುಗೂಡಿ ಆ ಕಟ್ಟಡವಾಗಿವೆ ಎನ್ನಬಹುದು.


ಜಾಗ ವಿತರಣೆ[ಬದಲಾಯಿಸಿ]

ಕೈಗಾರಿಕಾ ಕ್ರಾಂತಿಯ ಮೊದಲ ದಿನಗಳಲ್ಲಿ ಕಾರ್ಖಾನೆಗಳನ್ನು ನದಿಗಳ ದಡಗಳಲ್ಲೋ ಬಂದರುಗಳಲ್ಲೋ ನಿರ್ಮಿಸುತ್ತಿದ್ದರು. ಇದರಿಂದಾಗಿ ಕಾರ್ಖಾನೆಗಳು ಉಗಿದ ಬೂದಿಯ ಪಟ್ಟೆ ಸಮುದ್ರತೀರಗಳ ಮೇಲೆ ಹರಡುತ್ತಿತ್ತು. ಶಕ್ತಿಯ ಉತ್ಪಾದನೆಗೆ ಕಲ್ಲಿದ್ದಲು ಮತ್ತು ರೈಲುಮಾರ್ಗಗಳ ಬೆಳೆವಣಿಗೆ ಇವುಗಳಿಂದಾಗಿ ಹೊಸ ಹೊಸ ಜಾಗಗಳು ಬೆಳಕಿಗೆ ಬಂದುವು. ಕಟ್ಟಕಡೆಗೆ ವಿದ್ಯುಚ್ಛಕ್ತಿಯ ದಕ್ಷ ಸಾಗಾಣಿಕೆ ಮತ್ತು ಮೋಟಾರ್ ವಾಹನಗಳ ತಯಾರಿಕೆಗಳಿಂದಾಗಿ ಕೈಗಾರಿಕೋದ್ಯಮಿ ಹೆಚ್ಚು ಭೌಗೋಳಿಕ ಸ್ವಾತಂತ್ರ್ಯವನ್ನು ಸಾಧಿಸಲು ಸಾಧ್ಯವಾಯಿತು. ಕಚ್ಚಾವಸ್ತುಗಳನ್ನೂ ಸಿದ್ಧಪಡಿಸಿದ ಪದಾರ್ಥಗಳನ್ನೂ ಟ್ರಕ್ಕುಗಳಿಂದ ಸಾಗಿಸುವ ಅನುಕೂಲವಿದ್ದು, ಕಾರ್ಮಿಕರನ್ನು ಸಾಕಷ್ಟು ದೂರಗಳಿಂದ ಬಸ್ಸುಗಳಲ್ಲಿ ಅಥವಾ ಕಾರುಗಳಲ್ಲಿ ಕರೆತರುವ ಸೌಲಭ್ಯಗಳಿದ್ದರೆ ಕಾರ್ಖಾನೆಗಳನ್ನು ನಗರಗಳ ಆಚೆ ಇರುವ ಕಡಿಮೆ ಬೆಲೆಯ ಜಾಗಗಳ ಮೇಲೆ ಸ್ಥಾಪಿಸಬಹುದು. ಕೆಲವು ಸಂದರ್ಭಗಳಲ್ಲಿ ಈ ಕಾರಣಗಳಿಂದಲೇ ಮನೆಗಳು, ಸಂಗ್ರಹಣಗೃಹಗಳು ಮತ್ತು ಸಾಮಾಜಿಕ ಕಟ್ಟಡಗಳು ಇತ್ಯಾದಿ ಇರುವಂಥ ಸ್ವತಂತ್ರವಾದ ಕೈಗಾರಿಕಾ ನಗರಗಳೇ ಹೊಸದಾಗಿ ನಿರ್ಮಿತವಾದುವು. ಈ ಅಭ್ಯಾಸವನ್ನು ಎರಡನೆಯ ಮಹಾಯುದ್ಧದ ಸಮಯದಲ್ಲಿ ತ್ವರಿತಗೊಳಿಸಲಾಯಿತು. ಏಕೆಂದರೆ ಒಂದೇ ಕಡೆ ಒತ್ತೊತ್ತಾಗಿ ಬೆಳೆದಿರುವ ಕೈಗಾರಿಕಾ ಪ್ರದೇಶ ದೀರ್ಘವ್ಯಾಪ್ತಿಯ ಬಾಂಬರುಗಳ ಹೊಡೆತಕ್ಕೆ ಸಿಕ್ಕಿ ಅಪಾರ ನಷ್ಟ ಉಂಟಾಗುವುದೆಂದೂ ರಾಡಾರ್ ಮುಂದೆ ಮರೆಮಾಚುವ ಯುಕ್ತಿ ನಿರುಪಯುಕ್ತವಾದದ್ದೆಂದೂ ಹೀಗಾಗಿ ಬೇರೆ ಬೇರೆ ಕಡೆಗೆ ಹಂಚಿ ಕೈಗಾರಿಕಾ ಕಟ್ಟಡಗಳನ್ನು ನಿರ್ಮಿಸುವುದೇ ಅತ್ಯಂತ ಸಮರ್ಪಕವಾದ ರಕ್ಷಣಾ ವಿಧಾನವೆಂದೂ ತಿಳಿಯಬಂದಿತು. ಈ ವಿಧಾನದ ಮುಖ್ಯ ಉದಾಹರಣೆ ಎಂದರೆ ಲಾಸ್ ಅಲಮಾಸ್‍ನಲ್ಲಿರುವ ಪರಮಾಣುಶಕ್ತಿ ಕಾರ್ಯಾಗಾರ. ಇದನ್ನು ರಕ್ಷಣೆ ಮತ್ತು ಗೋಪ್ಯತೆಗಳ ದೃಷ್ಟಿಯಿಂದ ರಚಿಸಲಾಗಿದೆ.

ಭಾರತದಲ್ಲಿ ಕೈಗಾರಿಕಾ ನಿರ್ಮಾಣ ವಿಜ್ಞಾನ[ಬದಲಾಯಿಸಿ]

ಸಂಯುಕ್ತ ರಾಷ್ಟ್ರಸಂಸ್ಥೆಯ ತಾಂತ್ರಿಕ ಸಹಾಯತಜ್ಞರಾದ ಡಾ|| ವಿಲಿಯಂ ಆರ್. ಪಾಬ್ಸ್‍ಟ್‍ರವರ ಪ್ರಕಾರ ಭಾರತದೇಶದ ಸದ್ಯದ ಯಂತ್ರಸ್ಥಾವರಗಳು ಮತ್ತು ಸಲಕರಣೆಗಳಿಂದಲೇ ಇಲ್ಲಿಯ ಉತ್ಪಾದನಾ ವಸ್ತುಗಳ ಮೊತ್ತವನ್ನು 20%-50%ರಷ್ಟು ಹೆಚ್ಚಿಸಬಹುದು. ಇದನ್ನು ಸಾಧಿಸಬೇಕಾದರೆ ಯಂತ್ರಗಳು ಮತ್ತು ಸೌಲಭ್ಯಗಳ ನಡುವೆ ಸೂಕ್ತವಾದ ಸಮತೋಲವನ್ನು ಕಲ್ಪಿಸಬೇಕು, ಉತ್ಪನ್ನಗಳು ರದ್ದಿಗಳಾಗಿ (ಸ್ಕ್ರೇಪ್ಸ್) ಹಿಂತಿರುಗಿಸಲ್ಪಡುವುದನ್ನು ತಪ್ಪಿಸಬೇಕು, ನಿಶ್ಚಿತಮಟ್ಟವನ್ನು ನಮೂದಿಸಿ ಅದನ್ನು ಸರಿಯಾಗಿ ಸಾಧಿಸಬೇಕು ಮತ್ತು ಅನುಕೂಲತಮ (ಆಪ್ಟಿಮಂ) ಪ್ರಮಾಣದ ವಸ್ತುಗಳನ್ನು ಉಪಯೋಗಿಸಿಕೊಳ್ಳಬೇಕು. ಇವೆಲ್ಲ ಸಾಧ್ಯವಾಗಬೇಕಾದರೆ ಅಂಕಿಶಾಸ್ತ್ರ ರೀತ್ಯ ಗುಣನಿಯಂತ್ರಣದ (ಕ್ವಾಲಿಟಿ ಕಂಟ್ರೋಲ್) ವಿಧಾನಗಳನ್ನು ಉಪಯೋಗಿಸಬೇಕು. ಕೈಗಾರಿಕಾ ನಿರ್ಮಾಣ ವಿಜ್ಞಾನದ ವಿಧಾನಗಳ ಉಪಯುಕ್ತತೆಯನ್ನು ಭಾರತ ಸರ್ಕಾರ ಅರಿತುಕೊಂಡಿದೆ. ಭಾರತದ ಅಂಕಿ-ಅಂಶಶಾಸ್ತ್ರ ಸಂಸ್ಥೆಯ ಮುಖಾಂತರ ಅದು ವಿದೇಶೀ ತಜ್ಞರನ್ನು ಆಹ್ವಾನಿಸಿ ಉದ್ಯೋಗಿಗಳಿಗೆ ಮೇಲಿನ ವಿಧಾನಗಳ ಬಗ್ಗೆ ತರಬೇತಿಯನ್ನು ಕೊಡಿಸುತ್ತಿದೆ. ಈ ಸಂಸ್ಥೆ ಕಲ್ಕತ್ತ, ದೆಹಲಿ, ಮುಂಬಯಿ ಮತ್ತು ಬೆಂಗಳೂರು ನಗರಗಳಲ್ಲಿ ಅಂಕಿ ಅಂಶಶಾಸ್ತ್ರ ರೀತ್ಯ ಗುಣನಿಯಂತ್ರಣದ ಘಟಕಗಳನ್ನು ಸ್ಥಾಪಿಸಿದೆ.ಪ್ರಪಂಚದ ಅತ್ಯಂತ ದೊಡ್ಡ ಏಕಘಟಕ (ಸಿಂಗಲ್ ಯೂನಿಟ್) ಪಂಖ ಕಾರ್ಖಾನೆಯೆಂದರೆ ಕಲ್ಕತ್ತದಲ್ಲಿರುವ ಜೇ ಇಂಜಿನಿಯರಿಂಗ್ ವಕ್ರ್ಸ್ ಲಿಮಿಟೆಡ್. ಇದರಲ್ಲಿ ಉಷಾ ಪಂಖಗಳನ್ನು ತಯಾರಿಸುತ್ತಾರೆ. ಈ ಕಾರ್ಖಾನೆಯಲ್ಲಿ ತಾಂತ್ರಿಕ ಪರಿಪೂರ್ಣತೆ, ಮಿತವ್ಯಯ, ಅತ್ಯಂತ ವಿನೂತನವಾದ ಗುಣನಿಯಂತ್ರಣ ತಂತ್ರ ಕೌಶಲ ಇವೆಲ್ಲ ಮಿಳಿತವಾಗಿವೆ. ತಯಾರಿಕೆಯ ಪ್ರತಿಹಂತದಲ್ಲಿಯೂ ಕಟ್ಟುನಿಟ್ಟಾದ ಗುಣ ನಿಯಂತ್ರಣವನ್ನು ಏರ್ಪಡಿಸಲಾಗಿದೆ. ಖರಗ್‍ಪುರದ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಗಳಲ್ಲೂ ಅತಿ ಆಧುನಿಕ ಗುಣ ನಿಯಂತ್ರಣ ತಂತ್ರಗಳನ್ನು ಕಲಿಸಲಾಗುತ್ತಿದೆ.ವಿಜ್ಞಾನದ ಪ್ರಗತಿಯೊಡನೆ ನಿರಂತರವಾಗಿ ಮುನ್ನಡಿ ಇಡುತ್ತಿರುವ ಜೀವಂತ ವಿಜ್ಞಾನ ಕೈಗಾರಿಕಾ ವಾಸ್ತುಶಿಲ್ಪ.

  1. http://www.kanaja.in/%E0%B2%AC%E0%B2%B0%E0%B3%8D%E0%B2%95%E0%B3%8D%E2%80%8C%E0%B2%B5%E0%B3%88%E0%B2%9F%E0%B3%8D-%E0%B2%95%E0%B2%82%E0%B2%A1-%E0%B2%AD%E0%B2%BE%E0%B2%B0%E0%B2%A4-%E0%B2%AE%E0%B2%BE%E0%B2%B0%E0%B3%8D/
  2. https://groups.google.com/forum/#!topic/socialsciencestf/DpXayENSPLQ